ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತಿರವಿದೆ ಬೇಸಗೆ, ಪ್ರವಾಸಕ್ಕಿದೋ ದಾರಿದೀವಿಗೆ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕಕ್ಕೆ ಬರುವ ಪ್ರವಾಸಿಗರು ಮಾರ್ಚ್‌ 2003ರಿಂದ ತಾಣಗಳಿಗೆ ಹೋಗುವುದು ಹೇಗೆ ಅಂತ ಕಂಡಕಂಡವರನ್ನು ಕೇಳುವ ಅಗತ್ಯವಿಲ್ಲ. ಪ್ರವಾಸಿಗರಿಗೆ ದಾರಿ ತೋರುವ 70 ಲಕ್ಷ ರುಪಾಯಿ ವೆಚ್ಚದ ಹೊಸ ಗ್ರಾಫಿಕ್‌ ಬೋರ್ಡಿನ ವ್ಯವಸ್ಥೆಯನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಜಾರಿಗೆ ತರುತ್ತಿದೆ.

ಕೇಂದ್ರ ಸರ್ಕಾರದ ಸಹಾಯದೊಂದಿಗೆ ಈ ಹೊಸ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಇದೇ ವರ್ಷ ಮಾರ್ಚ್‌ ತಿಂಗಳ ಹೊತ್ತಿಗೆ ಇದು ಕಾರ್ಯರೂಪಕ್ಕೆ ಬರಲಿದೆ. ಪ್ರವಾಸಿಗರು ಹೋಗಬೇಕಾದ ಜಾಗೆಯ ದೂರ, ಮಾರ್ಗಗಳು, ಮಾರ್ಗಗಳ ನಡುವೆ ಸಿಗುವ ಜಾಗೆಗಳು, ವಸತಿ ವ್ಯವಸ್ಥೆ ವಗೈರೆ ವಿವರಗಳಿಗೆ ಇದರಿಂದ ಪರದಾಡುವುದು ತಪ್ಪಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಆಯುಕ್ತ ಮತ್ತು ಕೆಎಸ್‌ಟಿಡಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಐ.ಎಂ.ವಿಠ್ಠಲ ಮೂರ್ತಿ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಯೋಜನೆಯಡಿ 129 ಪ್ರಮುಖ ಪ್ರವಾಸಿ ತಾಣಗಳ ಕುರಿತ ಮಾಹಿತಿ ಕಲೆಹಾಕಲಾಗುತ್ತಿದೆ. ಈ ಪೈಕಿ ಹೊರ ರಾಜ್ಯದ ಹಾಗೂ ಹತ್ತಿರದ 119 ಇತರೆ ಪ್ರವಾಸಿ ತಾಣಗಳಿಗೆ ದಾರಿ ತೋರಬಲ್ಲ 13 ಮೂಲ ಪ್ರೇಕ್ಷಣೀಯ ಸ್ಥಳಗಳೂ ಸೇರಿವೆ. ರಸ್ತೆ ದಾರಿಗಳನ್ನು ತೋರುವ ಈ ವಿಶೇಷ ವ್ಯವಸ್ಥೆಗೆ ಕರ್ನಾಟಕ ಸರ್ಕಾರ 40 ಲಕ್ಷ ರುಪಾಯಿ ವಿನಿಯೋಗಿಸುತ್ತಿದೆ. ಹಂಪಿ ದಾರಿದೀವಿಗೆಗಾಗಿ ಕೇಂದ್ರ ಸರ್ಕಾರ 30 ಲಕ್ಷ ರುಪಾಯಿ ಖರ್ಚು ಮಾಡಲಿದೆ. ಡಿಸೈನ್‌ ಕೋರ್‌ ಇಂಡಿಯಾ ಪ್ರೆೃವೇಟ್‌ ಲಿಮಿಟೆಡ್‌ಗೆ ಹೊಸ ಯೋಜನೆಯನ್ನು ವಹಿಸಲಾಗಿದೆ ಎಂದು ವಿಠ್ಠಲ ಮೂರ್ತಿ ಹೇಳಿದರು.

ಪ್ರಮುಖ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಅನೇಕ ಕಡೆಗಳಲ್ಲಿ ವಿಶೇಷ ಗ್ರಾಫಿಕ್‌ ಬೋರ್ಡುಗಳನ್ನು ನಿಲ್ಲಿಸಲಾಗುವುದು. ಈ ಬೋರ್ಡಿನಲ್ಲಿ ಸಚಿತ್ರ ವಿವರಣೆಗಳು ಬರವಣಿಗೆಯ ಜೊತೆಗೆ ಸಿಗಲಿವೆ. ಅಷ್ಟೇ ಅಲ್ಲದೆ, ಪ್ರವಾಸೀ ನಕಾಶೆಯನ್ನೂ ಬೋರ್ಡಿನಲ್ಲಿ ಬರೆಯಲಾಗುವುದು. ಇದರಿಂದ ಇಡೀ ಪ್ರವಾಸದ ಕಾರ್ಯಕ್ರಮವನ್ನು ಮೊದಲೇ ಅಚ್ಚುಕಟ್ಟಾಗಿ ರೂಪಿಸಿಕೊಳ್ಳುವುದು ಸಾಧ್ಯ ಎಂದರು.

