• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಸುತ್ತಿರುವ ಬಹುರೂಪಿಗಳ ಬದುಕಿನ ಬಣ್ಣಗಳು

By Staff
|

ಮಾಸುತ್ತಿರುವ ಬಹುರೂಪಿಗಳ ಬದುಕಿನ ಬಣ್ಣಗಳು

ಬರದ ಗರದಿಂದ ರೈತರು- ಕೂಲಿ ಕಾರ್ಮಿಕರಷ್ಟೇ ಕಂಗೆಟ್ಟಿಲ್ಲ ; ಬಣ್ಣ ಹಚ್ಚಿಕೊಂಡು ಪುರಾಣದ ಪಾತ್ರಗಳನ್ನು ಬಯಲಿನಲ್ಲಿ ಜೀವಗೊಳಿಸುವ ಅಲೆಮಾರಿ ಕಲಾವಿದರೂ ಕಂಗೆಟ್ಟಿದ್ದಾರೆ. ಬದುಕು ಕತ್ತಿಯ ಮೇಲಿನ ನಡಿಗೆಯಾಗಿದೆ !

*ರಾಜು ಮಹತಿ

ಇವರು ಫೂಟ್‌ಪಾತ್‌ ಮೇಲೆ ಜೀವನ ನಡೆಸುವವರು!

ಅಲ್ಲೊಂದು ಡೇರೆ. ಬೀದಿ ನಾಟಕಗಳನ್ನು ಆಡಿ ಜೀವನ ನಡೆಸುವುದಷ್ಟೇ ಇವರಿಗೆ ಗೊತ್ತಿರುವ ಕಸುಬು. ಈ ಕಲೆ ತಲೆಮಾರುಗಳ ಹಿಂದಿನಿಂದ ಇವರ ಪಾಲಿಗೆ ಬಂದ ಪಿತ್ರಾರ್ಜಿತ ಆಸ್ತಿ. ಹಿರೀಕರು ಯಾವುದೇ ದುಡ್ಡು ಕಾಸು ಅಥವಾ ಭೂಮಿ ಬಿಟ್ಟುಹೋಗಲಿಲ್ಲ ; ಕೈಗೆ ಕಲೆಯನ್ನು ಕೊಟ್ಟು , ಕನಸುಗಳನ್ನು ಬಿಟ್ಟುಹೋದರು.

ನಾಲ್ಕೈದು ವರ್ಷಗಳ ಹಿಂದಷ್ಟೇ ಫೂಟ್‌ಪಾತ್‌ ಮೇಲೆ, ಮತ್ತೆಲ್ಲೋ ಜನ ಸೇರುವ ಬಯಲು-ಸರ್ಕಲ್‌ನಲ್ಲಿ ನಡೆಸುವ ಈ ನಾಟಕಗಳು ಒಂದಿಷ್ಟು ಕಾಸು ತಂದುಕೊಡುತ್ತಿದ್ದವು. ಆದರೆ ಈಗೀಗ ವ್ಯಯಿಸಿದ ಹಣವೂ ನಾಟಕ ಪ್ರದರ್ಶನದಿಂದ ಗಿಟ್ಟುವುದಿಲ್ಲ ಎಂದು ಈ ನಾಟಕಕಾರರು ಅಳಲು ತೋಡಿಕೊಳ್ಳುತ್ತಾರೆ.

