ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾದರಿ ಮಕ್ಕಳಿಸ್ಕೂಲ್‌ : ಯುನಿಸೆಫ್‌ ಯೋಜನೆಗೆ ಪ್ರೇಂಜಿ ಸಾಥಿ

By Staff
|
Google Oneindia Kannada News

ಮಾದರಿ ಮಕ್ಕಳಿಸ್ಕೂಲ್‌ : ಯುನಿಸೆಫ್‌ ಯೋಜನೆಗೆ ಪ್ರೇಂಜಿ ಸಾಥಿ
ಇದೊಂದು ಉತ್ತಮ ಪರಿಕಲ್ಪನೆ. ಯೋಜನೆ ಯಶಸ್ವಿಯಾಗಲಿ

ಬೆಂಗಳೂರು : ಮಕ್ಕಳಿಸ್ಕೂಲ್‌ ಹೇಗಿರಬೇಕು? ಹಾಗಂತ ಮಕ್ಕಳನ್ನೇ ಕೇಳಿ. ಆಯಾ ಊರಿನ ಮುಖಂಡರನ್ನು ಕೂರಿಸಿ, ಚೆಂದದ ಶಾಲೆ ಹೇಗೆ ಕಲಿಸಬೇಕು ಅಂತ ಚರ್ಚಿಸಿ. ಆಗಾಗ ಶಿಕ್ಷಣ ಇಲಾಖೆಯವರೂ ಬಂದು, ಇವರೆಲ್ಲ ಬಯಸುವ ಮಾದರಿ ಶಾಲೆಯ ಪರಿಕಲ್ಪನೆ ಬಗ್ಗೆ ಪರಿಶೀಲಿಸಲಿ. ಒಂದಿಷ್ಟು ವರ್ಷದ ನಂತರ ಮಂಥನಗೊಂಡು, ಹರಳುಗಟ್ಟಿದ ಚೆಂದದ ಶಾಲೆಯ ಪರಿಕಲ್ಪನೆಗೆ ಸರ್ವಾನ್ವಯ ರೂಪ ಕೊಡಿ.

ಇದು ಯುನಿಸೆಫ್‌ (ವಿಶ್ವಸಂಸ್ಥೆ ಮಕ್ಕಳ ಶಿಕ್ಷಣ ದತ್ತಿ) ಹೊಸೆದಿರುವ ಹೊಸ ಸೂತ್ರ. ಮಕ್ಕಳಿಸ್ಕೂಲ್‌ ಹೀಗಿರಬೇಕಲ್ವೆ ಅಂತ ಇಡೀ ಜಗತ್ತು ಭಾರತದತ್ತ ನೋಡಬೇಕು, ಹಾಗೆ ಮಾಡುವುದು ಈ ಸೂತ್ರದ ಉಮೇದಿ. ಸದ್ಯಕ್ಕೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳ ಆಯ್ದ ಶಾಲೆಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಅದು ಯಶಸ್ವಿಯಾದ ನಂತರ ಬಹುಶಃ ಎಲ್ಲಾ ಶಾಲೆಗಳಲ್ಲೂ ಇಂಥಾ ಶಿಕ್ಷಣವೇ ಅನುಷ್ಠಾನಕ್ಕೆ ಬರಲಿದೆ. ಮೂರು ವರ್ಷ ಕಾಲದ ಈ ಯೋಜನೆಗೆ ‘ವಿಪ್ರೋ’ತ್ತಮ ಅಜೀಂ ಪ್ರೇಂಜಿ ಕೂಡ ಕಾಸು ಹಾಕಲು ಮುಂದಾಗಿರುವುದು ವಿಶೇಷ.

ಈ ಮಹತ್ವದ ಯೋಜನೆಗೆ 73.05 ದಶಲಕ್ಷ ರುಪಾಯಿ ಅಂದಾಜು ಖರ್ಚಾಗಲಿದೆ. ಈ ಹಣದ ಪೈಕಿ 35.84 ದಶಲಕ್ಷ ರುಪಾಯಿಯನ್ನು ಕರ್ನಾಟಕ ಸರ್ಕಾರ ಕೊಡಲಿದೆ, ಯೂನಿಸೆಫ್‌ 24.67 ದಶಲಕ್ಷ ರುಪಾಯಿ ನೆರವು ಕೊಡಲು ಮುಂದಾಗಿದೆ. ಬಾಕಿ 12.54 ದಶಲಕ್ಷ ರುಪಾಯಿ ಕೊಡಲು ಅಜೀಂ ಪ್ರೇಂಜಿ ಸಿದ್ಧರಿದ್ದಾರೆ. ಮೂರು ವರ್ಷಗಳ ಅವಧಿಯಲ್ಲಿ ಇಡೀ ಯೋಜನೆಯನ್ನು ಜಾರಿಗೆ ತರುವುದು ಗುರಿ.

