ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂತು ಮಾತಾಡುವ ಬನ್ನಿ : ಆಂಧ್ರಕ್ಕೆ ಎಸ್ಸೆಂ.ಕೃಷ್ಣ ಕರೆ

By Staff
|
Google Oneindia Kannada News

ಬೆಂಗಳೂರು : ಬಚಾವತ್‌ ತೀರ್ಪಿನ ಸ್ಕೀಮ್‌ ಬಿ ಅನ್ವಯ ಕೃಷ್ಣಾ ನದಿಯ ಹೆಚ್ಚುವರಿ ನೀರಿನ ಹಂಚಿಕೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆಂಧ್ರಪ್ರದೇಶದ ಜತೆ ಚರ್ಚಿಸಲು ತಾವು ಸಿದ್ಧ ಎಂದು ಕರ್ನಾಟಕದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಹೇಳಿದ್ದಾರೆ.

ಆಂಧ್ರಪ್ರದೇಶದ ಪತ್ರಕರ್ತರ ಜತೆ ಬುಧವಾರ (ಮಾ.26) ಚರ್ಚೆಯಲ್ಲಿ ತೊಡಗಿದ್ದಾಗ ಕೃಷ್ಣ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ಆಂಧ್ರಪ್ರದೇಶ ಮಾತಿಗೆ ಕೂರಲಿ. ಸಮಸ್ಯೆಗಳ ಇತ್ಯರ್ಥಕ್ಕೆ ಒಪ್ಪಂದವೇನಾದರೂ ಸಾಧ್ಯವಾದರೆ ಅದಕ್ಕೆ ನಾವು ಸಿದ್ಧ. ನಮಗೆ ಆಂಧ್ರದ ನಿಲುವು ಒಪ್ಪಿಗೆಯಾಗದಿದ್ದರೆ, ಅದು ಯಾಕೆ ಎಂದು ಹೇಳಲೂ ನಾವು ಸಿದ್ಧ. ಒಟ್ಟಿನಲ್ಲಿ ನಮಗೆ ಸರಿಯಾದ ಉತ್ತರ ಬೇಕು ಎಂದು ಕೃಷ್ಣ ಅಭಿಪ್ರಾಯ ಪಟ್ಟರು.

ಆಂಧ್ರಪ್ರದೇಶ ಕೇಳಿಕೊಂಡಿರುವಂತೆ ಹೆಚ್ಚು ನೀರನ್ನು ಯಾಕೆ ಬಿಟ್ಟಿಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದರು. ತಮಿಳುನಾಡು ಮತ್ತು ಆಂಧ್ರಪ್ರದೇಶದ ಕಟು ಧೋರಣೆಯಿಂದಾಗಿ ಕರ್ನಾಟಕಕ್ಕೆ ಕಹಿ ಅನುಭವವಾಗಿದೆ. ಆಲಮಟ್ಟಿ ಅಣೆಕಟ್ಟಿನ ಸಮಸ್ಯೆಯನ್ನು ಆಂಧ್ರ ಸರ್ಕಾರ ಸುಪ್ರಿಂಕೋರ್ಟಿಗೆ ಕೊಂಡೊಯ್ಯಿತು. ಕೊನೆಗೆ ಅಣೆಕಟ್ಟೆಯ ಎತ್ತರವನ್ನು 519 ಮೀಟರುಗಳಿಗೆ ಎತ್ತರಿಸಲು ಕೃಪೆತೋರಿ ಸುಪ್ರಿಂಕೋರ್ಟು ತೀರ್ಪಿತ್ತಿತು ಎಂದು ಕೃಷ್ಣ ಹೇಳಿದರು.

ನೀರು ಬಿಡಬಹುದು. ಆದರೆ..

ಈಗಲೂ ನಾವು ಮುಕ್ತವಾಗಿದ್ದೇವೆ. ಬೇಸಗೆಯಲ್ಲಿ ಆಂಧ್ರಕ್ಕೆ ಕುಡಿಯುವ ನೀರು ಕೊಡಲು ನಾವು ಇಲ್ಲ ಅಂದಿಲ್ಲ. ಆಂಧ್ರ 39 ಟಿಎಂಸಿ ನೀರು ಕೇಳಿದೆ. ಅದು ಆಲಮಟ್ಟಿಯಲ್ಲೇ ಇರುವ ನೀರಾಗಿರುವುದರಿಂದ ಬೇಸಗೆಯಲ್ಲಿ ನಾವು ಹರಿಸಬೇಕಿದೆ. ಇಂತಹ ಬಿರು ಬಿಸಿಲಲ್ಲಿ ನೀರು 300 ಕಿ.ಮೀ. ದೂರ ಹರಿಯುತ್ತದೋ ಇಲ್ಲವೋ ಎಂಬ ಅನುಮಾನವಿದೆ. ಈ ರೀತಿಯ ಮೂಲ ಸಮಸ್ಯೆಗಳನ್ನು ಪರಿಶೀಲಿಸಿ, ಪರಿಹಾರ ಸಿಕ್ಕ ನಂತರವಷ್ಟೆ ಆಂಧ್ರಕ್ಕೆ ನೀರು ಬಿಡಲು ಸಾಧ್ಯ ಎಂದು ಕೃಷ್ಣ ಬಿಡಿಸಿ ಹೇಳಿದರು.

ಆಂಧ್ರವನ್ನು ಮೆಚ್ಚಿದ ಕೃಷ್ಣ : ನೀರಾವರಿ ಕ್ಷೇತ್ರದಲ್ಲಿ ಆಂಧ್ರಪ್ರದೇಶ ಮಾದರಿ ರಾಜ್ಯವಾಗಿದೆ. ಅಭಿವೃದ್ಧಿಯ ಹಾದಿಯಲ್ಲಿ ಅದು ಇಡುತ್ತಿರುವ ಹೆಜ್ಜೆ ಶ್ಲಾಘನೀಯ. ಸರ್ಕಾರಿ ವಲಯ, ವಿದ್ಯುತ್‌ ಮತ್ತು ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಮೊದಲಾದವುಗಳಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ ಕೈಜೋಡಿಸಿ, ಸಾಕಷ್ಟಿ ಸಾಧಿಸಿರುವ ಉದಾಹರಣೆಯಿದೆ. ಉಭಯ ರಾಜ್ಯಗಳ ಸಂಬಂಧ ಇನ್ನಷ್ಟು ಬಲವಾಗುವ ಆಸೆ ಕೂಡ ನಮಗಿದೆ ಎಂದು ಕೃಷ್ಣ ಆಶಾ ಭಾವನೆ ವ್ಯಕ್ತಪಡಿಸಿದರು.

ಕರ್ನಾಟಕ ಪತ್ರಿಕಾ ಅಕಾಡೆಮಿ ಆಂಧ್ರಪ್ರದೇಶದ ಪತ್ರಕರ್ತರನ್ನು ವಿಚಾರ ವಿನಿಮಯ ಪ್ರವಾಸ ಎಂಬ ಕಾರ್ಯಕ್ರಮದಡಿ ನಗರಕ್ಕೆ ಕರೆಸಿತ್ತು. ಕರ್ನಾಟಕ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಕೂಡ ಚರ್ಚೆಯಲ್ಲಿ ಭಾಗಿಯಾಗಿದ್ದರು.

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X