• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಬಾಲ’ರ ಮಿದುಳಿನಲ್ಲಿ ರಸಪ್ರಶ್ನೆಗಳ ‘ಗಿರಿ’ಗಟ್ಟೆ!

By Staff
|

*ಹಾಲ್ದೊಡ್ಡೇರಿ ಸುಧೀಂದ್ರ, hnsudi@yahoo.com

Giri Balasubrahmanyamಎರಡು ವರ್ಷಕ್ಕೂ ಹಿಂದಿನ ಮಾತು. ಒಂದು ಭಾನುವಾರ www.thatskannada.com ಸಂಪಾದಕ ಶಾಮಸುಂದರ ಅವರಿಂದ ಫೋನ್‌ ಕರೆ. ನಿಮಗೊಬ್ಬ ಅಪರೂಪದ ವ್ಯಕ್ತಿಯನ್ನು ಪರಿಚಯಿಸುತ್ತೇನೆ, ಸಮಯವಿದ್ದರೆ ನಮ್ಮ ಕಚೇರಿಗೆ ಬನ್ನಿ ಎಂಬ ಆಹ್ವಾನವಿತ್ತರು. ಹೀಗೆ ಪರಿಚಿತರಾದದ್ದು www.quizbrain.com ಎಂಬ ಪೋರ್ಟಲ್‌ನ ಗಿರಿ ಬಾಲಸುಬ್ರಮಣ್ಯಮ್‌. ‘ಐಟಿ ಡಾಟ್‌ ಕಾಮ್‌’ಗೋಸ್ಕರ ‘ಕ್ವಿಝ್‌’ ಕಾರ್ಯಕ್ರಮ ನಡೆಸಿಕೊಡುವ ಈ ಗಿರಿಯವರ ಹೆಸರು ಕೇಳಿದ್ದೆ. ಅವರ ವೆಬ್‌ಸೈಟ್‌ ಬಗ್ಗೆ ಅಷ್ಟಾಗಿ ಪರಿಚಯವಿರಲಿಲ್ಲ. ಬೆಂಗಳೂರಿನಲ್ಲಿ ಪ್ರತಿವರ್ಷ ನಡೆಯುವ ಐ.ಟಿ ಡಾಟ್‌ ಕಾಮ್‌ಗೆ ಏಷ್ಯಾ ಖಂಡದ ಅತಿ ದೊಡ್ಡ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಮೇಳವೆಂಬ ಹೆಗ್ಗಳಿಕೆಯಿದೆ. ಕಳೆದ ಮೂರು ವರ್ಷಗಳಿಂದ ಈ ಮೇಳ ಆರಂಭವಾಗುವ ಮೊದಲು ಗ್ರಾಮೀಣ ವಿದ್ಯಾರ್ಥಿಗಳಿಗೆ ‘ರಸಪ್ರಶ್ನೆ’ಗಳ ಕಾರ್ಯಕ್ರಮವೊಂದು ತಪ್ಪದೇ ನಡೆಯುತ್ತಿದೆ. ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಏರ್ಪಡಿಸುತ್ತಿರುವ ಈ ಸ್ಪರ್ಧೆಗೆ ಖಾಸಗಿ ಕಂಪನಿ ಟಾಟಾ ಕನ್ಸಲ್ಟನ್ಸಿಯ ಸಹಯೋಗವಿದೆ. ಕಳೆದ ವರ್ಷದ ರಸಪ್ರಶ್ನೆ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ 48,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡದಲ್ಲೂ ನಡೆಯುವ ಇಂಥ ರಸಪ್ರಶ್ನೆ ಕಾರ್ಯಕ್ರಮಗಳ ಮೂಲಕ ಸರ್ಕಾರ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಅರಿವೆಷ್ಟಿದೆ ಎಂದು ಕಂಡುಕೊಳ್ಳಬಲ್ಲದು.

