ಬೆಂಗಳೂರಲ್ಲಿ ಡೆಲ್ ಕಾರ್ಪೊರೇಷನ್ ಅಧ್ಯಕ್ಷ
ಬೆಂಗಳೂರು : ಡೆಲ್ ಕಾರ್ಪೊರೇಷನ್‌ನ ಅಧ್ಯಕ್ಷ ಮತ್ತು ಸಿ.ಇ.ಓ. ಮೈಕೆಲ್ ಡೆಲ್ ಬುಧವಾರ (ಮಾರ್ಚ್ 19) ಒಂದು ದಿನದ ಮಟ್ಟಿಗೆ ನಗರಕ್ಕೆ ಭೇಟಿ ಕೊಟ್ಟಿದ್ದು , ತಮ್ಮ ಕಂಪನಿಯ 3 ಸಾವಿರ ನೌಕರರನ್ನು ಉದ್ದೇಶಿಸಿ ಮಾತಾಡಲಿದ್ದಾರೆ.
ಸರಿಯಾಗಿ ಈಗ್ಗೆ ಒಂದು ವರ್ಷಗಳ ಹಿಂದೆ ನಗರಕ್ಕೆ ಭೇಟಿ ಕೊಟ್ಟಿದ್ದ ಡೆಲ್ ಮಾಹಿತಿ ತಂತ್ರಜ್ಞಾನ ಕಂಪನಿಗಳ ಅತಿ ಕಿರಿಯ ವಯಸ್ಸಿನ ಸಿ.ಇ.ಓಗಳಲ್ಲಿ ಒಬ್ಬರು. ಕಳೆದ ಬಾರಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಹಾಗೂ ಇನ್ಫೋಸಿಸ್‌ನ ಆಗಿನ ಸಿ.ಇ.ಓ. ನಂದನ್ ನೀಲೇಕಣಿ ಜೊತೆ ಮಾತುಕತೆ ನಡೆಸಿದ್ದ ಡೆಲ್ ಈ ಬಾರಿ ಇನ್ಫೋಸಿಸ್ ರಾಜಗುರು ಎನ್.ಆರ್.ನಾರಾಯಣ ಮೂರ್ತಿಯವರನ್ನು ಮಾತ್ರ ಭೇಟಿಯಾಗುವರು.
ಅಮೆರಿಕ ಮತ್ತು ಯೂರೋಪಿಯನ್ ದೇಶಗಳಲ್ಲಿ ಗ್ರಾಹಕರನ್ನು ಉಳ್ಳ ಡೆಲ್ ಕಾರ್ಪೊರೇಷನ್ನಿನ ಮೂರು ಕಚೇರಿಗಳು ಬೆಂಗಳೂರಲ್ಲಿವೆ. ಕಳೆದ ವರ್ಷ 800 ಇದ್ದ ಸಿಬ್ಬಂದಿ ಸಂಖ್ಯೆ ಈಗ 3000 ಕ್ಕೇರಿದೆ. ಬೆಂಗಳೂರಿನಲ್ಲಿ ಡೆಲ್ ಯಾರ್ಯಾರನ್ನು ಭೇಟಿಯಾಗುತ್ತಾರೆ ಎಂಬ ವಿಷಯ ಗುಟ್ಟಾಗಿದ್ದು, ಐಟಿ ಪಂಡಿತರ ಉತ್ಸಾಹ ಕೆರಳಿಸಿದೆ. ಇನ್ಫೋಸಿಸ್ ಭೇಟಿಯ ವಿಷಯ ಹೊರತುಪಡಿಸಿ ಬೇರೇನನ್ನೂ ಹೇಳಲು ಡೆಲ್ ವಕ್ತಾರೆ ನಿರಾಕರಿಸಿದರು.
ಅಂದಹಾಗೆ, ಡೆಲ್‌ನ ಗಿರಾಕಿಗಳ ಪೈಕಿ ಇನ್ಫೋಸಿಸ್ ಕೂಡ ಒಂದು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications