ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್‌ವೇರ್‌ ಅಂಗಡಿಗಳಲ್ಲಿ ‘ಆರೋಗ್ಯ ಭಾಗ್ಯ’ದ ಗಿಳಿ ಪಾಠಗಳು !

By Staff
|
Google Oneindia Kannada News

ಸಾಫ್ಟ್‌ವೇರ್‌ ಅಂಗಡಿಗಳಲ್ಲಿ ‘ಆರೋಗ್ಯ ಭಾಗ್ಯ’ದ ಗಿಳಿ ಪಾಠಗಳು !
ಉಂಡು, ಮಲಗುವ ಪರಿಯನ್ನೂ ಹೇಳಿಕೊಡುವಂಥಾ ಕಾಲ ಬಂತಪ್ಪ...

*ದಟ್ಸ್‌ಕನ್ನಡ ಬ್ಯೂರೋ

ಗುಂಡಿಗೆ ಗುಡುಗುವುದು, ತಲೆ ಬೊಕ್ಕಾಗುವುದು, ನಿದ್ರೆ ಬರಲು ಮಾತ್ರೆಗೆ ಶರಣುಹೋಗುವುದು, ಕನಸಲ್ಲಿ ಮನಸಲ್ಲಿ ಕಂಪ್ಯೂಟರ್‌ ಪರದೆಯ ತಾಂತ್ರಿಕ ಪದಗಳ ಜಪ ಮಾಡುವುದು, ಮೂವತ್ತು ವಯಸ್ಸಿಗೇ ಅರುವತ್ತರ ಅಲ್ಲಾಡುವ ಮನಸ್ಸನ್ನು ಪಡೆಯುವುದು- ಇವೆಲ್ಲ ಇವತ್ತಿನ ಮಟ್ಟಿಗೆ ಕಾರ್ಪೊರೇಟ್‌ ಲೋಕದ ಬಳುವಳಿ.

ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುವ ಒಬ್ಬ ಸ್ನೇಹಿತ ಮೊನ್ನೆ ಹೇಳುತ್ತಿದ್ದ- ‘ಕಂಪನಿಗೆ ಸೇರಿದಾಗ ಸಖತ್‌ ಮಜಾ ಇತ್ತು ಮಗಾ... ಕುಂತಲ್ಲಿಗೇ ಸಾಫ್ಟ್‌ ಡ್ರಿಂಕ್ಸು, ಸ್ಯ್ನಾಕ್ಸು. ಕೆಲಸ ಮಾಡು, ಮನೆಗೆ ಹೋಗು. ಈಗ ಸಾಕಾಗಿ ಹೋಗಿದೆ. ಜನ್ಮ ಪೂರ್ತಿ ನೈಟ್‌ ಶಿಫ್ಟು ಅಂದರೆ ಯಾರಿಗೆ ತಾನೆ ಕೆಲಸ ಮಾಡೋಕಾಗುತ್ತೆ. ಸಾಫ್ಟ್‌ ಡ್ರಿಂಕ್ಸ್‌ ಅತಿಯಾಯಿತು ಅನ್ನಿಸುತ್ತೆ . ಎದೆ ಒತ್ತುತ್ತೆ. ನಿನ್ನೆ ಮೊನ್ನೆವರೆಗೂ ಜೋರು ಕ್ರಿಕೆಟ್‌ ಆಡಿಕೊಂಡಿದ್ದ ನನಗೆ ಗ್ಯಾಸ್ಟ್ರಿಕ್ಕು ! ಬೆಳಗ್ಗೆ 10 ರಿಂದ ಸಂಜೆ 5ರ ತನಕ ಮಾಡಿ, ನೆಮ್ಮದಿಯಾಗಿರುವಂಥ ಯಾವುದಾದರೂ ಕೆಲಸ ಬೇಕು ಅನ್ನಿಸಿಬಿಟ್ಟಿದೆ...’