‘ಪಿಕ್‌ಬ್ರೇನ್‌’ ಎಂದೇ ಹೆಸರು ಪಡೆದಿರುವ ಗಿರಿಗೆ ‘ಕ್ವಿಝ್‌’ ಕಾರ್ಯಕ್ರಮ ನಡೆಸಿಕೊಡಲು ವಿಷಯ ‘ಮಾಹಿತಿ ತಂತ್ರಜ್ಞಾನ’ವೇ ಆಗಬೇಕೆಂದಿಲ್ಲ. ಕ್ರೀಡೆ, ಚಲನಚಿತ್ರ, ಸಂಗೀತ, ವ್ಯಾಪಾರ/ವಹಿವಾಟು, ಪ್ರವಾಸ, ವನ್ಯಜೀವಿ, ವಿದ್ಯಾಭ್ಯಾಸ ...... ಮತ್ತಿತರ ವಿಷಯಗಳ ಬಗ್ಗೆ ಅವರ ಆಸಕ್ತಿಯ ಹರವು ವಿಸ್ತರಿಸಿದೆ. ಇಡೀ ದೇಶದಲ್ಲಿ ಹತ್ತಾರು ಸಂಸ್ಥೆಗಳಿಗೆ ವಿವಿಧ ವಯೋಮಾನ/ವ್ಯಾಸಂಗ ಮಟ್ಟದಲ್ಲಿ ’ರಸಪ್ರಶ್ನೆ’ ಕಾರ್ಯಕ್ರಮಗಳನ್ನು ಗಿರಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ’ಕ್ವಿಝ್‌’ ಲೋಕದ ದಿಗ್ಗಜಗಳಾದ ಸಿದ್ಧಾರ್ಥ ಬಸು, ಡೆರೆಕ್‌ ಒಬ್ರಿಯಾನ್‌ ಮುಂತಾದವರ ಸಾಲಿನಲ್ಲಿ ಗಿರಿಯೂ ಸೇರಿದ್ದಾರೆ.

ಎಳೆಯರ ಮಿದುಳಿನಲ್ಲಿ ಅದೆಷ್ಟು ಪ್ರಶ್ನೆಗಳೇಳುತ್ತವೆ? ಎಷ್ಟೋ ಬಾರಿ ಇಂಥ ಪ್ರಶ್ನೆಗಳಿಗೆ ಉತ್ತರ ಹೇಳುವ ಪುರುಸೊತ್ತು ಅಥವಾ ಪ್ರಾಥಮಿಕ ಜ್ಞಾನ ಅಪ್ಪ-ಅಮ್ಮಂದಿರಿಗಾಗಲೀ ಅಧ್ಯಾಪಕರಿಗಾಗಲೀ ಇರುವುದಿಲ್ಲ. ಈ ಒಂದು ಕೊರತೆಯನ್ನು ‘ರಸಪ್ರಶ್ನೆ’ ಕಾರ್ಯಕ್ರಮಗಳು ಪ್ರಚೋದಿಸಬಹುದೆಂಬ ನಂಬಿಕೆ ಗಿರಿಯವರದ್ದು. ನಾಲ್ಕನೇ ತರಗತಿ ಕಲಿಯುತ್ತಿರುವಾಗ ಅಕಸ್ಮಾತಾಗಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಡುವ ಹೊಣೆಗಾರಿಕೆ ಅವರ ಮೇಲೆ ಬಿತ್ತು. ಅಂದಿನಿಂದ ‘ಕ್ವಿಝ್‌’ ನಡೆಸಿಕೊಡುವುದರಲ್ಲೇ ತಾದಾತ್ಮ್ಯ ಭಾವ. ಈ ಹುರುಪಿನಲ್ಲಿ ಆರಂಭವಾದದ್ದೇ www.quizbrain.com ಎಂಬ ವೆಬ್‌ಸೈಟ್‌.

