ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತುಳುವರೆ,ರಾಣಿ ಅಬ್ಬಕ್ಕ ಪ್ರತಿಮೆ ಸಂಸ್ಕೃತಿ ಇಲಾಖೆ ಗೋಡೌನಲ್ಲಿದೆ’

By Staff
|
Google Oneindia Kannada News

‘ತುಳುವರೆ,ರಾಣಿ ಅಬ್ಬಕ್ಕ ಪ್ರತಿಮೆ ಸಂಸ್ಕೃತಿ ಇಲಾಖೆ ಗೋಡೌನಲ್ಲಿದೆ’
ತುಳು ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್‌ಎಸ್‌ಎಸ್‌ಎಸ್‌ರಿಂದ ವಿಷಯ ಬಹಿರಂಗ

ಧರ್ಮ ಸ್ಥಳದಲ್ಲಿ ಸೆ. 21ರ ಭಾನುವಾರ ತುಳು ಸಾಹಿತ್ಯ ಅಕಾಡೆಮಿಯ 8ನೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಸಾಹಿತ್ಯ , ಯಕ್ಷಗಾನ, ಪಾಡ್ದನ, ನಾಟಿ ವೈದ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಮಾರಂಭದ ಉದ್ದೇಶ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದಾದರೂ ತುಳು ಭಾಷೆಗೆ ಸಮಾಜದಲ್ಲಿ ಗುರುತರ ಸ್ಥಾನ ಮಾನ ಕಲ್ಪಿಸುವ ಕಾಳಜಿಯ ಮಾತುಗಳನ್ನು ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಹೇಳಿದರು.

ತುಳು ಕಾರ್ಯಕ್ರಮ ವೇದಿಕೆಗಳಲ್ಲಿ ಹೆಚ್ಚಾಗಿ ಯಾವಾಗಲೂ ಕುರ್ಚಿ ಗಿಟ್ಟಿಸಿಕೊಳ್ಳುವ ಸಚಿವ ಬಿ. ರಮಾನಾಥ ರೈ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವುದು ಅತ್ಯವಶ್ಯಕ ಎಂಬ ಹಳೇ ಕಾಳಜಿಯನ್ನು ಮತ್ತೊಮ್ಮೆ ಮುಂದಿಟ್ಟರು. ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳುವನ್ನು ಸೇರಿಸುವುದಕ್ಕೂ ತುಳು ಭಾಷೆಯ ಬೆಳವಣಿಗೆಗೂ ಇರುವ ಸಂಬಂಧವೇನೆಂಬ ಬಗ್ಗೆ ಏನೂ ಹೇಳದ ರೈಗಳು, ವಿವಿಧ ಕ್ಷೇತ್ರದಲ್ಲಿ ದುಡಿದ ಹಲವರನ್ನು ಗುರುತಿಸಿ ಪುರಸ್ಕರಿಸಿದ ತುಳು ಅಕಾಡೆಮಿಯ ಕೆಲಸವನ್ನು ಹೊಗಳಿದರು.

ಗೋಡೌನಿನಲ್ಲಿ ಅಬ್ಬಕ್ಕ ಪ್ರತಿಮೆ

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಎಲ್‌. ಎಸ್‌. ಶೇಷಗಿರಿ ರಾವ್‌, ಪ್ರಶಸ್ತಿ ವಿಜೇತರ ಪರಿಚಯವಿರುವ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ನಾಡಿನಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಕೆಲಸ ಮಾಡುವ ವಿದ್ವಾಂಸರು ಈನಾಡಿನ ದೀಪಗಳಂತೆ ಎಂದು ಶ್ಲಾಘಿಸಿದರು. ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ ರಾಯರು, ತುಳುವರ ಆಗ್ರಹಗಳಲ್ಲೊಂದಾದ ರಾಣಿ ಅಬ್ಬಕ್ಕನ ಪ್ರತಿಮೆ ಸ್ಥಾಪನೆಯ ವಿಷಯದ ಬಗ್ಗೆ ಮಾತು ಶುರುಮಾಡಿದರು.

ಉಳ್ಳಾಲದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕನ ಪ್ರತಿಮೆ ಬೆಂಗಳೂರಿನ ಕನ್ನಡ ಸಂಸ್ಕೃತಿ ಇಲಾಖೆ ಗೋಡೌನಿನಲ್ಲಿ ಎರಡು ವರ್ಷಗಳಿಂದ ಕೊಳೆಯುತ್ತಿದೆ ಎನ್ನುತ್ತಾ ತುಳುವರ ಉದಾಸೀನವನ್ನು ಒಂದಿಷ್ಟು ಒರೆಗೆ ಹಚ್ಚಿದರು.

ಈಗಾಗಲೇ ಈ ಪ್ರತಿಮೆ ಮೈಸೂರಿನಲ್ಲಿ ಕೆಲ ವರ್ಷ ಗೋಡೌನು ವಾಸ ಅನುಭವಿಸಿದೆ. ಈ ಪ್ರತಿಮೆ ಆದಷ್ಟು ಬೇಗನೇ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕು ಎಂದು ಶೇಷಗಿರಿ ರಾಯರು ಹೇಳಿದರು.

ಪ್ರಶಸ್ತಿ ಪುರಸ್ಕೃತರು

ಗೌರವ ಪ್ರಶಸ್ತಿ: ಡಾ। ಕೆ.ಜಿ.ವಸಂತ ಮಾಧವ (ಸಂಶೋಧನೆ), ಏರ್ಯ ಲಕ್ಷ್ಮೀನಾರಾಯಣ ಆಳ್ವ(ಸಾಹಿತ್ಯ), ಶೀನಪ್ಪ ಭಂಡಾರಿ (ಯಕ್ಷಗಾನ), ಡಾ। ಸಂಜೀವ ದಂಡಕೇರಿ (ನಾಟಕ-ಚಲನಚಿತ್ರ).

ಜಾನಪದ ಪುರಸ್ಕಾರ: ಗಿಡಿಕೆರೆ ರಾಮಕ್ಕ (ಪಾಡ್ದನ), ಡಂಗು ಪಾಣಾರ (ಕುಣಿತ), ಹರಿಭಟ್‌ ಹಳೆಯಂಗಡಿ(ನಾಟಿ ವೈದ್ಯ), ಸಂಜೀವ ಅತ್ತಾವರ (ಕ್ರೀಡೆ- ತಾಲೀಮು) .

ಪುಸ್ತಕ ಬಹುಮಾನ: ಪುತ್ತಿಗೆ ಈಶ್ವರ ಭಟ್‌ (ತುಳು ಕಾವ್ಯ), ಪ್ರಭಾಕರ ರೈ(ತುಳು ಕಥೆ), ಜಾನಕಿ ಎಂ. ಬ್ರಹ್ಮಾವರ (ತುಳು ಕಾದಂಬರಿ), ಡಾ। ಸುನೀತಾ ಎಂ. ಶೆಟ್ಟಿ (ತುಳು ಗದ್ಯ), ಡಾ। ಎಸ್‌.ಡಿ. ಶೆಟ್ಟಿ (ತುಳು ಅಧ್ಯಯನ ಗ್ರಂಥ), ವಿಜಯಕುಮಾರ ಭಂಡಾರಿ (ತುಳು ಸಂಪಾದಿತ ಕೃತಿ).

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X