ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನವ್ವ ಅಪ್ಪ ಲಿಂಗ ಧರಿಸಿದ್ದರು: ಬಸವಶ್ರೀ ಸಮಾರಂಭದಿ ಕವಿ ಗದ್ದರ್‌

By Staff
|
Google Oneindia Kannada News

ನನ್ನವ್ವ ಅಪ್ಪ ಲಿಂಗ ಧರಿಸಿದ್ದರು: ಬಸವಶ್ರೀ ಸಮಾರಂಭದಿ ಕವಿ ಗದ್ದರ್‌
ಬಸವಣ್ಣ ಬದುಕಿದ್ದರೆ ಅವರಿಗೆ ನಕ್ಸಲೈಟ್‌ ಪಟಟ ದೊರೆಯುತ್ತಿತ್ತು -ಚಿತ್ರದುರ್ಗ ಶ್ರೀ ಅಭಿಮತ

ಚಿತ್ರದುರ್ಗ : ಬರಿ ಮೈಯ ಹೆಗಲ ಮೇಲೊಂದು ದುಪ್ಪಟ. ಕೈಯಲ್ಲಿ ಕೆಂಪು ಬಾವುಟ. ಕಾಲಲ್ಲಿ ಝಂಝಣ ಗೆಜ್ಜೆ ಹಾಗೆ ಇಲ್ಲಿನ ಬೃಹನ್ಮಠದ ದೊಡ್ಡ ವೇದಿಕೆ ಹತ್ತಿದ್ದು ವಿಪ್ಲವ ಕವಿ ಗದ್ದರ್‌. ಗದ್ದರ್‌ ತಮ್ಮತನಕ್ಕೆ ಅಲ್ಲಿ ಕಿವಿಗಡಚಿಕ್ಕುವ ಕರತಾಡನ.

ಬಸವಶ್ರೀ ಪ್ರಶಸ್ತಿ ಸ್ವೀಕರಿಸಲು ಗದ್ದರ್‌ ವೇದಿಕೆಗೆ ಬರುವ ಮುನ್ನ ಪ್ರತಿ ತಿಂಗಳು 5 ನೇ ತಾರೀಕು ಮಠದಲ್ಲಿ ನಡೆಯುವ ಸಾಮೂಹಿಕ ವಿವಾಹಕ್ಕೂ ಸಾಕ್ಷಿಯಾಗಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಗದ್ದರ್‌, ‘ನಾನು ಬಸವಣ್ಣನಷ್ಟು ದೊಡ್ಡವನಲ್ಲ. ಒಬ್ಬ ಬೀದಿ ಹಾಡುಗಾರ ಅಷ್ಟೆ. ಪ್ರಶಸ್ತಿಯ ಒಂದು ಲಕ್ಷ ರುಪಾಯಿಯನ್ನು ಕರ್ನಾಟಕದಲ್ಲಿ ಜಾತಿ- ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸುವ ಸಂಘ ಸಂಸ್ಥೆಗಳಿಗೆ ಕೊಡುತ್ತಿದ್ದೇನೆ’ ಎಂದರು. ಆಗ ಚಪ್ಪಾಳೆ ಇನ್ನಷ್ಟು ಜೋರಾಯಿತು.

‘ನನ್ನಪ್ಪ- ಅವ್ವ ಲಿಂಗ ಧರಿಸಿದ್ದರು. ನನ್ನ ಅಪ್ಪನ ಎದೆಯ ಮೇಲೆ ಲಿಂಗವಿತ್ತು. ಮೂವತ್ತೆೈದು ವರ್ಷಗಳ ಹಿಂದೆ ಶಿವಾಯ ನಮಃ ಅಂತ ಹೇಳಿದ್ದೆ. ಇವತ್ತು ಅಂತಹ ವಾತಾವರಣ ಇಲ್ಲಿದೆ. ಎಂಟುನೂರು ವರ್ಷಗಳ ಹಿಂದೆ ಬಸವಣ್ಣ ಅಂದಿನ ವ್ಯವಸ್ಥೆಯಲ್ಲಿ ಪಟ್ಟ ನೋವು ಅಷ್ಟಿಷ್ಟಲ್ಲ. ಅಸ್ಪೃಶ್ಯರ ನೋವಿಗೆ ಸ್ಪಂದಿಸಿದ ಅಂದಿನ ಶರಣರೇ ಕ್ರಾಂತಿಯ ನಿಜವಾದ ವಾರಸುದಾರರು’ ಎಂದರು.

ಆಂಧ್ರ ಪೊಲೀಸರು ನನಗೆ ಐದು ಗುಂಡು ಹಾರಿಸಿದರು. ವೈದ್ಯರು ನಾಲ್ಕು ಗುಂಡು ತೆಗೆಯುವಲ್ಲಿ ಯಶಸ್ವಿಯಾದರು. ಇನ್ನು ಒಂದು ಗುಂಡನ್ನು ತೆಗೆಯಲು ಆಗಲೇ ಇಲ್ಲ. ಇವತ್ತು ಈ ಪ್ರಶಸ್ತಿ ಸ್ವೀಕರಿಸಲೆಂದೇ ನಾನು ಬದುಕಿದ್ದೇನೋ ಏನೋ ಅನ್ನಿಸುತ್ತಿದೆ’ ಅನ್ನುವಾಗ ಗದ್ದರ್‌ ಭಾವುಕರಾಗಿದ್ದರು.

ಪ್ರಶಸ್ತಿ ಪ್ರದಾನ ಮಾಡಿದ ಶಿವಮೂರ್ತಿ ಮುರುಘರಾಜೇಂದ್ರ ಶರಣರು, ಗದ್ದರ್‌ ಅವರ ದಾರ್ಶನಿಕ ಹೋರಾಟವನ್ನು ಹೊಗಳಿ, ಅವರನ್ನು ಪ್ರಸ್ತುತ ಭಾರತದ ಕಾರ್ಲ್‌ಮಾರ್ಕ್ಸ್‌ ಅಂತ ಕರೆಯಬಹುದು ಎಂದರು. ‘ಗದ್ದರ್‌ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆಯೇ ಹೊರತು ಹಿಂಸೆಯ ಮಾರ್ಗದಿಂದಲ್ಲ. ಅವರ ಸಂವೇದನೆ ಮೆಚ್ಚುವಂಥದ್ದು. ಇಂಥವರನ್ನು ಪ್ರಶಸ್ತಿಗೆ ಆರಿಸಿದ್ದಕ್ಕೆ ನನಗೆ ಬೆದರಿಕೆ ಕರೆಗಳು ಬಂದವು. ಕೆಲವರು ನನ್ನ ಪ್ರತಿಕೃತಿಯನ್ನು ಸುಟ್ಟು ಹಾಕಿದರು. ಅವೆಲ್ಲ ಅವರ ವ್ಯರ್ಥ ಶ್ರಮ ಅಷ್ಟೆ ’ ಎಂದು ನಡೆದ ಘಟನಾವಳಿಗಳನ್ನು ಜನರಿಗೆ ಹೇಳಿದರು.

ಇವತ್ತು ಬಸವಣ್ಣ ಬದುಕಿದ್ದು, ಆಗಿನಂತೆ ಕ್ರಾಂತಿ ಮಾಡಿದ್ದರೆ ಅವರಿಗೂ ಸಮಾಜ ನಕ್ಸಲೈಟ್‌ ಪಟ್ಟ ಕಟ್ಟುತ್ತಿತ್ತು. ಜಗತ್ತಿನಲ್ಲಿ ಸಮಾನತೆ ಬರುವವರೆಗೆ ಹೋರಾಟ ನಡೆಯುತ್ತಲೇ ಇರುತ್ತದೆ. ಮಹಾ ಪುರುಷರು ಬೇರೆ ಬೇರೆ ರೂಪದಲ್ಲಿ ಬರುತ್ತಲೇ ಇರುತ್ತಾರೆ ಎಂದು ಮುರುಘರಾಜೇಂದ್ರ ಶರಣರು ತಿಳಿಸಿದರು.

ಒಂದು ತಿಂಗಳಿಂದ ಬಸವಣ್ಣನವರನ್ನು ಓದಿಕೊಂಡು, ಅವರ ಬಗ್ಗೆ ಕಟ್ಟಿದ ಹಾಡನ್ನು ಹಾಡಿ, ಕುಣಿದು ಗದ್ದರ್‌ ಎಲ್ಲರೊಳಗೊಂದಾದದ್ದು ಸಮಾರಂಭದ ವಿಶೇಷ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X