ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಣಿಗಳ ಒತ್ತಡಕ್ಕೆ ಮಣಿದು ‘ಗಣಿ’ರಾಮನಾಗದ ರೆಡ್ಡಿ ಅಮಾನತು

By Staff
|
Google Oneindia Kannada News

ಧಣಿಗಳ ಒತ್ತಡಕ್ಕೆ ಮಣಿದು ‘ಗಣಿ’ರಾಮನಾಗದ ರೆಡ್ಡಿ ಅಮಾನತು
ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ಪರವಾಗಿ ಹೇಳಿಕೆ ಬದಲಿಸಿದ್ದೆ... ರೆಡ್ಡಿ ಹೊಸರಾಗ... ಸದನದಲ್ಲಿ ಗದ್ದಲ

ಬೆಂಗಳೂರು : ಗಣಿ ಮಾಲೀಕರಿಂದ ಮುಖ್ಯಮಂತ್ರಿ 150ಕೋಟಿ ರೂ.ಲಂಚ ಪಡೆದಿದ್ದಾರೆ ಎಂದು ಬುಧವಾರ(ಜು.11) ಮತ್ತೆ ಆರೋಪಿಸಿರುವ ಬಿಜೆಪಿ ಶಾಸಕ ಜನಾರ್ದನರೆಡ್ಡಿ, ಬಿಜೆಪಿಯಿಂದ ಅಮಾನತುಗೊಂಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ, ಜನಾರ್ದನ ರೆಡ್ಡಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಕುರಿತು ಪೂರ್ಣ ವಿವರವನ್ನು ಪಕ್ಷದ ವರಿಷ್ಠ ಮಂಡಳಿಗೆ ಕಳುಹಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮೊದಲು ಗಣಿ ವಿವಾದದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಪುನಃ ಆರೋಪ ಮಾಡುವ ಮೂಲಕ, ಬಿಜೆಪಿ ಶಾಸಕ ಜಿ.ಜನಾರ್ದನ ರೆಡ್ಡಿ ವಿಧಾನಮಂಡಲದ ಉಭಯ ಸದನಗಳಲ್ಲಿ ಕೋಲಾಹಲ ಎಬ್ಬಿಸಿದರು.

ಅವರು ಬುಧವಾರ ವಿಧಾನಪರಿಷತ್‌ ಕಲಾಪದಲ್ಲಿ ಮಾತನಾಡುತ್ತಾ, 150ಕೋಟಿ ರೂಪಾಯಿ ಲಂಚದ ಕುರಿತು ಪ್ರಸ್ತಾಪಿಸಿದಾಗ, ಸಭಾಪತಿ ಸಚ್ಚಿದಾನಂದ ಖೋತ್‌ ಅವಕಾಶ ನಿರಾಕರಿಸಿದರು.

ಆದರೂ ರೆಡ್ಡಿ ಆರೋಪ ಮಾಡುತ್ತ ಹೋದಕಾರಣ ಸದನದಲ್ಲಿ ಗದ್ದಲ ಆರಂಭವಾಯಿತು. ಹಾಗಾಗಿ ಸಭಾಪತಿ ಕಲಾಪಕ್ಕೆ ತೆರೆ ಎಳೆದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ಮನೆಯಲ್ಲಿ ನೀಡಿದ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ನಾನು ನಿನ್ನೆಯೇ ಈ ಕುರಿತು ಹೇಳಿಕೆ ನೀಡಲು ಬಯಸಿದ್ದೆ. ಆದರೆ ನಮ್ಮ ಪಕ್ಷದ ನಾಯಕರು ನನ್ನನ್ನು ತಡೆದರು. ಇದರಿಂದ ನನಗೆ ನೋವಾಗಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ, ತಮ್ಮ ಮೇಲಿನ ಆರೋಪದ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಉತ್ತರ ನೀಡಿಲ್ಲ. ಅವರ ಮಾತಿನ ಧಾಟಿ ಗಣಿ ಮಾಲೀಕರನ್ನು ಬ್ಲ್ಯಾಕ್‌ಮೇಲ್‌ ಮಾಡುವಂತಿದೆ. ಇನ್ನೊಂದೆಡೆ ಗೃಹ ಸಚಿವ ಎಂ.ಪಿ.ಪ್ರಕಾಶ್‌ ಅವರ ಪುತ್ರ ಕಬ್ಬಿಣ ಅದಿರು ಸಾಗಾಣಿಕೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಎರಡನೇ ಬಾರಿಗೆ ಆರೋಪ ಮಾಡಲು ನಿಮ್ಮ ಪಕ್ಷದ ಮುಖಂಡರು ಬೆಂಬಲ ಸೂಚಿಸಿದ್ದಾರೆಯೇ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಪಕ್ಷದ ನಾಯಕರ ಬೆಂಬಲದ ಚಿಂತೆ ಇಲ್ಲ. ಜನರ ಬೆಂಬಲ ನನಗಿದೆ ಎಂದು ಸಮರ್ಥಿಸಿಕೊಂಡರು.

ಉಲ್ಟಾ-ಪಲ್ಟಾ : ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅರಣ್ಯ ಸಚಿವ ಸಿ.ಚೆನ್ನಿಗಪ್ಪ ಗಣಿ ಮಾಲೀಕರಿಂದ 150 ಕೋಟಿ ರೂಪಾಯಿ ಲಂಚ ಕಿತ್ತುಕೊಂಡಿದ್ದಾರೆ ಎಂದು ಕೆಲದಿನಗಳ ಹಿಂದೆ ಸತತ ಆರೋಪ ಮಾಡಿದ್ದರು. ಆನಂತರ ಪಕ್ಷದ ವರಿಷ್ಠರೊಂದಿಗೆ ಮಾತುಕತೆಯಾದ ಮೇಲೆ, ‘ನಾನು ಮುಖ್ಯಮಂತ್ರಿಗಳ ಮೇಲೆ ನೇರ ಆರೋಪ ಮಾಡಿಲ್ಲ. ಅವರ ಹೆಸರು ದುರ್ಬಳಕೆ ಮಾಡಿಕೊಂಡು ಕೆಲವರು ಲಂಚ ಸ್ವೀಕರಿಸುತ್ತಿದ್ದಾರೆ’ ಎಂದು ಹೇಳಿ ಮಾತು ಬದಲಿಸಿದ್ದರು.

(ಯುಎನ್‌ಐ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X