ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

22 ವರ್ಷಗಳ ನಂತರ ಕಾಂಗರೂ ನೆಲದಲ್ಲಿ ಭಾರತಕ್ಕೆ ಟೆಸ್ಟ್‌ ವಿಜಯ

By Staff
|
Google Oneindia Kannada News

22 ವರ್ಷಗಳ ನಂತರ ಕಾಂಗರೂ ನೆಲದಲ್ಲಿ ಭಾರತಕ್ಕೆ ಟೆಸ್ಟ್‌ ವಿಜಯ
ಎರಡೂ ಇನ್ನಿಂಗ್ಸ್‌ನಲ್ಲಿ ಮಿಂಚಿದ ರಾಹುಲ್‌ ಪಂದ್ಯ ಪುರುಷೋತ್ತಮ

ಅಡಿಲೇಡ್‌ : 1981ರ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತ ಸೋಲಿಲ್ಲದ ಸರದಾರನೆಂದೇ ಬೀಗುವ ಆಸ್ಟ್ರೇಲಿಯಾ ತಂಡಕ್ಕೆ ಅಚ್ಚರಿಯ ಇದಿರೇಟು ಕೊಟ್ಟಿದೆ.

ಗೆಲ್ಲಲು 230 ರನ್‌ ಗಳಿಸಬೇಕಿದ್ದ ಭಾರತ ಅದನ್ನು ದಕ್ಕಿಸಿಕೊಳ್ಳಲು ಭರ್ತಿ 72.2 ಓವರ್‌ ಆಟ ಆಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ವಿದೇಶೀ ನೆಲದಲ್ಲಿ ಹೆಚ್ಚು ರನ್‌ ಹೊಡೆದ ಭಾರತೀಯನೆಂಬ ದಾಖಲೆಯ 233 ರನ್‌ ಗಳಿಸಿದ್ದ ರಾಹುಲ್‌ ದ್ರಾವಿಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ ತಮ್ಮ ಬ್ಯಾಟಿಂಗ್‌ ಖದರು ತೋರಿದರು. ಅಜೇಯ 72 ರನ್‌ ಹೊಡೆಯಲು ಅವರು 171 ಚೆಂಡುಗಳನ್ನು ಬಳಸಿದರು.

ಊಟಕ್ಕೆ ಮುನ್ನ ಎರಡು, ಊಟದ ನಂತರ ಎರಡು ಹಾಗೂ ಟೀ ವಿರಾಮದ ನಂತರ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ಭಾರತ ಒಂದು ಹಂತದಲ್ಲಿ ಈ ಗೆಲುವೂ ಸುಲಭವಾಗುವುದಿಲ್ಲ ಎಂಬ ಸ್ಥಿತಿ ನಿರ್ಮಿಸಿಕೊಂಡಿತ್ತು. ದ್ರಾವಿಡ್‌ ಜೊತೆ ಸೇರಿ ಮೂರನೇ ವಿಕೆಟ್‌ಗೆ 70 ರನ್‌ ಸೇರಿಸಿದ್ದ ಸಚಿನ್‌ (37) ಬ್ಯಾಟಿನಿಂದ ಚೆಂಡನ್ನೇ ಹೊಡೆಯದೆ ಮೆಕ್‌ಗಿಲ್‌ ಚೆಂಡಿಗೆ ಎಲ್‌ಬಿಡಬ್ಲ್ಯು ಆದಾಗ ಆಸ್ಟ್ರೇಲಿಯನ್ನರು ಕುಣಿದಾಡಿದರು. ಆಮೇಲೆ ಬಂದ ಸೌರವ್‌ ಗಂಗೂಲಿ (12) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪಟಪಟನೆ ರನ್‌ ದೋಚಿದ ಲಕ್ಷ್ಮಣ್‌ ಗೆಲುವಿನ ಪೆಂಡ್ಯುಲಮ್ಮು ಭಾರತದತ್ತ ವಾಲಿತು ಅನ್ನುವಷ್ಟರಲ್ಲಿ ವಿಕೆಟ್‌ ಚೆಲ್ಲಿದರು. ಪಾರ್ಥಿವ್‌ ಪಟೇಲ್‌ ಕೂಡ ಔಟಾದದ್ದು ಗೆಲ್ಲಲು ಇನ್ನು ಒಂದೇ ರನ್‌ ಬಾಕಿಯಿದ್ದಾಗ.

ಎರಡೂ ಇನ್ನಿಂಗ್ಸ್‌ಗಳಲ್ಲಿ ತಾಳ್ಮೆ ಹಾಗೂ ಸಮಯೋಚಿತ ಆಟವಾಡಿದ ರಾಹುಲ್‌ ದ್ರಾವಿಡ್‌ ಪಂದ್ಯ ಪುರುಷೋತ್ತಮರಾದರು.

1995ರಲ್ಲಿ ಇಂಗ್ಲೆಂಡ್‌ ವಿರುದ್ಧ ಸೋತ ನಂತರ ಇದೇ ಮೊದಲ ಸಲ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ಸೋತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟ್‌ ಮಾಡಿ 500 ರನ್‌ ಗಳಿಸಿಯೂ ಟೆಸ್ಟ್‌ ಪಂದ್ಯವನ್ನು ಏಳು ತಂಡಗಳು ಮಾತ್ರ ಈವರೆಗೆ ಸೋತಿವೆ. ಎರಡು ವರ್ಷಗಳ ಹಿಂದೆ ಕೊಲ್ಕತಾದಲ್ಲಿ ಕೂಡ ಭಾರತ ಮೊದಲ ಇನ್ನಿಂಗ್ಸ್‌ ಹಿನ್ನಡೆಯ ನಂತರವೂ ಸಿಡಿದೆದ್ದು ಇದೇ ಆಸ್ಟ್ರೇಲಿಯಾ ವಿರುದ್ಧ 171 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರು-
ಆಸ್ಟ್ರೇಲಿಯಾ : ಮೊದಲ ಇನ್ನಿಂಗ್ಸ್‌ - 556, ಎರಡನೇ ಇನ್ನಿಂಗ್ಸ್‌- 196
ಭಾರತ : ಒದಲ ಇನ್ನಿಂಗ್ಸ್‌ - 523, ಎರಡನೇ ಇನ್ನಿಂಗ್ಸ್‌ 6 ವಿಕೆಟ್‌ ನಷ್ಟಕ್ಕೆ 233.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X