ಮೊದಲಿಗೆ ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳ 542 ಶಾಲೆಗಳಿಗೆ ಅಕ್ಟೋಬರ್‌ 2003 ರಿಂದ ಡಿಸೆಂಬರ್‌ 2004ರವರೆಗೆ ನಿರ್ಣಯ ಕೈಗೊಳ್ಳುವ ವಿಷಯದಲ್ಲಿ ಸ್ವಾತಂತ್ರ್ಯ ಕೊಡಲಾಗುತ್ತದೆ. ಇರುವ ಮೂಲಭೂತ ಸೌಕರ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಸಿಬ್ಬಂದಿ, ಊರಿನ ಆಯ್ದ ಮಂದಿ ಹಾಗೂ ಸಂಬಂಧ ಪಟ್ಟ ಆಡಳಿತ ಮುಖಂಡರು ಶಾಲೆಯನ್ನು ಸಕಲ ರೀತಿಯಲ್ಲಿ ಬೆಳೆಸಬೇಕು. ಪಾಠ ಹೇಳುವ ರೀತಿಯಿಂದ ಹಿಡಿದು ಮಕ್ಕಳ ಬುದ್ಧಿಯನ್ನು ಆಗಾಗ ಪರೀಕ್ಷಿಸುವ ಹೊಸ ತಂತ್ರಗಳಿಗೆ ಸ್ವಾಗತ. ಜೂನ್‌ 2004ರ ಹೊತ್ತಿಗೆ ಹೊಸ ರೀತಿಯ ಪಾಠದಿಂದ ಮಕ್ಕಳ ಬುದ್ಧಿಮತ್ತೆ ಎಷ್ಟು ಸುಧಾರಿಸಿದೆ ಎಂಬ ವಿವರ ಸಿದ್ಧವಾಗಬೇಕು. ಆ ನಂತರ ಸಂಬಧಪಟ್ಟವರ ನಡುವೆ ಈ ಬಗ್ಗೆ ಚರ್ಚೆ ನಡೆಯಬೇಕು. ಅದರ ಅಂತಿಮ ಫಲಿತ ವರದಿ ರೂಪದಲ್ಲಿ ಶಾಲಾಡಳಿತ ಅಧಿಕಾರಿಗಳನ್ನು ತಲುಪಬೇಕು.

2005ನೇ ಇಸವಿ ಡಿಸೆಂಬರ್‌ ಹೊತ್ತಿಗೆ ಈ ಎಲ್ಲಾ 542 ಶಾಲೆಗಳನ್ನು ಅವುಗಳ ಗುಣಮಟ್ಟಕ್ಕೆ ತಕ್ಕಂತೆ 1, 2, 3 ಹಾಗೂ 4 ಎಂದು ವರ್ಗೀಕರಿಸಲಾಗುವುದು. 1ನೇ ಗ್ರೇಡ್‌ ಪಡೆದ ಶಾಲೆಯ ವ್ಯವಸ್ಥೆ ಮಾದರಿಯಾಗಿರುತ್ತದೆ. 2007 ಡಿಸೆಂಬರ್‌ ಹೊತ್ತಿಗೆ 1ನೇ ಗ್ರೇಡ್‌ ಪಡೆಯುವ ಶಾಲೆಗಳ ವ್ಯವಸ್ಥೆಗಳ ವರದಿಗಳನ್ನು ಕ್ರೋಢೀಕರಿಸಿ ಒಂದು ಅಂತಿಮ ರೂಪುರೇಷೆ ಸಿದ್ಧವಾಗುತ್ತದೆ. ಇದು ‘ಮಕ್ಕಳ ಮಿತ್ರ ಶಾಲಾ ವ್ಯವಸ್ಥೆ’ ಯಾಗಿ ಅಧಿಕೃತವಾಗಿ ಜಾರಿಗೆ ಬರಲಿದೆ. ಇಂತಾ ಮಹತ್ವದ ಯೋಜನೆ ಶುಕ್ರವಾರವೇ (ಡಿ. 12) ಪ್ರಾರಂಭವಾಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X