ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕುವೆಂಪು ಮಾದರಿ ಕನ್ನಡ ಶಾಲೆ ತೆರೆಯಲು ಕೃಷ್ಣ ಒಪ್ಪಿಗೆ

By Staff
|
Google Oneindia Kannada News

ರಾಜ್ಯದಲ್ಲಿ ಕುವೆಂಪು ಮಾದರಿ ಕನ್ನಡ ಶಾಲೆ ತೆರೆಯಲು ಕೃಷ್ಣ ಒಪ್ಪಿಗೆ
ಅನಂತಮೂರ್ತಿ ಕೊಟ್ಟ ಸಲಹೆಗಳಲ್ಲಿ ಒಂದಕ್ಕೆ ತಕ್ಷಣ ಸ್ಪಂದಿಸಿದ ಕೃಷ್ಣ

ಬೆಂಗಳೂರು : ಕರ್ನಾಟಕದಲ್ಲಿ ಕುವೆಂಪು ಮಾದರಿ ಕನ್ನಡ ಶಾಲೆಗಳನ್ನು ತೆರೆಯಬೇಕೆಂಬ ಡಾ. ಯು.ಆರ್‌.ಅನಂತಮೂರ್ತಿ ಅವರ ಸಲಹೆಗೆ ಎಸ್‌.ಎಂ.ಕೃಷ್ಣ ಸ್ಪಂದಿಸಿದ್ದಾರೆ.

ನಗರದಲ್ಲಿ ಸೋಮವಾರ (ಡಿ. 29) ರಾಷ್ಟ್ರಕವಿ ಕುವೆಂಪು ಜನ್ಮ ಶತಮಾನೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌.ಎಂ.ಕೃಷ್ಣ , ಕುವೆಂಪು ಮಾದರಿ ಶಾಲೆಗಳನ್ನು ಮೊದಲು ಕೆಲವು ಭಾಗಗಳಲ್ಲಿ ಪ್ರಾಯೋಗಿಕವಾಗಿ ತೆರೆದು, ನಂತರ ಪ್ರತಿ ಜಿಲ್ಲೆಯಲ್ಲಿ ಶಾಲೆಗಳನ್ನು ಶುರು ಮಾಡಲಾಗುವುದು ಎಂದರು.

ಮೌಢ್ಯ ಹಾಗೂ ದಬ್ಬಾಳಿಕೆ ವಿರುದ್ಧ ದನಿಯೆತ್ತಿದ ಕುವೆಂಪು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿದವರು. ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಂದ ಅವರು ಮಹಾನ್‌ ವಿಶ್ವ ಚೇತನ ಎಂದು ಕೃಷ್ಣ ಬಣ್ಣಿಸಿದರು.

ಇದಕ್ಕೂ ಮುಂಚೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಅನಂತಮೂರ್ತಿ ಸರ್ಕಾರಕ್ಕೆ ಮಹತ್ವದ ಸಲಹೆಗಳನ್ನು ಕೊಟ್ಟರು. ಅವೆಂದರೆ-

  • ಜ್ಞಾನ ಹೆಚ್ಚಿಸಲು ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕು. ಆದರೆ, ಶಿಕ್ಷಣ ಮಾಧ್ಯಮ ಕನ್ನಡದಲ್ಲೇ ಇರಬೇಕು. ಕುರುಡು ದೃಷ್ಟಿಯ ಇಂಗ್ಲಿಷ್‌ ಶಾಲೆಗಳ ಬದಲು ಕುವೆಂಪು ಮಾದರಿ ಕನ್ನಡ ಶಾಲೆಗಳನ್ನು ಸರ್ಕಾರ ತೆರೆಯಬೇಕು.
  • ಶಾಲೆ- ಕಾಲೇಜು ಶಿಕ್ಷಣ ಮುಗಿಯುವುದರೊಳಗೆ ಕನ್ನಡದ ನವ ರತ್ನಗಳಾದ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಅಡಿಗ, ಕೆಎಸ್‌ನ, ಪುತಿನ ಹಾಗೂ ಶ್ರೀರಂಗರ ಸಾಹಿತ್ಯವನ್ನು ಓದುವಂತೆ ಮಾಡಬೇಕು. ಪಠ್ಯಕ್ರಮದಲ್ಲಿ ಈ ನವರತ್ನಗಳ ಕುರಿತ ಪಾಠಗಳನ್ನು ಕಡ್ಡಾಯವಾಗಿ ಇಡಬೇಕು.ಜಾತಿ, ಪ್ರಾದೇಶಿಕ ಹಾಗೂ ರಾಜಕೀಯ ಮಾನದಂಡಗಳಿಲ್ಲದೆ ಇಂಥವರ ಕುರಿತು ಓದುವಂತೆ ಪಠ್ಯಕ್ರಮ ರೂಪಿಸಬೇಕು.
  • ಲೇಖಕರನ್ನು ದೇವರುಗಳೆಂದು ಪೂಜಿಸಿದರೆ ಸಾಲದು. ಅವರ ಕೃತಿಗಳನ್ನು ವಿಮರ್ಶಾತ್ಮಕ ಅಧ್ಯಯನ ಮಾಡಬೇಕು.
ಕುವೆಂಪು ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಟಿ.ಎನ್‌.ಚತುರ್ವೇದಿ, ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಕೃತಿಯ ಇಂಗ್ಲಿಷ್‌ ಭಾಷಾಂತರ ಚೆನ್ನಾಗಿದೆ ಎಂದರು. ಕುವೆಂಪು ಚಿಂತನೆಗಳನ್ನು ಇಂದಿನ ಯುವ ಲೇಖಕರು ಅಳವಡಿಸಿಕೊಳ್ಳಬೇಕು ಎಂದು ಕರೆ ಕೊಟ್ಟರು.

ಸಾಹಿತಿ ಸಿದ್ಧಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್‌ ಸಮಾರಂಭದಲ್ಲಿ ಹಾಜರಿದ್ದರು. ಕುವೆಂಪು ವಿರಚಿತ ರಾಮಾಯಣ ದರ್ಶನಂ ಇಂಗ್ಲಿಷ್‌ ಆವೃತ್ತಿ, ಕಿಂದರಿಜೋಗಿ, ಸಮೃದ್ಧ ಗದ್ಯ ಸಂಪುಟ- 1 ಹಾಗೂ ನಾಟಕ ಸಂಪುಟ ಅನಾವರಣಗೊಳಿಸಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X