ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪ್‌ ಚೆಲುವೆ ಮಡೋನಾಳ ಚೊಚ್ಚಲ ‘ಶಿಶು’ ಪುಸ್ತಕ ಪ್ರಸವ

By Staff
|
Google Oneindia Kannada News

ಪಾಪ್‌ ಚೆಲುವೆ ಮಡೋನಾಳ ಚೊಚ್ಚಲ ‘ಶಿಶು’ ಪುಸ್ತಕ ಪ್ರಸವ
ಹ್ಯಾರಿ ಪಾಟರ್‌ ಬೂಮ್‌ನ ಬೆನ್ನಿಗೇ ಮಡೋನಾ ಕೂಡ ಮಕ್ಕಳ ಮನಸ್ಸಿಗೆ ಕೈ ಇಟ್ಟಿದ್ದಾಳೆ

ಲಂಡನ್‌ : ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಪುಸ್ತಕಗಳೇ ಬರುತ್ತಿಲ್ಲವಲ್ಲ ಸ್ವಾಮಿ ಎಂಬ ಕೊರಗು. ಇಂಗ್ಲಿಷ್‌ ಸಾಹಿತ್ಯ ಕೃಷಿಯಲ್ಲಿ ಮಕ್ಕಳ ಸಾಹಿತ್ಯದ್ದೇ ದೊಡ್ಡ ಫಸಲು. ಹ್ಯಾರಿ ಪಾಟರ್‌ ಸರಣಿಯ ಪುಸ್ತಕ ಪಿಜ್ಜಾಗಿಂತ ಜೋರಾಗಿ ಬಿಕರಿಯಾಗಿ, ಟೀವಿ ಮುಂದೆ ಕೂತಿದ್ದ ಮಕ್ಕಳನ್ನು ಟೆರೇಸಿನ ಮೇಲೆ ಕೂತು ಘನವಾಗಿ ಪುಸ್ತಕ ಓದುವ ಗೀಳಿಗೆ ಹಚ್ಚಿಸಿದ ಹ್ಯಾರಿ ಪಾಟರ್‌ ಮಹಿಮೆ ಕಮ್ಮಿಯಲ್ಲ. ಈಗ ಮಕ್ಕಳ ಪುಸ್ತಕ ಬರೆಯುವ ಸಾಹಸ ಮಾಡಿರುವಾಕೆ- ಪಾಪ್‌ ತಾರೆ ಮಡೋನ.

Madonnaಮೊನ್ನೆ ಸೆಪ್ಟೆಂಬರ್‌ 5ನೇ ತಾರೀಕು ಮಡೋನಾ ಚೊಚ್ಚಲ ಪುಸ್ತಕ ಪ್ರಸವ. ಪುಸ್ತಕದ ಹೆಸರು ‘ದಿ ಇಂಗ್ಲಿಷ್‌ ರೋಸಸ್‌’. 100 ದೇಶಗಳಲ್ಲಿ 30 ಭಾಷೆಗಳಲ್ಲಿ ಏಕಕಾಲಕ್ಕೆ 10 ಲಕ್ಷಕ್ಕೂ ಹೆಚ್ಚು ಪುಸ್ತಕದ ಪ್ರತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ನ್ಯೂಯಾರ್ಕ್‌ ಮೂಲದ ಕ್ಯಾಲೆವೇ ಎಡಿಷನ್ಸ್‌ ಜಗತ್ತಿನಾದ್ಯಂತ ಪುಸ್ತಕ ಹೊರ ತರುವ ಜವಾಬ್ದಾರಿ ಹೊತ್ತಿತ್ತು. ಚೀನಾ, ಜೆಚ್‌, ಥಾಯ್‌, ಟರ್ಕಿಷ್‌- ಹೀಗೆ ಇಂಗ್ಲಿಷನ್ನು ಕಡಿಮೆ ಓದುವ ದೇಶಗಳಲ್ಲಿ ಆಯಾ ಭಾಷೆಗಳಿಗೇ ಪುಸ್ತಕವನ್ನು ಅನುವಾದ ಮಾಡಿಸುವ ಹೊಣೆಯನ್ನೂ ಕ್ಯಾಲೆವೇ ನಿಭಾಯಿಸಿದೆ. ಮಾಹಿತಿ ತಂತ್ರಜ್ಞಾನದ ಪೂರ್ಣ ಸೌಲಭ್ಯವನ್ನು ಬಳಸಿಕೊಂಡು ಇಂಟರ್ನೆಟ್‌ ಮಾಧ್ಯಮದ ಮುಖೇನ ಪುಸ್ತಕ ಪ್ರಸವದ ಈ ದೊಡ್ಡ ಯಜ್ಞವನ್ನು ಮುದ್ರಣ ಕಂಪನಿ ಮುಗಿಸಿದೆ.