ಇದುವರೆಗೆ ಕೆಲಸ, ಮೀಟಿಂಗು, ಕಾರ್ಯತಂತ್ರ ಕುರಿತಷ್ಟೇ ಚಿಂತಿಸುತ್ತಿದ್ದ ಸಾಫ್ಟ್‌ವೇರ್‌ ಕಂಪನಿಗಳು ಈಗ ತಮ್ಮ ತಮ್ಮ ನೌಕರರ ಆರೋಗ್ಯದ ಬಗೆಗೂ ತಲೆಕೆಡಿಸಿಕೊಳ್ಳಲು ಶುರುವಿಟ್ಟುಕೊಂಡಿರುವುದು ಸಂತೋಷದ ಸಂಗತಿ. ಗೆಳೆಯ ಆಡಿದ ಮಾತುಗಳು ಮೂರ್ನಾಲ್ಕು ವರ್ಷ ಸಮಯದ ನಿಬಂಧನೆ ಮೀರಿ ಕೆಲಸ ಮಾಡಿದ ಲಕ್ಷೋಪಲಕ್ಷ ಕಾರ್ಪೊರೇಟಿಗರ ಅಂತರಾಳದ್ದೂ ಆಗಿರುವುದೇ ಇದಕ್ಕೆ ಕಾರಣ. ಬ್ಯಾಂಕಿಂಗ್‌ ಸಲ್ಯುಷನ್ಸ್‌ ಹೊಸೆದು ಹೊಸೆದು ಐ- ಫ್ಲೆಕ್ಸ್‌ ಕಂಪನಿಯ 1600 ನೌಕರರು ಹೈರಾಣಾಗಿದ್ದಾರೆ. ಅವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯ ಸಮಸ್ತ ಜನಪ್ರಿಯ ವಾಹಿನಿ ಹಾಗೂ ಪುಷ್ಪಕ್‌ ಬಸ್ಸುಗಳನ್ನು ಬಾಡಿಗೆಗೆ ಪಡೆದುಕೊಂಡು ನೌಕರರನ್ನು ಮನೆಯಿಂದ ಕರೆದು ತಂದು, ಜೋಪಾನವಾಗಿ ಮನೆಗೆ ಮುಟ್ಟಿಸುವ ಇನ್ಫೋಸಿಸ್‌ ಕಂಪನಿಯ ಅನೇಕ ಕುಳಗಳ ಆರೋಗ್ಯದ ಪೆಂಡ್ಯುಲಮ್ಮೂ ಅಷ್ಟಕ್ಕಷ್ಟೆ.

ಈ ವಾರ ಇನ್ಫೋಸಿಸ್‌ ಹಾಗೂ ಐ- ಫ್ಲೆಕ್ಸ್‌ ಸಲ್ಯುಷನ್ಸ್‌ ಕಂಪನಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ‘ಆರೋಗ್ಯ ವಾರ’ ಆಚರಿಸಿದವು. ಕಳೆದ ಮಂಗಳವಾರ (ಸೆ. 02) ಐ- ಫ್ಲೆಕ್ಸ್‌ ನೌಕರರಿಗೆ ಸಲಾಡ್‌ ಮಾಡುವ ಕಾಂಪಿಟಿಷನ್ನು ನಡೆಯಿತು ! ಯುನೈಟೆಡ್‌ ಹೆಲ್ತ್‌ಕೇರ್‌ ಇಂಡಿಯಾ ಐ- ಪ್ಲೆಕ್ಸ್‌ ಆರೋಗ್ಯ ಸ್ಥಿತಿ ತಿಳಿಯಲು ನೌಕರರ ಕೈಲಿ ವಿವಿಧ ತಾಲೀಮು ಮಾಡಿಸಿತು. ಅನೇಕರ ಬೆನ್ನು ಸುಲಭವಾಗಿ ಬಗ್ಗಲಿಲ್ಲ.

ಇನ್ಫೋಸಿಸ್‌ನಲ್ಲಿ ‘ಹೆಲ್ತ್‌ ಅಸೆಸ್‌ಮೆಂಟ್‌ ಅಂಡ್‌ ಲೈಫ್‌ಸ್ಟೈಲ್‌ ಎನ್‌ರಿಚ್‌ಮೆಂಟ್‌’ (ಎಚ್‌ಎಎಲ್‌ಇ) ಎಂಬ ಹೊಸ ಯೋಜನೆಯೇ ಪ್ರಾರಂಭವಾಗಿದೆ. ನೌಕರರನ್ನು ಆಪಾದ ಮಸ್ತಕ ವೈದ್ಯರು ಪರೀಕ್ಷಿಸಿದರು. ಎಷ್ಟು ನಿದ್ರೆ ಮಾಡಬೇಕು, ಯಾವಾಗ ಎಷ್ಟು ತಿನ್ನಬೇಕು, ಸಂತೋಷವಾಗಿರಲು ಏನು ಮಾಡಬೇಕು, ಕಚೇರಿಯಲ್ಲಿ ಕೂರುವುದು ಹೇಗೆ, ಒತ್ತಡ ನಿಭಾಯಿಸುವುದು ಎಂತು, ಹೋಮಿಯೋಪತಿ ಎಷ್ಟು ಉಪಯುಕ್ತ, ಆಯುರ್ವೇದದ ತಿರುಳುಗಳು ಯಾವುವು, ಗರ್ಭವತಿಯರು ಏನು ಮಾಡಬೇಕು- ಹೀಗೆ ಆರೋಗ್ಯದ ಸಕಲ ಮಂತ್ರಗಳನ್ನೂ ಇನ್ಫೋಸಿಸ್‌ ನೌಕರರ ಮುಂದೆ ಒಂದು ವಾರ ಕಾಲ ಪಠಿಸಲಾಯಿತು.

ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಐದು ವರ್ಷ ಕಾಲ ಕೆಲಸ ಮಾಡಿರುವ ನೌಕರರೂ ಉಸ್ಸಪ್ಪ ಎನ್ನುತ್ತಿದ್ದಾರೆ. ಸದಾ ಏ.ಸಿ. ಹವೆ, ಕೊಬ್ಬಿನ ಆಹಾರದ ಸೇವೆ, ಚೇರಿಗಂಟಿಕೊಂಡೇ ಇರುವ ದೇಹ, ಮನೆಯಲ್ಲಿ ಟೀವಿ ಮುಂದೆ ತುಭ್ಯನ್ನಮಹ- ಜೀವನ ಶೈಲಿ ಹೀಗಾದರೆ ಹೇಗೆ ಸ್ವಾಮಿ ಅನ್ನುವುದು ವೈದ್ಯರ ಪ್ರಶ್ನೆ. ಬೆಳಗ್ಗೆ ಬೇಗ ಏಳಿ, ರಾತ್ರಿ ಬೇಗ ಮಲಗಿ. ಕುಡಿತ- ಪಾರ್ಟಿ ಹಿತ ಮಿತವಾಗಿರಲಿ. ನಿತ್ಯವೂ ಒಂದೆರಡು ಕಿಲೋಮೀಟರಾದರೂ ಜೋರಾಗಿ ನಡೆಯಿರಿ, ಕೊಬ್ಬಿನ ಆಹಾರದ ಮೋಹ ಬಿಡಿ ಎನ್ನುವುದು ಸಕಲ ಕಾರ್ಪೊರೇಟಿಗರಿಗೆ ವೈದ್ಯರ ಸಲಹೆ.

ಸಾಫ್ಟ್‌ವೇರ್‌ ಕಂಪನಿಗಳಿಗೆ ಇಷ್ಟು ವರ್ಷಗಳ ನಂತರವಾದರೂ ನೌಕರರ ಆರೋಗ್ಯದ ಬಗ್ಗೆ ಈ ಪಾಟಿ ಕಾಳಜಿ ಬಂದಿರುವುದು ಸಂತೋಷದ ವಿಷಯವೇ. ಏನಂತೀರಿ?

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X