H. N. Sudhindra with his daughterಈ ವೆಬ್‌ಸೈಟ್‌ನಲ್ಲಿ ಏನೆಲ್ಲ ಇದೆ? ಎಂದು ಅರಸುತ್ತಾ ಹೊರಟರೆ ಕಣಜದ ಗೂಡಿಗೆ ಕೈ ಇಟ್ಟಂತೆ. ನಿಮ್ಮ ಆಸಕ್ತಿಯ ವಿಷಯಕ್ಕೊಂದು ‘ಕ್ವಿಝ್‌’ ಇಲ್ಲುಂಟು. ಒಂದಾದ ಮೇಲೊಂದರಂತೆ ಇಲ್ಲಿರುವ ವೆಬ್‌ ಪುಟಗಳತ್ತ ಕಣ್ಣಾಡಿಸುತ್ತಾ ಬಂದರೆ ಸಮಯ ಹಾರಿಹೋದದ್ದು ಅರಿವಾಗುವುದೇ ಇಲ್ಲ. ಮೊದಲ ಪುಟದಲ್ಲೇ ಪುಟಾಣಿ ಪ್ರಶ್ನೆಯಾಂದಕ್ಕೆ ನೀವು ಉತ್ತರಿಸಿದ್ದು ಸರಿಯಾ? ತಪ್ಪೊ? ಎಂದು ಪರಿಶೀಲಿಸಬಹುದು. ‘ಆ್ಯನಗ್ರಮ್‌’ ಒಂದನ್ನು ಬಿಡಿಸಬಹುದು. ದಿನದ ಮಹತ್ವದ ಘಟನೆಯತ್ತ ಕಣ್ಣು ಹಾಯಿಸಬಹುದು ಇಲ್ಲವೆ ಅಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವವ ಖ್ಯಾತನಾಮರ್ಯಾರೆಂದು ಅರಿಯಬಹುದು. ಜನಪ್ರಿಯ ಉಲ್ಲೇಖವೊಂದನ್ನು ಗಮನಿಸಿ ಅದನ್ನು ಹೇಳಿದ ಪ್ರಸಿದ್ಧ ವ್ಯಕ್ತಿ ಯಾರೆಂದು ಗುರುತಿಸಬಹುದು. ಸಾಮಾನ್ಯವಾಗಿ ಬಳಸುವ ಪದಪುಂಜ ಬಳಕೆಗೆ ಬಂದದ್ದು ಹೇಗೆ? ಎಂಬ ನಿಮ್ಮ ಕುತೂಹಲವನ್ನು ಇಲ್ಲಿ ತಣಿಸಿಕೊಳ್ಳಬಹುದು. ದಿನಕ್ಕೊಂದು ಪದದ ಬಗ್ಗೆ ವಿವರಣಾತ್ಮಕ ಮಾಹಿತಿ ಕೂಡಾ ಇಲ್ಲುಂಟು

ಬುದ್ಧಿಮತ್ತೆ ಪರೀಕ್ಷಿಸಲು ‘ಐಕ್ಯೂ’ (Intelligent Quotient) ಅಳತೆಯಿರುವಂತೆ ನಿಮ್ಮ ಕ್ವಿಝ್‌ ಜ್ಞಾನವನ್ನು ಅಳೆಯಲು ಇಲ್ಲೊಂದು ‘ಕ್ಯೂಕ್ಯೂ’ ಇದೆ. ಇಲ್ಲಿನ ಪುಟಗಳ ಮೂಲಕ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂಥ ಕ್ವಿಝ್‌ ಆರಿಸಿಕೊಂಡು, ಸರಾಸರಿ ಮಟ್ಟಕ್ಕಿಂತ ನಿಮ್ಮ ‘ಕ್ಯೂಕ್ಯೂ’ (Quiz Quotient) ಹೆಚ್ಚಿದೆಯಾ? ಕಮ್ಮಿಯಿದೆಯಾ? ಎಂದು ಪರಿಶೀಲಿಸಬಹುದು. ಶಾಲಾ ವಿದ್ಯಾರ್ಥಿಗಳಿಗೆಂದೇ ಇಲ್ಲಿ ಪ್ರತ್ಯೇಕ ವಿಭಾಗವಿದೆ. ಕ್ವಿಝ್‌ ನಡೆಸುವುದರಲ್ಲಿ ನಿಮಗೊಂದಿಷ್ಟು ಪರಿಣತಿಯಿದ್ದರೆ ನಿಮ್ಮದೇ ಒಂದು ಪ್ರಶ್ನಾವಳಿಯನ್ನು ಇಲ್ಲಿನ ಪುಟಗಳಲ್ಲಿ ದಾಖಲಿಸಬಹುದು. ನಿಮ್ಮೂರಿನಲ್ಲೊಂದು ಕ್ವಿಝ್‌ ಕಾರ್ಯಕ್ರಮ ನಡೆಸುವ ಇಚ್ಛೆಯಿದ್ದರೆ ಆ ಬಗ್ಗೆ ನಿಮ್ಮ ಬೇಡಿಕೆಯನ್ನು ವೆಬ್‌ಪುಟದ ಮೂಲಕವೇ ಸಲ್ಲಿಸಬಹುದು. ನಾಣ್ಯ ಸಂಗ್ರಹವು ನಿಮ್ಮ ಆಸಕ್ತಿಗಳಲ್ಲಿ ಒಂದಾಗಿದ್ದರೆ ಆ ಬಗ್ಗೆಯೇ ಒಂದಷ್ಟು ಸ್ವಾರಸ್ಯಕರ ಅಂಶಗಳು ಇಲ್ಲಿ ದಾಖಲಾಗಿವೆ. ‘ಕೌನ್‌ ಬನೇಗಾ ಕರೋಡ್‌ಪತಿ’ಯ ಮತ್ತೊಂದು ಸರಣಿ ಸ್ಟಾರ್‌ ಟೀವಿಯಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಒಂದಷ್ಟು ಕಸರತ್ತು ನಡೆಸುವ ಅಭಿಲಾಶೆ ನಿಮಗಿದ್ದರೆ ಈ ಸೈಟಿನಲ್ಲಿ ನಿಮಗೊಂದಿಷ್ಟು ಜಾಗ ಕಾದಿರಿಸಲಾಗಿದೆ.

