ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರೂ ಎಳೆ ಕರುಗಳ ಮಾಂಸ ತಿನ್ನುತ್ತಿದ್ದರು- ಕೆ.ರಾಮದಾಸ್‌

By Staff
|
Google Oneindia Kannada News

ಬ್ರಾಹ್ಮಣರೂ ಎಳೆ ಕರುಗಳ ಮಾಂಸ ತಿನ್ನುತ್ತಿದ್ದರು- ಕೆ.ರಾಮದಾಸ್‌
ಮಠಾಧಿಪತಿಗಳ ಕಾಲಿಗೆ ಅಡ್ಡಬೀಳಬೇಡಿ- ಸಿದ್ಧರಾಮಯ್ಯ

ಬೆಂಗಳೂರು : ದಲಿತರ ಕೇರಿಗೆ ಬೆಂಕಿ ಬಿದ್ದರೆ ಸುಮ್ಮನಿರುವ ಸ್ವಾಮೀಜಿಗಳು ಗೋಹತ್ಯೆ ವಿಚಾರವನ್ನು ಅದ್ಯಾಕೆ ಅಷ್ಟು ದೊಡ್ಡ ವಿವಾದವನ್ನಾಗಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಗೋಮಾಂಸ ಕೆಲವು ಬ್ರಾಹ್ಮಣರೂ ಸೇರಿದಂತೆ ಒಕ್ಕಲಿಗ ಹಾಗೂ ಲಿಂಗಾಯಿತರ ಸ್ವಾಭಾವಿಕ ಆಹಾರವಾಗಿತ್ತು ಎಂದು ವಿಚಾರವಾದಿ ಕೆ. ರಾಮದಾಸ್‌ ಹೇಳಿದ್ದಾರೆ.

ಲೋಹಿಯಾ ಸಮತಾ ವಿದ್ಯಾಲಯ ಪ್ರಕಟಿಸಿರುವ ಡಾ.ಎನ್‌.ವೇಲುಸ್ವಾಮಿಯವರ ಮೂಲ ಕೃತಿಯ ಕನ್ನಡ ಆವೃತ್ತಿ ‘ಸಮಾಜವಿಜ್ಞಾನಿ ಪೆರಿಯಾರ್‌’ ಪುಸ್ತಕದ ಅನಾವರಣ ಸಮಾರಂಭದಲ್ಲಿ (ಭಾನುವಾರ, ಸೆ.28) ರಾಮದಾಸ್‌ ಮಾತಾಡುತ್ತಿದ್ದರು. ಗೋಮಾಂಸ ಸ್ವಾಭಾವಿಕವಾದ ಆಹಾರ ಪದ್ಧತಿಯಾಗಿತ್ತು. ಒಕ್ಕಲಿಗರು ಹಾಗೂ ವೀರಶೈವರೂ ಗೋಮಾಂಸ ತಿನ್ನುತ್ತಿದ್ದರು. ಅಷ್ಟೇ ಏಕೆ, ಬ್ರಾಹ್ಮಣರೂ ಎಳೆ ಕರುಗಳನ್ನು ಆರಿಸಿಕೊಂಡು ತಿನ್ನುತ್ತಿದ್ದರು ಎಂದು ರಾಮದಾಸ್‌ ಅಭಿಪ್ರಾಯ ಪಟ್ಟರು.

ಪೆರಿಯಾರ್‌ ವಿಚಾರಗಳು ಮಸುಕಾಗುತ್ತಿರುವ ಈ ದಿನಗಳಲ್ಲಿ ತಮಿಳುನಾಡಿನ ಜಯಲಲಿತಾ ಮೈಸೂರಿನ ಚಾಮುಂಡಿಗೆ ಗುಟ್ಟಾಗಿ ಪೂಜೆ ಸಲ್ಲಿಸುತ್ತಾರೆ. ಗಂಟು ಮಾಡುವ ಗಣಪತಿ ಸಚ್ಚಿದಾನಂದ ಸ್ವಾಮೀಜಿಗೆ ನಮ್ಮ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಪೌರ ಸನ್ಮಾನ ಮಾಡಿ, ಮಳೆ ಬರಿಸಪ್ಪಾ ಅಂತ ಗೋಗರೆಯುತ್ತಾರೆ. ಇಂಥಾ ವೈಚಾರಿಕ ದುರಂತ ನಮ್ಮಲ್ಲಿದೆ ಎಂದು ರಾಮದಾಸ್‌ ಹೇಳಿದರು.

