ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರಿತ್ರೆಯ ವಿಸ್ಮೃತಿಯೇ ಕನ್ನಡಿಗರ ನಿರಭಿಮಾನಕ್ಕೆ ಕಾರಣ -ಸೂರ್ಯನಾಥ್‌ ಕಾಮತ್‌

By Staff
|
Google Oneindia Kannada News

ಚರಿತ್ರೆಯ ವಿಸ್ಮೃತಿಯೇ ಕನ್ನಡಿಗರ ನಿರಭಿಮಾನಕ್ಕೆ ಕಾರಣ -ಸೂರ್ಯನಾಥ್‌ ಕಾಮತ್‌
ನಾಡು-ನುಡಿಯ ಜಾಗೃತಿ ಮೂಲಕ, ಕನ್ನಡಿಗರು ಉಗ್ರನರಸಿಂಹನ ಅವತಾರ ಎತ್ತುವಂತೆ ಮಾಡಿದವರು ಆಲೂರು ವೆಂಕಟರಾಯರು. ಅವರನ್ನು ನೆನೆಯುವ ನೆಪದಲ್ಲಿ, ಅವರ ಮಹತ್ವದ ವಿಚಾರಗಳನ್ನು ಪಸರಿಸುವ ಕಾರ್ಯ, ಬನವಾಸಿ ಬಳಗದಿಂದ ಇತ್ತೀಚೆಗೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಆಲೂರ ವೆಂಕಟರಾಯರ ಸೊಸೆ ಹಾಗೂ ಮೊಮ್ಮಕ್ಕಳು ಪಾಲ್ಗ್ಗ್ಗೊಂಡದ್ದು ಮತ್ತೊಂದು ವಿಶೇಷ.

ಬೆಂಗಳೂರು : ಕನ್ನಡಿಗರಲ್ಲಿ ಇತಿಹಾಸ ವಿಸ್ಮೃತಿ ತುಂಬಿಕೊಂಡಿರುವುದರಿಂದಲೇ ನಿರಭಿಮಾನ ತಾಂಡವವಾಡುತ್ತಿದೆ ಎಂದು ಖ್ಯಾತ ಇತಿಹಾಸಕಾರ ಡಾ.ಸೂರ್ಯನಾಥ್‌ ಕಾಮತ್‌ ಹೇಳಿದ್ದಾರೆ.

ಬನವಾಸಿ ಬಳಗ ಏರ್ಪಡಿಸಿದ್ದ ಆಲೂರ ವೆಂಕಟರಾಯರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ ಏಕೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದವರೇ ವೆಂಕಟರಾಯರು. ಅವರು ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯ ಪಾತ್ರ ವಹಿಸಿದವರು. ವೆಂಕಟರಾಯರು ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿರಬೇಕಾದರೆ, ಸ್ವಾತಂತ್ರ್ಯ ಹೋರಾಟಗಾರರೂ ಮಹಾನ್‌ ನಾಯಕರೂ ಆದ ವೀರ್‌ ಸಾವರ್ಕರ್‌ ಅವರ ರೂಮ್‌ಮೇಟ್‌ ಆಗಿದ್ದರು. ಬಾಪಟ್‌ ಸಹಪಾಠಿಯಾಗಿದ್ದರು ಎಂಬ ಮಹತ್ವದ ಸಂಗತಿಯನ್ನು ಉಲ್ಲೇಖಿಸಿದರು.

ವೆಂಕಟರಾಯರ ನೆನಪು ಸದಾ ಸರ್ವದಾ ಅವಶ್ಯ. ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅತ್ಯಂತ ಖಚಿತ ವಿಚಾರ ಹಾಗೂ ಯೋಜನೆಗಳನ್ನು ಹೊಂದಿದ್ದ ವೆಂಕಟರಾಯರು, ಆ ನಿಟ್ಟಿನಲ್ಲಿ ಯಶಸ್ವಿಯಾಗಿ ನಡೆದವರು. ಶ್ರೀರಂಗನಾಥನ ಭಕ್ತರಾದ ಕನ್ನಡಿಗರನ್ನು ಉಗ್ರ ನರಸಿಂಹನ ಅವತಾರ ತಾಳುವಂತೆ ಮಾಡಿದವರು ಎಂದು ಮಾರ್ಮಿಕವಾಗಿ ಹೇಳಿದರು.

ಮೌಲ್ಯ ಸಂಬಂಧಕ್ಕಾಗಿ ಕನ್ನಡ ಬೇಕು : ಕನ್ನಡಕ್ಕಾಗಿ ಕನ್ನಡ ಬೇಕು. ಮೌಲ್ಯ ಕಾಲದೇಶಗಳನ್ನು ಮೀರಿದ್ದು, ನಿರ್ಲಿಪ್ತವಾದುದು. ಅದರಿಂದಲೇ ತಾದಾತ್ಮ್ಯ ಸಾಧ್ಯವಾಗುತ್ತದೆ ಎಂದು ಶತಾವಧಾನಿ ಡಾ.ರಾ.ಗಣೇಶ್‌ ಅಭಿಪ್ರಾಯಪಟ್ಟರು.
ಅನುವಾದದಿಂದಷ್ಟೇ ಭಾಷೆ ಬೆಳೆಯದು. ನಾವು ಜ್ಞಾನವನ್ನು ಬೆಳೆಯಬೇಕು. ಆಗ ಭಾಷೆಯೂ ಬೆಳೆಯುತ್ತದೆ. ಜಗತ್ತಿಗೆ ಬೇಕಾದುದನ್ನು ಕನ್ನಡದಲ್ಲಿ ಸೃಷ್ಟಿಸಿದರೆ ಕನ್ನಡವೂ ಬೆಳೆಯುತ್ತದೆ. ಭಾಷೆಗೆ ಸೌಂದರ್ಯದ ಆಯಾಮವಿದೆ. ಹಾಗಾಗಿ ಕನ್ನಡ ಭಾವಭಾಷೆಯಾಗಬೇಕು. It means something to us ಅನ್ನೋದೇ ಭಾಷೆಯ ಅಂತ್ಯ ಹಾಗೂ ಆರಂಭ ಎಂದು ಹೇಳಿದರು.

ಕನ್ನಡ ಮಾಧ್ಯಮದಲ್ಲೇ ಕಲಿಸಿದರೆ ನಮ್ಮ ಪ್ರತಿಭೆಗೆ ಬಂದಿರುವ ಅಡ್ಡಿ ನಿವಾರಣೆಯಾಗುತ್ತದೆ ಎಂದು ಖ್ಯಾತ ಗಣಿತಜ್ಞ ಚ.ಸು.ಯೋಗಾನಂದ ಹೇಳಿದರು.

ಇದು ಕಳೆದ ಹದಿನೈದು ವರ್ಷಗಳ ಬೋಧನಾ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ ವಿಚಾರ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಶಿಕ್ಷಣ ಮತ್ತು ಸಂಶೋಧನೆಗಳನ್ನು ಬೇರೆ ಬೇರೆ ಮಾಡಿದ್ದೇವೆ. ಇದು ಪ್ರತಿಭೆಗೆ ನಿಜವಾದ ತಡೆಯಾಡ್ಡುತ್ತದೆ. ಕನ್ನಡಿಗರು ಶಿಖರ ಸಾಧನೆ ಅಥವಾ ಜಾಗತಿಕ ಸಾಧನೆ ಮಾಡಬೇಕಾದರೆ ಕನ್ನಡ ಮಾಧ್ಯಮ ಶಿಕ್ಷಣ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಹಲವು ವರ್ಷಗಳ ಹಿಂದೆಯೇ ಅ.ನ.ಕೃಷ್ಣರಾಯರ ನೇತೃತ್ವದಲ್ಲಿ ನಡೆದ ಸಭೆಯಾಂದು, ಭಾಷೇತರ ವಿಷಯಗಳನ್ನು ಕನ್ನಡದಲ್ಲೇ ಬೋಧಿಸಬೇಕೆಂಬ ಗೊತ್ತುವಳಿ ಪ್ರಕಟಿಸಿತು. ಆದರೆ ದುರದೃಷ್ಟವಶಾತ್‌ ಅದು ಅನುಷ್ಠಾನಗೊಳ್ಳಲಿಲ್ಲ ಎಂದು ವಿವರಿಸಿದರು.

