ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಹಸ್ತಾಂಬೆ’ ಸೋನಿಯಾ ಮಹಾತ್ಮೆ: ಹೆಬ್ಬೂರು ಹೊಲದಲ್ಲಿ ಟಾರು !

By Staff
|
Google Oneindia Kannada News

‘ಹಸ್ತಾಂಬೆ’ ಸೋನಿಯಾ ಮಹಾತ್ಮೆ: ಹೆಬ್ಬೂರು ಹೊಲದಲ್ಲಿ ಟಾರು !
ಸೋನಿಯಾ ಗಾಂಧಿ ಒಂದು ಹಳ್ಳಿಗೆ ಭೇಟಿ ಕೊಟ್ಟರೆ, ಆ ಹಳ್ಳಿ ಏನಾಗುತ್ತೆ ಅನ್ನೋದಕ್ಕೆ ಹೆಬ್ಬೂರಲ್ಲಾಗಿರುವ ಸಾಮಾಜಿಕ ಬದಲಾವಣೆ ತಾಜಾ ನಿದರ್ಶನ. ಆ ಕುರಿತ ಒಂದು ಪತ್ರ :

ಮಾನ್ಯರೇ,

ಮೊನ್ನೆ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಬ್ಬೂರಿಗೆ ಬಂದ ಸಂಭ್ರಮ (ಸೆ.2ರಂದು) ನೋಡಿ ಹಳ್ಳಿಗೆ ಹಳ್ಳಿಯೇ ದಂಗಾಯಿತು. ಅದಕ್ಕೆ ಎಷ್ಟೋ ದಿನಗಳ ಮುಂಚೆ ನಡೆದ ಬೆಳವಣಿಗೆಗಳು ಜನರನ್ನು ಹಾಗೂ ರೈತರನ್ನು ಬೇಸ್ತು ಬೀಳಿಸಿದ್ದೂ ದಿಟ.

ಅದು ‘ಸ್ತ್ರೀ ಶಕ್ತಿ’ ಎಂಬ ಸರಳ ಹಾಗೂ ಸದುದ್ದೇಶದ ಕಾರ್ಯಕ್ರಮ ಕುರಿತ ಅದ್ಧೂರಿ ಸಮಾರಂಭ. 5 ಲಕ್ಷ ಜನರು ಬಂದಿದ್ದರು (ಅನೇಕರನ್ನು ಬಲವಂತವಾಗಿ ಕರೆ ತಂದಿದ್ದರು). ಸೋನಿಯಾ ಕೈಬೀಸೋದನ್ನು ನೋಡಲು ನೂಕುನುಗ್ಗಲು. ಆ ಸಂತೆಯಲ್ಲಿ ನನ್ನ ಕಣ್ಣಿಗೆ ಕಂಡಂತೆ ಸುಮಾರು 40 ಜನ ಗಾಯಗೊಂಡರು. ಸಾಲದ್ದಕ್ಕೆ ಪುಗಸಟ್ಟೆ ಊಟದ ಪುನುಗಿನ ಸೆಳಕು ಬೇರೆ. ಬೆಂಗಳೂರಿಂದ ಬಂದ ಬಾಣಸಿಗರು ಮಾಡಿದ ಖಾದ್ಯ ತಿಂದುಂಡ ನಂತರ ಸಂಜೆ ವಿಶಾಲ ಬಯಲಲ್ಲಿ ಅನ್ನದ ದೊಡ್ಡ ರಾಶಿ. ಬಕಾಸುರನೇನಾದರೂ ಬದುಕಿದ್ದ ಪಕ್ಷದಲ್ಲಿ ಅವನನ್ನು ಕರೆದುಕೊಂಡು ಬಂದು ಹೊಟ್ಟೆ ತುಂಬಿಸುವಷ್ಟು ಅನ್ನ ಬಯಲಲ್ಲಿ !

ಸೋನಿಯಾ ಬರ್ತಾರೆ ಎಂಬ ಸಂಭ್ರಮ ತಿಂಗಳುಗಟ್ಟಲೆ ಮುಂಚೆಯೇ ಶುರುವಾಗಿತ್ತು. ಈ ‘ಹಸ್ತಾಂಬೆ’ ಅಡಿಯಿಡಲೊಂದು ಹೆಲಿಪ್ಯಾಡು ಬೇಕಲ್ಲ- ಅದಕ್ಕೆ ಒಂದು ಬಯಲು ಗೊತ್ತಾಯಿತು. ಆ ಬಯಲಲ್ಲಿ ಒಂಟಿ ಮನೆ. ಸೆಕ್ಯುರಿಟಿ ಜೋರಲ್ಲವೇ, ಅದಕ್ಕೇ ಹಸ್ತಾಂಬೆ ಬರುವ ಮೂರು ದಿನಗಳ ಮುಂಚೆಯಿಂದಲೂ ಆ ಮನೆ ಪೂರ್ತಿ ಖಾಲಿಯಿರಬೇಕು. ಈ ಮನೆಯಲ್ಲಿದ್ದವ ಕೆಳ ಮಧ್ಯಮ ವರ್ಗದ ಆಸಾಮಿ. ಮೂರು ದಿನದ ಮಟ್ಟಿಗೆ ಮನೆ ಖಾಲಿ ಮಾಡಿಸಲು ಅವನಿಗೆ ಮೂವತ್ತೆೈದು ಸಾವಿರ ರುಪಾಯಿ ಕೊಟ್ಟದ್ದು ಊರಲ್ಲೆಲ್ಲ ದೊಡ್ಡ ಸುದ್ದಿ, ಆದರೆ ಯಾವ ಪತ್ರಿಕೆಗೂ ಅದು ಸುದ್ದಿಯಾಗಲೇ ಇಲ್ಲ !

