• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲ ಬಂಡಾಯಗಳೂ ಹುಸಿಯಾದ ಹೊತ್ತು ಏನಿದು ಕರುನಾಡ ಸೇನೆ?

By ದಟ್ಸ್‌ಕನ್ನಡ ಬ್ಯೂರೊ
|

ಬಂಡಾಯದಂಥ ಬಂಡಾಯವೇ ಕಾವು ಕಳಕೊಂಡು ಪರಿಷತ್ತು-ಪ್ರಾಧಿಕಾರಗಳ ಪಾಲಾಯಿತು. ದಲಿತ-ರೈತ ಚಳವಳಿಗಳೆಲ್ಲ ರಾಜಕಾರಣದ ಸ್ಪರ್ಶದಲ್ಲಿ ದಿಕ್ಕುತಪ್ಪಿ ಶೈಶವದಲ್ಲೇ ಉಳಿದಿವು. ಇದು ಚಳವಳಿಗಳ ಕಾಲ ಅಲ್ಲವಣ್ಣಾ ಎನ್ನುವ ಸಂದರ್ಭದಲ್ಲಿ , ಇದೇನಿದು ಇನ್ನೊಂದು ಸಂಘಟನೆ-ಚಳವಳಿಯ ಘೋಷಣೆ?

ನಿಜ, ಸಂಘಟನೆಗಳು ಹಾಗೂ ಚಳವಳಿಗಳು ಅರ್ಥ ಕಳೆದುಕೊಳ್ಳುತ್ತಿವೆ. ಕ್ರಿಯಾಶೀಲತೆ ಎನ್ನುವುದು ಆರಂಭದಲ್ಲಿಯೇ ಅಂತ್ಯಗೊಳ್ಳುತ್ತಿದೆ. ಇದೊಂದು ಜಡ್ಡುಗಟ್ಟಿದ ಸಾಂಸ್ಕೃತಿಕ ಸಂದರ್ಭ. ಮೇಲ್ನೋಟಕ್ಕೆ ಅತಿವೇಗದ ಕಾಲ ಅನ್ನಿಸಿದರೂ, ಈ ವೇಗವೆಲ್ಲ ಐಷಾರಾಮಿ ಕಾರಣಗಳಿಗೇ ಕೊನೆಗೊಳ್ಳುತ್ತಿರುವುದನ್ನು ಕೆದಕಿನೋಡಿದರೆ ಕಾಣಬಹುದು. ಇಂಥದೊಂದು ಸಂದರ್ಭದಲ್ಲಿ ನಮ್ಮಲ್ಲಿನ್ನೂ ಕನಸುಗಳಿವೆ, ಭರವಸೆಗಳೂ ಉಳಿದಿವೆ ಎನ್ನುತ್ತಿದೆ ಕರುನಾಡ ಸೇನೆ! ಬೆಚ್ಚದಿರಿ, ಇದು ಮಹಾರಾಷ್ಟ್ರದ ಶಿವಸೇನೆ ಮಾದರಿಯ ಸೇನೆಯಲ್ಲ . ರಾಜಕೀಯ ಸಂಘಟನೆಯಂತೂ ಅಲ್ಲವೇ ಅಲ್ಲ . ನಾಡುನುಡಿಗಾಗಿ ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ನಡೆಸುವ ಉದ್ದೇಶದಿಂದ ರೂಪುಗೊಂಡಿರುವ ಸಂಘಟನೆಯಿದು. ಪತ್ರಕರ್ತರು, ಚಿಂತಕರು, ಸಹೃದಯರು, ಲೇಖಕರು, ಇವರೆಲ್ಲ ಸೇನೆಯ ಒಂದು ಭಾಗವಾಗಿದ್ದಾರೆ. ಕರುನಾಡ ಸೇನೆಯ ಮುಂಚೂಣಿಯಲ್ಲಿ ಮಿಂಚುತ್ತಿರುವ ಅಗ್ನಿ ಪತ್ರಿಕೆಯ ಸಂಪಾದಕ ಶ್ರೀಧರ್‌ ಹೇಳುತ್ತಾರೆ : ಕರುನಾಡ ಸೇನೆಯಲ್ಲಿ ಮಿಲಿಟರಿಯ ಶಿಸ್ತಿರುತ್ತದೆ, ಹಿಂಸೆಯಿರುವುದಿಲ್ಲ !

