ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಲ್ಲಿಗೆ’ಕವಿ ಕೆಎಸ್‌ನ ಔಷಧಿ ವೆಚ್ಚಕ್ಕೆ ಮೈಕೊ ಕನ್ನಡಬಳಗ ನೆರವು

By Staff
|
Google Oneindia Kannada News

‘ಮಲ್ಲಿಗೆ’ಕವಿ ಕೆಎಸ್‌ನ ಔಷಧಿ ವೆಚ್ಚಕ್ಕೆ ಮೈಕೊ ಕನ್ನಡಬಳಗ ನೆರವು
ರಾಜ್ಯೋತ್ಸವದ ಅಂಗವಾಗಿ ನರಸಿಂಹಸ್ವಾಮಿ ಅವರಿಗೆ ನಿಧಿ ಅರ್ಪಣೆ, ಸನ್ಮಾನ

ಇದು ಮಲ್ಲಿಗೆ ಹೂವಿನ ಕಾಲವಲ್ಲ . ಆದರೆ ಅಲ್ಲಿ ಮಲ್ಲಿಗೆ ಹೂವಿನ ಕಂಪಿತ್ತು . ಸುತ್ತಲ ಪರಿಸರದಲ್ಲೂ ಮಲ್ಲಿಗೆಯ ಪರಿಮಳ.

ಅದು ಮಲ್ಲಿಗೆ ಹೂವಿನ ಜಾತ್ರೆಯಲ್ಲ ; ಮಲ್ಲಿಗೆ ಮನಸ್ಸುಗಳ ಸಂಗಮ. ಅಲ್ಲಿದ್ದುದು ಮಲ್ಲಿಗೆಯ ಮೂರ್ತರೂಪ, ಕವಿ ಕೆ.ಎಸ್‌.ನರಸಿಂಹಸ್ವಾಮಿ. ‘ಮೈಸೂರು ಮಲ್ಲಿಗೆ’ ಮೂಲಕ ನಾಡಿನ ಮಲ್ಲಿಗೆ ಮನಸ್ಸುಗಳನ್ನು ತಲುಪಿದ ಕವಿಯವರು. ಆ ಕವಿಯ ಉಪಸ್ಥಿತಿಯಿಂದಲೇ ಅಲ್ಲಿನ ಪರಿಸರದಲ್ಲಿ , ಮನೆ ಮನದಲ್ಲಿ- ಆಹಾ ಘಮಘಮಾಡಿಸ್ಯಾವೊ ಮಲ್ಲಿಗೆ !

ಬೆಂಗಳೂರಿನ ನಾಗನಾಥಪುರದ ‘ಮೈಕೊ ಕನ್ನಡ ಬಳಗ’ದ ಗೆಳೆಯರು ಅಲ್ಲಿ ನೆರೆದಿದ್ದುದು ನೆಚ್ಚಿನ ಕವಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ. ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ, ಡಿ.8ರಂದು ಕನ್ನಡ 25 ಸಾವಿರ ರುಪಾಯಿಗಳ ನಿಧಿ ಅರ್ಪಿಸುವ ಮೂಲಕ ನರಸಿಂಹಸ್ವಾಮಿ ಅವರನ್ನು ಗೌರವಿಸಿತು.

ನರಸಿಂಹ ಸ್ವಾಮಿ ಅವರಿಗೆ ಆರೋಗ್ಯ ಅಷ್ಟಕ್ಕಷ್ಟೆ . ಮೊನ್ನೆಯಷ್ಟೇ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದ ಹಿರಿಯ ಜೀವ ಈಗಷ್ಟೇ ಚೇತರಿಸಿಕೊಂಡಿದೆ. ಆದರೆ ಔಷಧಿ ಮಾತ್ರೆ ತಪ್ಪಿದ್ದಲ್ಲ . ಈ ಕಾರಣದಿಂದಾಗಿ, ಹಿರಿಯ ಕವಿಯ ಔಷೋಧೋಪಚಾರಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮೈಕೊ ಕನ್ನಡ ಸಂಘ ಪುಟ್ಟದೊಂದು ನಿಧಿ ಅರ್ಪಿಸುವ ಮೂಲಕ ಕವಿಯನ್ನು ಗೌರವಿಸಿತು. ಈ ಕಾರ್ಯಕ್ರಮ ಎಲ್ಲ ಕನ್ನಡ ಸಂಘಗಳಿಗೂ ಮೇಲ್ಪಂಕ್ತಿ ಆಗಬಾರದೇಕೆ ?

ಅಂದಹಾಗೆ, ಸನ್ಮಾನ ಕಾರ್ಯಕ್ರಮ ನಡೆದುದು ಎಲ್ಲೆಂದುಕೊಂಡಿರಿ ? ಮೈಕೊದ ಸಭಾಂಗಣದಲ್ಲಲ್ಲ ; ಕವಿಯ ಮನೆಯಲ್ಲಿ . ಮೈಕೊ ಕನ್ನಡ ಸಂಘದ ಪದಾಧಿಕಾರಿಗಳು ನರಸಿಂಹಸ್ವಾಮಿ ಅವರ ಮನೆಗೇ ತೆರಳಿದ್ದರು. ಮೈಕೊದ ಮಾನವ ಸಂಪನ್ಮೂಲಗಳ ವಿಭಾಗದ ಜನರಲ್‌ ಮೇನೇಜರ್‌ ವಿ.ಕೃಷ್ಣನ್‌ ಹಾಗೂ ಕನ್ನಡ ಸಂಘದ ಅಧ್ಯಕ್ಷ ಎಸ್‌.ದಯಾನಂದ್‌, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್‌ ಮಲ್ಲಿಗೆ ಕವಿಗೆ ಕನ್ನಡ ಸಂಘದ ಪರವಾಗಿ ಸನ್ಮಾನ ಅರ್ಪಿಸಿದರು.

ಮಲ್ಲಿಗೆಯ ಘಮ ನಿಮಗೂ ತಲುಪಿತಾ ?

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X