ಇನ್ನು ಹೆಲಿಪ್ಯಾಡಿನಿಂದ ಸೋನಿಯಾ ಅಮ್ಮಾವ್ರನ್ನು ಧೂಳಿನ ನೆಲದ ಮೇಲೆ ಕರೆದುಕೊಂಡು ಹೋಗಲಾದೀತೆ? ಅದಕ್ಕೇ ಟಾರು ರಸ್ತೆ ನಿರ್ಮಾಣವಾಯಿತು. ಇದಕ್ಕೆ ಮಾಡಿದ ಖರ್ಚು ಒಟ್ಟು 5 ಲಕ್ಷ ರುಪಾಯಿ. ಆ ಟಾರು ರಸ್ತೆ ಹಾದು ಹೋದದ್ದು ಅನೇಕ ರೈತರ ಹೊಲದಲ್ಲಿ. ಹೊಲದವರು ಬಾಯಿ ಬಡಿದುಕೊಳ್ಳಲು ಬಂದಾಗ, ತಲೆಗೆ 10 ಸಾವಿರ ರುಪಾಯಿ ಕೊಟ್ಟು ಸುಮ್ಮನಿರಿಸಲಾಯಿತು. ದೊಡ್ಡ ದೊಡ್ಡ ಯಂತ್ರಗಳು ಬಂದು ಕೆಲವೇ ದಿನಗಳಲ್ಲಿ ಏರುಪೇರಾಗಿದ್ದ ಹೊಲಗಳನ್ನು ಬಟಾ ಬಯಲನ್ನಾಗಿಸಿ, ಟಾರು ಹೊದಿಕೆ ಹೊದೆಸಿಬಿಟ್ಟವು.

ಈಗ ಸೋನಿಯಾ ಬಂದು ಧೂಳೆಬ್ಬಿಸಿ ಹೋದದ್ದಾಯಿತು. 10 ಸಾವಿರ ಇಸಿದುಕೊಂಡು ಸುಮ್ಮನಾಗಿದ್ದ ರೈತ, ಮಾಮೂಲಿ ಹಾರೆ ಗುದ್ದಲಿಯಿಂದ ಗಟ್ಟಿಯಾಗಿ ತನ್ನ ಹೊಲಕ್ಕಂಟಿರುವ ಟಾರನ್ನು ಕೀಳುವುದು ಸುಲಭವಾಗುತ್ತಿಲ್ಲ. ರೈತರ ತಲೆಸವರಿ ಸವರಿ ಮಾತಾಡುತ್ತಿರುವ ಸರ್ಕಾರ ಏನೆಲ್ಲ ಮಾಡುತ್ತಿದೆ ಎಂಬುದಕ್ಕೆ ಇದು ತಾಜಾ ನಿದರ್ಶನ.

ಇಷ್ಟಕ್ಕೂ, ಇಷ್ಟೊಂದು ಖರ್ಚು ಮಾಡಿದ್ದು ಯಾಕೆ? ಸ್ತ್ರೀ ಶಕ್ತಿ ವರ್ಧನೆಗಲ್ಲವೆ? ಸೋನಿಯಾ ಎಂಬ ಹಸ್ತಾಂಬೆಗೋಸ್ಕರ ಪೋಲು ಮಾಡಿದ ಹಣದಲ್ಲಿ ಎಷ್ಟು ಸ್ತ್ರೀ ಶಕ್ತಿ ಗುಂಪುಗಳ ಠೇವಣಿ ಬೆಳೆಸಬಹುದಾಗಿತ್ತು ಅಂತ ಸರ್ಕಾರ ಯೋಚಿಸಲೇ ಇಲ್ಲವೇ ? ಏನಪ್ಪಾ ಇದು... ಕೃಷ್ಣ ಕೃಷ್ಣ !

- ಶಂಕರಿ
ಮುಳುಕುಂಟೆ

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X