ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದಾಯ ಆರೋಗ್ಯ ಕೇಂದ್ರಗಳಿಗೆ ಜರ್ಮನ್‌ ಬಲ !

By Staff
|
Google Oneindia Kannada News

ಬೆಂಗಳೂರು : ಜರ್ಮನಿಯ 76 ಕೋಟಿ ರುಪಾಯಿ ನೆರವಿನೊಂದಿಗೆ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಗಳನ್ನು ಸದ್ಯದಲ್ಲೇ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ (ಜ.21) ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. 1996- 97ರಲ್ಲಿ ಶುರುವಾದ ವಿಶ್ವ ಬ್ಯಾಂಕ್‌ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆಯಡಿ ಎಲ್ಲಾ ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ವಿಶ್ವಬ್ಯಾಂಕ್‌ 600 ಕೋಟಿ ರುಪಾಯಿ ಹಣ ಒದಗಿಸಿತ್ತು. ಹೈದರಾಬಾದ್‌- ಕರ್ನಾಟಕ ಪ್ರದೇಶಗಳ ಆಸ್ಪತ್ರೆಗಳ ಅಭಿವೃದ್ಧಿಗೆ 24 ಕೋಟಿ ರುಪಾಯಿ ಖರ್ಚು ಮಾಡಲಾಗುತ್ತಿದೆ ಎಂದರು.

ಸಾಂಕ್ರಾಮಿಕ ರೋಗಗಳಿಗೆ ಮದ್ದು : ಬರ ಪರಿಸ್ಥಿತಿಯಲ್ಲಿ ವ್ಯಾಪಕವಾಗಬಹುದಾದ ಕಾಲರಾ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅಗತ್ಯವಿರುವ ಮದ್ದನ್ನು ಖರೀದಿಸಲು ಕೇಂದ್ರ ಸರ್ಕಾರ 5 ಕೋಟಿ ರುಪಾಯಿ ನೆರವು ಕೊಟ್ಟಿದೆ. ಇದಕ್ಕೆ ಅಗತ್ಯ ಮೊತ್ತ ಸೇರಿಸಿ, ರಾಜ್ಯ ಸರ್ಕಾರ ಈಗಾಗಲೇ ಮದ್ದು ಖರೀದಿಸಿದೆ. ಎಲ್ಲಾ ಆಸ್ಪತ್ರೆಗಳಿಗೆ ಮದ್ದನ್ನು ತಲುಪಿಸಿದ್ದೂ ಆಗಿದೆ ಎಂದು ಕಾಗೋಡು ವಿವರಣೆ ಕೊಟ್ಟರು.

ನಮ್ಮದು ಪೋಲಿಯೋ ಮುಕ್ತ ರಾಜ್ಯ : ಜನವರಿಯಲ್ಲಿ ನಡೆದ ಪಲ್ಸ್‌ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ 99.33 ಪ್ರತಿಶತ ಮಕ್ಕಳು ಲಸಿಕೆ ಹಾಕಿಸಿಕೊಂಡಿದ್ದಾರೆ. ಫೆಬ್ರವರಿ 9ರಂದು ಇನ್ನೊಂದು ಸುತ್ತಿನ ಕಾರ್ಯಕ್ರಮ ಇದ್ದು, 100 ಪ್ರತಿಶತ ಮಕ್ಕಳು ಇದರ ಲಾಭ ಪಡೆಯುವ ನಿರೀಕ್ಷೆಯಿದೆ. 2000ನೇ ಇಸವಿಯಿಂದ ಕರ್ನಾಟಕದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ವರದಿಯಾಗಿಲ್ಲ. ರಾಜ್ಯ ಈಗ ಸಂಪೂರ್ಣ ಪೋಲಿಯೋ ಮುಕ್ತ ಎಂದು ಕಾಗೋಡು ಹೆಮ್ಮೆ ಪಟ್ಟುಕೊಂಡರು.

ನಿವೃತ್ತ ವೈದ್ಯರಿಗೆ ಸರ್ಕಾರಿ ಗುತ್ತಿಗೆ ಕೆಲಸ : ಅಗತ್ಯವಿರುವ 494 ವೈದ್ಯರಿಗೆ ಕೆಲಸಕ್ಕೆ ಸೇರುವ ಆದೇಶ ಪತ್ರ ಕಳುಹಿಸಲಾಗಿತ್ತು. ಈ ಪೈಕಿ 8 ವೈದ್ಯರು ಕೆಲಸಕ್ಕೆ ಸೇರಿಕೊಂಡಿಲ್ಲ. ಮರು ನೋಟೀಸು ಕಳುಹಿಸಿ ಇವರನ್ನು ನೇಮಿಸಿಕೊಳ್ಳಲಾಗುವುದು. ಖಾಲಿ ಬೀಳುವ ಕೆಲಸಗಳಿಗೆ ನಿವೃತ್ತ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ನಿಶ್ಚಯಿಸಿದ್ದೇವೆ ಎಂದು ಕಾಗೋಡು ಹೇಳಿದರು.

(ಪಿಟಿಐ)

Post your views

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X