ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾನನದಲ್ಲಿ ಮೊಸಳೆಯವರ ಕ್ಯಾಮೆರಾ ಕಣ್ಣು ತೆರೆದಾಗ!

By Staff
|
Google Oneindia Kannada News

ಕಾನನದಲ್ಲಿ ಮೊಸಳೆಯವರ ಕ್ಯಾಮೆರಾ ಕಣ್ಣು ತೆರೆದಾಗ!
‘ಕಾಡ ನೋಡ ಹೋದೆ! ಕವಿತೆಯಾಡನೆ ಬಂದೆ!!’ - ಈ ಭಾವ ನಿಮ್ಮದಾಗಬೇಕೇ? ‘ಕಾಡ ಬದುಕಿನ ಹಾಡುಪಾಡು’ ನೀವೂ ಕೇಳಬೇಕೇ? ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿರುವ ಲೋಕೇಶ್‌ ಮೊಸಳೆ ಅವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ಹೀಗೊಂದು ಪ್ರೀತಿಯ ಸ್ವಾಗತ. ತಪ್ಪದೇ ಬನ್ನಿ, ಬಂದು ಬೆರಗಾಗಿ!

ಪ್ರಸ್ತುತ ಒತ್ತಡಮಯ ಬದುಕಿನಲ್ಲಿ ‘ನಮ್ಮತನ’ ಕಳೆದು ಹೋಗಿರುವಾಗ, ವನ್ಯಜೀವಿಗಳ ಬಗ್ಗೆ ಯೋಚಿಸುವಷ್ಟು ಪುರಸತ್ತು ಯಾರಿಗಿದೆ? ಕಾಡನ್ನು ನಾಡು ಮಾಡುವ ಮನುಷ್ಯನ ಹಂಬಲದಿಂದ ವನ್ಯಜೀವಿಗಳು ಒಂದು ದಿನ ಕಣ್ಮರೆಯಾದರೆ ಅಚ್ಚರಿಯೇನಿಲ್ಲ!

ಮನುಷ್ಯರನ್ನು ಮನುಷ್ಯರನ್ನಾಗಿಸುವ, ಪರಿಸರದ ಸಾಮಿಪ್ಯಕ್ಕೆ ತರುವ ಪ್ರಯತ್ನಗಳು ನಮ್ಮ ಸುತ್ತ ವಿರಳವಾದರೂ ನಡೆಯುತ್ತಲೇ ಇವೆ. ಇಂತಹ ಒಂದು ಪ್ರಯತ್ನಕ್ಕೆ ಮತ್ತು ಸಾಹಸಕ್ಕೆ ಮುಂದಾದವರು ಲೋಕೇಶ್‌ ಮೊಸಳೆ! ತಾವು ಕಂಡುಕೊಂಡ ಸತ್ಯಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ಸಹೃದಯರಿಗೆ ತೋರಿಸಲು ಮೊಸಳೆ ನಿರ್ಧರಿಸಿದ್ದಾರೆ. ಆ ಪ್ರಯತ್ನವೇ -‘ಕಾಡ ಬದುಕಿನ ಹಾಡುಪಾಡು’.

Lokesh Mosaleಹೌದು, ‘ಕಾಡ ಬದುಕಿನ ಹಾಡುಪಾಡು’ ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ಚಿತ್ರಕಲಾ ಪರಿಷತ್ತಿನಲ್ಲಿ ಡಿ.9ರಿಂದ 11ರವರೆಗೆ ಏರ್ಪಡಿಸಲಾಗಿದೆ. ಛಾಯಾಗ್ರಾಹಕ ಲೋಕೇಶ್‌ ಮೊಸಳೆ ಅವರ ಅತ್ಯುದ್ಭುತ ಚಿತ್ರಗಳನ್ನು ಕಾಣಲು ಇದೊಂದು ಅವಕಾಶ.

ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್ತಿನ ಕಲಾ ಗ್ಯಾಲರಿಯಲ್ಲಿ ಈ ಮೂರು ದಿನಗಳೂ ನಿಮ್ಮನ್ನು ಮೋಡಿ ಮಾಡಲಿವೆ ಮೊಸಳೆ ಅವರ ಚಿತ್ರಗಳು.

ಕಾಡಿನಲ್ಲಿರುವ ವನ್ಯಜೀವಿಗಳ ಪ್ರಪಂಚವನ್ನು ನಾಡಿಗೆ ತಂದಿಟ್ಟಿದ್ದಾರೆ ಮೊಸಳೆ. ನಾವುಗಳಿಂದು ನಮ್ಮ ಸುತ್ತಲಿನ ಜೀವಿಗಳನ್ನು ಮರೆತಿದ್ದೇವೆ. ಕಾಡಹಕ್ಕಿಯ ಹಾಡುಪಾಡನ್ನು ಆಲಿಸಲು ಮೊಸಳೆ ಅವರು ವನ್ಯಜೀವಿ ಚಿತ್ರಪ್ರದರ್ಶನವನ್ನು ನಡೆಸುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೆ ತಮ್ಮ ಆಶಯಗಳನ್ನು ಪ್ರದರ್ಶನದ ಮೂಲಕ ತಲುಪಿಸಲು ನಿರ್ಧರಿಸಿದ್ದಾರೆ. ಮೈಸೂರಿನ ಕುವೆಂಪು ನಗರದ ‘ನಮ್ಮ ಮನೆಯ ಗೆಳೆಯರು’ ಬಳಗ, ಈ ಸುಕಾರ್ಯಕ್ಕೆ ಬೆಂಬಲ ನೀಡಿದ್ದಾರೆ.

ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಪರಸ್ಪರ ಪ್ರೀತಿ-ಹೊಂದಾಣಿಕೆಯನ್ನು ತರುವ ಪುಟ್ಟ ಪ್ರಯತ್ನ ಈ ಪ್ರದರ್ಶನ. ವನ್ಯಜೀವಿಗಳ ಬಗ್ಗೆ ಅರಿವು, ಪ್ರೀತಿಯನ್ನು ಮಕ್ಕಳಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ತುಂಬುವ ಕನಸು ಮೊಸಳೆ ಅವರಿಗಿದೆ.

ವನ್ಯಜೀವಿಗಳ ಚಿತ್ರವನ್ನು ಒಳಗೊಂಡ ಆಕರ್ಷಕ ಕನ್ನಡ ಶುಭಾಶಯ ಪತ್ರ ಮತ್ತು ಕ್ಯಾಲೆಂಡರ್‌ಗಳನ್ನು ಮೊಸಳೆ ಹೊರತಂದಿದ್ದಾರೆ. ಅವುಗಳನ್ನು ಪ್ರದರ್ಶನದಲ್ಲಿ ಪಡೆಯಬಹುದು.

ಈ ಛಾಯಾಚಿತ್ರ ಪಯಣದ ನೆನಪಿಗೆ ಸಂಗ್ರಹಯೋಗ್ಯ ಸ್ಮರಣ ಸಂಚಿಕೆಯನ್ನು ಹೊರತರಲಾಗುತ್ತಿದೆ. ಈ ಪ್ರದರ್ಶನಕ್ಕೆ ಕನ್ನಡವೇ ಸತ್ಯ ಸಂಘಟಿಸಿದ್ದ ಗ್ಲೋಬಲ್‌ ಕನ್ಸಲ್ಟೆಂಟ್‌ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಆ ಮೂಲಕ ಆರೋಗ್ಯಕರ ಬೆಳವಣಿಕೆಗೆ ಕೈ ಜೋಡಿಸಿದೆ.

ನಿಮ್ಮ ಗಮನಕ್ಕೆ :

ಡಿ.9ರ ಬೆಳಗ್ಗೆ 10ಕ್ಕೆ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭವಿದೆ. ಪ್ರವಾಸೋದ್ಯಮ ಸಚಿವ ಡಿ.ಟಿ.ಜಯಕುಮಾರ್‌ ಕಾರ್ಯಕ್ರಮ ಉದ್ಘಾಟಿಸುವರು. ಈ ಸಂದರ್ಭದಲ್ಲಿ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ, ಕನ್ನಡ ಶುಭಾಶಯ ಪತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಧ್ಯಕ್ಷತೆವಹಿಸುವರು. ಮುಖ್ಯಭಾಷಣ ಮಾಡಲಿದ್ದಾರೆ ಗಿರೀಶ್‌ ಕಾರ್ನಾಡ್‌. ಶಾಸಕ ಎಂ.ಪಿ.ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಡಿ.10ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಮೊಸಳೆ ಅವರು ಸೆರೆಹಿಡಿದಿರುವ ವನ್ಯಚಿತ್ರಗಳ ವೆಬ್‌ಸೈಟ್‌ನ ಉದ್ಘಾಟನೆ ನೆರವೇರಿಸುವರು. ಸ್ಮರಣ ಸಂಚಿಕೆಯನ್ನು ಸಾಹಿತಿ ಯು.ಆರ್‌.ಅನಂತಮುರ್ತಿ ಬಿಡುಗಡೆ ಮಾಡುವರು. ಶಾಸಕ ಜಿ.ಟಿ.ದೇವೇಗೌಡ , ಶ್ರೀಪತಿ ರಾವ್‌, ಶಿವಪ್ರಕಾಶ್‌, ಕೆ.ರಾಮನ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಕಾಡಿನ ನಿಗೂಢತೆಯನ್ನು, ವನ್ಯಜೀವಿಗಳನ್ನು ನಾಡಿಗೆ ಪರಿಚಯಿಸುವ ಹಂಬಲ ಹೊಂದಿರುವ ಯುವ ಮನಸ್ಸಿನ ಉತ್ಸಾಹಿ ಛಾಯಾಗ್ರಾಹಕ ಮೊಸಳೆ ಅವರಿಗೆ ಹಾಯ್‌ ಅನ್ನಬೇಕೇ? ಇಲ್ಲಿದೆ ಅವರ ಮೊಬೈಲ್‌ ಸಂಖ್ಯೆ -9448434448.

ಮತ್ತೊಬ್ಬ ವನ್ಯಜೀವಿ ಛಾಯಾಗ್ರಾಹಕ :

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದ ಕನ್ನಡಿಗ ಕ್ಯಾಮೆರಾ ಕಣ್ಣಿನ ‘ಪ್ರವೀಣ’
ಎಎಫ್‌ಐಎಪಿ- ಇದು ನಿಮಗೆ ಗೊತ್ತೆ?


ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X