ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘50 ವರ್ಷದಲ್ಲಿ ಭತ್ತದ ಮೇಲೆ ರಾಗಿ ದಿಗ್ವಿಜಯ’

By Staff
|
Google Oneindia Kannada News

ಬೆಂಗಳೂರು : ಮುಂದಿನ ಐವತ್ತು ವರ್ಷಗಳಲ್ಲಿ ನೀರಿನ ತೀವ್ರ ಕೊರತೆಯಿಂದಾಗಿ ಭತ್ತ ಕಣ್ಮರೆಯಾಗಲಿದ್ದು , ರಾಗಿಯಂಥ ಕಿರುಧಾನ್ಯಗಳು ಅನಿವಾರ್ಯವೆನಿಸಲಿವೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಎಂ.ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ರಾಗಿಯು ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಕೆಲವು ಮಂದಿ ರಾಗಿಯನ್ನು ಬಳಸಲು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಳಿ ರಾಗಿ ತಳಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಡಾ.ಕೃಷ್ಣಪ್ಪ ಹೇಳಿದರು. ಅವರು ಪಶು ವೈದ್ಯ ಕಾಲೇಜಿನ ಕನ್ನಡ ಸಭಾಂಗಣದಲ್ಲಿ ಗುರುವಾರ ನಡೆದ ‘ಅಖಿಲ ಭಾರತ ವಾರ್ಷಿಕ ಕಿರುಧಾನ್ಯ’ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಡಾ.ಎ.ಎಂ.ಕೃಷ್ಣಪ್ಪ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ರಾಗಿಯ ಕುರಿತಾದ ಕೆಲವು ಗಮನಾರ್ಹ ವಿಷಯಗಳನ್ನು ಹೇಳಿದರು. ಅವುಗಳನ್ನು ಪಟ್ಟಿ ಮಾಡುವುದಾದರೆ-

  • ರಾಗಿ ಅತ್ಯುತ್ತಮ ಆಹಾರ ಧಾನ್ಯ. ಮಧುಮೇಹಿಗಳಿಗಂತೂ ರಾಗಿ ಅತ್ಯುತ್ತಮ ಪೌಷ್ಠಿಕ ಆಹಾರ. ರಾಗಿಯಲ್ಲಿನ ಪೌಷ್ಠಿಕಾಂಶಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು.
  • ರಾಗಿ ಪರಿಸರ ಸ್ನೇಹಿ ಬೆಳೆ. ಅದಕ್ಕೆ ಹೆಚ್ಚಿನ ನೀರು, ಗೊಬ್ಬರ, ಕೀಟನಾಶಕದ ಅಗತ್ಯವಿಲ್ಲ .
  • ರಾಗಿಯ ಹುಲ್ಲಿನಲ್ಲೂ ಅಧಿಕ ಪೋಷಕಾಂಶಗಳಿವೆ. ಒಂದು ಟನ್‌ ರಾಗಿ ಹುಲ್ಲಿಗೆ 8 ಸಾವಿರ ರುಪಾಯಿ ಬೆಲೆಯಿದ್ದರೆ, ಭತ್ತದ ಹುಲ್ಲಿಗೆ 600 ರುಪಾಯಿ ಮಾತ್ರ ಬೆಲೆ.
  • ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಗೆ ರಾಗಿಯಂಥ ಕಿರುಧಾನ್ಯಗಳೇ ಬೆನ್ನೆಲುಬು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಸಹಾಯಕ ಮಹಾ ನಿರ್ದೇಶಕ ಡಾ.ಎಸ್‌.ಎನ್‌.ಶುಕ್ಲಾ - ರಾಗಿಯಂಥ ಕಿರುಧಾನ್ಯಗಳನ್ನು ಹೆಚ್ಚಾಗಿ ಸೇವಿಸದಿರುವ ಕಾರಣದಿಂದಲೇ ಉತ್ತರ ಭಾರತದ ಜನತೆ ಸಕ್ಕರೆ ಕಾಯಿಲೆ ಹಾಗೂ ಅಧಿಕ ರಕ್ತದೊತ್ತಡದಂಥ ಕಾಯಿಲೆಗೆ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗಿದ್ದಾರೆ ಎಂದರು.

ಪ್ರಖ್ಯಾತ ಕೃಷಿತಜ್ಞರಾದ ಡಾ.ಎ.ಸೀತಾರಾಂ, ಕೃಷಿ ವಿವಿ ಸಂಶೋಧನಾ ನಿರ್ದೇಶಕ ಡಾ.ವೈ.ಎಚ್‌.ಯಡಹಳ್ಳಿ, ಡಾ.ಕೆ.ಟಿ.ಕೃಷ್ಣೇಗೌಡ ಮತ್ತಿತರರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X