ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಿಗರ ಶ್ವಾಸಕೋಶಕ್ಕೆ ಅಕ್ಕಿಗಿರಣಿ ಇಂಗಾಲದ ಕಪ್ಪು

By Staff
|
Google Oneindia Kannada News

ಚಿಕ್ಕಮಗಳೂರಿಗರ ಶ್ವಾಸಕೋಶಕ್ಕೆ ಅಕ್ಕಿಗಿರಣಿ ಇಂಗಾಲದ ಕಪ್ಪು
ನಾಲ್ಕು ದಶಕಗಳಿಂದ ಪರಿಸರಕ್ಕೆ ಧೂಳಿನ ಹೊದಿಕೆ, ಉಸಿರುಗಟ್ಟಿದ ಜನತೆ

*ದಟ್ಸ್‌ಕನ್ನಡ ಬ್ಯೂರೊ

ಚಿಕ್ಕಮಗಳೂರು ಜಿಲ್ಲೆಯ ಆಸ್ಪತ್ರೆಯ ವಾರ್ಡ್‌ಗಳ ತುಂಬ ಶ್ವಾಸಕೋಶದ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು. ಇನ್ನು ಕೆಲವರು ಶ್ವಾಸ ಕೋಶದ ಕಾಯಿಲೆ ಉಲ್ಬಣಿಸಿ ಅಸ್ತಮಾ ತೊಂದರೆಯನ್ನು ಎದುರಿಸುತ್ತಿರುವವರು. ಪಕ್ಕದಲ್ಲಿರುವ ಅಕ್ಕಿ ಗಿರಣಿಯಿಂದ ಹೊರಬೀಳುವ ಧೂಳು ಜಿಲ್ಲೆಯ ನಿವಾಸಿಗಳಿಗೆ ಶ್ವಾಸ ಕೋಶದ ವಿವಿಧ ನಮೂನೆಗಳ ಕಾಯಿಲೆಗಳನ್ನು ತಂದೊಡ್ಡುತ್ತಿದೆ.

ವಾಯು ಮಾಲಿನ್ಯದಿಂದಾಗಿ, ಉತ್ತಮ ಪ್ರಾಣ ವಾಯು ಇಲ್ಲದೇ ಇರುವುದರಿಂದ ಮಕ್ಕಳಿಗೆ ಬರುವ ಮಾಮೂಲಿ ಕಾಯಿಲೆಗಳು ಕೂಡಾ ಬಡಪೆಟ್ಟಿಗೆ ಗುಣವಾಗುತ್ತಿಲ್ಲ . ಮಕ್ಕಳಿಗೆ ಒಂದು ಬಾರಿ ಅಸ್ತಮಾ ಅಂಟಿಕೊಂಡಿತೆಂದರೆ ಮತ್ತೆ ಜೀವನ ಪರ್ಯಂತ ಅಸ್ತಮಾ ಸಂಗಾತಿಯಾಗಿರುತ್ತದೆ.

ಇಲ್ಲಿನ ಬಂಡೀ ಮಠ ರಸ್ತೆಯ ಲೇ ಔಟ್‌ನಲ್ಲಿ ಉಸಿರಿಗಾಗಿ ಜನ ಪರದಾಡುತ್ತಿದ್ದಾರೆ. ಅಕ್ಕಿ ಪಾಲಿಶ್‌ ಮಾಡಿದ ಧೂಳು, ಹೊಗೆ ಜನರಿಗೆ ನೆಮ್ಮದಿಯಾಗಿ ಉಸಿರಾಡಲು ಬಿಡುತ್ತಿಲ್ಲ . ಕಳೆದ 40 ವರ್ಷಗಳಿಂದ ಈ ಅಕ್ಕಿ ಗಿರಣಿಗಳು ಪಕ್ಕದ ಹಳ್ಳಿಗಳಿಗೆ ಧೂಳು ಹರಡುತ್ತಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಗಿರಣಿಗಳ ಆಸುಪಾಸಿನಲ್ಲಿ ಜನವಸತಿಯೂ ನಿಬಿಡವಾಗುತ್ತಿರುವುದರಿಂದ ಧೂಳಿನಿಂದಾಗುವ ಹಾನಿಯೂ ಹೆಚ್ಚಾಗುತ್ತಿದೆ.

ಈ ಸಮಾಜ ಕಲ್ಯಾಣ ಇಲಾಖೆ ಸಗೀರ್‌ ಅಹ್ಮದ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಮೋಟಮ್ಮ ಅವರಿಗೆ ಮನವಿಗಳು, ಅರ್ಜಿಗಳು, ದೂರುಗಳು ಸಂದಿವೆ. ಆದರೆ ಯಥಾ ಪ್ರಕಾರ ಯಾವುದೇ ಪ್ರಯೋಜನವಾಗಿಲ್ಲ. ಅಕ್ಕಿ ಗಿರಣಿಯ ಮಾಲಿಕರು ಗಿರಣಿಯನ್ನು ಜಿಲ್ಲೆಯ ಹೊರವಲಯಕ್ಕೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಡೇರಿಲ್ಲ.

ನಗರ ಮುನ್ಸಿಪಲ್‌ ಕೌನ್ಸಿಲ್‌ ಆಯುಕ್ತರು ಕೂಡ ಅಕ್ಕಿ ಗಿರಣಿ ಮಾಲಿಕರ ಪಕ್ಷ ವಹಿಸಿ ಮಾತನಾಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಅಲ್ಲದೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಅಕ್ಕಿ ಗಿರಣಿಗಳ ಪರವಾನಿಗೆ ರದ್ದುಮಾಡಬೇಕು

ಎಂದು ಈಗಾಗಲೇ ಜಿಲ್ಲಾ ಆಯುಕ್ತರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದು ಗ್ರಾಮಸ್ಥರ ಮುಂದಿನ ಯೋಜನೆ. ಜಿಲ್ಲಾ ಆಯುಕ್ತರು ಚಿಕ್ಕಮಗಳೂರು ಜಿಲ್ಲೆಯ ನಿವಾಸಿಗಳ ಮನವಿ ಆಲಿಸುತ್ತಾರೆಯೇ ?

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X