• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನಕರ್‌ ಪುಸ್ತಕದಲ್ಲಿ ಏನಿದೆ? ಚಲ್ಲಾಪಿಲ್ಲಿ ಟಿಪ್ಪಣಿಗಳು..

By Staff
|

ಹದಿನಾಲ್ಕು ನವೆಂಬರ್‌ 2000

ಡಿಐಜಿ ಜಯಪ್ರಕಾಶ್‌ ತೆಗೆದುಕೊಂಡ ಸಾಮಾನು ಸರಂಜಾಮುಗಳನ್ನು ಟಾಟಾ ಸುಮೋದೊಳಕ್ಕೆ ಇಡಲಾಯಿತು. ನೆಡುಮಾರನ್‌ ಮತ್ತು ಅವರ ಇಬ್ಬರು ಸಹಾಯಕರು ಬೆಳಗ್ಗೆಯೇ ಈರೋಡ್‌ನಿಂದ ಹೊರಟು ವೀರಪ್ಪನ್‌ ಅಡಗುದಾಣ ಸೇರಿದ್ದರು. ಅವರು ಇಷ್ಟು ಬೇಗ ಅಡಗುದಾಣ ಸೇರಿದ್ದು ಆಶ್ಟರ್ಯ ! ಯಾಕೆಂದರೆ, ನಕ್ಕೀರನ್‌ ಗೋಪಾಲ್‌ ವೀರಪ್ಪನನ್ನು ಭೇಟಿ ಮಾಡಬೇಕೆಂದರೆ, ಅರಣ್ಯದ ಅಂಚಿನಲ್ಲಿ ಸಂಕೇತಕ್ಕಾಗಿ ಕಾದು ನಿಲ್ಲುತ್ತಿದ್ದ. ನಂತರ ವೀರಪ್ಪನ್‌ ಸಹಚರನೊಬ್ಬ ಬಂದು ಗೋಪಾಲ್‌ನನ್ನು ಕರೆದೊಯ್ಯುತ್ತಿದ್ದ. ನೆಡುಮಾರನ್‌ ಬಗ್ಗೆ ವೀರಪ್ಪನ್‌ಗೆ ಅಪಾರ ಗೌರವ, ