ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿರ ಕೋಟಿ ರುಪಾಯಿ ರೈತಕಲ್ಯಾಣ ನಿಧಿ : ಬುದ್ಧಿಜೀವಿಗಳ ಸಲಹೆ

By Staff
|
Google Oneindia Kannada News

ಸಾವಿರ ಕೋಟಿ ರುಪಾಯಿ ರೈತಕಲ್ಯಾಣ ನಿಧಿ : ಬುದ್ಧಿಜೀವಿಗಳ ಸಲಹೆ
ರೈತರ ಆತ್ಮಹತ್ಯೆ ಕುರಿತು ಮುಖ್ಯಮಂತ್ರಿಗಳಿಂದ ವಿಚಾರ ಸಂಕಿರಣ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಏನು ಕಾರಣ ? ಆತ್ಮಹತ್ಯೆಗೆ ಕಾರಣವಾಗುವ ಲೋಪವೇನಾದರೂ ಸಮಾಜದಲ್ಲಿದೆಯೇ ? ಎನ್ನುವ ಕುರಿತು ತಲೆ ಕೆಡಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ- ರಾಜ್ಯದಲ್ಲಿ ಸಾಕಷ್ಟು ನೀರಾವರಿ ಇರುವ ಪ್ರದೇಶದಲ್ಲಿಯೂ ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿರುವ ಕುರಿತು ವಿಷಾದಿಸಿದ್ದಾರೆ.

ಚಿಂತಕರು, ಶಿಕ್ಷಣ ತಜ್ಞರು, ರೈತ ನಾಯಕರು ಹಾಗೂ ಆರ್ಥಿಕ ತಜ್ಞರ ಜೊತೆ ರೈತರ ಆತ್ಮಹತ್ಯೆಯ ಹಿನ್ನೆಲೆಯನ್ನು ಸೋಮವಾರ( ಸೆ. 15) ಚರ್ಚಿಸಿದ ಮುಖ್ಯಮಂತ್ರಿ ಕೃಷ್ಣ , ರೈತರು ಕೃಷಿಗೋಸ್ಕರ ಮಳೆಯಾಂದನ್ನೇ ನಂಬಿದ್ದಾರೆ. ಮಳೆಯ ವ್ಯತ್ಯಾಸದಿಂದಾಗಿ ಸಾವಿರಾರು ರೈತರು ಸಾವನ್ನಪ್ಪಿರುವ ಘಟನೆಗಳು ಕಳೆದ ನೂರು ವರ್ಷಗಳಲ್ಲಿ ಸಾಕಷ್ಟು ನಡೆದಿದೆ ಎಂದರು.

ಹಿಂದೆ, ಕೇವಲ ಆರೇಳು ಶೇಕಡಾದಷ್ಟು ಪ್ರದೇಶದ ಕೃಷಿ ಮಾತ್ರ ನೀರಾವರಿಯನ್ನು ಅವಲಂಬಿಸಿರುತ್ತಿತ್ತು. ಆದರೆ ಈಗ ಸುಮಾರು ಶೇ. 27ರಿಂದ 28ರಷ್ಟು ಕೃಷಿಯು ನೀರಾವರಿಯನ್ನು ಅವಲಂಬಿಸಿದೆ. ಪ್ರತಿ ದಿನ ದಿನಪತ್ರಿಕೆಗಳಲ್ಲಿ ಆತ್ಮಹತ್ಯೆಯ ಬಗ್ಗೆ ಓದುತ್ತೇವೆ. ವರದಕ್ಷಿಣೆಯಂತಹ ಸಾಮಾಜಿಕ ಸಮಸ್ಯೆಗಳಿಂದ ಬಳಲುವವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷ್ಣ ದಿನೇ ದಿನೇ ಹೆಚ್ಚುವತ್ತಿರುವ ಆತ್ಮಹತ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ನಡೆಸಿದ ವಿಚಾರ ಸಂಕಿರಣದಲ್ಲಿ ವಿವಿಧ ಸಚಿವರುಗಳಲ್ಲದೆ- ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ, ಲೇಖಕ ಬರಗೂರು ರಾಮಚಂದ್ರಪ್ಪ , ಹಿರಿಯ ಕವಿ ಸುಮತೀಂದ್ರ ನಾಡಿಗ, ರೈತ ಮುಖಂಡ ಕೆ.ಎಸ್‌.ಪುಟ್ಟಣ್ಣಯ್ಯ , ಕೃಷಿ ತಜ್ಞ, ಡಾ.ವೀರೇಶ್‌, ಡಾ.ಬಿಸಲಯ್ಯ , ಮನಃಶಾಸ್ತ್ರಜ್ಞ ಕೆ.ಎ.ಶೇಷಗಿರಿರಾವ್‌ ಮುಂತಾದವರು ಭಾಗವಹಿಸಿದ್ದರು.

ಪರಿಹಾರ : ಶಾಸಕಾಂಗ ಹಾಗೂ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದು ಸರಕಾರವು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಆತ್ಮಹತ್ಯೆ ತಡೆಗೆ ಪರಿಹಾರ ನೀಡುವುದು ಸೂಕ್ತವಲ್ಲ ಎಂದು ಡಾ.ವೀರೇಶ್‌ ವರದಿ ತಿಳಿಸದ್ದರೂ, ರಾಜಕೀಯ ಒತ್ತಡಗಳಿಂದಾಗಿ ಸರ್ಕಾರ ಪರಿಹಾರ ನೀಡಲು ಒಪ್ಪಿಕೊಂಡಿರುವುದಾಗಿ ಕೃಷ್ಣ ತಿಳಿಸಿದರು.

ಆತ್ಮಹತ್ಯೆಯ ಹಿನ್ನೆಲೆಯನ್ನು ಅವಲೋಕಿಸುತ್ತಾ ಸರಕಾರಕ್ಕೆ ಒಂದಷ್ಟು ದೃಷ್ಟಿ ಕೋನಗಳು ಹೊಳೆದಿವೆ. ಚರ್ಚೆಗಳಿಂದ ಆತ್ಮ ಹತ್ಯೆ ಕುರಿತ ಇನ್ನಷ್ಟು ವಿಷಯಗಳು ಹೊರಬೀಳಬಹುದು ಎಂದು ಕೃಷ್ಣ ಆಶಿಸಿದರು.

ಸಾವಿರ ಕೋಟಿ ರುಪಾಯಿಗಳ ನಿಧಿ : ರೈತರ ಆತ್ಮಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1 ಸಾವಿರ ಕೋಟಿ ರುಪಾಯಿಗಳ ರೈತರ ಕಲ್ಯಾಣ ನಿಧಿ ತೆರೆಯಬೇಕೆಂದು ಸೋಮವಾರ ನಡೆದ ಚಿಂತಕರ-ತಜ್ಞರ ಸಭೆ ಮುಖ್ಯಮಂತ್ರಿ ಕೃಷ್ಣ ಅವರಿಗೆ ಸಲಹೆ ಮಾಡಿದೆ.

ಸಭೆಯ ಇತರೆ ಸಲಹೆಗಳು :

  • ಈಗಿನ ರೈತ ಸಂಪರ್ಕ ಕೇಂದ್ರಗಳನ್ನು ರೈತ ಸಹಾಯಕ ಕೇಂದ್ರಗಳಾಗಿ ಪರಿವರ್ತಿಸಬೇು.
  • ರೈತರನ್ನು ಉಳಿಸಿ ಎನ್ನುವ ಆಂದೋಲನ- ಚಿಂತಕರು, ಬುದ್ಧಿಜೀವಿಗಳು ಹಾಗೂ ಗಣ್ಯರ ನೇತೃತ್ವದಲ್ಲಿ ರಾಜ್ಯದೆಲ್ಲೆಡೆ ನಡೆಯಬೇಕು.
  • ರೈತರ ವಿಶೇಷ ಪ್ಯಾಕೇಜ್‌ ಅರ್ಹರಿಗೆ ತಲುಪಿದೆಯೇ ಎನ್ನುವುದರ ನಿಗಾಕ್ಕೆ ವಿಶೇಷ ಕಾರ್ಯಪಡೆ ನೇಮಿಸಬೇಕು.
(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X