ಬಯಲು ನಾಟಕದ ಕಂಪನಿಯ ಹಿರಿ ಅಜ್ಜನನ್ನು ಲೋಕಾಭಿರಾಮವಾಗಿ ಮಾತನಾಡಿಸಿ ನೋಡಿ-

ಜನರ ನಿರಾಸಕ್ತಿಯ ನಡುವೆ ನೀರಿನ ಬರ ಬೇರೆ. ರಸ್ತೆ ಬದಿಯ ಬೋರ್‌ವೆಲ್‌ಗಳಿಂದಲೋ, ಪೈಪುಗಳಿಂದಲೋ ನೀರು ತಂದು ಜೀವನ ನಡೆಸುತ್ತಿದ್ದ ನಮಗೀಗ ಯಾವ ಬೋರ್‌ವೆಲ್ಲೂ ನೀರು ಕೊಡುತ್ತಿಲ್ಲ. ಪೈಪುಗಳಲ್ಲಿ ಬರುವ ನೀರು ಸುತ್ತ ಮುತ್ತಲಿನ ಮಂದಿಗೆ ಕುಡಿಯುವುದಕ್ಕೇ ಸಾಕಾಗುವುದಿಲ್ಲ ಎಂದ ಮೇಲೆ ಡೇರೆ ಮಂದಿಗೆ ನೀರು ಸಿಕ್ಕೀತೇ ? ಅಜ್ಜನ ಪ್ರಶ್ನೆಗೆ ಏನೆಂದು ಉತ್ತರಿಸುವುದು.

ಈ ಅಲೆಮಾರಿಗಳದು ನ್ಯಾಯಪುರ ಎಂಬ ಹಳ್ಳಿ. ನಿಂತಲ್ಲಿ ನಿಲ್ಲುವ ಪ್ರವೃತ್ತಿಯವರಲ್ಲ ಇವರು. ಇತ್ತೀಚೆಗೆ ಬೆಂಗಳೂರಿನಂತಹ ಪೇಟೆಗಳಲ್ಲಿ ಬದುಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೀದಿಗಳಲ್ಲಿ ಭೀಮಾಂಜನೇಯ, ರಾಮಾಯಣ, ಮಹಾಭಾರತ ಕಥೆಗಳನ್ನಾಧರಿಸಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಆದರೆ ನಗರದ ಸೊಫೆಸ್ಟಿಕೇಟೆಡ್‌ ಮಂದಿ ಬೀದಿ ನಾಟಕ ನೋಡಲೊಲ್ಲರು. ನೋಡಿದ ಒಂದಿಷ್ಟು ಮಂದಿ ಕಾಸು ಕೊಡಲೊಲ್ಲರು. ಸ್ವ ಇಚ್ಛೆಯಿಂದ ಕೊಟ್ಟ ದುಡ್ಡನ್ನು ತೆಗೆದುಕೊಳ್ಳುವ ಈ ನಾಟಕದ ಮಂದಿ ಬಾಯಿ ಬಿಟ್ಟು ದುಡ್ಡು ಕೇಳುವವರಲ್ಲ.

ಮುಂದೇನು ಮಾಡುತ್ತೀರಿ ಎಂದು ಕೇಳಿದರೆ ಅವರು ಉತ್ಸಾಹದಿಂದ ಉತ್ತರಿಸುತ್ತಾರೆ - ಬೆಂಗಳೂರಿನಲ್ಲಿ ಏನೂ ಗಿಟ್ಟದಿದ್ದರೆ ಏನಾಯ್ತು. ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನಗಳಿಗೆ ಹೋಗುತ್ತೇವೆ! ಅಲ್ಲಿ ಬದುಕನ್ನು ಅರಸುತ್ತೇವೆ.

ಈ ಬಯಲು ಕಲಾವಿದ ಬಹುರೂಪಿಗಳ ಬಳಿ ಬೀದಿ ನಾಟಕಕ್ಕಾಗಿ ವೇದಿಕೆಯಿಲ್ಲ. ಬೆಳಕಿನ ವ್ಯವಸ್ಥೆ ಯಿಲ್ಲ. ಒಂದೆರಡು ತಬಲಾ ಮೃದಂಗದಂತಹ ವಾದ್ಯಗಳು, ಇನ್ನೊಂದಿಷ್ಟು ನಮೂನೆಯ ದಿರಿಸುಗಳೇ ಇವರಾಡುವ ನಾಟಕಗಳ ಬಂಡವಾಳ. ಒಂದು ಕಡೆ ಬೀದಿ ನಾಟಕ ಪ್ರದರ್ಶಸಿದ ನಂತರ ಅವರು ಡೇರೆ ಸಮೇತ ಬೇರೆ ಊರಿಗೆ ಹೋಗುತ್ತಾರೆ. ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ !

ಬೀದಿ ನಾಟಕ ಆಡುವ ನಮ್ಮನ್ನು ಸರಕಾರ ಯಾಕೆ ಗುರುತಿಸುತ್ತಿಲ್ಲ ಎಂಬುದು ಕೆಲಮಟ್ಟಿಗೆ ಲೋಕಜ್ಞಾನವುಳ್ಳ ಕಲಾವಿದರ ದೂರು. ತುತ್ತಿಗಾಗಿ ಊರೂರು ಅಲೆದಾಡುವ ನಮಗೇಕೆ ಸರಕಾರದ ವತಿಯಿಂದ ಯಾವ ಸೌಲಭ್ಯವೂ ಇಲ್ಲ ? ಹಿಂದಿನ ಕಾಲದಲ್ಲಿ ಸರಕಾರದ ಸಹಾಯಕ್ಕಾಗಿ ಕಾಯುವ ಅಗತ್ಯವಿರಲಿಲ್ಲ. ಅಕ್ಕಪಕ್ಕದ ಜನ ನೀಡುವ ದಾನ ಧರ್ಮದಲ್ಲೇ ನಮ್ಮ ಜೀವನ ನಡೆಯುತ್ತಿತ್ತು. ಆದರೆ ಈಗ ಜನ ಧರ್ಮ ನೀಡುವುದಿಲ್ಲ. ಭಿಕ್ಷೆ ಹಾಕುವುದಿಲ್ಲ. ಬಾಗಿಲೇ ತೆರೆಯುವುದಿಲ್ಲ. ಮಡಿ ಬಟ್ಟೆಯ ಜನ ನಾಟಕಗಳತ್ತ ತಿರುಗಿಯೂ ನೋಡುವುದಿಲ್ಲ. ನೋಡಿದವರು ಪರ್ಸು ಬಿಚ್ಚುವುದೇ ಇಲ್ಲ. ಕಾಲ ಕೆಟ್ಟಿದೆ. ಬರಗಾಲ ಬೇರೆ ಬಂದಿದೆ ಎಂದು ಬೇಜಾರು ಮಾಡಿಕೊಳ್ಳುತ್ತಾರೆ ಬೀದಿ ನಾಟಕ ತಂಡವೊಂದರ ನಾಯಕ ಸಿದ್ಧಪ್ಪ.

ಹೌದು ಕಾಲ ಕೆಟ್ಟಿದೆ. ಹಾಗಂತ ಮೂರ್ಖರ ಪೆಟ್ಟಿಗೆಯ ಮುಂದೆ ಕೂತ ದಿನ ಕಳೆವ ಗೃಹಿಣಿ- ಸಿಟಿ ಬಸ್ಸುಗಳಲ್ಲಿ ಜಾಗತಿಕ ವಿದ್ಯಮಾನಗಳ ಚರ್ಚಿಸುವ ಸಂಸಾರಸ್ಥ ವಟಗುಟ್ಟುತ್ತಿದ್ದಾರೆ.

ಬಹುರೂಪಿಗಳ ಬದುಕಿನ ಭರವಸೆಗಳು ಮಾತ್ರ ದಿನದಿಂದ ಕರಗುತ್ತಿವೆ. ಬಣ್ಣದ ಬದುಕಿನ ಬಣ್ಣಗಳು ಕಳೆಗುಂದುತ್ತಿವೆ. ಆದರೆ, ಈ ಕಲಾವಿದರು ಮಾತ್ರ ಈ ಊರಲ್ಲದಿದ್ದರೇನು, ಇನ್ನೊಂದೂರು ಅನ್ನುವ ಭರವಸೆ ಕಳಕೊಂಡಿಲ್ಲ . ಜೀವನೋತ್ಸಾಹವೆಂದರೆ ಇದಲ್ಲವೇ ?

ಈ ಬಾರಿಯಾದರೂ ಮಳೆಬೆಳೆ ಚೆನ್ನಾಗಿ ಆದರೆ, ಕನ್ನಡಿಗರು ಕಲೆ ಸಾಹಿತ್ಯ ಎಂದು ನೆನಪಿಸಿಕೊಂಡಾರು.

ಮುಖಪುಟ / ವಾಟ್ಸ್‌ ಹಾಟ್‌

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more