ಇಷ್ಟೆಲ್ಲ ಹೆಗ್ಗಳಿಕೆಯ ‘ಗಿರಿ’ಯ ತಲೆಗೆ (ಅಥವಾ ಮಿದುಳಿಗೆ) ಮತ್ತೊಂದು ಗರಿ ಸೇರಿದೆ. ಭಾರತೀಯ ದಾಖಲೆಗಳ ‘ಲಿಮ್ಕಾ’ ಪುಸ್ತಕದಲ್ಲಿ ಗಿರಿಯ ಹೆಸರು ಸೇರ್ಪಡೆಯಾಗಿದೆ. ಒಂದಲ್ಲ ಎರಡಲ್ಲ ಏಳು ವಿಭಾಗದಲ್ಲಿ ಗಿರಿ ಈ ಪುಸ್ತಕದಲ್ಲಿ ದಾಖಲಾಗಿದ್ದಾರೆ. ವಿಶ್ವ ದಾಖಲೆಗಳಿಗೆ ‘ಗಿನ್ನೆಸ್‌’ ಪುಸ್ತಕವಿರುವಂತೆ ಭಾರತೀಯ ಮಟ್ಟದ ದಾಖಲೆಗಳಿಗೆ ಇರುವ ಪುಸ್ತಕ ’ಲಿಮ್ಕಾ’. 1990ರಿಂದ ಪ್ರತಿ ವರ್ಷ ಪ್ರಕಟವಾಗುತ್ತಿರುವ ಪುಸ್ತಕದಲ್ಲೊಂದು ಸ್ಥಾನ ಪಡೆಯಲು ಹರ ಸಾಹಸ ಮಾಡುವ ಸಹಸ್ರಾರು ಮಂದಿ ನಮ್ಮ ದೇಶದಲ್ಲಿದ್ದಾರೆ. ಇದುವರೆಗೂ ಇಂಥದೊಂದು ಪುಸ್ತಕದಲ್ಲಿ ‘ಕ್ವಿಝ್‌’ ಬಗ್ಗೆ ಪ್ರತ್ಯೇಕ ವಿಭಾಗವಿರಲಿಲ್ಲ. ಈ ವರ್ಷವಷ್ಟೇ ಆರಂಭವಾದ ‘ಕ್ವಿಝ್‌’ ವಿಭಾಗದಲ್ಲಿ ಕ್ವಿಝ್‌ ದಿಗ್ಗಜ ಸಿದ್ಧಾರ್ಥ ಬಸು ಎಂಟು ದಾಖಲೆಗಳೊಡನೆ ಮೊದಲ ಸ್ಥಾನ ಪಡೆದಿದ್ದಾರೆ. ತಲಾ ಏಳು ದಾಖಲೆಗಳ ಗಿರಿ ಬಾಲಸುಬ್ರಹ್ಮಣ್ಯಮ್‌ ಮತ್ತು ಡೆರೆಕ್‌ ಓಬ್ರಿಯಾನ್‌ ದ್ವಿತೀಯ ಸ್ಥಾನದಲ್ಲಿದ್ದಾರೆ.

