ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2004ನೇ ಇಸವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಶುಭಂ-ಕೃಷ್ಣ

By Staff
|
Google Oneindia Kannada News

2004ನೇ ಇಸವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಶುಭಂ-ಕೃಷ್ಣ
ಚುನಾವಣೆ ಪ್ರಚಾರದ ಕಾವು ಒಳಗೊಳಗೇ ಕುದಿಯತೊಡಗಿದೆ. ಕೃಷ್ಣ ಮಾತುಗಳನ್ನು ಕೇಳಿ...

ಬೆಂಗಳೂರು : ಕಳೆದ ನಾಲ್ಕೂವರೆ ವರ್ಷದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ 2.66 ಲಕ್ಷ ಎಕರೆ ಇಳುವರಿ ಭೂಮಿಯನ್ನು ನೀರಾವರಿ ಪ್ರದೇಶವನ್ನಾಗಿಸುವ ಮೂಲಕ ಸರ್ಕಾರ ಇತಿಹಾಸ ನಿರ್ಮಿಸಿದೆ. ಮುಂದಿನ ವರ್ಷದೊಳಗೆ ಯೋಜನೆಯ ಎಲ್ಲಾ ಕಾಮಗಾರಿಗಳನ್ನು 2500 ಕೋಟಿ ರುಪಾಯಿ ವೆಚ್ಚದಲ್ಲಿ ಪೂರೈಸುತ್ತೇವೆ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಇಂತಿಷ್ಟು ಭೂಮಿ ನೀರಾವರಿ ಜಾಗೆಯ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಗುರುವಾರ (ಡಿ. 11) ವಿಶೇಷ ರಾಜ್ಯಪತ್ರ (ಗೆಜೆಟ್‌) ಪ್ರಕಟಿಸಿದ ಸಮಾರಂಭದಲ್ಲಿ ಕೃಷ್ಣ ಈ ವಿಷಯ ತಿಳಿಸಿದರು. 1999 ರಿಂದ ಇಲ್ಲಿಯವರೆಗೆ 6.73 ಲಕ್ಷ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಟ್ಟಂತಾಗಿದೆ ಎಂದರು.

ಸಾಧನೆಯ ಶಂಖ

ತಮ್ಮದು ಘೋಷಣೆಗಳನ್ನು ಕೂಗುವ ಸರ್ಕಾರವಲ್ಲ, ಕೆಲಸ ಮಾಡುವ ಸರ್ಕಾರ. ಈ ಹಿಂದೆ ಇದ್ದ ಜನತಾ ದಳ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಕೆಲಸಗಳನ್ನು ಆಮೆ ವೇಗದಲ್ಲಿ ಮಾಡಿತ್ತು. ಮುಂದಿನ ವರ್ಷ ಮಾರ್ಚ್‌- ಏಪ್ರಿಲ್‌ ಹೊತ್ತಿಗೆ ಇನ್ನೂ 2.5 ಲಕ್ಷ ಎಕರೆ ಭೂಮಿಯನ್ನು ನೀರಾವರಿ ವ್ಯಾಪ್ತಿಗೆ ತರುವ ಹಾದಿಯಲ್ಲಿ ಯೋಜನೆಯ ಕೆಲಸಗಳು ಯುದ್ಧೋಪಾದಿಯಲ್ಲಿ ಸಾಗಿವೆ. 1999ರವರೆಗೆ 3, 414.72 ಕೋಟಿ ರುಪಾಯಿಯನ್ನು ಯೋಜನೆಗೆ ಖರ್ಚು ಮಾಡಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ 7, 024.13 ಕೋಟಿ ರುಪಾಯಿಯನ್ನು ಖರ್ಚು ಮಾಡಿದೆ ಎಂದು ಕೃಷ್ಣ ತಮ್ಮ ಸರ್ಕಾರದ ಸಾಧನೆಯ ಶಂಖ ಊದಿದರು.

1962- 63ನೇ ಇಸವಿಯಲ್ಲಿ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆ ಶುರುವಾಗಿತ್ತು. ಆನಂತರ ಅತಿ ವೇಗವಾಗಿ ಯೋಜನೆಯ ಕೆಲಸಗಳನ್ನು ನಮ್ಮ ಸರ್ಕಾರ ಮಾಡಿದೆ. ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.6 ಮೀಟರುಗಳಿಗೆ ಎತ್ತರಿಸಲು ಸುಪ್ರಿಂಕೋರ್ಟ್‌ ಕೊಟ್ಟ ಅನುಮತಿಯ ನಡುವೆಯೂ ಆಂಧ್ರಪ್ರದೇಶ ತಗಾದೆ ತೆಗೆದಿತ್ತು. ಅವನ್ನೆಲ್ಲ ಮೀರಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದ್ದು ಸರ್ಕಾರದ ಪ್ರಗತಿಪರ ಧೋರಣೆಗೆ ಉದಾಹರಣೆ ಎಂದರು.

1994ರಲ್ಲಿ ಯೋಜನೆಗಾಗಿ ಹಣ ಸಂಗ್ರಹಿಸಲು ಹುಟ್ಟಿದ್ದ ಕೃಷ್ಣ ಭಾಗ್ಯ ಜಲ ನಿಗಮ ಮಾಡಿದ್ದ ಸಾಲವನ್ನು ಈಗಾಗಲೇ ಸಾಕಷ್ಟು ತೀರಿಸಲಾಗಿದೆ. ಸುಮಾರು 117 ಕೋಟಿ ರುಪಾಯಿ ಬಡ್ಡಿಯನ್ನು ಉಳಿಸಿ, 1196 ಕೋಟಿ ರುಪಾಯಿ ಸಾಲವನ್ನು ಹಿಂತಿರುಗಿಸಿದ್ದೇವೆ. ಸಾಲ ಮರುಪಾವತಿ ವಿಷಯದಲ್ಲಿ ಸರ್ಕಾರದ ಬಗ್ಗೆ ಎಲ್ಲಾ ಬ್ಯಾಂಕುಗಳೂ ಮೆಚ್ಚುಗೆ ಸೂಚಿಸಿವೆ ಎಂದು ಹೇಳಿದರು.

ಜಯಾ ಮನವಿ ಬಗ್ಗೆ ಏನೂ ಹೇಳೋಲ್ಲ : ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ತಮ್ಮ ಮೇಲಿನ ಆರೋಪದ ಎರಡು ಪ್ರಕರಣಗಳ ವಿಚಾರಣೆಯನ್ನು ಕರ್ನಾಟಕದಲ್ಲಿ ನಡೆಸದೆ, ಪಾಂಡಿಚೆರಿಗೆ ವರ್ಗಾಯಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಸುಪ್ರಿಂಕೋರ್ಟ್‌ಗೆ ಮಾಡಿರುವ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಕೃಷ್ಣ ನಿರಾಕರಿಸಿದರು. ಜಯಲಲಿತಾ ಅವರ ಪ್ರಕರಣಗಳ ವಿಚಾರಣೆ ವಿಷಯವಾಗಿ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶ ಎನ್‌.ಕೆ.ಜೈನ್‌ ಅವರ ಜೊತೆ ಬುಧವಾರ ತಾವು ಮಾತುಕತೆ ನಡೆಸಿದಿದ್ದಾಗಿ ಹೇಳಿದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X