ಕನ್ನಡದ ರಕ್ಷಣೆ-ಅಭಿವೃದ್ಧಿಗಾಗಿ ಈಗಾಗಲೇ ಇರುವ ಸಂಘಸಂಸ್ಥೆಗಳೇನು ಒಂದೇ ಎರಡೇ..... ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಕಾವಲು ಸಮಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡು ಕನ್ನಡ ಸಂಘ, ಕನ್ನಡ ಬಳಗ, ಅಬ್ಬಬ್ಬಾ! ಸಂಘಟನೆಗಳು ಇಷ್ಟಿದ್ದರೂ, ವಾಸ್ತವದ ನೆಲೆಯಲ್ಲಿ ಸುಮಾರು ಸಂಘಟನೆಗಳು ಹೆಸರಿಗಷ್ಟೇ ಉಳಿದಿವೆ. ಸಮರ್ಥ ನಾಯಕತ್ವ ಹಾಗೂ ಸಂಘಟನೆಯ ಕೊರತೆಯಿಂದ ಸಂಘಟನೆಗಳು ಮೂಲೆ ಗುಂಪಾಗಿವೆ. ಇಂತಹ ಕೊರತೆ ನೀಗಿಸಲು ಹಾಗೂ ಬಲಿಷ್ಠ ಕರ್ನಾಟಕ ನಿರ್ಮಿಸಲು ಕರುನಾಡ ಸೇನೆ ಸಜ್ಜಾಗಿದೆ ಎನ್ನುತ್ತಾರೆ ಸೇನೆಯ ಸಂಘಟಕರು.

ಅಂದಹಾಗೆ, ನವಂಬರ್‌ 8ರ ಸೋಮವಾರ ಸೇನೆಗೆ ಚಾಲನೆಯೂ ದೊರೆತಿದೆ. ನೀವು ಬೆಂಗಳೂರಿನಲ್ಲೊಮ್ಮೆ ನೋಡಬೇಕಿತ್ತು - ನಗರದ ತುಂಬಾ ಸೇನೆಯ ಬಗೆಗಿನ ಪೋಸ್ಟರ್‌ಗಳು, ಬ್ಯಾನರ್‌ಗಳು, ಸಮರ ಸಿದ್ಧತೆಯ ಘೋಷಣೆಗಳು. ಕಾರ್ಯಕ್ರಮಕ್ಕೆ ಟೆಂಪೋಗಳಲ್ಲಿ ಲಾರಿಗಳಲ್ಲಿ ಆಗಮಿಸಿದ್ದ ಸಾವಿರಾರು ಜನ ಸೇನೆಗೆ ಸ್ವಾಗತ ಕೋರಿ ಬೆಂಬಲ ವ್ಯಕ್ತಪಡಿಸಿದರು. ಇದು ಮೊದಲ ಹಂತ.

ಮಾವಿನ ಗಿಡಕ್ಕೆ ನೀರೆರೆಯುವ ಮೂಲಕ ಖ್ಯಾತ ನ್ಯಾಯವಾದಿ ಸಿ.ಎಚ್‌. ಹನುಮಂತರಾಯ ಕರುನಾಡ ಸೇನೆಗೆ ಚಾಲನೆ ನೀಡಿದರು. ಕರುನಾಡ ಸೇನೆ ಮಾವಿನ ಮಾರದಂತೆ ನಾಡಿಗೆ ನೆರಳಾಗಲಿ ಎನ್ನುವುದವರ ಆಶಯ.

ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕ.ಸಾ.ಪ ಅಧ್ಯಕ್ಷ ಚಂದ್ರಶೇಖರ ಪಾಟೀಲ- ಕಳೆದ 48 ವರ್ಷ ರಾಜ್ಯವನ್ನು ಆಳಿದ ಸರಕಾರಗಳ ಆಡಳಿತದಲ್ಲಿ ಕನ್ನಡವಿರಲಿಲ್ಲ. ಆಡಳಿತ ಯಂತ್ರ ಕನ್ನಡ ವಿರೋಧಿಯಾಗಿ ಕೆಲಸ ಮಾಡುತ್ತಲೇ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಕರುನಾಡ ಸೇನೆಯ ಉಗಮ ಮಹತ್ವ ಪಡೆದಿದೆ. ರಾಜ್ಯದಲ್ಲಿ ಕನ್ನಡೀಕರಣದ ಚಳವಳಿ ಆರಂಭವಾಗಬೇಕು ಎಂದರು.

ಕನ್ನಡದ ಕಾರ್ಯಕ್ರಮ ಎಂದಮೇಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಇಲ್ಲದಿದ್ದರೆ ಹೇಗೆ? ಹೌದು, ಅವರೂ ಇದ್ದರು. ಕನ್ನಡ ಭಾಷೆಯನ್ನು ನಿಜವಾಗಿ ಉಳಿಸುತ್ತಿರುವ ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಹೋರಾಟಕ್ಕೆ ಜಯ ಖಚಿತ ಎಂದು ಸೇನೆಗೆ ಕಿವಿಮಾತು ಹೇಳಿದರು.

ಸಂಸದ ಅಂಬರೀಷ್‌, ಸಿನಿಮಾ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು, ನಟ ಶಿವರಾಜ್‌ಕುಮಾರ್‌, ರೈತ ಸಂಘದ ಕೆ.ಎಸ್‌.ಪುಟ್ಟಣ್ಣಯ್ಯ, ಕೋಡಿಹಳ್ಳಿ ಚಂದ್ರಶೇಖರ್‌, ನಟ ಲೋಹಿತಾಶ್ವ, ಶಿವಮೊಗ್ಗ ಸುಬ್ಬಣ್ಣ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಇಂದೂಧರ ಹೊನ್ನಾಪುರ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು. ತಮಿಳರು, ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದು ಮತ್ತೊಂದು ವಿಶೇಷ.

ಸೇನೆಯ ವಿವರ : ಸೇನೆಗೆ ಸೂಕ್ತ ಮಾರ್ಗದರ್ಶನ ನೀಡುವ ಹಾಗೂ ತಂತ್ರಗಾರಿಕೆ ರೂಪಿಸುವ ಜವಾಬ್ದಾರಿ ಹಿರಿಯ ನ್ಯಾಯವಾದಿ ಸಿ.ಎಚ್‌. ಹನುಮಂತರರಾಯರ ಮೇಲಿದೆ. ಸೇನೆಯ ಅಧ್ಯಕ್ಷರಾಗಿ ಪಟ್ಟಣಗೆರೆ ಜಯಣ್ಣ, ಕಾರ್ಯದರ್ಶಿಯಾಗಿ ಕೃಷ್ಣ ಮಾಸಡಿ ಮತ್ತಿತರರು ಸೇನೆಯ ಕೆಲಸಕ್ಕೆ ಹೆಗಲು ನೀಡಿದ್ದಾರೆ. ದಂಡನಾಯಕ ಅಗ್ನಿ ಶ್ರೀಧರ್‌ ಕೂಡ ಜೊತೆಗಿದ್ದಾರೆ.

