ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳಿಕೋಟಿಯಲ್ಲಿ ಹಸ್ತಪ್ರತಿಗಳ ಬಗ್ಗೆ ಮಹತ್ವದ ಶಿಬಿರ

By Staff
|
Google Oneindia Kannada News

ತಾಳಿಕೋಟಿಯಲ್ಲಿ ಹಸ್ತಪ್ರತಿಗಳ ಬಗ್ಗೆ ಮಹತ್ವದ ಶಿಬಿರ
ಹಸ್ತಪ್ರತಿಗಳು ಇಂದು, ಮುಂದು, ಎಂದೆಂದೂ ಪ್ರಸ್ತುತ -ಡಾ.ಮಲ್ಲೇಪುರಂ ಜಿ.ವೆಂಕಟೇಶ್‌

  • ಚಂದ್ರಗೌಡ ಕುಲಕರ್ಣಿ, ತಾಳಿಕೋಟಿ
    [email protected]
Chandragowda Kulakarniತಾಳಿಕೋಟಿ- ಮಾರುಕಟ್ಟೆ ಪ್ರಣೀತ ಜಾಗತಿಕರಣವು ನಮ್ಮ ದೇಸಿ ಪ್ರಜ್ಞೆಗೆ ದೊಡ್ಡ ಸವಾಲೊಡ್ಡಿದೆ. ಸತ್ವಶಾಲಿಯಾದ ದೇಸಿ ಪ್ರಜ್ಞೆ ಜಾಗತೀಕರಣವನ್ನರಗಿಸಿಕೊಳ್ಳುವ ಸಾಮರ್ಥ್ಯ ಪಡೆದಿದೆ. ಇಂತಹ ಹಸ್ತಪ್ರತಿ ಶಿಬಿರಗಳು ಆ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡೀನ್‌ ಡಾ.ಮಲ್ಲೇಪುರಂ ಜಿ. ವೆಂಕಟೇಶ್‌ ಹೇಳಿದರು.

ನವದೆಹಲಿಯ ರಾಷ್ಟ್ರೀಯ ಹಸ್ತಪ್ರತಿ ಮಿಷನ್‌, ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಸಂಪನ್ಮೂಲಕೇಂದ್ರ ಮತ್ತು ತಾಳಿಕೋಟಿಯ ಶ್ರೀ ಖಾಸ್ಗತೇಶ ಕಲಾ- ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ನಾಲ್ಕು ದಿನಗಳ ಹಸ್ತಪ್ರತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಸ್ತಪ್ರತಿಗಳು ಇಂದಿಗೂ ಪ್ರಸ್ತುತ, ಎಂದಿಗೂ ಪ್ರಸ್ತುತ ಎಂದ ಜಿ.ವೆಂಕಟೇಶ್‌, ಅವುಗಳ ಮಹತ್ವದ ಬಗೆಗೆ ಒತ್ತಿ ಹೇಳಿದರು.

ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದ ಡಿ. ಎಂ. ಧನ್ನೂರ ಮಾತನಾಡಿ, ವಿದೇಶಿ ವಿದ್ವಾಂಸರಂತೆ ಕರ್ನಾಟಕದ ವಿದ್ವಾಂಸರು ಸಹ ಹಸ್ತಪ್ರತಿ ಸಂಗ್ರಹ, ಸಂರಕ್ಷಣೆ, ಪ್ರಕಟಣೆಗೆ ತಮ್ಮನ್ನೆ ಅರ್ಪಿಸಿಕೊಂಡಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕರಿಗೌಡ ಬೀಚನಹಳ್ಳಿ ಮಾತನಾಡಿ, ವಿಜಯನಗರದ ಹಂಪಿಗೂ ತಾಳಿಕೋಟಿಗೂ ಕರುಳಬಳ್ಳಿ ಸಂಬಂಧವಿದೆ. ಕನ್ನಡದ ಸಮೃದ್ಧ ಪರಂಪರೆಯನ್ನು ಸಂರಕ್ಷಿಸುವುದೇ ಕನ್ನಡ ವಿಶ್ವವಿದ್ಯಾಲಯದ ಧ್ಯೇಯ. ಅದು ಇಲ್ಲಿ ಸಾರ್ಥಕತೆ ಪಡೆದಿದೆ ಎಂದು ಮೆಚ್ಚುಗೆ ಸೂಚಿಸಿದರು.