ಬ್ರಿಟನ್ನಿನಲ್ಲಿ ಪೆಂಗ್ವಿನ್‌ ಬುಕ್ಸ್‌ ಇಂಗ್ಲೆಂಡಿನಲ್ಲಿ ಪುಸ್ತಕ ಮಾರಾಟ ಮಾಡಲು ಮುಂದಾಗಿದ್ದು, ವಿಮರ್ಶಕರು ಮಡೋನ ಒಬ್ಬ ಪಾಪ್‌ ಗಾಯಕಿ ಎಂಬ ಪೂರ್ವಾಗ್ರಹ ಬಿಟ್ಟು ಪುಸ್ತಕ ಓದಬೇಕೆಂದು ಬಯಸಿದೆ. ಇದರ ಮ್ಯಾನೇಜಿಂಗ್‌ ಡೈರೆಕ್ಟರ್‌ ಹೆಲೆನ್‌ ಫ್ರೇಸರ್‌ ಪ್ರಕಾರ, ‘ಮಡೋನ ಥರದ ಹೆಸರಾಂತ ಪಾಪ್‌ ಗಾಯಕಿ ಬರೆಯುವ, ಅದರಲ್ಲೂ ಮಕ್ಕಳ ಸಾಹಿತ್ಯಕ್ಕೆ ಕೈ ಹಚ್ಚಿರುವುದನ್ನು ಅನೇಕರು ಸಿನಿಕತನದಿಂದ ನೋಡುತ್ತಾರೆ. ಆಕೆ ಕೀರ್ತಿಯ ಬೆನ್ನೇರಿ ಏನೋ ಬೊಗಳೆ ಬರೆದಿರಬೇಕು ಎಂಬ ಪೂರ್ವಗ್ರಹ ಅನೇಕರಲ್ಲಿ ಇರುವುದು ಸ್ಪಷ್ಟ. ಇದನ್ನು ಬಿಟ್ಟು, ವಸ್ತುನಿಷ್ಠ ವಿಮರ್ಶೆ ಮಾಡಬೇಕು. ಆಗ ತಮ್ಮ ಮುಂದಿನ ಬರವಣಿಗೆಯಲ್ಲಿ ಮಡೋನ ಸುಧಾರಣೆ ತಂದುಕೊಳ್ಳುವುದು ಸಾಧ್ಯವಾಗುತ್ತದೆ.’

ಮೊನ್ನೆ ಲಂಡನ್ನಿನ ಟೀ ಪಾರ್ಟಿಯಾಂದರಲ್ಲಿ ಮಡೋನ ಪುಸ್ತಕ ಬಿಡುಗಡೆ ಮಾಡಿದ್ದು ವಿಶಿಷ್ಟವಾಗಿತ್ತು. ಅಲ್ಲಿ ಮಡೋನಾರ ಇಬ್ಬರು ಮಕ್ಕಳೂ ಸೇರಿದಂತೆ ನೂರು ಮಕ್ಕಳು ಕೂತಿದ್ದರು. ಅವರೆದುರು ಮಡೋನ ಐದು ನಿಮಿಷ ಪುಸ್ತಕ ಓದಿದರು. ‘ಸಾಕು, ನಾವೇ ಓದುತ್ತೇವೆ’ ಅಂತ ಮಕ್ಕಳು ಹೇಳಿದಾಕ್ಷಣ ನಿಲ್ಲಿಸಿದರು. ಹತ್ತಿರ ಬಂದು, ಹಸ್ತಾಕ್ಷರ ಕೇಳಿದ ಮಕ್ಕಳಿದೆ ಮಡೋನ ಮುತ್ತು ಕೊಟ್ಟರು.

ನಲವತ್ತೆೈದರ ಹರೆಯದ ಮಡೋನ ನಿತ್ಯಸುಂದರಿ ಅಂತ ಹೆಸರು ಗಳಿಸಿರುವಾಕೆ. ಈಕೆಯ ಆಲ್ಬಂಗಳಿಗೆ ದಶಕಗಳಿಂದ ಭಾರೀ ಬೇಡಿಕೆ. ಪುಸ್ತಕ ಉದ್ಯಮದಾರಳಾಗುವುದು ನನ್ನ ಉದ್ದೇಶವಲ್ಲ. ಮಕ್ಕಳಿಗೆ ನಾನು ಒಂದಿಷ್ಟು ಹೇಳುವುದಿದೆ. ಅದನ್ನು ಅವರ ಮನಸ್ಸಿಗೆ ಹೋಗುವಂತೆ ಮಾಡುವುದು ನನ್ನ ಕನಸು. ಇನ್ನಷ್ಟು ಪುಸ್ತಕಗಳ ಬರೆಯುವ ಕನಸಿದೆ. ಮಕ್ಕಳು ಓದಿ, ಇನ್ನೂ ಬೇಕು ಅಂದರೆ ಅದುವೇ ನನಗೆ ಬಹುಮಾನ ಎನ್ನುವ ಮಡೋನ ಸದ್ಯಕ್ಕೆ ತಮ್ಮ ಪುಸ್ತಕ ಪ್ರಚಾರದ ಭರಾಟೆಯಲ್ಲಿ ದೇಶ ವಿದೇಶಗಳನ್ನು ಸುತ್ತುತ್ತಿದ್ದಾರೆ.

(ಏಜೆನ್ಸೀಸ್‌)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X