ಪುಸ್ತಕ ಪ್ರಕಟವಾಗುತ್ತಿರುವುದು ಈ ವರ್ಷವಾದರೂ ಅವರ ಈ ಸಪ್ತ ಸಾಧನೆಗಳ ದಾಖಲೆ 1997 ರಿಂದಲೂ ಸೇರ್ಪಡೆಯಾಗಿವೆ. ಈ ದಾಖಲೆಗಳ್ಯಾವುವು? ನಮ್ಮ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಚೆನ್ನೈನಲ್ಲಿ ಗಿರಿ ಕ್ವಿಝ್‌ ಒಂದನ್ನು ನಡೆಸಿದ್ದರು. ಇಡೀ ದಿನ ನಡೆದ ಸಮಾರಂಭದಲ್ಲಿ 522 ರಸಪ್ರಶ್ನೆಗಳನ್ನು ಕೇಳಿದ ದಾಖಲೆ ಇವರದು. ಶಾಲಾ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಪರಿಜ್ಞಾನವೆಷ್ಟಿದೆಯೆಂದು ಇವರು 2000 ದಲ್ಲಿ ಬೆಂಗಳೂರು, ಚೆನ್ನೈ, ತಿರುವನಂತಪುರ, ಹೈದರಾಬಾದ್‌, ದೆಹಲಿ ಮತ್ತು ಕೊಲ್ಕೊತ ನಗರಗಳಲ್ಲಿ ನಡೆಸಿರುವ ರಸಪ್ರಶ್ನೆ ಕಾರ್ಯಕ್ರಮಗಳು ಒಂದು ದಾಖಲೆಯಾಗಿದೆ. ಅಲ್ಲಿಯವರೆಗೆ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಕ್ವಿಝ್‌ ನಡೆಸಿರಲಿಲ್ಲ. ಜೈವಿಕ ತಂತ್ರಜ್ಞಾನದ ಬಗ್ಗೆ ಮೊತ್ತ ಮೊದಲ ಮೇಳವೊಂದು ನಡೆದಿದ್ದು ಬೆಂಗಳೂರಿನಲ್ಲೇ. 2002 ರ ಈ ಮೇಳದಲ್ಲಿ ಗಿರಿ ನಡೆಸಿದ ಕ್ವಿಝ್‌ ಕಾರ್ಯಕ್ರಮದಲ್ಲಿ 2000 ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಇಂಥದೊಂದು ಪ್ರಯತ್ನ ನಮ್ಮ ದೇಶದಲ್ಲೆಲ್ಲೂ ನಡೆದಿರಲಿಲ್ಲ. ‘ಸಾರಿಗೆ, ಪ್ರವಾಸೋದ್ಯಮ ಮತ್ತು ತಂಗುದಾಣ’ಗಳ ಬಗ್ಗೆ ಕಳೆದ ವರ್ಷ ಬೆಂಗಳೂರಿನಲ್ಲಿ ಮೇಳವೊಂದು ಜರುಗಿತ್ತು. ಇಲ್ಲಿ ಭಾಗಿಯಾದವರಿಗೂ ಒಂದು ಕ್ವಿಝ್‌ ನಡೆಸಿದ ಕೀರ್ತಿ ಗಿರಿಯವರದು. ಈ ಹಿಂದೆ ಪ್ರಸ್ತಾಪಿಸಿರುವ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಅರಿವೆಷ್ಟಿದೆ ಎಂದು ಪರಿಶೀಲಿಸಲು ನಡೆಸಿದ ಕ್ವಿಝ್‌ ಕೂಡಾ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ‘ಕ್ವಿಝ್‌’ನಲ್ಲಿ ಭಾಗಿಯಾಗಲು ನಿಮ್ಮ ಬುದ್ಧಿಮಟ್ಟ ಎಷ್ಟಿದೆ ಎಂದು ಪರಿಶೀಲಿಸುವ ‘ಕ್ಯೂಕ್ಯೂ’ ಪರೀಕ್ಷೆಯೂ ಪುಸ್ತಕದ ಪುಟಗಳಲ್ಲಿ ಸ್ಥಾನ ಗಿಟ್ಟಿಸಿದೆ. ಶಾಲಾ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಬಗ್ಗೆ ಎಷ್ಟು ಅರಿವಿದೆಯೆಂದು ಪರೀಕ್ಷಿಸಲು ಕಳೆದ ವರ್ಷ ಗಿರಿ ಕ್ವಿಝ್‌ ಆಯೋಜಿಸಿದ್ದರು. ಎರಡು ಸಾವಿರ ಸ್ಪರ್ಧಿಗಳಿದ್ದ ಈ ಕಾರ್ಯಕ್ರಮವೂ ಒಂದು ಲಿಮ್ಕಾ ದಾಖಲೆಯಾಗಿ ಸೇರಿದೆ.

