ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾನವೀಯ ಮುನಿಸು ಬಿಟ್ಟು ಬಾ ಮಳೆಯೆ

By Staff
|
Google Oneindia Kannada News

ಹೀಗೇ ಕಾದು ಕಾದು ಸಾಕಾಗಿ ಹೋಯಿತು. ಈ ಬಾರಿ ಮತ್ತೆ ಮಳೆ ಕೈ ಕೊಟ್ಟಿದೆ. ಬೆಂಗಳೂರಿನ ಕಾರ್ಪೊರೇಟ್‌ ಮನೆಗಳ ನಲ್ಲಿಯಲ್ಲಿ ದಿನವೂ ನೀರು ಬರುತ್ತಿದ್ದರೂ ಫ್ಯಾನು, ಎಸಿ, ಏರ್‌ ಕೂಲರುಗಳಿಂದಲೂ ತಂಪು ಗಾಳಿ ಬರ್ತಾ ಇಲ್ಲ.

ನಲ್ಲಿಯಲ್ಲಿ ಬರುವ ನೀರು ಯಾವತ್ತು ನಿಲ್ಲುತ್ತದೆ ಅಂತ ಹೇಳಲಿಕ್ಕಾಗುವುದಿಲ್ಲ. ಅಲ್ಲಿ ಉತ್ತರ ಕರ್ನಾಟಕದಲ್ಲಿ ಬಿತ್ತನೆಗೆ ಬೀಜ ಇಲ್ಲದಿರುವ ಪರಿಸ್ಥಿತಿ. ಎರಡು ವರ್ಷಗಳಿಂದ ಬಾರದ ಮಳೆ ಈ ಬಾರಿ ಕೈ ಕೊಡಲಿಕ್ಕಿಲ್ಲ ಅಂತ ನಂಬಿಕೊಂಡು ಎಲ್ಲಿಂದಲೋ ಬಿತ್ತನೆಯ ಬೀಜ ತಂದು ಜೋಪಾನವಾಗಿಟ್ಟುಕೊಂಡರೆ, ಮುಂಗಾರು ಬರುವ ಸೂಚನೆಯಿಲ್ಲ. ಶುಭ್ರ ಆಕಾಶವನ್ನು ನೋಡಿದಾಗಲೆಲ್ಲ ಮೈ ಪರಚಿಕೊಳ್ಳುವಂತಾಗುತ್ತದೆ.

ಶನಿವಾರ ಸಂಕಷ್ಟಿ. ಈ ಬೆಂಗಳೂರಿನಲ್ಲಿ ಎಷ್ಟೊಂದು ಜನ ಉಪವಾಸ ಮಾಡುತ್ತಾರೆ ! ಅವರೆಲ್ಲರೂ ತಮಗೆ ಒಳ್ಳೆಯದಾಗಲಿ, ಮನೆಗೆ ಒಳಿತಾಗಲಿ ಎಂದು ಹಾರೈಸಿಕೊಂಡು ಹರಕೆ ಹೇಳಿಕೊಂಡು ದೇವಸ್ಥಾನಗಳಲ್ಲಿ ಸಾಷ್ಟಾಂಗ ಬೀಳುತ್ತಾರಲ್ಲ. ಕೊಲ್ಲೂರಿನಲ್ಲಿ ಲಕ್ಷೋಪ ಲಕ್ಷ ಜನ ಮಳೆಗಾಗಿ ಯಾಗ ಮಾಡುತ್ತಿದ್ದಾರಲ್ಲ. ಅವರೆಲ್ಲರ ಆ ಹರಕೆಯಲ್ಲಿ ಮಳೆಯೂ ಸೇರಿಕೊಂಡಿಲ್ಲವೇ...

ದೇವರು ದಿಂಡಿರು ಪೂಜೆ ಪುನಸ್ಕಾರಗಳನ್ನು ಅರ್ತಿಯಿಂದ ಹಚ್ಚಿಕೊಂಡ ಮಲೆನಾಡಿನ ರೈತನೊಬ್ಬ ಪ್ರತಿ ರಾತ್ರಿಯೂ ಆಕಾಶದಲ್ಲಿ ಬೆಳಗುವ ಕೋಟಿ ಕೋಟಿ ನಕ್ಷತ್ರಗಳನ್ನು ನೋಡಿ ಬೇಜಾರು ಮಾಡಿಕೊಳ್ಳುತ್ತಾನೆ. ಆಕಾಶದಲ್ಲಿ ಮೋಡಗಳಿಗೆ ಬರ. ಭೂಮಿಯಲ್ಲಿ ಎತ್ತ ನೋಡಿದರೂ ಹಸಿರಿಲ್ಲ.

ಕಳೆದ ವರ್ಷ ಹೀಗಿರಲಿಲ್ಲ. ಅಪವಾದಕ್ಕೆಂಬಂತೆಯಾದರೂ ಅಲ್ಲೊಮ್ಮೆ ಇಲ್ಲೊಮ್ಮೆ ಜೋರು ಮಳೆ ಇಷ್ಟು ಹೊತ್ತಿಗೆಲ್ಲಾ ಸುರಿದಿತ್ತು. ಆದರೆ ಈ ವರ್ಷ ಯುಗಾದಿ ಕಳೀತು, ಊರು ಊರುಗಳಲ್ಲಿ, ಕೇರಿ ಕೇರಿಗಳಲ್ಲಿ ಜಾತ್ರೆ ಕಳೀತು... ಆ ಜಾತ್ರೆಗೆ ಬರಬೇಕಿದ್ದ ಮಳೆ, ಈ ಹಬ್ಬಕ್ಕೆ ಹನಿಯಬೇಕಿದ್ದ ಹನಿಗಳು, ಮತ್ಯಾವುದೋ ಹಿರಿಯರು ನಂಬಿದ ಮುಹೂರ್ತದಲ್ಲಿ, ಲೆಕ್ಕಾಚಾರದಲ್ಲಿ ಬರಬೇಕಿದ್ದ ಯಾವ ಮಳೆಯೂ ಬಂದಿಲ್ಲ.

ಮಳೆಯ ಈ ಅಮಾನವೀಯ ಮುನಿಸು ಈಗಾಗಲೇ ಎಲ್ಲ ರೈತರ, ಪಟ್ಟಣಿಗರ, ಪೇಟೆ ಮಕ್ಕಳ ಗಮನಕ್ಕೆ ಬಂದಿದೆ. ಮತ್ತೆ ಮತ್ತೆ ನೆನೆಸಿಕೊಂಡಾಗೆಲ್ಲ ಹೆದರಿಕೆಯಾಗುತ್ತದೆ. ಮಳೆ ಯಾಕೆ ಬರಲಿಲ್ಲ ....?

ಬತ್ತಿದ ಹೊಳೆಗಳು, ಒಣಗಿದ ಕೆರೆ ಕಂಟೆಗಳು, ನೀರಿಲ್ಲದ ಬಾವಿಗಳು, ಹುಲ್ಲಿಗಾಗಿ ಅಲೆಯುವ ದನಗಳು, ಕೊಡಪಾನ ಹಿಡಿದುಕೊಂಡು ಊರು ಊರು ಸುತ್ತುವ ಹೆಂಗಸರು ಎಲ್ಲರೂ ಬೋರಿಟ್ಟು ಕರೆಯುತ್ತಿದ್ದಾರೆ. ಹೆಚ್ಚು ದಿನ ಕಾಯಿಸದೇ ಬಂದು ಬಿಡು ಮಳೆಯೇ....

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X