ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾದಿ ಇಂಡಿಯಾ-2005: ಗ್ರಾಮೀಣರ ಬೆವರ ಗೌರವಿಸೋಣ ಬನ್ನಿ

By Staff
|
Google Oneindia Kannada News

ಖಾದಿ ಇಂಡಿಯಾ-2005: ಗ್ರಾಮೀಣರ ಬೆವರ ಗೌರವಿಸೋಣ ಬನ್ನಿ
ಫೆ.27ರವರೆಗೆ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ

ಬೆಂಗಳೂರು: ನಗರದ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ‘ಖಾದಿ ಇಂಡಿಯಾ-2005’ ಗುರುವಾರ(ಫೆ.3) ಆರಂಭಗೊಂಡಿದೆ. ಫೆಬ್ರವರಿ 27ರವರೆಗೆ ಈ ರಾಷ್ಟ್ರೀಯ ಪ್ರದರ್ಶನ ಮುಂದುವರೆಯಲಿದೆ. ಪ್ರದರ್ಶನದ 250 ಮಳಿಗೆಗಳಲ್ಲಿರುವ ಅನೇಕ ಆಕರ್ಷಕ ವಸ್ತುಗಳು ಗ್ರಾಹಕರ ಮನೆಸೇರಲು ಕಾದು ಕುಳಿತಿವೆ.

ನಿಮ್ಮನ್ನು ಸೆಳೆಯಲು ವೈವಿಧ್ಯಮಯ ಪಂಚೆ, ಅಂಗಿ, ಕೈವಸ್ತ್ರ, ಶಲ್ಯ, ಹಾಸಿಗೆ, ಕಿಟಕಿ-ಬಾಗಿಲುಗಳ ಪರದೆಗಳು ಹೀಗೆ ಹತ್ತಾರು ಗೃಹಬಳಕೆಯ ಅಗತ್ಯವಸ್ತುಗಳು ಇಲ್ಲಿವೆ. ಹಣವಿರುವ ಸಿರಿವಂತರು ಬೇಕಾದರೆ ರೇಷ್ಮೆ ವಸ್ತ್ರಗಳನ್ನು ಖರೀದಿಸಬಹುದು. ಜನಸಾಮಾನ್ಯರು, ಬಡವರ ಕೈಗೆಟಕುವ ಬಟ್ಟೆಗಳು ಸಾಕಷ್ಟಿವೆ. ಹತ್ತಿ ಬಟ್ಟೆಗಳು ಎಂದು ಕನವರಿಸುವವರಿಗೆ ಅಪ್ಪಟ ಹತ್ತಿ ಬಟ್ಟೆಗಳು ಇಲ್ಲಿ ಲಭ್ಯ.

ಅಯ್ಯೋ ಬಾಯಿಗೇನು ಬೇಡವೇ ಎಂದು ಗೊಣಗ ಬೇಡಿ. ನಿಮಗಾಗಿಯೇ ವಿವಿಧ ತಿಂಡಿ ತಿನಿಸುಗಳು ಸಜ್ಜಾಗಿವೆ. ಜೇನುತುಪ್ಪ, ಉಪ್ಪಿನಕಾಯಿ ನೋಡುತ್ತ ಮುಂದೆ ಸಾಗಿದರೆ ನಿಮಗೆ ಅಚ್ಚರಿ. ಹಾಗಲಕಾಯಿ ಚಿಪ್ಸ್‌ ಇಲ್ಲುಂಟು. ಕಹಿ ಎಂದು ಮೂಗು ಮುರಿಯುವ ಬದಲು ಬಾಯಿಗಿಟ್ಟು ನೋಡಿ. ಕುರಂ ಕುರಂ ಎನ್ನುವ ಚಿಪ್ಸ್‌ನ ರುಚಿಯನ್ನು ತಿಂದಷ್ಟೇ ಸವಿಯಬೇಕು.

‘ರಾಜಧಾನಿ ನಗರದಲ್ಲಿ ಏನೇನೋ ಪ್ರದರ್ಶನಗಳು ಹಾಗೂ ಮೇಳಗಳು ದಿನೇ ಇದ್ದದ್ದೇ ಬಿಡಿ’- ಅನ್ನುತ್ತ ಈ ಪ್ರದರ್ಶನ ಮಿಸ್‌ ಮಾಡಬೇಡಿ. ಇಲ್ಲಿನ ಎಲ್ಲಾ ವಸ್ತುಗಳ ಹಿಂದಿನ ಬೆವರು ಗ್ರಾಮೀಣರದು. ರಾಜ್ಯದ ವಿವಿಧ ತಾಲೂಕುಗಳ ಗ್ರಾಮೋದ್ಯೋಗ ಸಂಘಗಳು ಇಲ್ಲಿ ಮಳಿಗೆ ತೆರೆದಿವೆ. ಬೇಕು ಅಂದ್ರೆ ನಿಮ್ಮೂರಿನ ಮಳಿಗೆಯಲ್ಲಿಯೇ ಖರೀದಿ ಮಾಡಿ. ನಿಮ್ಮ ಜನ, ಮುಖ್ಯವಾಗಿ ಬೆವರು ಹರಿಸುವ ಜನ ತಣ್ಣಗಿರಲಿ. ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಖಾದಿಯನ್ನು, ಅದಕ್ಕೂ ಮಿಗಿಲಾಗಿ ಅದನ್ನು ನಂಬಿದವರ ಉಳಿಸಿಕೊಳ್ಳುವ ಜವಬ್ಧಾರಿ ನಮ್ಮೆಲ್ಲರ ಮೇಲಿದೆ.

ಸರಕಾರದ ನೆರವು: ಪ್ರದರ್ಶನ ಉದ್ಘಾಟಿಸಿದ ಮುಖ್ಯಮಂತ್ರಿ ಧರ್ಮಸಿಂಗ್‌ ಮಾತನಾಡಿ, ಖಾದಿ ಉದ್ಯಮದ ಉಳಿವಿಗೆ ಸರಕಾರ 1.20ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದರು

ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪಿ.ಜಿ.ಆರ್‌.ಸಿಂಧ್ಯ, ರಾಮಲಿಂಗಾರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X