ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಸಾರ್‌, ಎನ್ಕೆ, ಕಣವಿ, ಸನದಿಗೆ ಕರ್ನಾಟಕ ವಿ.ವಿ ಗೌರವ ಡಾಕ್ಟರೇಟ್‌

By Staff
|
Google Oneindia Kannada News

ನಿಸಾರ್‌, ಎನ್ಕೆ, ಕಣವಿ, ಸನದಿಗೆ ಕರ್ನಾಟಕ ವಿ.ವಿ ಗೌರವ ಡಾಕ್ಟರೇಟ್‌
ಸ್ಥಳೀಯರನ್ನು ನಿರ್ಲಕ್ಷ ಮಾಡಿದ್ದ ಧಾರವಾಡ ಕರ್ನಾಟಕ ವಿವಿ ವಿವಾದಕ್ಕೆ ತೆರೆ

ಧಾರವಾಡ : ಪ್ರತಿವರ್ಷ ಗೌರವ ಡಾಕ್ಟರೇಟ್‌ಗಳನ್ನು ಹೊರಗಿನ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಗೌರವ ಡಾಕ್ಟರೇಟ್‌ ಮನ್ನಣೆಗೆ ಸ್ಥಳೀಯರನ್ನು ನಿರ್ಲಕ್ಷ್ಯಮಾಡಿದೆ ಎನ್ನುವ ಆರೋಪಕ್ಕೆ ತುತ್ತಾಗಿದ್ದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಈಗ ಜನಮತಕ್ಕೆ ಸ್ಪಂದಿಸಿದೆ.

ಈ ವರ್ಷ ಕವಿ ಪ್ರೊ.ಕೆ. ಎಸ್‌. ನಿಸಾರ್‌ ಅಹಮದ್‌, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿ, ಡಾ. ಎಸ್‌. ಸಿ. ಶರ್ಮ ಮತ್ತು ಪ್ರೊ. ಎಸ್‌. ಕೆ. ರಾಮಚಂದ್ರರಾವ್‌ ಅವರಿಗೆ ಗೌರವ ಡಾಕ್ಟರೇಟ್‌ ನೀಡಲು ಕವಿವಿ ನಿರ್ಧರಿಸಿತ್ತು. ಈ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆ, ಟೀಕೆಗಳು ಸಾಹಿತ್ಯವಲಯದಿಂದ ಕೇಳಿಬಂದಿದ್ದವು.

ಕವಿವಿ ತನ್ನ ವ್ಯಾಪ್ತಿಯಲ್ಲಿ ಬರುವ ಗಣ್ಯರಿಗೆ ಗೌರವ ಡಾಕ್ಟರೇಟ್‌ ನೀಡದೆ, ಹೊರಗಿನ ವ್ಯಕ್ತಿಗಳಿಗೆ ನೀಡುವ ಔಚಿತ್ಯವೇನಿತ್ತು ಎಂದು ಎನ್ಕೆ ಪ್ರಶ್ನಿಸಿದ್ದರು. ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜು, ಕವಿವಿ ತನ್ನ ವ್ಯಾಪ್ತಿಯಲ್ಲಿನ ಗಣ್ಯರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬಹುದಿತ್ತು ಎಂದು ವಿವಿ ಧೋರಣೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದರು.

ವಿಮರ್ಶಕ ಡಾ.ಜಿ.ಎಸ್‌.ಅಮೂರ, ವಿವಿ ನಮ್ಮ ನಡುವಿನ ಗಣ್ಯರನ್ನು ಗುರುತಿಸಿ ಗೌರವಿಸಿದರೆ ಸೂಕ್ತ. ಹಾಗೆಂದ ಮಾತ್ರಕ್ಕೆ ಹೊರ ಭಾಗದವರಿಗೆ ಕೊಡಬಾರದು ಎಂದು ಅರ್ಥವಲ್ಲ. ಅದಕ್ಕೂ ಮೊದಲು ನಮ್ಮ ವ್ಯಾಪ್ತಿಯ ಜನರನ್ನು ಗುರ್ತಿಸುವುದು ಸೂಕ್ತ ಎಂದಿದ್ದರು.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿರುವ ಹಿರಿಯರಾದ ಎನ್ಕೆ ಹಾಗೂ ಚೆನ್ನವೀರಕಣವಿ ಅವರಿಗೆ ಗೌರವ ಡಾಕ್ಟರೇಟ್‌ ನೀಡ ಬೇಕಿತ್ತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಮಧು ವೆಂಕಾರೆಡ್ಡಿ ಅಭಿಪ್ರಾಯಪಟ್ಟಿದ್ದರು.

ಹೊಸ ಪಟ್ಟಿ : ಕವಿವಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೊಸಪಟ್ಟಿಯನ್ನು ಪ್ರಕಟಿಸಿದೆ. ಕವಿ ಚೆನ್ನವೀರ ಕಣವಿ, ಎನ್‌.ಕೆ.ಕುಲಕರ್ಣಿ, ಪ್ರೊ.ಬಿ.ಎ.ಸನದಿ ಅವರಿಗೆ ಗೌರವ ಡಾಕ್ಟರೇಟ್‌ ವಿವಿ ನಿರ್ಣಯ ಕೈಗೊಂಡಿದೆ.

ಅಂತಿಮವಾಗಿ ಈ ಮೂವರೊಂದಿಗೆ, ಕವಿ ಪ್ರೊ.ಕೆ. ಎಸ್‌. ನಿಸಾರ್‌ ಅಹಮದ್‌, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿ, ಡಾ. ಎಸ್‌. ಸಿ. ಶರ್ಮ ಮತ್ತು ಪ್ರೊ. ಎಸ್‌. ಕೆ. ರಾಮಚಂದ್ರರಾವ್‌ ಸೇರಿದಂತೆ ಏಳು ಜನರ ಹೆಸರುಗಳನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X