ಡಿಸೆಂಬರ್‌ಗೆ ಗಾಲಿ ಮೇಲೆ ಅರಮನೆ : ರಾಜಾಸ್ಥಾನದಲ್ಲಿರುವಂತೆ ‘ಗಾಲಿಗಳ ಮೇಲೆ ಅರಮನೆ’ ಐಷಾರಾಮಿ ರೈಲು ಕರ್ನಾಟಕದಲ್ಲಿ ಓಡಾಡೋದು ಯಾವಾಗ ಎಂಬ ಪ್ರಶ್ನೆಗೆ, ಡಿಸೆಂಬರ್‌ 2003ರ ಹೊತ್ತಿಗೆ ಹಳಿಗಳ ಮೇಲೆ ಅರಮನೆ ಓಡೋದು ಗ್ಯಾರಂಟಿ ಎಂದು ವಿಠ್ಠಲ ಮೂರ್ತಿ ಉತ್ತರಿಸಿದರು. ರಾಜಾಸ್ಥಾನದಲ್ಲಿ ರೈಲಿನ ಪ್ಯಾಕೇಜ್‌ಗೆ 350 ಅಮೆರಿಕನ್‌ ಡಾಲರ್‌ ವಸೂಲು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಇದು ಕೇವಲ 250 ಅಮೆರಿಕನ್‌ ಡಾಲರ್‌ಗೇ ಲಭ್ಯವಾಗಲಿದೆ ಎಂದು ಹೇಳಿದರು.

ಸೀಸನ್‌ಗಳಲ್ಲದ ವೇಳೆಯಲ್ಲಿ ಪ್ರಯಾಣಿಕರು ಕಡಿಮೆ ಇರುವಾಗ ಈ ರೈಲಿನ ಪ್ರಯಾಣ ಇನ್ನೂ ಅಗ್ಗ. 150 ಡಾಲರ್‌ಗೆ ನಾಲ್ಕು ರಾತ್ರಿ, ಐದು ಹಗಲಿನ ಸಂಚಾರ ಸಾಧ್ಯವಾಗಲಿದೆ. ರೈಲಿನಲ್ಲಿ ಸೆಲ್‌ಫೋನ್‌ ಹಾಗೂ ಇಂಟರ್ನೆಟ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ರಾಜಾಸ್ಥಾನದಲ್ಲಿ ಈ ಐಷಾರಾಮಿ ರೈಲಿಗೆ 30 ಕೋಟಿ ರುಪಾಯಿ ವೆಚ್ಚ ಮಾಡಲಾಗಿತ್ತು. ಆದರೂ, ಅಲ್ಲಿ ನಾವು ಮಾಡಹೊರಟಿರುವ ಅನೇಕ ಸವಲತ್ತುಗಳು ಇಲ್ಲ ಎಂದರು.

ಹೊಯ್ಸಳರ ಅಂಗಡಿಗೆ ಕಾಯಕಲ್ಪ : ಕೊಕ್ಕರೆ ಬೆಳ್ಳೂರು ಪಕ್ಷಿಧಾಮದ ಅಭಿವೃದ್ಧಿಯ ಜೊತೆಗೆ ಮಂಡ್ಯ ಜಿಲ್ಲೆಯಲ್ಲಿ ಇನ್ನೊಂದು ಗ್ರಾಮೀಣ ಪ್ರವಾಸೋದ್ಯಮದ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಇದಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಅಂಗಡಿಯ ಉದ್ಧಾರಕ್ಕೂ ಕೈಹಾಕಿದ್ದೇವೆ. ಹೊಯ್ಸಳರ ಕಾಲದ ಅನೇಕ ಪಳೆಯುಳಿಕೆಗಳನ್ನು ಹುದುಗಿಸಿಕೊಂಡಿರುವ ಅಂಗಡಿಯಲ್ಲಿ ಸುಂದರ ದೇವಾಲಯವೂ ಉಂಟು. ಬೇಲೂರು- ಹಳೇಬೀಡು ಮತ್ತು ಶ್ರವಣ ಬೆಳಗೊಳ ನೋಡಲು ಬರುವ ಪ್ರವಾಸಿಗರು ಇದನ್ನೂ ನೋಡುವಂತೆ ಮಾಡುವುದು ನಮ್ಮ ಗುರಿ. ಪ್ರಾಚ್ಯ ವಸ್ತು ಸಂಗ್ರಹಣಾ ಇಲಾಖೆಯು ದೇವಸ್ಥಾನದ ರಕ್ಷಣೆಯ ಉಸ್ತುವಾರಿ ವಹಿಸಿಕೊಳ್ಳಲಿದೆ. ಪ್ರವಾಸೋದ್ಯಮದ ಮೂಲಭೂತ ಸೌಕರ್ಯ ಕಲ್ಪಿಸುವುದು ಕೆಸಿಟಿಡಿಸಿ ಜವಾಬ್ದಾರಿ.

ಕಾರವಾರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ಕರಾವಳಿ ಪ್ರವಾಸೋದ್ಯಮದ ಕೆಲಸಕ್ಕೂ ಚಾಲನೆ ಸಿಗಲಿದೆ. ಕೇಂದ್ರ ಸರ್ಕಾರ ಈ ಯೋಜನೆಗೆಂದೇ 2 ಕೋಟಿ ರುಪಾಯಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ವಿಠ್ಠಲ ಮೂರ್ತಿ ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X