ತಿಥಿ ಪ್ರಾಕ್ಟಿಕಲ್‌ : ಸಮಾರಂಭದಲ್ಲಿ ಮಾತಾಡಿದ ದಲಿತ ಕವಿ ಸಿದ್ಧಲಿಂಗಯ್ಯ, ಶ್ರಾದ್ಧ- ತಿಥಿ ನಡೆಸಲು ತರಪೇತಿ ನೀಡಲು ಕೇಂದ್ರ ಸಚಿವರ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರನ್ನು ನೇಮಿಸುತ್ತಿದೆ. ಮುಂದೆ ಈ ಅಧ್ಯಾಪಕರು ನಾವೆಲ್ಲ ಶ್ರಾದ್ಧದ ಪ್ರಾಕ್ಟಿಕಲ್‌ ಮಾಡಬೇಕು, ಅದಕ್ಕಾಗಿ ನೀವೆಲ್ಲ ಸಾಯ್ರೀ ಅಂತಾರೆ ಎಂದು ಕಟಕಿಯಾಡಿದರು.

ಮಠಾಧೀಶರ ಕಾಲಿಗೆ ಬೀಳಬೇಡಿ : ಮಠಾಧೀಶರಿಗೆ ಅಡ್ಡಬೀಳುವುದು ನಿಲ್ಲಬೇಕು. ಇದನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಹೇಳುತ್ತಿದ್ದೇನೆ ಎಂದ ಜಾತ್ಯತೀತ ಜನತಾ ದಳದ ರಾಜ್ಯಾಧ್ಯಕ್ಷ ಸಿದ್ಧರಾಮಯ್ಯ, ರಾಜಕಾರಣಿಗಳು ಈ ರೀತಿ ಹೇಳಿದಾಗ ಅದಕ್ಕೆ ಬಣ್ಣ ಕಟ್ಟುವವರೂ ಉಂಟು ಎಂದು ನಿರೀಕ್ಷಣಾ ಜಾಮೀನು ಪಡೆಯುವ ರೀತಿಯಲ್ಲಿ ಹೇಳಿದರು.

ಗೋಮಾಂಸದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಆಡಿದ ಮಾತುಗಳಿಗೆ ಆರೆಸ್ಸೆಸ್‌ ಹಾಗೂ ಭಜರಂಗ ದಳದವರು ಬಣ್ಣ ಹಚ್ಚಿದರು. ವೈಚಾರಿಕ ನೆಲೆಗಟ್ಟಿನಲ್ಲಿ ರಾಜಕಾರಣಿಗಳು ಮಾತಾಡಿದರೆ ತೊಂದರೆ ತಪ್ಪಿದ್ದಲ್ಲ . ಮಾಜಿ ರಾಷ್ಟ್ರಪತಿ ವೆಂಕಟರಾಮನ್‌ ಸ್ವಾಮೀಜಿಯಾಬ್ಬರ ಕಾಲಿಗೆ ಅಡ್ಡ ಬಿದ್ದಿದ್ದನ್ನು ಪ್ರಸ್ತಾಪಿಸಿದ ಸಿದ್ಧರಾಮಯ್ಯ, ದೇಶದ ದೊಡ್ಡ ಹುದ್ದೆಯಲ್ಲಿದ್ದವರೇ ಸ್ವಾಮೀಜಿ ಕಾಲಿಗೆ ಅಡ್ಡಬೀಳುವುದು ದುರದೃಷ್ಟಕರ ಎಂದರು.

ಪೆರಿಯಾರ್‌ ಸಾಮಾಜಿಕ ಸುಧಾರಣೆಯ ಹರಿಕಾರ. ಆದರೆ ಇವತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಪೆರಿಯಾರ್‌ ಚಿಂತನೆಗಳಿಗೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ತಮಿಳುನಾಡಿನಲ್ಲಿ ಮತ್ತೊಂದು ಪೆರಿಯಾರ್‌ ಚಳವಳಿ ನಡೆಯಬೇಕು ಎಂದು ಸಿದ್ಧರಾಮಯ್ಯ ಕರೆ ಕೊಟ್ಟರು.

ದ್ರಾವಿಡ ಕಳಗಂನ ಪ್ರಧಾನ ಕಾರ್ಯದರ್ಶಿ ಕೆ.ವೀರಮಣಿ ಕೃತಿ ಅನಾವರಣಗೊಳಿಸಿದರು. ವಿಧಾನ ಪರಿಷತ್‌ ಸದಸ್ಯ ಹಾಗೂ ಕವಿ ಡಾ ।ಎಲ್‌. ಹನುಮಂತಯ್ಯ ಹಾಗೂ ಪ್ರೊ। ಇಳಂಗೋವನ್‌ ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ಗೋಮಾಂಸ ಭಕ್ಷಣೆ ಹಾಗೂ ಸ್ವಾಮೀಜಿಗಳಿಗೆ ಅಡ್ಡಬೀಳುವುದು- ಈ ಬಗ್ಗೆ ನಿಮ್ಮ ವಿಚಾರಗಳೇನು?

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X