ಹಸ್ತಪ್ರತಿ ಸ್ವರೂಪ, ಸಂರಕ್ಷಣೆ, ಪ್ರಕಟಣೆ, ಲಿಪಿಕಾರರು, ಸಾಂಸ್ಕೃತಿಕ ಮಹತ್ವ, ಸಂರಕ್ಷಣೆಯಲ್ಲಿ ಆಧುನಿಕ ಉಪಕರಣಗಳ(ಕಂಪ್ಯೂಟರ್‌, ಪ್ಲಾಪಿ, ಸಿ.ಡಿ) ಬಳಕೆ, ಸಂಗ್ರಹಿಸಿಡುವ ವಿಧಾನ, ಹಸ್ತಪ್ರತಿಗಳ ರಕ್ಷಣೆಯಲ್ಲಿ ಮಠಮಾನ್ಯಗಳ ಪಾತ್ರ ಮುಂತಾದ ಮಹತ್ವದ ವಿಷಯಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಡಾ. ಎಫ್‌. ಟಿ. ಹಳ್ಳಿಕೇರಿ, ಡಾ. ವೀರೇಶ ಬಡಿಗೇರ, ಡಾ. ಕೆ. ರವೀಂದ್ರನಾಥ, ವಿಶ್ವೇಶ್ವರ, ಶಿವಪ್ಪ ನೀರಲಗಿ, ಪ್ರೊ. ಜಿ. ಎಂ.ಘಿವಾರಿ, ಪ್ರೊ. ಚಂದ್ರಗೌಡ ಕುಲಕರ್ಣಿ, ಪ್ರೊ. ಚೆನ್ನವೀರಪ್ಪ., ಸತೀಶ, ದಿನಕರ ಜೋಶಿ ಮತ್ತಿತರರು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಿದರು.

ಶಿಬಿರದ ಆಶಯ ಭಾಷಣ ಮಾಡಿದ ಖ್ಯಾತ ಸಂಶೋಧಕರಾದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ , ಹಸ್ತಪ್ರತಿಗಳು ಇಂದು ಅವಜ್ಞೆಗೆ ಗುರಿಯಾಗಿವೆ. ಉಳಿದಿರುವ ಕೃತಿಗಳನ್ನು ಸಂರಕ್ಷಿಸಿ ಓದುವ, ಅರ್ಥೈಸುವ, ವ್ಯಾಖ್ಯಾನಿಸುವ ಕಾರ್ಯ ನಡೆಯಬೇಕಿದೆ ಎಂದರು.

ಪುಸ್ತಕ ಮತ್ತು ಹಸ್ತಪ್ರತಿಗಳ ಪ್ರದರ್ಶನವನ್ನು ಉದ್ಘಾಟಿಸಿದ ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ, ಹಸ್ತಪ್ರತಿಗಳಲ್ಲಿ ಜನಸಾಮಾನ್ಯರ ಸಂಸ್ಕೃತಿ, ಚರಿತ್ರೆ ಅಡಕವಾಗಿವೆ. ಜಾಗತೀಕರಣಕ್ಕೆ ಪರ್ಯಾಯವಾಗಿ ದೇಸಿ ಸಂಸ್ಕೃತಿಯನ್ನು ಪುನರ್‌ ಮನನ ಮಾಡಿಕೊಳ್ಳುವ ಆವಶ್ಯಕತೆ ಇದೆ ಎಂದರು.

ರಾಷ್ಟ್ರೀಯ ಮಟ್ಟದ ಈ ಶಿಬಿರದಲ್ಲಿ ವಿವಿಧ ಕಾಲೇಜುಗಳಿಂದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಆಸಕ್ತರು ಸೇರಿದಂತೆ 60ಕ್ಕೂ ಅಧಿಕ ಶಿಬಿರಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.


ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X