ಸದ್ಯಕ್ಕೆ ರಾಜ್ಯದಲ್ಲಿ ಪಠ್ಯ ಪುಸ್ತಕಗಳನ್ನು ಮೊದಲು ಇಂಗ್ಲಿಷ್‌ನಲ್ಲಿ ತಯಾರಿಸಿ ಆನಂತರ ಕನ್ನಡದಲ್ಲಿ ಭಾಷಾಂತರಿಸಲಾಗುತ್ತಿದೆ. ಇದು ಸಂಪೂರ್ಣ ಅವೈಜ್ಞಾನಿಕವಾದುದು. ಹಾಗಾಗಿ ಪಠ್ಯಪುಸ್ತಕಗಳು ಕನ್ನಡದಲ್ಲೇ ತಯಾರಾಗಬೇಕು. ಆನಂತರ ಬೇಕಾದ ಭಾಷೆಗಳಿಗೆ ಅನುವಾದಗೊಳ್ಳಲಿ. ಸದ್ಯಕ್ಕೆ ಇದು ತುರ್ತಾಗಿ ಹತ್ತನೇ ತರಗತಿಯವರೆಗಂತೂ ನಡೆಯಲೇಬೇಕಿದೆ ಎಂದು ಹೇಳಿದರು.

ಸಾಫ್ಟ್‌ವೇರ್‌ ಉದ್ಯಮವೇನೋ ಬೆಳೆದಿದೆ, ಕನ್ನಡಕ್ಕೆ ಅದರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದ ಅವರು, ಕನ್ನಡಿಗರು ಹಿಂದುಳಿಯಲು ಮುಖ್ಯ ಕಾರಣ, ಅವರು ಬೇರೆಯವರ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಹೊರತು ಕನ್ನಡದ ಸಮಸ್ಯೆಗಳನ್ನು ದೂರವಿಡುತ್ತಾರೆ ಎಂದು ವಿಷಾದಿಸಿದರು.

ಬನವಾಸಿ ಬಳಗದ ಬಗ್ಗೆ ಮಾತನಾಡಿದ ಜನಾರ್ದನ ಚನ್ನಗಿರಿ, ಚಳವಳಿಗಳು ಸಫಲವಾಗಿದ್ದರೆ ಹೋರಾಟಗಳು ನಡೆಯುತ್ತಿರಲಿಲ್ಲ. ಕನ್ನಡದ ಕೆಲಸಗಳು ಹಾಗೆಯೇ ಉಳಿದಿವೆ. ಕನ್ನಡ ಹೋರಾಟಗಾರರು ಹಾಗೂ ಬುದ್ಧಿಜೀವಿಗಳ ಮಧ್ಯೆ ಸೇತುವೆ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಬನವಾಸಿ ಬಳಗ ತನ್ನದೇ ಕಾರ್ಯ ಚಟುವಟಿಕೆಗಳನ್ನು ಹಾಕಿಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.

ಆದಿ ಕವಿ ಪಂಪ ವಿರಚಿತ, ‘ನೂರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂಬ ಗೀತೆಯನ್ನು ಸ್ವಾಗತ ಗೀತೆಯಾಗಿ ಹಾಡುವ ಮೂಲಕ ಶ್ರೀಮತಿ ಲಕ್ಷ್ಮೀ ಯೋಗಾನಂದ ಸಭಿಕರಲ್ಲಿ ರೋಮಾಂಚನ ಉಂಟುಮಾಡಿದರು.

ಬಾ.ರಾ.ಕಿರಣ ಸ್ವಾಗತಿಸಿ-ನಿರೂಪಿಸಿದರೆ, ರಾಘವೇಂದ್ರ ವಂದಿಸಿದರು. ಆಲೂರ ವೆಂಕಟರಾಯರ ಸೊಸೆ ಹಾಗೂ ಮೊಮ್ಮಕ್ಕಳು ಸಮಾರಂಭಕ್ಕೆ ಆಗಮಿಸಿದ್ದು, ಸಭೆಗೆ ವಿಶೇಷ ಕಳೆತಂದಿತ್ತು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X