ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣದ ಗಂಟಲಿಗೆ ಕೀಟನಾಶಕ ಕುಡಿಸಲು ಯತ್ನಿಸಿದರು - ಎಸ್ಸೆಂ. ಕೃಷ್ಣ

By Staff
|
Google Oneindia Kannada News

ಹೆಣದ ಗಂಟಲಿಗೆ ಕೀಟನಾಶಕ ಕುಡಿಸಲು ಯತ್ನಿಸಿದರು - ಎಸ್ಸೆಂ. ಕೃಷ್ಣ
ರೈತರ ಆತ್ಮಹತ್ಯೆ ವಿಷಯದಲ್ಲಿ ಮಂಡಲ ಪಂಚಾಯಿತಿ ಸದಸ್ಯರ ನಿಗಾ

ಬೆಂಗಳೂರು : ಬರದ ಗರವನ್ನು ಎದುರಿಸಿ, ರೈತರ ಕಣ್ಣೀರೊರೆಸಲು ಸರ್ಕಾರ ಹೊಸೆದಿರುವ 880 ಕೋಟಿ ರುಪಾಯಿ ವಿಶೇಷ ಪ್ಯಾಕೇಜ್‌ ಹಾಗೂ ಸಾಲದ ಹೊರೆಯನ್ನು ತಗ್ಗಿಸುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಲು ಗ್ರಾಮ ಪಂಚಾಯಿತಿ ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಮಂಗಳವಾರ (ಸೆ.09) ಸುದ್ದಿಗಾರರ ಜೊತೆ ಅನೌಪಚಾರಿಕವಾಗಿ ಮಾತಾಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.