‘ರಸಪ್ರಶ್ನೆ’ಗಳೆಂದರೆ ಕೇವಲ ಮಿದುಳಿನ ಕಸರತ್ತು ಮಾತ್ರವಲ್ಲ. ಬುದ್ಧಿವಂತಿಕೆಯಾಂದಿಗೆ ಅಸಾಧಾರಣ ತಾಳ್ಮೆ ಮತ್ತು ಗ್ರಹಿಕೆಯೂ ಬೇಕೆನ್ನುತ್ತಾರೆ ಗಿರಿ. ಮುಂಚೂಣಿ ಕ್ಷೇತ್ರಗಳಾದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಗಿರಿಯವರಿಗೆ ವಿಶೇಷ ಆಸಕ್ತಿಯಿದ್ದರೂ ಆರೋಗ್ಯ ವಿಜ್ಞಾನ ವಿಭಾಗದ ಕ್ವಿಝ್‌ಗಳೆಂದರೆ ಅವರಿಗೆ ತೀವ್ರ ಕುತೂಹಲ. 2001ರ ಐಟಿ ಡಾಟ್‌ ಕಾಮ್‌ನಲ್ಲಿ ಬಿಡುಗಡೆಯಾದ ಗಿರಿಯವರ Know IT Better ಪುಸ್ತಕಕ್ಕೆ ಭಾರತದ ಮೊದಲ ಮಾಹಿತಿ ತಂತ್ರಜ್ಞಾನದ ಕ್ವಿಝ್‌ ಪುಸ್ತಕವೆಂಬ ಹೆಗ್ಗಳಿಕೆಯಿದೆ. ಗಿರಿಯವರಂಥ ಪ್ರತಿಭಾನ್ವಿತ ಕ್ವಿಝ್‌ ಮಾಸ್ಟರ್‌ ನಮ್ಮ ದೇಶದಲ್ಲಿ ಇನ್ಯಾರಿದ್ದಾರೆ? ಎಂಬ ಪ್ರಶ್ನೆ ಎದುರಾದರೆ ತಲೆ ಕೆರೆದು ನಿಲ್ಲಬೇಕಿಲ್ಲ. ನೇರವಾಗಿ ಗಿರಿಯನ್ನು ಸಂಪರ್ಕಿಸಲಾಗದಿದ್ದರೆ ಅವರ ವೆಬ್‌ಸೈಟ್‌ ಮೂಲಕ ಅವರಿಗೇ ಒಂದು ಪ್ರಶ್ನೆ ಕಳುಹಿಸಿಬಿಡಿ.

(ವಿಜಯ ಕರ್ನಾಟಕ)

ಪೂರಕ ಓದಿಗೆ-

ಲಿಮ್ಕಾ ಪುಸ್ತಕದಲ್ಲಿ ಕಾಮನಬಿಲ್ಲು ಬರೆದ ಬೆಂಗಳೂರಿನ ಗಿರಿ

Click here to go to top

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more