ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಫ್‌ ಯುದ್ಧ : ದಕ್ಷಿಣ ಕನ್ನಡದ ಮನೆಗಳಲ್ಲಿ ಆತಂಕ

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

ಕರಾವಳಿಯಲ್ಲಿ ಮಳೆ ಬಾರದಿದ್ದರೆ ಗಲ್ಫ್‌ನಲ್ಲಿರುವ ಬಹುತೇಕ ಎನ್ನಾರೈ ಮುಸ್ಲಿಮರು ಬೇಜಾರು ಮಾಡಿಕೊಳ್ಳುತ್ತಾರೆ. ಗಲ್ಫ್‌ನಲ್ಲಿ ಯುದ್ಧ ಶುರುವಾಗುತ್ತಿದ್ದರೆ ಕರಾವಳಿಯ ಬ್ಯಾರಿ ಹೆಣ್ಣು ಮಕ್ಕಳು ಗುಂಡಿಗೆ ಕೈಯಲ್ಲಿ ಹಿಡಿದುಕೊಂಡು ಕೂರುತ್ತಾರೆ.ಕರಾವಳಿ ಮತ್ತು ಗಲ್ಫ್‌ನ ಸಂಬಂಧ ಅಷ್ಟು ಹತ್ತಿರದ್ದು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬ್ಯಾರಿ ಜನಾಂಗದ ಮುಸ್ಲಿಮರು ಗಲ್ಫ್‌ನಲ್ಲಿ ಒಂದಷ್ಟು ವರ್ಷ ದುಡಿದು ಹಣ ಸಂಪಾದಿಸಿ ಮತ್ತೆ ತಾಯ್ನಾಡಿಗೆ ವಾಪಾಸಾಗುವುದು ಹಲವು ದಶಕಗಳಿಂದ ಬಂದ ರೂಢಿ. ಕ್ರಿಶ್ಚಿಯನ್‌ ಮತ್ತು ಹಿಂದೂ ಮನೆಗಳಿಂದಲೂ ಯುವಕರು ಗಲ್ಫ್‌ಗೆ ತೆರಳುವುದುಂಟು. ಹೆಚ್ಚಿನವರು ಕುವೈತ್‌ನಲ್ಲಿಯೇ ಉದ್ಯೋಗ ಹುಡುಕಿಕೊಳ್ಳುತ್ತಾರೆ.

ಜಿಲ್ಲೆಯ ಶೇ 20ರಷ್ಟು ಮಂದಿ, ಅದರಲ್ಲೂ ಬಹುತೇಕ ಮುಸ್ಲಿಮ್‌ ಯುವಕರು ಗಲ್ಫ್‌ನಲ್ಲಿ ದುಡಿಯುತ್ತಿದ್ದಾರೆ. ಪ್ರಸ್ತುತ ಇರಾಕ್‌ ಮೇಲೆ ಅಮೆರಿಕಾ ನಡೆಸುತ್ತಿರುವ ದಾಳಿಯಿಂದಾಗಿ ಮಂಗಳೂರಿನ ಸಾವಿರಾರು ಕುಟುಂಬಗಳು ತಮ್ಮವರ ರಕ್ಷಣೆಗಾಗಿ ದೇವರಲ್ಲಿ ಮೊರೆಯಿಡುತ್ತಿವೆ. ಮನೆಗಳಲ್ಲಿ ಗಂಡನಿಗಾಗಿ ಕಾಯುತ್ತಿರುವ ಹೆಂಗಸರು, ಮಕ್ಕಳು. ಮಗನಿಗಾಗಿ ಕಾಯುತ್ತಿರುವ ವೃದ್ಧ ಅಪ್ಪ ಅಮ್ಮಂದಿರು. ತಮ್ಮವರ ಕ್ಷೇಮಕ್ಕಾಗಿ ಮಸೀದಿಗಳಲ್ಲಿ ಪ್ರಾರ್ಥನೆ, ಮನೆಗಳಲ್ಲಿ ದುಆ, ದೇವಸ್ಥಾನಗಳಲ್ಲಿ ಅರ್ಚನೆ, ಚರ್ಚುಗಳಲ್ಲಿ ಪೂಜೆ...

ಯುದ್ಧದಿಂದ ತಮ್ಮವರಿಗೆ ಅನಾಹುತವಾದೀತು ಎಂಬ ಭಯ ಒಂದೆಡೆಯಾದರೆ, ಯುದ್ಧದಿಂದಾಗಿ ಮನೆಗೆ ಬರಬೇಕಾದ ತಿಂಗಳ ಹಣವೂ ಕಡಿಮೆಯಾಗುತ್ತಿರುವ ಜಿಲ್ಲೆಯ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ. 1991ರಲ್ಲಿ ಗಲ್ಫ್‌ ಯುದ್ಧವಾದಾಗಲೂ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಸುಧಾರಿಸಿಕೊಳ್ಳಲು ಮತ್ತೆ ಒಂದುವರ್ಷ ಬೇಕಾಯಿತು. ಈ ಬಾರಿ ಅಮೆರಿಕಾ ದಾಳಿ ಆರಂಭವಾಗಿ ಮೂರು ದಿನ ಕಳೆದರೂ ಯಾರೂ ಗಲ್ಫ್‌ ರಾಷ್ಟ್ರದಿಂದ ವಾಪಾಸಾಗುವ ಬಗ್ಗೆ ಸೂಚನೆಯೇ ಕಾಣುತ್ತಿಲ್ಲ. ಇದರ ಹಿಂದಿರುವ ಕಾರಣವೂ ಹೊಳೆಯುತ್ತಿಲ್ಲ.

1991ರ ಕೊಲ್ಲಿ ಯುದ್ಧದ ಸಮಯದಲ್ಲಿ ತಾಯ್ನಾಡಿಗೆ ಮರಳಿದವರು ಯುದ್ಧದ ಕತೆಗಳನ್ನು ಹೇಳುತ್ತಾ ಅಲ್ಲಿನ ಪ್ರ ಸ್ತುತ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಗಲ್ಫ್‌ನಿಂದ ವಾಪಾಸು ಬಂದು, ಈಗ ಕಾಂಡಿಮೆಂಟ್ಸ್‌ ಸ್ಟೋರ್‌ ಇಟ್ಟುಕೊಂಡಿರುವ ಅಶ್ರಫ್‌ ಹೇಳುತ್ತಾರೆ: ದಿನಕ್ಕೆ ಹತ್ತಾರು ಬಾರಿ ಅಪಾರ್ಟ್‌ಮೆಂಟ್‌ಗಳ ಮೇಲ್ಗಡೆ ಹಾದು ಹೋಗುವ ಮಿಸ್ಸೈಲ್‌ಗಳು. ಒಂದೊಂದು ಮಿಸ್ಸೈಲ್‌ ಬಂದಾಗಲೂ ಅದು ತನ್ನ ಮನೆಯ ಮೇಲೇ ಬಾಂಬ್‌ ಹಾಕುತ್ತೇನೋ ಎಂಬ ಜೀವ ಭಯ.. ಅದು ಹಾರಿ ಮುಂದೆ ಹೋಯಿತೆಂದರೆ ಒಂದರೆಕ್ಷಣ ನಿರಾಳ.. ಮತ್ತೊಂದು ಮಿಸ್ಸೈಲ್‌. ಮತ್ತೆ ಭಯ.. ಪ್ರತಿಕ್ಷಣವೂ ಆತಂಕದ ಮೂಟೆ.

ಗಲ್ಫ್‌ನಲ್ಲಿ ದುಡಿಯುತ್ತಿರುವವರ ಅರ್ಧ ನಿಮಿಷದ ಒಂದು ಫೋನ್‌ ಕಾಲ್‌ಗಾಗಿ, ಒಂದು ಪತ್ರಕ್ಕಾಗಿ ದಕ್ಷಿಣ ಕನ್ನಡದ ಹಲವು ಮನೆಗಳು ಕಾಯುತ್ತಿವೆ.

Post your views

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X