ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕಾರಣದಿ‘ಕಾವಿ’ಯ ರಂಗು ಕಾಣಿಸುತ್ತಿದೆ ನೀವು ಕಂಡಿರಾ?

By ರಾಜು ಮಹತಿ
|
Google Oneindia Kannada News

ರಾಜಕಾರಣದಲ್ಲಿ ಧರ್ಮದ ಪಾತ್ರ ಎಷ್ಟಿರಬೇಕು? ಹೇಗಿರಬೇಕು ? ಎನ್ನುವ ಜಿಜ್ಞಾಸೆಯ ನಡುವೆಯೇ ರಾಜ್ಯದ ಕೆಲವು ಧರ್ಮಗುರುಗಳು ರಾಜಕೀಯ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಸನ್ಯಾಸಿನಿ ಉಮಾ ಭಾರತಿ ಗಳಿಸಿದ ಅಭೂತಪೂರ್ವ ಗೆಲುವು ಉಳಿದ ಕಾವಿಧಾರಿಗಳಿಗೂ ಪ್ರೇರಣೆಯಾಗಿದೆಯಾ ? ಗೊತ್ತಿಲ್ಲ . ಆದರೆ, ವಿವಿಧ ಧರ್ಮಗಳ ಕೆಲ ಗುರುಗಳಂತೂ ರಾಜಕೀಯದ ಬಗ್ಗೆ ತಮ್ಮ ಆಸಕ್ತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲೇ ನೋಡಿ, ವಿಜಯ ಸಂಕೇಶ್ವರರ ಕನ್ನಡ ನಾಡು ಪಕ್ಷದ ವತಿಯಿಂದ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮಾತೆ ಮಹಾದೇವಿ ಅವರ ಹೆಸರನ್ನು ಈಗಾಗಲೇ ಪ್ರಕಟಿಸಲಾಗಿದೆ. ಬಸವಣ್ಣನವರ ಅಂಕಿತವನ್ನು ತಿದ್ದುವ ಮೂಲಕ ವ್ಯಾಪಕ ಪ್ರಚಾರ ಗಳಿಸಿದ್ದ ಮಾತೆ ಮಹಾದೇವಿ ಈಗ ಚುನಾವಣೆಯ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ರಾಜ್ಯದ ಹಿತಾಸಕ್ತಿಗೆ ಪ್ರಾದೇಶಿಕ ಪಕ್ಷಗಳು ಅತ್ಯಗತ್ಯವಾಗಿದ್ದು , ಈ ನಿಟ್ಟಿನಲ್ಲಿ ಸಂಕೇಶ್ವರರ ಕನ್ನಡ ನಾಡು ಪಕ್ಷ ರಾಜ್ಯಕ್ಕೆ ವರದಾನವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕನ್ನಡ ನಾಡು ಪಕ್ಷ ಜಯಭೇರಿ ಬಾರಿಸಲಿದ್ದು , ವಿಜಯ ಸಂಕೇಶ್ವರ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾತೆ ಮಹಾದೇವಿ ಭವಿಷ್ಯ ನುಡಿದಿದ್ದಾರೆ.

ಇನ್ನು ಹೊಸಮಠದ ಚಂದ್ರಶೇಖರ ಸ್ವಾಮೀಜಿ ಕೂಡ ರಾಜಕಾರಣದ ಬಗ್ಗೆ ತುಂಬು ಆಸಕ್ತಿಯಿಂದಿದ್ದಾರೆ. ಸಂದರ್ಭ ಒದಗಿದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿಯುವುದಿಲ್ಲ ಎಂದು ಚಂದ್ರಶೇಖರ ಸ್ವಾಮೀಜಿ ಮೊನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಗತಿಪರ ಸ್ವಾಮೀಜಿಗಳೆಂದೇ ಹೆಸರಾದ ಚಿತ್ರದುರ್ಗದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಪ್ರಧಾನಿ ವಾಜಪೇಯಿ ಅವರನ್ನು ಮುಕ್ತ ಕಂಠದಿಂದ ಪ್ರಶಂಸಿರುವುದರ ಹಿಂದೆ ಸಂದೇಶವೇನಾದರೂ ಇದೆಯಾ ? ಈಬಗ್ಗೆ ಗುಸುಗುಸು ಕೇಳಿಸುತ್ತಿರುವುದಂತೂ ನಿಜ. ಉಳಿದಂತೆ ಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸುತ್ತೂರು ಶ್ರೀಗಳಿಗೆ ರಾಜಕಾರಣಿಗಳ ನಂಟು ಹೊಸತೇನೂ ಅಲ್ಲ .

ಧರ್ಮಗುರುಗಳೂ ಅವರ ಅನುಯಾಯಿಗಳೂ..