ಕೃಷ್ಣರ ಮಾತುಗಳ ಮುಖ್ಯಾಂಶಗಳು ಹೀಗಿವೆ-

  • ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷರಿಗೆ ಆಯಾ ಊರಿನ ಪ್ರತಿ ಕುಟುಂಬದ ಇತಿ- ವೃತ್ತಾಂತ ಗೊತ್ತಿರುತ್ತದೆ. ರೈತರು ಎಲ್ಲಿ ಸಾಲ ತೆಗೆದುಕೊಳ್ಳುತ್ತಾರೆ, ಯಾರ್ಯಾರು ಏನು ಬೆಳೆ ಬೆಳೆಯುತ್ತಾರೆ, ಬೆಳೆ ನಾಶವಾಗಿರುವುದು ನಿಜವೇ, ಅದರಿಂದಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಯೇ ಮೊದಲಾದ ವಿವರಗಳನ್ನು ಪಂಚಾಯಿತಿ ಸದಸ್ಯರು ಕಲೆಹಾಕಬೇಕು. ಆಗ ಆತ್ಮಹತ್ಯೆಗಳಿಗೆ ಖರೆ ಕಾರಣ ಗೊತ್ತಾಗುತ್ತದೆ.
  • ಹೀಗೆ ಮಾಡುವಾಗ ನಿಜವಾಗಿ ತೊಂದರೆ ಅನುಭವಿಸುತ್ತಿರುವ ರೈತರ ಸಾಲದ ಬಡ್ಡಿ ಮನ್ನಾ ಮಾಡುವುದು, ಹೊಸ ಸಾಲ ಕೊಡಿಸುವುದು ಸುಲಭವಾಗುತ್ತದೆ.
  • ಸರ್ಕಾರದ ರೈತಪರ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಪಂಚಾಯಿತಿ ಸದಸ್ಯರಿಗೆ ವಹಿಸಲಾಗುವುದು.
  • ಮಾಧ್ಯಮಗಳ ವೈಭವೀಕರಣದಿಂದ ಸಂಚಲನೆ ಹುಟ್ಟಿಸಿರುವ ರೈತರ ಆತ್ಮಹತ್ಯೆ ವಿಷಯದ ಅಸಲಿಯತ್ತೇ ಬೇರೆ ಇದೆ. ಗೃಹ ಇಲಾಖೆಯ ಅಂಕಿ- ಅಂಶಗಳು ಆತ್ಮಹತ್ಯೆಯೇನೂ ಹೆಚ್ಚಾಗಿಲ್ಲ ಅನ್ನುವುದನ್ನು ಸಮರ್ಥಿಸುತ್ತಿವೆ. 1996ರಿಂದ 2000ನೇ ಇಸವಿವರೆಗೆ 56,790 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಆತ್ಮಹತ್ಯೆ ಸಂಖ್ಯೆ ಅನೇಕ ವರ್ಷಗಳಿಂದ ಹೆಚ್ಚಾಗಿಯೇ ಇದೆ.
  • ಕಳೆದ 3 ವರ್ಷಗಳಿಂದ ರಾಜ್ಯದಲ್ಲಿ ಬರ ಇದೆ. ಹಾಗಿದ್ದೂ, ನಾವು ಸುಭಿಕ್ಷವಾಗಿದ್ದೇವೆ ಅಂತ ಸರ್ಕಾರ ಯಾವತ್ತೂ ಹೇಳಿಲ್ಲ. ಆದರೆ, ಬಂಪರ್‌ ಬೆಳೆ ಬಂದಿದ್ದಾಗಲೂ ನಮ್ಮಲ್ಲಿ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗೇ ಇತ್ತು. 2001ನೇ ಇಸವಿಯಲ್ಲಿ ರಾಜ್ಯ ಭಾರೀ ಬೆಳೆ ತೆಗೆದಿತ್ತು. ಅಂಥಾದರಲ್ಲೂ ಆ ವರ್ಷ 6,584 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2002ರಲ್ಲಿ 7,098 ಮಂದಿ ಆತ್ಮಹತ್ಯೆ ಮಾಡಿಕೊಂಡರು. ತೀರಾ ಬರಗಾಲ ಇರುವ ಈ ವರ್ಷ ಇಲ್ಲಿಯವರೆಗೆ 6,667 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಬರದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿವೆ ಅನ್ನುವುದು ಹುರುಳಿಲ್ಲದ ಮಾತು.
  • ಏಪ್ರಿಲ್‌ 1ರಿಂದ ಇಲ್ಲಿಯವರೆಗೆ 208 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1 ಲಕ್ಷ ರುಪಾಯಿ ಪರಿಹಾರ ಕೊಡಲು ಗೊತ್ತು ಮಾಡಿರುವ ಪರಿಹಾರ ಸಮಿತಿಯ ಮುಂದೆ 156 ಪ್ರಕರಣಗಳು ಬಂದಿವೆ. ಸಮಿತಿ ಪರಿಶೀಲಿಸಿದ ನಂತರ ಕೇವಲ ಆತ್ಮಹತ್ಯೆ ಮಾಡಿಕೊಂಡಿರುವ 43 ರೈತರು ಬೆಳೆ ಸಾಲದ ಹೊರೆಯಿಂದಲೇ ಹಾಗೆ ಮಾಡಿಕೊಂಡಿದ್ದಾರೆಂದು ದೃಢಪಟ್ಟಿದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡಿರುವ 20 ರೈತರ ಮನೆಗಳಿಗೆ ಈಗಾಗಲೇ ಪರಿಹಾರದ ಹಣ ಸೇರಿದೆ. ಸದ್ಯದಲ್ಲೇ ಇನ್ನೂ 23 ರೈತರ ಕುಟುಂಬಗಳಿಗೆ ಚೆಕ್‌ ತಲುಪಲಿವೆ.
  • ಮಂಡ್ಯ ಜಿಲ್ಲೆಯ ಒಂದು ಹಳ್ಳಿಯಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ. ಅವನ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಅಂತ ಹೋದೆ. ಸತ್ತಿದ್ದ ರೈತನ ಹೆಂಡತಿಯನ್ನು ಎಷ್ಟು ಸಾಲ ಮಾಡಿದ್ದ ಅಂತ ಕೇಳಿದೆ. ಯೋಚನೆ ಕೂಡ ಮಾಡದೆ 1 ಲಕ್ಷ ಅಂದಳು. ಅದು ತೀರಾ ಚಿಕ್ಕ ಹಳ್ಳಿ. ಒಂದು ಲಕ್ಷ ಸಾಲ ಹುಟ್ಟೋದಕ್ಕೆ ಸಾಧ್ಯವೇ ಇರಲಿಲ್ಲ. ಅದೂ ಅವರ ಬಳಿ ಇದ್ದದ್ದು ಕೇವಲ 1.5 ಎಕರೆ ಭೂಮಿ. ಸಾಲವನ್ನು ಪಕ್ಕದ ಮನೆಯವರು ಕೊಟ್ಟರು ಅಂತ ಸುಳ್ಳು ಹೇಳಿದಳು. ಇನ್ನಷ್ಟು ಪ್ರಶ್ನೆಗಳನ್ನು ಕೇಳಿದಾಗ ಹೆಂಗಸು ತಬ್ಬಿಬ್ಬಾದಳು.
  • ಇತ್ತೀಚೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಒಬ್ಬಾತ ವಿದ್ಯುದಾಘಾತದಿಂದ ಸತ್ತ. ಹಣ ಬರುತ್ತದೆ ಎಂಬ ಕಾರಣಕ್ಕೆ ಹೆಣದ ಗಂಟಲಿಗೆ ಕೀಟನಾಶಕ ಕುಡಿಸುವ ವಿಫಲ ಯತ್ನವನ್ನೂ ಅನೇಕರು ಮಾಡಿದರು.
  • ಬಡ್ಡಿ ಮನ್ನಾ ಮಾಡಿ ಹೊಸ ಸುಗ್ರೀವಾಜ್ಞೆ ಹೊರಡಿಸಿರುವುದರಿಂದ ರೈತರಿಗೆ ಸಾಲ ಸಿಗುತ್ತಿಲ್ಲ ಅಂತ ಹುಯಿಲೆಬ್ಬಿಸುತ್ತಿದ್ದಾರೆ. ಅದು ಶುದ್ಧ ಸುಳ್ಳು. ರೈತರಿಗೆ ಹೊರೆ ಇಳಿಸಿ, ಹೊಸ ಸಾಲ ಕೊಡಿಸಲು ಸರ್ಕಾರ ಸಕಲ ಯತ್ನಗಳನ್ನೂ ಮಾಡುತ್ತಿದೆ.
  • ಹಳ್ಳಿಗಳ ಹೆಂಗಸರ ಉದ್ಧಾರಕ್ಕಾಗಿ ‘ಸ್ತ್ರೀ ಶಕ್ತಿ’ ಎಂಬ ಯೋಜನೆ ಯಶಸ್ವಿಯಾಗಿದೆ. ಯಾವುದೇ ದುಸ್ಥಿತಿಯಲ್ಲೂ ಕನಿಷ್ಠ 2 ಸಾವಿರ ರುಪಾಯಿಯನ್ನು ಕುಟುಂಬದ ಒಬ್ಬ ಹೆಂಗಸು ಉಳಿತಾಯವನ್ನಾಗಿ ಇಟ್ಟುಕೊಂಡಿರುವುದು ಇದರಿಂದ ಸಾಧ್ಯವಾಗಿದೆ. ಅಗತ್ಯ ಇರುವವರಿಗೆ ಸ್ತ್ರೀ ಶಕ್ತಿ ಗುಂಪುಗಳು ಸಾಲವನ್ನೂ ಕೊಡುತ್ತಿವೆ.
  • ಒಣ ಭೂಮಿಯಲ್ಲಷ್ಟೇ ಅಲ್ಲದೆ, ನೀರಾವರಿ ಭೂಮಿ ಇರುವ ಜಾಗಗಳಲ್ಲೂ ಆತ್ಮಹತ್ಯೆ ಪ್ರಕರಣಗಳು ವರದಿ ಬರುತ್ತಿರುವುದು ಸೋಜಿಗದ ಸಂಗತಿಯಾಗಿದೆ.
ಬರ ಪರಿಹಾರಕ್ಕೆ 25 ಕೋಟಿ : ಬರ ಪೀಡಿತ ಪ್ರದೇಶಗಳ ಪರಿಹಾರ ಕಾಮಗಾರಿಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 25 ಕೋಟಿ ರುಪಾಯಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಬುಧವಾರ (ಸೆ.10) ಹೇಳಿದರು.

