ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನಷ್ಟು ಕಾಲ ಕರುಣೆ ತೋರಪ್ಪಾ ವೀರಪ್ಪಾ : ಸರ್ಕಾರ

By Staff
|
Google Oneindia Kannada News

ಬೆಂಗಳೂರು : ಸಂಧಾನಕಾರನಾಗಿ ಕೊಳತ್ತೂರು ಮಣಿಯನ್ನು ಕಳಿಸಲು ವೀರಪ್ಪನ್‌ ಕೊಟ್ಟಿರುವ 12 ದಿನಗಳ ಗಡುವು ನ.30ಕ್ಕೆ ಮುಗಿಯುತ್ತಿದೆ. ಈ ಗಡುವನ್ನು ವಿಸ್ತರಿಸುವಂತೆ ವೀರಪ್ಪನ್‌ನನ್ನು ಕೋರಬೇಕೆಂದು ಆಹಾರ ಮತ್ತು ಸಂಸ್ಕರಣಾ ಖಾತೆ ಸಚಿವ ಎ.ರಾಜೂಗೌಡರನ್ನು ಸರ್ಕಾರ ಕೇಳಿದೆ.

ವಿಚಾರಣಾಧೀನ ಕೈದಿಯಾಗಿರುವ ಮಣಿಯನ್ನು ಬಿಡಿಸುವ ನಿಟ್ಟಿನಲ್ಲಿ ಕಾನೂನು ತೊಡಕುಗಳಿವೆ. ಆದ್ದರಿಂದ ವೀರಪ್ಪನ್‌ ಈಗ ಕೊಟ್ಟಿರುವ ಗಡುವಿನಲ್ಲಿ ಮಣಿಯನ್ನು ಸಂಧಾನಕ್ಕೆ ಕಳಿಸುವುದು ಅಸಾಧ್ಯ. ಹೀಗಾಗಿ ರೇಡಿಯೋ ಸಂದೇಶದ ಮೂಲಕ ವೀರಪ್ಪನ್‌ಗೆ ವಾಸ್ತವವನ್ನು ಮನವರಿಕೆ ಮಾಡಿಕೊಡಬೇಕೆಂದು ರಾಜೂಗೌಡರನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಕೇಳಿಕೊಂಡಿದ್ದಾರೆ.

ಶನಿವಾರ (ನ.30) ದಿಂದಲೇ ಕೊಯಮತ್ತೂರು ಮತ್ತು ಚೆನ್ನೈ ಆಕಾಶವಾಣಿ ಕೇಂದ್ರಗಳಿಂದ ರಾಜೂಗೌಡರ ಕೋರಿಕೆ ಬಿತ್ತರವಾಗಲಿದೆ. ತಮಿಳು ಭಾಷೆಯಲ್ಲಿ ರಾಜೂಗೌಡರು ವೀರಪ್ಪನ್‌ಗೆ ಗಡುವು ವಿಸ್ತರಿಸುವಂತೆ ಮನವಿ ಮಾಡಲಿದ್ದಾರೆ.

ನಾಗಪ್ಪನವರ ಬಿಡುಗಡೆ ಪ್ರಕ್ರಿಯೆ ಪರಿಶೀಲಿಸಲು ಖುದ್ದು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಉನ್ನತ ಮಟ್ಟದ ಸಮಿತಿಯ ಸಭೆ ಶನಿವಾರ ನಡೆಯಿತು. ಸಭೆಯ ನಂತರ ಸುದ್ದಿಗಾರರ ಜೊತೆ ಮಾತಾಡಿದ ಖರ್ಗೆ, ಗಡುವು ವಿಸ್ತರಿಸುವಂತೆ ವೀರಪ್ಪನ್‌ ಮನವೊಲಿಸುವ ತೀರ್ಮಾನವನ್ನು ಹೇಳಿದರು.

ಮಣಿಯನ್ನೇ ಸಂಧಾನಕ್ಕೆ ಕಳುಹಿಸಲು ಸರ್ಕಾರ ಶತಾಯ ಗತಾಯ ಯತ್ನಿಸುತ್ತಿದೆ ಎಂಬ ವಿಷಯವನ್ನು ನಾಗಪ್ಪನವರು ವೀರಪ್ಪನ್‌ಗೆ ಮನವರಿಕೆ ಮಾಡಿಕೊಟ್ಟಿರುತ್ತಾರೆ ಎಂಬ ವಿಶ್ವಾಸವಿದೆ. ಆತುರ ತೋರದೆ, ಇನ್ನೂ ಸ್ವಲ್ಪ ದಿನ ಗಡುವು ವಿಸ್ತರಿಸುವಂತೆ ವೀರಪ್ಪನ್‌ ಮನವೊಲಿಸಬೇಕೆಂದು ರಾಜೂಗೌಡರನ್ನು ಕೇಳಿಕೊಂಡಿದ್ದೇವೆ ಎಂದು ಖರ್ಗೆ ತಿಳಿಸಿದರು.

ಕರ್ನಾಟಕ ಪೊಲೀಸ್‌ ಮಹಾ ನಿರ್ದೇಶಕ ಟಿ.ಮಡಿಯಾಳ್‌, ರಾಜ್ಯದ ಭದ್ರತಾ ಸಲಹೆಗಾರ ಟಿ.ಶ್ರೀನಿವಾಸುಲು, ಸಹಾಯಕ ಪೊಲೀಸ್‌ ಮಹಾ ನಿರ್ದೇಶಕ ಕೆ.ಶ್ರೀನಿವಾಸನ್‌ ಮತ್ತು ಬೇಹುಗಾರಿಕಾ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕ ಬ್ಯಾನರ್ಜಿ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದರು.

ಕರ್ನಾಟಕ ಹೈಕೋರ್ಟ್‌ ಈಗಾಗಲೇ ಮಣಿಗೆ ಮೂರು ಕೇಸುಗಳಲ್ಲಿ ಷರತ್ತು ಜಾಮೀನು ಕೊಟ್ಟಿದೆ. ಚಾಮರಾಜ ನಗರ ಕೋರ್ಟಿನ ಮತ್ತೊಂದು ಪ್ರಕರಣದ ವಿಚಾರಣೆ ಡಿಸೆಂಬರ್‌ 4ಕ್ಕೆ ಮುಂದಕ್ಕೆ ಹೋಗಿದೆ.

(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X