ಮೊದಲ ಹಂತದ ಕಾರ್ಯಸೂಚಿ : ನಾಡಿನ ವಿವಿಧ ಸಂಘ ಸಂಸ್ಥೆಗಳು ಹಾಗೂ ಗಣ್ಯರ ಬೆಂಬಲದೊಂದಿಗೆ ಕರುನಾಡ ಸೇನೆ ತನ್ನ ಚಟುವಟಿಕೆಗಳನ್ನು ಆರಂಭಿಸಿದೆ. ಸೇನೆಯ ಉದ್ಘಾಟನಾ ಸಮಾರಂಭದಲ್ಲಿ ಕಾಲಮಿತಿಯಾಂದಿಗೆ ತೆಗೆದು ಕೊಂಡ ನಿರ್ಣಯಗಳು ಹೀಗಿವೆ-

ನ.12 ರಂದು ಪರಭಾಷಾ ಚಿತ್ರಗಳ ವಿರುದ್ಧ ಕನ್ನಡ ಚಿತ್ರೋದ್ಯಮ ನಡೆಸುವ ಪ್ರತಿಭಟನೆಗೆ ಸೇನೆಯ ಬೆಂಬಲ. ನ.25 ರೊಳಗೆ ಬೆಂಗಳೂರಿನ ಜಾಹೀರಾತು ಫಲಕದಲ್ಲಿ ಕನ್ನಡ ಲಿಪಿ ಬಳಕೆ.

ಡಿ.10 ರೊಳಗೆ ಬ್ರಿಗೇಡ್‌ ರಸ್ತೆಗೆ ಶ್ರೀಬಸವಣ್ಣ ರಸ್ತೆ ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ಗೆ ಮೈಸೂರುಹುಲಿ ಟಿಪ್ಪುಸುಲ್ತಾನ್‌ ರಸ್ತೆ ಎಂದು ಮರು ನಾಮಕರಣ ಮಾಡುವುದು.

ರಕ್ಷಣಾವೇದಿಕೆಗೊಂದು ವೆಬ್‌ಸೈಟ್‌ : ಕನ್ನಡ ಮಾಸದಲ್ಲಿ ಕನ್ನಡದ ಚಟುವಟಿಕೆಗಳು ಜೋರಾಗಿರುವಂತಿದೆ. ಒಂದೆಡೆ ಕರುನಾಡ ಸೇನೆ ಪ್ರಾರಂಭವಾಗಿದ್ದರೆ, ಇನ್ನೊಂದೆಡೆ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ರೂಪುಗೊಳಿಸುವತ್ತ ದಾಪುಗಾಲಿಟ್ಟಿದೆ. ಈ ಪ್ರಯತ್ನದಲ್ಲಿ ವೇದಿಕೆ ತನ್ನದೊಂದು ವೆಬ್‌ಸೈಟ್‌ ಪ್ರಾರಂಭಿಸಿದೆ. ರಕ್ಷಣಾ ವೇದಿಕೆ ಎಂದರೆ ನೆನಪಿಗೆ ಬಂತಲ್ಲ ; ಕನ್ನಡೇತರ ಸಿನಿಮಾಗಳ ಬಿಡುಗಡೆ ವಿರುದ್ಧ ಚಳವಳಿ ಹೂಡಿ ಜೈಲುಸೇರಿದ ಕನ್ನಡಿಗರು. ವೆಬ್‌ಸೈಟ್‌ ಮೂಲಕ ಜಾಗತಿಕ ಕನ್ನಡಿಗರಿಗೆ ತನ್ನ ಚಟುವಟಿಕೆಗಳ ಮುಟ್ಟಿಸುವುದು ರಕ್ಷಣಾ ವೇದಿಕೆಯ ಉದ್ದೇಶ. ವೆಬ್‌ಸೈಟ್‌ ವಿಳಾಸ : http://www.karnatakarakshanavedike.org ಕರುನಾಡ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಉದ್ದೇಶಗಳು ಗೆಲ್ಲಲಿ. ಸಿರಿಗನ್ನಡಂ ಗೆಲ್ಗೆ ಬಾಳ್ಗೆ .

English summary
Karunada Sene, a new outfit to fight for kannada/karnataka cause comes into being. Thatskannada wishes all the best to all honest efforts for the welfare of our language and land
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X