ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೈಓವರ್‌ ಶಾಪವಿಮೋಚನೆ ಯಾವಾಗ?

By Staff
|
Google Oneindia Kannada News

ಫ್ಲೈಓವರ್‌ ಶಾಪವಿಮೋಚನೆ ಯಾವಾಗ?
ಸುಗಮ ಸಂಚಾರಕ್ಕೆ ಪೂರಕವಾಗಬೇಕಾಗಿದ್ದ ವಿಮಾನ ನಿಲ್ದಾಣ ರಸ್ತೆಯ ಫ್ಲೈಓವರ್‌ ಅಪೂರ್ಣ ಸ್ಥಿತಿಯಲ್ಲಿ ನಿಂತು, ಕಾಡುತ್ತಿದೆ. ನಾಗರಿಕರು ಮಂಗಳವಾರ ನಡೆಸಿದ ಪ್ರತಿಭಟನೆಗೆ ಫಲದಕ್ಕುವುದೇ?

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು : ನಗರದ ವಿಮಾನ ನಿಲ್ದಾಣ ರಸ್ತೆಯಲ್ಲಿ ಮೇಲುಸೇತುವೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸ್ಧಗಿತಗೊಂಡಿರುವುದರಿಂದ ಬೇಸತ್ತ ಸುತ್ತಮುತ್ತಲ ಪ್ರದೇಶದ ನಾಗರಿಕರು, ಮಂಗಳವಾರ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು.

ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಎ. ರವೀಂದ್ರ, ಖ್ಯಾತ ಚಿತ್ರ ಕಲಾವಿದ ಎಸ್‌.ಜಿ. ವಾಸುದೇವ್‌, ಕ್ರಿಕೆಟ್‌ ತಾರೆ ರಾಹುಲ್‌ ದ್ರಾವಿಡ್‌ ಅವರ ತಂದೆ-ತಾಯಿ, ಟೈಟಾನ್‌ ಕಂಪನಿಯ ಆಡಳಿತ ನಿರ್ದೇಶಕ ಭಾಸ್ಕರ ಭಟ್‌ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗ್ಗೊಂಡಿದ್ದರು. ಚಿತ್ರನಟರಾದ ವಿಷ್ಣುವರ್ಧನ್‌ ಮತ್ತು ರಮೇಶ್‌ ಪ್ರತಿಭಟನೆಯನ್ನು ಬೆಂಬಲಿಸಿದ್ದು ಒಂದು ವಿಶೇಷ. ಜನಸಾಮಾನ್ಯರ ಕೂಗಿಗೆ ಪ್ರತಿಷ್ಠಿತರು ಧ್ವನಿಸೇರಿಸಿದ್ದರಿಂದ ಪ್ರತಿಭಟನೆಗೆ ವಿಶೇಷ ಬಲಬಂದಿತ್ತು.






ಪ್ರತಿಭಟನೆಯಲ್ಲಿ ದೊಮ್ಮಲೂರು, ಇಂದಿರಾನಗರ, ಏರ್‌ಪೋರ್ಟ್‌ ರಸ್ತೆ , ಸುತ್ತಮುತ್ತಲಿನ ಪ್ರದೇಶದ ನಾಗರಿಕರು, ನ್ಯೂ ಹೊರೈಜನ್‌ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ನಗರದಲ್ಲಿ ಪ್ರತಿಭಟನೆ ಮತ್ತು ರ್ಯಾಲಿಗಳೆಂದರೆ ರಸ್ತೆ ಸಂಚಾರ ಅಸ್ತವ್ಯಸ್ತವಾಗುವುದು ಸಾಮಾನ್ಯ ಸಂಗತಿ. ಆದರೆ ಮಂಗಳವಾರ ನಡೆದ ಈ ಮೌನಪ್ರತಿಭಟನೆ ಅತ್ಯಂತ ಶಿಸ್ತುಬದ್ಧವಾಗಿತ್ತು.

ಈ ಯೋಜನೆಯನ್ನು ತುರ್ತು ಆದ್ಯತೆಯಿಂದ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಮತ್ತು ವಿದೇಶೀ ಪ್ರವಾಸಿಗರಿಗೆ ತೊಂದರೆಯಾಗಿದೆ. ವಿಳಂಬಕ್ಕೆ ಕಾರಣವೇನೆಂಬುದು ನಮಗೆ ಗೊತ್ತಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಕರ್ನಾಟಕ ಸರ್ಕಾರದ ಮಾಜಿ ಕಾರ್ಯದರ್ಶಿ ಮತ್ತು ಸಾರ್ವಜನಿಕ ವ್ಯವಹಾರಗಳ ಸಮಿತಿಯ ನಿರ್ದೇಶಕರೂ ಆಗಿರುವ ಎ.ರವೀಂದ್ರ ಮಾತನಾಡಿ, ಸರ್ಕಾರ ಮತ್ತು ಗುತ್ತಿಗೆದಾರರ ನಡುವಿನ ಜಗಳದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಪ್ರತಿಭಟನೆ ಕೇವಲ ಆರಂಭವಷ್ಟೆ , ನಮ್ಮ ಮುಂದೆ ಇನ್ನೂ ಹಲವು ಪ್ರತಿಭಟನೆಗಳ ಪಟ್ಟಿ ಇದೆ ಎಂದು ಎಚ್ಚರಿಸಿದರು.