ಧರ್ಮಗುರುಗಳದೇ ಈ ಪಾಡಾದರೆ, ಅನುಯಾಯಿಗಳದು ಮತ್ತೊಂದು ರಾಮಾಯಣ. ಪ್ರಾಮಾಣಿಕ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡುವುದಾಗಿ ವೀರಶೈವ ಮಹಾಸಭಾ ಈಗಾಗಲೇ ಪ್ರಕಟಿಸಿದೆ. ಪ್ರಾಮಾಣಿಕರೆಂದರೆ ಯಾರು ಎನ್ನುವುದನ್ನು ನಿರ್ಧರಿಸುವುದು ಹೇಗೆ ? ವೀರಶೈವ ಮಹಾಸಭಾದ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ ಕೂಡಾ ರಾಜಕೀಯದಲ್ಲಿ ಪಳಗಿ ಬಂದವರೇ ಆಗಿದ್ದಾರೆ. ಸಕ್ರಿಯ ರಾಜಕಾರಣದಲ್ಲೂ ಖಂಡ್ರೆ ಹಾಗೂ ಅವರ ಪುತ್ರನ ಹೆಸರು ಚಾಲ್ತಿಯಲ್ಲಿದೆ.

ಇತರ ಧರ್ಮಗಳು ರಾಜಕೀಯದಲ್ಲಿ ಪ್ರಭಾವ ಬೀರುತ್ತಿರುವುದನ್ನು ಗಮನಿಸಿಯೂ ಬ್ರಾಹ್ಮಣ ಸಮುದಾಯದವರು ತೆಪ್ಪಗಿರುವುದಾದರೂ ಹೇಗೆ ? ಆ ಕಾರಣದಿಂದಲೇ ಬ್ರಾಹ್ಮಣ ಧರ್ಮಗುರುಗಳು ರಾಜಕೀಯದ ಕುರಿತು ಗಮನ ಹರಿಸಬೇಕೆಂದು ಇತ್ತೀಚೆಗೆ ನಡೆದ ಸಭೆಯಾಂದರಲ್ಲಿ ಬ್ರಾಹ್ಮಣರ ಪ್ರತಿನಿಧಿಗಳು ಸಮುದಾಯದ ಪರವಾಗಿ ಧರ್ಮಗುರುಗಳನ್ನು ಆಗ್ರಹಿಸಿದ್ದಾರೆ. ಅವರ ಆಗ್ರಹ ಇಷ್ಟೇ- ಹಾರ ಹಾಕಿಸಿಕೊಳ್ಳುವುದು ಹಾಗೂ ಪಾದಪೂಜೆ ಮಾಡಿಸಿಕೊಳ್ಳುವುದಕ್ಕಷ್ಟೇ ಸೀಮಿತವಾಗದೆ ಸಮುದಾಯದ ಹಿತಾಸಕ್ತಿಯತ್ತಲೂ ಗಮನ ಹರಿಸಿ. ಹಿತಾಸಕ್ತಿ ಕಾಪಾಡುವುದೆಂದರೆ ರಾಜಕಾರಣ ಮಾಡುವುದೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೆ ?

ಬ್ರಾಹ್ಮಣ ಗುರುಗಳಲ್ಲಿ ಇದ್ದುದರಲ್ಲಿ ಪೇಜಾವರದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳೇ ವಾಸಿ ಅನ್ನಿಸುತ್ತದೆ. ಸಮಾಜ-ರಾಜಕಾರಣ-ಧರ್ಮಕಾರಣದ ಬಗ್ಗೆ ಸ್ವಾಮೀಜಿ ಮನಬಿಚ್ಚಿ ಮಾತನಾಡುತ್ತಾರೆ. ನಾಡಗೀತೆಯಲ್ಲಿ ಮಧ್ವರ ಹೆಸರಿಲ್ಲವೆಂದು ವಾದಕ್ಕಿಳಿಯುತ್ತಾರೆ. ಉಡುಪಿ ಕೃಷ್ಣನನ್ನು ಬೆಂಗಳೂರು ಕೃಷ್ಣರ ಮನೆಗೆ ಕರೆದೊಯ್ದು ಪೂಜೆ ಮುಗಿಸಿ ಬರುತ್ತಾರೆ. ಗುರುಗಳು ಸುಮ್ಮನಿರುವ ಕಾಲ ಇದಲ್ಲ !

ಎಲ್ಲಿಗೆ ಬಂತು ನೋಡಿ ಧರ್ಮ-ಕಾರಣ ! ನೀವೇನಂತೀರಿ ?

English summary
Religion and Politics: Jagadguru Mate Mahadevi, the womanhead of Basava Dharma Peetha, and Chandrasekhar Swamy of Hosa mutt in Hubli, expressed their willingness to enter politics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X