ಕೋಲಾರದ ಶ್ರೀನಿವಾಸಪುರ, ತುಮಕೂರಿನ ಚಿಕ್ಕನಾಯಕನಹಳ್ಳಿ ಹಾಗೂ ಮಂಡ್ಯದ ಕೃಷ್ಣರಾಜಪೇಟೆ ತಾಲ್ಲೂಕುಗಳು ಹೊಸದಾಗಿ ಬರ ಪೀಡಿತ ಪಟ್ಟಿಗೆ ಸೇರಿದ್ದು, ಬರ ಗ್ರಸ್ತ ತಾಲ್ಲೂಕುಗಳ ಸಂಖ್ಯೆ 130ಕ್ಕೆ ಏರಿದೆ. ಬರಪೀಡಿತ ತಾಲ್ಲೂಕುಗಳ ಪೈಕಿ 60 ತಾಲ್ಲೂಕುಗಳ ಸ್ಥಿತಿ ತೀರಾ ಅಧ್ವಾನವಾಗಿದ್ದು, ಕುಡಿಯುವ ನೀರು ಪೂರೈಸಲು ಪ್ರತಿ ತಾಲ್ಲೂಕಿಗೆ 20 ಲಕ್ಷ ರುಪಾಯಿ ಕೊಡಲಾಗುತ್ತದೆ ಎಂದರು.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X