• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಂಗಾರದೊಡವೆ ಬೇಕೆ...

By Staff
|

ಬಂಗಾರದೊಡವೆ ಬೇಕೆ...

ಸೆ. 26ರಿಂದ 29ನೇ ತಾರೀಕಿನವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಿನ್ನದೊಡವೆ, ವಜ್ರದ ಕಂಠೀಹಾರ, ಸಮುದ್ರದ ಮುತ್ತುಗಳದ್ದೇ ಹೊಳಪು.

*ದಟ್ಸ್‌ಕನ್ನಡ ಬ್ಯೂರೋ

ಬೆಂಗಳೂರು : ಚಿನ್ನ ಹೆಂಗಸರ ಪಾಲಿನ ಸೌಂದರ್ಯ ವರ್ಧಕ. ನಮ್ಮ ಸಂಸ್ಕೃತಿಯ ಪ್ರತೀಕ. ಚಿನ್ನ ನಮ್ಮ ದೇಶದ ಸುಂದರ ರೂಪಕ.

ಕೃಷ್ಣದೇವರಾಯನ ಕಾಲದಲ್ಲಿ ಚಿನ್ನಾಭರಣಗಳನ್ನು ರಸ್ತೆ ಬದಿಯಲ್ಲಿ ಸೇರುಗಳಲ್ಲಿ ಅಳೆದು ಮಾರುತ್ತಿದ್ದರಂತೆ. ಈಗ ಎಂಥ ಕಾಲ ಬಂತು ನೋಡಿ ಅಂತಲೇ ಗೊಣಗುವ ಮಂದಿ, ಚಿನ್ನದ ಬೆಲೆಯ ಪೆಂಡ್ಯುಲಮ್ಮ ಗ್ರಾಮಿಗೆ 500 ರುಪಾಯಿಗಿಂತ ಮೇಲೇರಿ ವರ್ಷದ ಮೇಲಾದರೂ ಒಡವೆ ಮೋಹವನ್ನು ಮಾತ್ರ ಬಿಡೋದಿಲ್ಲ. ಹೆಂಗಸರಿಗೆ ಒಡವೆ ಹಾಕಿ ಮೆರೆವಾಸೆ. ಗಂಡಸರಿಗೆ ಚಿನ್ನ ಪೇರಿಸಿ ಆಸ್ತಿವಂತರಾಗುವ ಕನಸು.

Its Jewel shine in Bangaloreಚಿನ್ನಾಭರಣ ಇವತ್ತು ದೊಡ್ಡ ಜಾಗತಿಕ ಕಲೆಯಾಗಿದೆ. ತೀರಾ ತೆಳು ಎಳೆಯ ಒಡವೆಯಿಂದ ದಪ್ಪ ಗಾತ್ರದ ಒಡವೆಯವೆ ಮಾಡುವ ಅಕ್ಕಸಾಲಿಗರು ಇವತ್ತು ಕಲೆಗಾರರು, ವಿನ್ಯಾಸಕಾರರೂ ಹೌದು. ಸೃಷ್ಟಿಕರ್ತ ಬ್ರಹ್ಮ ಹಿರಣ್ಯ ಗರ್ಭದಿಂದ ಹುಟ್ಟಿದವ. ಅದಕ್ಕೇ ಅವನು ಚಿನ್ನದಂಥಾ ಮನುಷ್ಯ. ಅಲ್ಲಿಂದ ಶುರುವಾಗುತ್ತದೆ ಮನುಕುಲದ ಸ್ವರ್ಣಪ್ರೀತಿ. ಈ ಹಳದಿ ಲೋಹದ ಮಹಿಮೆಯ ಮಾಯಾ ದರ್ಶನ ಬೆಂಗಳೂರಲ್ಲಿ ಏರ್ಪಾಟಾಗಿದೆ.

ಸೆಪ್ಟೆಂಬರ್‌ 26ರಿಂದ 29ನೇ ತಾರೀಕಿನತನಕ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾರತೀಯ ಚಿನ್ನದ ಒಡವೆಗಳ ಭಾರೀ ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಎಕ್ಸ್‌ಪೋ ವರ್ಲ್ಡ್‌ ಆಯೋಜಿಸಿರುವ ಈ ಪ್ರದರ್ಶನದಲ್ಲಿ ಭಾರತದ 70 ಮುಂಚೂಣಿ ಚಿನ್ನಾಭರಣ ಅಂಗಡಿಗಳು ತಮ್ಮ ತಮ್ಮ ಒಡವೆಗಳನ್ನು ಪ್ರದರ್ಶಿಸಲಿವೆ. ಎಕ್ಸ್‌ಪೋ ವರ್ಲ್ಡ್‌ ಕಳೆದ ಐದು ವರ್ಷಗಳಿಂದ ಈ ಮೇಳ ನಡೆಸಿಕೊಂಡು ಬಂದಿವೆ.

