ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷ ರೂಪಾಯಿ : ಪರಿಹಾರವೋ ಪ್ರಲೋಭನೆಯಾ?

By Staff
|
Google Oneindia Kannada News

ಲಕ್ಷ ರೂಪಾಯಿ : ಪರಿಹಾರವೋ ಪ್ರಲೋಭನೆಯಾ?

ಸಾಮಾಜಿಕ ಕಳಕಳಿವುಳ್ಳ ಕರ್ನಾಟಕ ಮಿತ್ರರಿಗೆ,

ರೈತನ ಜೀವನವೇ ಹಾಗೆ. ಅವನು ಸಾಲದಲ್ಲಿ ಹುಟ್ಟುತ್ತಾನೆ. ಸಾಲದಲ್ಲಿ ಬೆಳೆಯುತ್ತಾನೆ. ಸಾಲದಲ್ಲಿ ಸಾಯುತ್ತಾನೆ. ಬೇಸಾಯವನ್ನು ನಂಬಿದ ಭಾರತದ ಕೋಟ್ಯಂತರ ರೈತರ ಬದುಕು ಪರಂಪಾರಗತವಾಗಿ ಹೀಗೆ ನಡೆದು ಬಂದಿದೆ. ದೇಶದ ಅತಿದೊಡ್ಡದಾದ ಈ ಸಮೂಹದ ಹಿತ ಕಾಪಾಡುವವರು ಇಲ್ಲ. ಅಸೆಂಬ್ಲಿ ಮತ್ತು ಪಾರ್ಲಿಮೆಂಟಿನಲ್ಲಿ ಜನಪ್ರತಿನಿಧಿಗಳು ರೈತರ ಪರವಾಗಿ ಯಾವಾಗಲೂ ಮಾತನಾಡುತ್ತಾರೆ. ಅವರು ಕುರ್ಚಿಯಿಂದ ಇಳಿದು ರೈತರ ಬಳಿಗೆ ತೆರಳುವುದು ಚುನಾವಣೆ ಬಂದಾಗ ಮಾತ್ರ. ಕೆಲವೊಮ್ಮೆ ಸರಕಾರದ ನೀತಿ ನೀಯಮಗಳು ರೈತನ ಪರವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ತಂತ್ರಜ್ಞಾನ ಬೆಳೆದಿದೆ. ಅಲ್ಲಲ್ಲಿ ಸುಶಿಕ್ಷಿತ ರೈತರು ಕಂಡುಬಂದರೂ ಅವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ.

Rupee bell and the death knellಕರ್ನಾಟಕದಲ್ಲಿ ರೈತರ ಆತ್ಮಹತ್ಯಾ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವುದನ್ನು ಓದಿ ಕಸಿವಿಸಿ ಆಗಿದೆ. ನಮ್ಮ ರಾಜ್ಯದಲ್ಲಿ ನೂರಕ್ಕೆ ಎಪ್ಪತ್ತೈದು ಜನ ರೈತರು. ಈ ಸಮಸ್ಯೆ ಬಹಳ ಗಂಭೀರವಾದ ಸಮಸ್ಯೆ. ಇದನ್ನು ನಾವು ಬೆಳೆಯಲು ಬಿಡಬಾರದು.

ಈಗ ಕೃಷ್ಣ ಅವರ ಸರಕಾರ ಅನುಕಂಪದಿಂದ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವನ್ನು ನೊಂದ ಸಂಸಾರಗಳಿಗೆ ಕೊಡುತ್ತಾ ಇದೆ. ಇದು ಪ್ರಶಂಸನೀಯವಾದರೂ, ಹಣಕಾಸಿನ ಪರಿಹಾರ ಈ ಸಮಸ್ಯೆಗೆ ಪೂರಕಗುತ್ತಿದೆಯೋ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

