ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಲೈವ್‌ಬ್ಯಾಂಡ್‌ಗೆ ಬೀಗಬಿದ್ರೆ, ನಮ್ಮ ಬದುಕು ಡೆಡ್‌’

By Staff
|
Google Oneindia Kannada News

‘ಲೈವ್‌ಬ್ಯಾಂಡ್‌ಗೆ ಬೀಗಬಿದ್ರೆ, ನಮ್ಮ ಬದುಕು ಡೆಡ್‌’
ಲೈವ್‌ ಬ್ಯಾಂಡ್‌ ನಿರ್ಬಂಧದಿಂದ ರಾಜ್ಯದ 7000ಮಂದಿಗೆ ಸಂಕಷ್ಟ

ಬೆಂಗಳೂರು : ಲೈವ್‌ ಬ್ಯಾಂಡ್‌ ನಿರ್ಬಂಧಗಳನ್ನು ಹಿಂಪಡೆಯುವಂತೆ ಕರ್ನಾಟಕ ಲೈವ್‌ಬ್ಯಾಂಡ್‌ ಸಂಘವು ಶುಕ್ರವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ವಕ್ತಾರ ಭೂಪೇಶ್‌ ಕುಮಾರ್‌, ಲೈವ್‌ ಬ್ಯಾಂಡ್‌ಗಳ ಮೇಲಿನ ನಿರ್ಬಂಧದಿಂದ ಈ ಕ್ಷೇತ್ರದ ಕಲಾವಿದರು ಮತ್ತು ಉದ್ಯೋಗಿಗಳ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಲೈವ್‌ ಬ್ಯಾಂಡ್‌ ನಂಬಿದ್ದ ನೃತ್ಯಗಾರ್ತಿಯರು, ಹಾಡುಗಾರ್ತಿಯರು ಸೇರಿದಂತೆ ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದರು.

ಪೊಲೀಸರು ಲೈವ್‌ಬ್ಯಾಂಡ್‌ಗಳ ಪರವಾನಗಿಯನ್ನು ರಾಜ್ಯದಲ್ಲಿ ನವೀಕರಿಸುತ್ತಿಲ್ಲ. ಕೇವಲ ಬೆರಳೆಣಿಕೆಯ ಲೈವ್‌ ಬ್ಯಾಂಡ್‌ಗಳಿಗೆ ಮಾತ್ರ ಪರವಾನಗಿ ನೀಡಿದ್ದಾರೆ. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಸರ್ಕಾರಕ್ಕೆ ಹದಿನೈದು ದಿನಗಳ ಗಡುವು ನೀಡಲಾಗಿದೆ. ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದರೆ, ಮೊದಲ ಹಂತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಈ ರಂಗದಲ್ಲಿ ತೊಡಗಿರುವ ಸಂಗೀತ(35) ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ನಾನು ಈ ರಂಗದಲ್ಲಿದ್ದೇನೆ. ನನ್ನ ಇಬ್ಬರು ಮಕ್ಕಳಿಗೆ ಈ ದುಡಿಮೆಯಿಂದಲೇ ವಿದ್ಯಾಭ್ಯಾಸ ಮಾಡಿಸುತ್ತಿದ್ದೇನೆ. ಸರ್ಕಾರದ ನಿರ್ಬಂಧದ ಬಿಸಿ ನನ್ನೊಬ್ಬಳಿಗೆ ಮಾತ್ರವಲ್ಲ, ನನ್ನಂತಹ ಎಷ್ಟೋ ಮಂದಿಗೆ ತಟ್ಟಿದೆ. ಲೈವ್‌ಬ್ಯಾಂಡ್‌ಗೆ ನಿರ್ಬಂಧ ವಿಧಿಸುವ ಸರ್ಕಾರ ನಮಗೆ ಪರ್ಯಾಯ ಉದ್ಯೋಗಗಳನ್ನು ನೀಡಲಿ ಎಂದು ಒತ್ತಾಯಿಸಿದರು.

ಸರ್ಕಾರದ ಹೊಸ ಆದೇಶದನ್ವಯ ಲೈವ್‌ ಬ್ಯಾಂಡ್‌ ಉದ್ಯಮಕ್ಕೆ ಪೆಟ್ಟಾಗಿದೆ. ಹೀಗಾಗಿ ಈ ರಂಗದ ಕಲಾವಿದರಿಗೆ 5000 ಮತ್ತು ಉದ್ಯೋಗಿಗಳಿಗೆ 3000ದಂತೆ ಎರಡು ತಿಂಗಳ ಪರಿಹಾರ ಧನವನ್ನು ಸರ್ಕಾರ ನೀಡಬೇಕು. ಅಲ್ಲದೇ ಲೈವ್‌ ಬ್ಯಾಂಡ್‌ ಕಲಾವಿದರಿಗೆ ಮತ್ತು ಉದ್ಯೋಗಿಗಳಿಗೆ ವೈದ್ಯಕೀಯ ಸೌಲಭ್ಯ ನೀಡುವಂತೆ ಲೈವ್‌ ಬ್ಯಾಂಡ್‌ ಮಾಲೀಕರಿಗೆ ಸರ್ಕಾರ ಸೂಚನೆ ನೀಡಬೇಕೆಂದು ಸಂಘ ಆಗ್ರಹಿಸಿದೆ.

ಲೈವ್‌ಬ್ಯಾಂಡ್‌ಗಳ ನಿಷೇಧಕ್ಕೆ ನಮ್ಮದೂ ಸಮ್ಮತಿ ಇದೆ. ಆದರೆ ಈ ಪ್ರಕ್ರಿಯೆಯಿಂದ ಕಲಾವಿದರು ಮಾತ್ರವಲ್ಲದೇ, ಗಾಯಕರು ಸೇರಿದಂತೆ ಸಾಕಷ್ಟು ಉದ್ಯೋಗಿಗಳು ಬೀದಿ ಪಾಲಾಗುತ್ತಾರೆ. ಲೈವ್‌ ಬ್ಯಾಂಡ್‌ಗೆ ಕಡಿವಾಣ ಹಾಕುವ ಸರ್ಕಾರ ಸಿನಿಮಾ ಮತ್ತು ಕಿರು ತೆರೆ ಕಾರ್ಯಕ್ರಮಗಳತ್ತೆ ಗಮನ ಹರಿಸಿಲ್ಲ ಎಂದು ಸಂಘ ಆರೋಪಿಸಿದೆ.

ರಾಜಧಾನಿಯಲ್ಲಿ 80ಲೈವ್‌ಬ್ಯಾಂಡ್‌ಗಳಿವೆ. ರಾಜ್ಯದ 7000ಮಂದಿ ಈ ಉದ್ಯಮವನ್ನು ನಂಬಿದ್ದಾರೆ. ಲೈವ್‌ಬ್ಯಾಂಡ್‌ ಪರವಾನಗಿ ನವೀಕರಣದ 46 ಅರ್ಜಿಗಳಲ್ಲಿ, ಬೆಂಗಳೂರಿನ ಪೊಲೀಸ್‌ ಆಯುಕ್ತ ಅಜಯ್‌ ಕುಮಾರ್‌ ಅವರು ಕೇವಲ ಆರಕ್ಕಷ್ಟೇ ಪರವಾನಗಿಯನ್ನು ನವೀಕರಿಸಿದ್ದರು.

(ಪಿಟಿಐ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X