ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಹತ್ತಿರ ರಾಕೆಟ್‌ ಲಾಂಚರ್‌: ಕೃಷ್ಣಸ್ವಾಮಿ

By Staff
|
Google Oneindia Kannada News

ಚೆನ್ನೈ : ವೀರಪ್ಪನ್‌ ಬಳಿ ಆರ್‌ಪಿಜಿ-7 ರಾಕೆಟ್‌ ಉಡಾಯಕ(ಲಾಂಚರ್‌)ವಿದ್ದು, 3 ಮೈಲು ದೂರಕ್ಕೆ ಅವನು ಗುರಿಯಿಟ್ಟು ಬೆಂಕಿ ಕಾರಬಲ್ಲ ಎಂದು ಇಲ್ಲಿನ ಹಿರಿಯ ವಕೀಲ ಎಸ್‌.ಕೃಷ್ಣಸ್ವಾಮಿ ಆಂಗ್ಲ ಡಾಟ್‌ ಕಾಂ ಒಂದಕ್ಕೆ ತಿಳಿಸಿದ್ದಾರೆ.

ಮೇ, 1998ರಲ್ಲಿ ಈ ವಕೀಲರು 11 ದಿನಗಳ ಕಾಲ ವೀರಪ್ಪನ್‌ ಒತ್ತೆಯಾಳಾಗಿದ್ದರು. ಎಸ್‌ಟಿಎಫ್‌ ಕಾರ್ಯಾಚರಣೆಯಿಂದ ಇವರನ್ನು ಬಿಡಿಸಿ ಕರೆ ತರಲಾಗಿತ್ತು. ಕರ್ನಾಟಕದ ಪೊಲೀಸ್‌ ಮೂಲಗಳಿಂದ ವೀರಪ್ಪನ್‌ ಬಳಿ ರಾಕೆಟ್‌ ಉಡಾಯಕ ಇರುವ ವಿಚಾರ ತಮಗೆ ತಿಳಿಯಿತು ಎಂದಿರುವ ಕೃಷ್ಣಸ್ವಾಮಿ, ಈಗಾಗಲೇ ಕೇಂದ್ರ ಸರ್ಕಾರದ ಕಿವಿಗೂ ಈ ವಿಷಯ ಹಾಕಿದ್ದಾರೆ.

ವೀರಪ್ಪನ್‌ನಿಂದ ತಮ್ಮ ಬಿಡುಗಡೆಯಾದ ನಂತರ ಕೇಂದ್ರ ಗೃಹ ಸಚಿವ ಎಲ್‌.ಕೆ.ಅಡ್ವಾಣಿ ಅವರಿಗೆ ಈ ವಿಷಯ ಕುರಿತು ಪತ್ರವನ್ನೂ ಕೃಷ್ಣಸ್ವಾಮಿ ಬರೆದಿದ್ದರಂತೆ. ಆದರೆ ಸರ್ಕಾರ ಇದಕ್ಕೆ ಮುಗುಮ್ಮಾಗೇ ಪ್ರತಿಕ್ರಿಯಿಸಿದೆ.

ವೀರಪ್ಪನ್‌ಗೆ ಪೊಲೀಸರೆಂದರೆ ಮೈಯೆಲ್ಲಾ ಉರಿಯುತ್ತೆ. ಅವನು ರಾಕೆಟ್‌ ಉಡಾಯಕ ಇಟ್ಟುಕೊಂಡಿರುವುದೇ ತಮಿಳುನಾಡಿನ ಪೊಲೀಸ್‌ ಠಾಣೆಗಳನ್ನು ಧ್ವಂಸ ಮಾಡೋಕೆ. ಈಗ ಎಸ್‌ಟಿಎಫ್‌ ಕಾರ್ಯಾಚರಣೆ ಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಹೊರ ಜಗತ್ತಿನತ್ತ ಅವನು ಸುಲಭವಾಗಿ ನಿಗಾ ಇಡಬಹುದಾಗಿದೆ. ಅವನ ಬಳಿ ಇರುವ ರಾಕೆಟ್‌ ಉಡಾಯಕದಿಂದ 3 ಮೈಲು ದೂರದಲ್ಲಿ ಮೇಲೆ ಹಾರುವ ವಿಮಾನ ಅಥವಾ ಹೆಲಿಕಾಪ್ಟರನ್ನೂ ನಾಶಪಡಿಸಬಹುದಾಗಿದೆ ಎನ್ನುತ್ತಾರೆ ಕೃಷ್ಣಸ್ವಾಮಿ.

‘ಮ್ಯಾಜಿಕ್‌ ಅಂದರೆ ವೀರಪ್ಪನ್‌ಗೆ ಬಲು ಇಷ್ಟ. ಪೊಲೀಸರು ಬಂದರೆ ಮಾಯವಾಗೋದು ಹೇಗೆ ಅಂತ ನನ್ನ ಕೇಳಿದ್ದ. ಪಿ.ಸಿ.ಸರ್ಕಾರ್‌ ಅಂತ ಒಬ್ಬರಿದ್ದಾರೆ, ಅವರನ್ನ ಕೇಳು ಅಂದಾಗ ನಕ್ಕಿದ್ದ. ಅವರು ಮ್ಯಾಜಿಕ್‌ ಬಗ್ಗೆ ಬರೆದಿರೋ ಪುಸ್ತಕ ಓದು ಅಂದೆ. ಎಲ್ಲಿ ಸಿಗುತ್ತೆ ಅಂತ ಕೇಳಿದ. ಹಿಗ್ಗಿನ್‌ಬಾಥಮ್ಸ್‌ನಲ್ಲಿ ಸಿಗುತ್ತೆ ಅಂದೆ. ಅದನ್ನ ಡೈರಿನಲ್ಲಿ ಬರೆದುಕೊಂಡ’ ಅಂತ ಕೃಷ್ಣಸ್ವಾಮಿ ನಗುನಗುತ್ತಾ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X