ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮತ್ತು ನನ್ನ ಮಾವಿನ ಮರ

By Staff
|
Google Oneindia Kannada News

*ದಿವ್ಯ, ಬೆಂಗಳೂರು

A tree storyಆಗ ಟೀವಿಯಲ್ಲಿ ಒಂದೇ ಚಾನೆಲ್ಲು ಬರುತ್ತಿದ್ದ ಕಾಲ. ನಾನು ಪುಟ್ಟವಳು. ‘ಏಕ್‌ ಔರ್‌ ಅನೇಕ್‌’ ಎಂಬ ಪ್ರೋಗ್ರಾಮನ್ನು ತಪ್ಪದೇ ನೋಡುತ್ತಿದ್ದೆ. ಅದರಲ್ಲಿ ಮನರಂಜನೆಯ ಜತೆಗೆ ಪಾಠ ಕಲಿಸುವ ಜಾಣ್ಮೆ ಬೆರೆತಿತ್ತು. ಒಂದೊಮ್ಮೆ ಅದರಲ್ಲಿ ಮಾವಿನ ಗಿಡ ನೆಟ್ಟು, ಅದು ದೊಡ್ಡ ಮರವಾಗಿ ಹಣ್ಣುಗಳನ್ನು ಕೊಟ್ಟು, ಅದನ್ನು ಕಿತ್ತು ತಿಂದು, ಅದರ ನೆರಳಡಿಯೇ ಮಲಗುವ ಕಾರ್ಟೂನ್‌ ಚಿತ್ರ ಬಂತು. ನನಗೆ ಅವತ್ತಿನಿಂದ ಮನೆಯಂಗಳದಲ್ಲಿ ಮಾವಿನ ಗಿಡ ನೆಡಬೇಕೆಂಬ ಆಸೆ. ಅಪ್ಪನನ್ನು ಕಾಡಿಸಿ ಪೀಡಿಸಿ, ಲಾಲ್‌ಬಾಗ್‌ಗೆ ಹೋಗಿ ಮಾವಿನ ಗಿಡ ತಂದು ನೆಟ್ಟೆವು.

ಇವತ್ತು ಆ ಮರದ ತುಂಬಾ ಕಾಯಿಗಳು ಹಣ್ಣಾಗುತ್ತಿವೆ. ಈ ಮರದ ಜತೆಗೇ ನಾನು ಹೇಗೆ ಬೆಳೆದೆ ಅಂತ ಸಿಕ್ಕಿದವರ ಹತ್ತಿರವೆಲ್ಲಾ ಹೇಳಿಕೊಂಡು ಖುಷಿ ಪಡುತ್ತೇನೆ. ಈ ಮಾವಿನ ಹಣ್ಣಿಂದ ಏನೇನು ಮಾಡಬೇಕು, ಎಷ್ಟು ಹಣ್ಣುಗಳಿವೆ, ಯಾರ್ಯಾರಿಗೆ ಎಷ್ಟೆಷ್ಟು ಕೊಡಬೇಕು ಎಂಬೆಲ್ಲಾ ಕಸರತ್ತಿಗೆ ತೊಡಗಿದ್ದೇನೆ. ಆ ಮರದ ಕೆಳಗೊಂದು ಈರಿkು ಚೇರ್‌. ಅಪ್ಪ ಅದರ ಕೆಳಗೇ ಮಹಾಭಾರತ ಓದೋದು. ಗಣೇಶನ ಸಂಕಷ್ಟಿಗೆ ಅಮ್ಮ ಗೆಜ್ಜೆ- ವಸ್ತ್ರ ಮಾಡೋದೂ ಅಲ್ಲೇ. ಮೊನ್ನೆ ನನ್ನ ಫ್ರೆಂಡ್‌ ಪ್ರಿಯಾ ಬಂದು, ಒಂದು ಮಾವಿನ ಕಾಯನ್ನು ಹಿಡಕೊಂಡು, ‘ಕಿತ್ತು ಬಿಡ್ತೀನಿ...ಕಿತ್ತು ಬಿಡ್ತೀನಿ’ ಅಂತ ಕಾಡಿಸಿದಾಗ ನಂಗೆ ಅಳೂನೇ ಬಂದುಬಿಟ್ಟಿತ್ತು.

ನಂಗೆ ಈಗಲೇ ಮದುವೆ ಗೊತ್ತಾಗಬೇಕಾ. ಇನ್ನೆರಡೇ ತಿಂಗಳು. ನನ್ನ ಮಾವಿನ ಮರಾನೂ ಗಂಡನ ಮನೆಗೆ ಹೊತ್ತುಕೊಂಡು ಹೋಗೋಣ ಅಂದರೆ ಆಗೋದೇ ಇಲ್ಲ ! ಅದಕ್ಕೇ ಮದುವೆಗೆ ಮುಂಚೆ ಈ ಸಲ ಬಿಟ್ಟಿರುವ ಮಾವಿನ ಹಣ್ಣಲ್ಲಿ ಏನೇನು ಸಾಧ್ಯವೋ ಎಲ್ಲಾ ಮಾಡಿಕೊಂಡು ತಿಂದು ತೇಗಲು ನಿಶ್ಚಯಿಸಿದ್ದೇನೆ. ಆಮೇಲೂ ಅಷ್ಟೆ, ಬೇಸಗೆ ಬಂದರೆ ನಾನು ನಮ್ಮನೆ ಮಾವಿನ ಮರದ ಜತೆ ಕಾಲ ಕಳೆಯೋಕೆ ಖಂಡಿತ ಬರ್ತೀನಿ. ಈ ಕಂಡೀಷನ್ನನ್ನ ಗಂಡನ ಹತ್ತಿರ ಈಗಲೇ ಹಾಕೋದು ಒಳ್ಳೇದು ಅಂತಲೂ ತೀರ್ಮಾನಿಸಿದ್ದೇನೆ.

ಇವತ್ತು ಬೆಳಗ್ಗೆ ಪೇಪರ್ನಲ್ಲಿ ಕನಕಪುರ ರಸ್ತೆಯ ಯಡಿಯೂರು ಕೆರೆ ಹತ್ತಿರ ನಮ್ಮ ಮಾವಿನ ಮರದ ಐದು ಪಟ್ಟು ದೊಡ್ಡದಾಗಿರುವ ಮರವನ್ನು ಉರುಳಿಸಿದ ಫೋಟೋ ನೋಡಿದೆ. ಎದೆ ಧಸಕ್ಕೆಂದಿತು. ಹಸಿರಾಗಿದ್ದ ಬೆಂಗಳೂರನ್ನು ಬೋಳು ಮಾಡಿ, ರಸ್ತೆಗಳ ಮಧ್ಯೆ ಡಿವೈಡರ್‌ಗೆ ಹಸಿರು ಹುಲ್ಲು ತಂದು ಹಾಕಿ, ಇದೇ ಹಸಿರು ಬೆಂಗಳೂರು ಅನ್ನುವವರ ನೆನೆಸಿಕೊಂಡರೆ ಮೈಯೆಲ್ಲಾ ಉರಿಯುತ್ತೆ.

ಒಂದು ಮಾವಿನ ಮರವೇ ನನ್ನ ಜೀವನದ ಅವಿಭಾಜ್ಯ ಅಂಗವಾಗಿರಬೇಕಾದರೆ, ಇನ್ನು ಎಷ್ಟೋ ದಶಕಗಳಷ್ಟು ಹಳೆಯ ಮರಗಳು ಯಾರ್ಯಾರಿಗೆ ಏನೇನಾಗಿರಬೇಡ. ಈ ರಸ್ತೆ, ಧೂಳು, ಢಾಬಾಗಳ ಮುಂದೆ ಬೆವರಿಳಿಸುತ್ತಲೇ ಎಳನೀರು ಮಾರುವವರು, ಉರಿ ಸುರಿಯುವ ಸೂರ್ಯ... ಎಲ್ಲವನ್ನೂ ನೋಡಿದಾಗ, ಕಣ್ಣು ತಂತಾನೇ ಮರಗಳನ್ನು ಹುಡುಕುತ್ತಾ ಸೋಲುತ್ತದೆ. ಕರುಳು ಚುರ್ರೆನ್ನುತ್ತದೆ.

Post your views

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X