ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದನ್ನ ಕಂಡರೆ ಐಟಿಗೆ ಮಣ್ಣು ಹಾಕಬೇಕು ಅನ್ಸುತ್ತೆ !

By Staff
|
Google Oneindia Kannada News

*ಶರತ್‌ ಕುಮಾರ್‌, ಬೆಂಗಳೂರು

ಐಟಿ ಐಟಿ ಅಂತ ಬೊಂಬಡಾ ಬಜಾಯಿಸುವ ಸರ್ವರ ಅವಗಾಹನೆಗೆ -
‘ಐಟಿ ಫಾರ್‌ ಕಾಮನ್‌ ಮ್ಯಾನ್‌’- ಇಂಥದೊಂದು ಅಜೆಂಡಾ ಮುಂದಿಟ್ಟುಕೊಂಡು ನಮ್ಮ ಸರ್ಕಾರ ಮೇಳಗಳನ್ನು ನಡೆಸಿ, ಅಂಗಡಿ ತೆರೆದಿದ್ದೇ ತೆರೆದಿದ್ದು. ಬಂಡವಾಳ ಕುಳಗಳ ಸೆಳೆದಿದ್ದೇ ಸೆಳೆದಿದ್ದು. ಚಿಣ್ಣರ ಚೆನ್ನ ರಾಷ್ಟ್ರಪತಿ ಅಬ್ದುಲ್‌ ಕಲಾಂ ಕೂಡ ಇದೇ ಅಜೆಂಡಾ ಇಟ್ಟುಕೊಂಡು ಮೊನ್ನೆ ನಡೆದ ಬೆಂಗಳೂರು ಐಟಿ ಡಾಟ್‌ ಕಾಂ ಮೇಳದಲ್ಲಿ ಪಾಠವನ್ನೂ ಮಾಡಿ ಹೋದರು. ಆದರೆ ಅದನ್ನು ಕೇಳಿದವರ ಪೈಕಿ ‘ಕಾಮನ್‌ ಮ್ಯಾನ್‌’ ಯಾರು ಅನ್ನೋದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆ.

ಭೂಮಿ ಅನ್ನುವ ವ್ಯವಸ್ಥೆಯಲ್ಲಿ ಭೂದಾಖಲೆ ಪಡೆಯಬಹುದು ಅನ್ನುವ ವಿಷಯ ತಿಳಿದಿರುವ ರೈತರೆಷ್ಟು ಅಂತ ಯಾವತ್ತಾದರೂ ಸರ್ಕಾರ ತಲೆ ಕೆಡಿಸಿಕೊಂಡಿದೆಯೇ? ಬ್ಯಾಂಕಿನ ಚಲನ್‌ ತುಂಬಿಸಿ, ಹಣ ಇಸಿದುಕೊಳ್ಳುವುದಕ್ಕೂ ಪಡುಪಾಟಲು ಪಡುವ ನಮ್ಮ ಬಡ ಜನತೆಯನ್ನು ಐಟಿ ಇರಲಿ, ಸರಿಯಾದ ಮೂಲಭೂತ ಸೌಕರ್ಯವೇ ತಲುಪುತ್ತಿಲ್ಲ.

ಮೊನ್ನೆ ಬೆಂಗಳೂರಿನ ಬ್ಯಾಂಕೊಂದರಲ್ಲಿ ನಡೆದ ಘಟನೆಯಿದು-
ಒಂದು ಅಜ್ಜಿ ಅದೇಕೋ ಬ್ಯಾಂಕಿಗೆ ಬಂದಿತ್ತು. ಕುಂತಲ್ಲೇ ಸುಮಾರು ಅರ್ಧ ಗಂಟೆ ಕೂತಿತ್ತು. ಅದೆಂಥದೋ ಚಡಪಡಿಕೆ. ಆಮೇಲೆ ನೇರವಾಗಿ ಚೆಕ್‌ ಇಸಿದುಕೊಳ್ಳುವ ಹೆಂಗಸಿನತ್ತ ಹೋಗಿ ‘ಇಲ್ಲಿ ಒಂದ ಮಾಡೋಕೆ ತಾವೆಲ್ಲೈತೆ’ ಅಂತ ಬಿಗುಮಾನವಿಲ್ಲದೆ ಕೇಳಿತು ಮುಗ್ಧ ಅಜ್ಜಿ ! ಆ ಹೆಂಗಸಿಗೋ ಕನ್ನಡ ಬರುತ್ತಿರಲಿಲ್ಲ. ಕೊನೆಗೆ ನಾನು ಆ ಅಜ್ಜಿ ರೀಸಸ್‌ಗೆ ಹೋಗೋಕೆ ಜಾಗ ಎಲ್ಲಿ ಅಂತ ಕೇಳ್ತಿದೆ ಅಂತ ಇಂಗ್ಲಿಷಲ್ಲಿ ಹೇಳಿ ತಿಳಿಸಿದೆ. ಅದಕ್ಕೆ ಆ ಹೆಂಗಸು, ಕಸ್ಟಮರ್‌ಗಳಿಗೆ ಬ್ಯಾಂಕಲ್ಲಿ ಅದಕ್ಕೆ ಅವಕಾಶ ಇಲ್ಲ ಅಂದುಬಿಡೋದೆ? ಮಾನವೀಯತೆಯೇ ಇಲ್ಲವಾ ಅಂತ ನಾನೂ ಸೇರಿದಂತೆ ಕೆಲವರು ತರಾಟೆಗೆ ತೆಗೆದುಕೊಂಡ ನಂತರ ಸಿಬ್ಬಂದಿಯ ಶೌಚಾಲಯಕ್ಕೇ ಹೋಗಲು ಅಜ್ಜಿಗೆ ಅನುಮತಿ ಸಿಕ್ಕಿತು.

ಇದೊಂದು ನಮೂನೆ. ಬ್ಯಾಂಕಿಗೆ ಬರುವ ಅದೆಷ್ಟೋ ಮಂದಿ ಇಂಥ ತೊಂದರೆ ಅನುಭವಿಸಬಹುದು. ಹೋದ ತಕ್ಷಣ ಕೆಲಸ ಮುಗಿಸಿಕೊಂಡು ಬರುವಂಥಾ ಬ್ಯಾಂಕುಗಳಾದರೂ ನಮ್ಮಲ್ಲೆಷ್ಟು ಹೇಳಿ? ಈ ರೀತಿಯ ಸಣ್ಣ ಪುಟ್ಟ ಸಮಸ್ಯೆಗಳು ಇದಿರಾದಾಗಲೇ ಅನ್ನಿಸೋದು; ಮಣ್ಣು ಹಾಕಬೇಕು ಈ ಐಟಿಗೆ ಅಂತ !

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X