ಗುಜರಾತಿ ಮತ್ತು ಮಾರ್ವಾಡಿ ಮದುವೆಗಳ ಸಾಂಪ್ರದಾಯಿಕ ಹಾಗೂ ಕಡ್ಡಾಯ ಒಡವೆಗಳಾಗಿರುವ ಕುಂದನ್‌ ಮತ್ತು ಮೀನಾಕರಿ ಚಿನ್ನಾಭರಣಗಳು, 4 ಶತಮಾನದಷ್ಟು ಹಳೆಯದಾದ ಒಂದು ಭಾರತೀಯ ಅಂಗಡಿ ಮತ್ತು ಮುಂಬಯಿಯ ಹೆಸರಾಂತ ತ್ರಿಭುವನ್‌ದಾಸ್‌ ಭೀಮ್‌ಜಿ ಝವೇರಿ ಅಂಗಡಿ- ಪ್ರದರ್ಶನದ ಮುಖ್ಯ ಸೆಳಕುಗಳು.

ದಕ್ಷಿಣ ಸಮುದ್ರಗಳ ಸ್ವಾಭಾವಿಕ ಮುತ್ತುಗಳು ಹಾಗೂ 2 ಕೋಟಿ ರುಪಾಯಿ ಬೆಲೆಯ ವಜ್ರದ ಕಂಠೀಹಾರ ಪ್ರದರ್ಶನದಲ್ಲಿ ಬಿಕರಿಗೆ ಇಡುವ ಆಕರ್ಷಣೆಗಳಲ್ಲಿ ಮುಖ್ಯವಾದವು. ದಕ್ಷಿಣ ಸಮುದ್ರಗಳ ಮುತ್ತುಗಳನ್ನು ಮುಂಬಯಿಯ ಎಸ್‌.ಜಿತೇಂದ್ರ ಒಡವೆ ವ್ಯಾಪಾರಿಗಳು ಬೆಂಗಳೂರಿಗೆ ತರುತ್ತಿದ್ದು, ಇವುಗಳ ಬೆಲೆ ಕೃತಕ ಮುತ್ತುಗಳ 60 ಪಟ್ಟು ಹೆಚ್ಚು.

ದೇಶೀ ಒಡವೆಗಳಲ್ಲದೆ ಬ್ಯಾಂಕಾಕ್‌, ಇಟಲಿ ಹಾಗೂ ಥೈಲ್ಯಾಂಡಿನ ಯಂತ್ರದಲ್ಲಿ ಮಾಡಿದ ಚಾಲ್ತಿ ಒಡವೆಗಳೂ ಪ್ರದರ್ಶನದಲ್ಲಿ ಕೊಳ್ಳಲು ಲಭ್ಯವಾಗಲಿವೆ. ಮುಂಬಯಿ ಹಾಗೂ ದುಬೈನ ದರದನ್ವಯ ಚಿನ್ನಾಭರಣ ಸಿಗಲಿರುವುದು ಬೆಂಗಳೂರಿಗರಿಗೆ ಬೋನಸ್ಸು. ಅಕ್ಕಸಾಲಿಗರ ಕೂಲಿಯಲ್ಲಿ ಕಡಿತ ಇರುವುದು ಆಕರ್ಷಣೆ. ಜೈಪುರ, ಮುಂಬಯಿ, ದೆಹಲಿ ಹಾಗೂ ಹೈದರಾಬಾದಿನ ಹೆಸರಾಂತ ಚಿನಿವಾರರು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಚಿನ್ನಾಭರಣಗಳ ಪ್ರದರ್ಶನ ನಡೆಯಲಿರುವ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ದಿನದ ಇಪ್ಪತ್ನಾಲ್ಕೂ ಗಂಟೆ ಭಾರೀ ಭದ್ರತೆ ಒದಗಿಸಲು ತಯಾರಿ ನಡೆದಿದೆ. 40 ಸಿಸಿಟಿವಿ ಕ್ಯಾಮರಾಗಳು ಆಯಕಟ್ಟಿನ ಜಾಗೆಗಗಳ ಮೇಲೆ ನಿಗಾ ಇಡಲಿವೆ. ಸಶಸ್ತ್ರ ಪೊಲೀಸ್‌ ಪಡೆ, ಹಾಗೂ ಖಾಸಗಿ ದಿರಿಸಿನ ಪೊಲೀಸ್‌ ಪೇದೆಗಳನ್ನು ಗಸ್ತು ತಿರುಗಲು ನಿಯೋಜಿಸಲಾಗುವುದು. ರಾತ್ರಿ ವೇಳೆಯಲ್ಲಿ ಚಿನ್ನಾಭರಣಗಳನ್ನು ಸಾಗಿಸಲು ಗುಂಡು ನಿರೋಧಕ ಗಾಜುಗಳಿರುವ ವ್ಯಾನ್‌ಗಳನ್ನು ಬಳಸಲಾಗುವುದು.

ಬಂಗಾರದೊಡವೆ ಬೇಕೆ, ನೀರೇ... ಕಂಠೀರವ ಕ್ರೀಡಾಂಗಣದ ಮೇಳಕ್ಕೆ ಹೋಗಮ್ಮ.

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more