ಕರ್ನಾಟಕದ ರೈತ ಸದಾ ಸಾಲವನ್ನೇ ಕಾಣುತ್ತಿರುವ ಜೀವ. ಬಡವನಾದರೂ ಸತ್ಯಸಂಧ. ಪ್ರಾಣ ಹೋದರೂ ಇನ್ನೊಬ್ಬರ ‘ಗಂಟು ಮುಳುಗಿಸುವ’ ಜಾಯಮಾನದವನಲ್ಲ. ಬರಗಾಲದ ಬವಣೆಯ ನಡುವೆ ಆತನು ಕಷ್ಟಪಟ್ಟು ಬೆಳೆದ ಫಸಲುಗಳಿಗೆ ಯೋಗ್ಯ ಬೆಲೆ ಸಿಗುತ್ತಾ ಇಲ್ಲ. ಸಾಲ ನೀಡಿರುವ ಬ್ಯಾಂಕುಗಳು ರೈತನ ಕಷ್ಟ ಪರಂಪರೆಗಳನ್ನು ಅರಿತು ‘ವಸೂಲಾತಿ ಕ್ರಮ’ ನಡೆಸುವ ಪರಿಪಾಠ ಇಟ್ಟುಕೊಂಡಂತೆ ಕಾಣಿಸುತ್ತಿಲ್ಲ. ರೈತನ ಬವಣೆಯನ್ನು ಸರಕಾರವೂ ಆತನು ‘ಜೀವಂತ ಇರುವ ತನಕ’ ಪರಿಹರಿಸಲು ಪ್ರಯತ್ನಿಸುತ್ತಿಲ್ಲ. ರೈತನಿಗೆ ಸಾಲಕೊಡುವ ಇತರೇ ಸಂಸ್ಥೆಗಳು ಅಥವಾ ವ್ಯಕ್ತಿಗಳಿಂದ ಹೆಚ್ಚಿನ ರಿಯಾಯತಿ ಆತನಿಗೆ ಒದಗಿ ಬರುವಂತೆಯೂ ಕಾಣುತ್ತಿಲ್ಲ. ಇದೆಲ್ಲ ರೈತರಿಗೆ ಗೊತ್ತಿದೆ. ಆದರೆ ಎಚ್ಚೆತ್ತುಕೊಳ್ಳಲಾಗದಷ್ಟು ದುರ್ಬಲರು ಅವರು. ವಿದ್ಯೆ ಇಲ್ಲ. ಬುದ್ಧಿ ಇಲ್ಲ. ಆದರೆ ಪ್ರಾಮಾಣಿಕರು.

ಈಗ ಸರಕಾರ ಮಾಡುತ್ತಿರುವ ಕೆಲಸವೆಂದರೆ ಆತ್ಮಹತ್ಯೆ ಮಾಡಿಕೊಂಡ ರೈತನ ಸಂಸಾರಕ್ಕೆ ಒಂದು ಲಕ್ಷ ರೂಪಾಯಿಗಳ ಪರಿಹಾರದ ಬಟವಾಡೆ. ದುರದೃಷ್ಟವಶಾತ್‌ ಇದು ಮರಣೋತ್ತರ ಪರಿಹಾರ. ಇದು ಆತ್ಮ ಹತ್ಯೆಗೆ ಹೊರಟ ರೈತನ ಸಮಸ್ಯೆಗೆ ಪರಿಹಾರವಂತೂ ಅಲ್ಲ. ನೂರಾರು ಎಕರೆ ತೋಟ, ಜಮೀನು ಇರುವ ರೈತರೂ ಸಾಲದಲ್ಲೇ ಇರುತ್ತಾರೆ.

ಸಾಮಾನ್ಯ ರೈತನಿಗೆ ‘ಒಂದು ಲಕ್ಷ ರೂಪಾಯಿ’ ಎಂಬುದು ಬಹಳ ದೊಡ್ಡ ಮೊತ್ತವೇ ಆಗಿದೆ. ಹತ್ತು ರೂಪಾಯಿ ಉಳಿಸಲಾಗದ ಈ ದಿನಗಳಲ್ಲಿ ನಿರರ್ಥಕವಾದ ನಿರಾಶೆಯ ಜೀವನವನ್ನು ಸಾಲದ ಶೂಲಗಳಿಂದ ಜರ್ಝರಿತನಾದ ರೈತನು ಕೊನೆಗೊಳಿಸಿದರೆ ಆತನ ಹೆಂಡತಿ ಮಕ್ಕಳ ಕೈಗೆ ‘ಒಂದು ಲಕ್ಷದ ಗಂಟು’ ಸಿಗುತ್ತದೆಂಬ ಮರೀಚಿಕೆ ‘ಆತನನ್ನು ಕಾಡುತ್ತಿದೆಯೇ?’ ಎಂಬ ಪ್ರಶ್ನೆ ಪ್ರತಿಯಾಬ್ಬ ಬುದ್ಧಿ ಜೀವಿಯಲ್ಲೂ ಈಗ ಉದ್ಭವಿಸಿದೆ.

ಮೊದ ಮೊದಲು ಈ ರೈತ ಆತ್ಮಹತ್ಯೆಯ ಪ್ರಕರಣಗಳು ಅಲ್ಲೋ ಇಲ್ಲೋ ಒಂದು ಕಂಡು ಬರುತ್ತಿದ್ದುವು. ನಮ್ಮ ಮಾನ್ಯ ಕರ್ನಾಟಕ ಸರಕಾರ ಈ ಪರಿಹಾರ ಯೋಜನೆ ಪ್ರಕಟಿಸಿದ ನಂತರ ಈ ರೈತ ಅತ್ಮಹತ್ಯಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಾ ಇವೆ. ಈ ಆತ್ಮಹತ್ಯೆಯ ಪ್ರಕರಣಗಳು ಒಂದು ‘ಸಮೂಹ ಸನ್ನಿ’ಯಾಗಿ ಬೆಳೆಯಲು ಜನಸಮೂಹ ಮತ್ತು ಸರಕಾರ ಖಂಡಿತಾ ಬಿಡಬಾರದು.

ಸಾಯಲು ಹೊರಟಾತನಿಗೆ ತನ್ನ ಆತ್ಮಹತ್ಯೆಯಿಂದ ತನ್ನ ಸಂಸಾರದ ಆರ್ಥಿಕ ಚಿಂತೆ ಬಗೆಹರಿಯಬಹುದೆಂಬ ಆಶೆಯ ‘ಆತ್ಮಹತ್ಯಾ ಪ್ರಚೋದನಾ ಭಾವನೆ’ ಬೆಳೆದು ಈ ಸಮಸ್ಯೆ ಹೆಚ್ಚುತ್ತಿದೆಯೆ?’ ಎಂಬ ಪ್ರಶ್ನೆಯ ಬಗ್ಗೆ ನಾವೆಲ್ಲರೂ ಚಿಂತಿಸಬೇಕಾಗಿದೆ. ಅದಲ್ಲದೆ, ಪರಿಹಾರವಾಗಿ ಬಂದ ‘ಒಂದು ಲಕ್ಷ’ ರೂಪಾಯಿಗಳ ಮೊತ್ತ ಮುಂದಕ್ಕೆ ಸದುಪಯೋಗವಾಗುವುದೆ?

ದುಖಃ ತಪ್ತರಾದ ಮತ್ತು ಅಮಾಯಕರಾದ ( ಅಥವಾ ಅಪ್ರಬುದ್ಧ ವಯಸ್ಸಿನ ) ವಾರಸುದಾರರ ಕೈಗೆ ಸಿಕ್ಕುವ ಈ ಮೊತ್ತವು ದುರುಪಯೋಗ ಆಗಬಾರದಷ್ಟೇ? ಅಥವಾ ಆತ್ಮ ಹತ್ಯೆ ಮಾಡಿಕೊಂಡವರ ಉತ್ತರ ಕ್ರಿಯಾದಿಗಳಿಗೆ ಈ ಪರಿಹಾರದ ಮೊತ್ತವು ಪೋಲಾಗಬಾರದಲ್ಲವೆ? ಅಮಾಯಕರಾದ ಸಂಸಾರದ ಮಂದಿಯ ಕೈಯಿಂದ ಈ ಹಣವು ‘ನಯವಂಚಕರ ಕೈಗೆ’ ಹೋಗಲೂ ಬಾರದು.

ಇದಕ್ಕೆಲ್ಲ ಪರಿಹಾರವೇನು?

ದಯವಿಟ್ಟು ಯೋಚಿಸಿರಿ. ತಮ್ಮ ಸಲಹೆಗಳನ್ನು ಸರಕಾರದ ([email protected]) ಹಾಗೂ ಜನ ಸಾಮಾನ್ಯರ ([email protected]) ಮುಂದೆ ಇಡಲು ಪ್ರಯತ್ನಿಸಿರಿ.

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X