ಇನ್ನು ಮುಂದೆ ಕಳಪೆ ಕಾಮಗಾರಿಗಳ ವಿರುದ್ಧ ಬೆಂಗಳೂರಿನಾದ್ಯಂತ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ರಸ್ತೆ, ಒಳಚರಂಡಿ ಮತ್ತು ಮಳೆ ನೀರು ನಿರ್ವಹಣೆ ಕುರಿತು ನಾಗರಿಕ ಜಾಗೃತಿ ಮೂಡಿಸಲಾಗುವುದು ಎಂದು ರವೀಂದ್ರ ದಟ್ಸ್‌ಕನ್ನಡ ಡಾಟ್‌ಕಾಮ್‌ಗೆ ತಿಳಿಸಿದರು.

ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು ಪ್ರತಿಭಟನೆಗೆ ಕೈಸೇರಿಸಿದ್ದವು. ನಗರದಲ್ಲಿ ನಿದ್ರೆ ಮಾಡುತ್ತಿರುವ ಅಧಿಕಾರಿಗಳನ್ನು ಎಬ್ಬಿಸಲು ಸಹಿ ಸಂಗ್ರಹಕ್ಕೆ ಪ್ರತಿಭಟನೆ ವೇದಿಕೆಯಾಯಿತು. ಈ ಪತ್ರವನ್ನು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರಿಗೆ ನೀಡುವ ಆಶಯವನ್ನು ಸಂಘಟನೆಗಳು ವ್ಯಕ್ತಪಡಿಸಿದವು.

ಹಿನ್ನೆಲೆ : ವಿಮಾನ ನಿಲ್ದಾಣ ರಸ್ತೆಯಲ್ಲಿ 2002ರಲ್ಲಿ ಆರಂಭಗೊಂಡ ಫ್ಲೈಓವರ್‌ ಕಾಮಗಾರಿ, ಯೋಜನೆಯಂತೆ ಏಪ್ರಿಲ್‌ 2004ರಲ್ಲಿಯೇ ಪೂರ್ಣಗೊಳ್ಳಬೇಕಾಗಿತ್ತು. ಅಧಿಕಾರಿಗಳು ಮತ್ತು ಸರ್ಕಾರದ ಬೇಜವಾಬ್ದಾರಿಗೆ ನಿದರ್ಶನವೆಂಬಂತೆ ಕಾಮಗಾರಿ ಅಪೂರ್ಣಗೊಂಡು, ಈ ಭಾಗದ ರಸ್ತೆ ಸಂಚಾರಕ್ಕೆ ಕಿರಿಕಿರಿ ತಂದಿದೆ.

ಸರ್ಕಾರ ಮತ್ತು ಗುತ್ತಿಗೆದಾರರ ನಡುವಿನ ಸಂಘರ್ಷದಿಂದ ಫ್ಲೈಓವರ್‌ ಕಾಮಗಾರಿ ಪ್ರಸ್ತುತ ಸ್ಥಗಿತಗೊಂಡಿದೆ. ಯೋಜನೆ ಪೂರ್ಣಗೊಳಿಸಲು ನಿಗದಿಗಿಂತಲೂ ಅಧಿಕ ಮೊತ್ತವನ್ನು ಬಿಡುಗಡೆ ಮಾಡಬೇಕೆಂದು ಗುತ್ತಿಗೆದಾರರು ಪಟ್ಟುಹಿಡಿದಿದ್ದಾರೆ. ಸರ್ಕಾರ ಮತ್ತು ಗುತ್ತಿಗೆದಾರರ ಬಿಕ್ಕಟ್ಟು ನ್ಯಾಯಾಲಯದ ಕಟ್ಟೆ ಹತ್ತಿದೆ.

ಸಾರ್ವಜನಿಕರ ಪ್ರತಿಭಟನೆ ಸರ್ಕಾರದ ಕಿವಿಗೆ ಮುಟ್ಟಿ, ಫ್ಲೈಓವರ್‌ಗೆ ಶಾಪವಿಮೋಚನೆಯಾಗಬಹುದೇ? ಕಾದು ನೋಡೋಣ.

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X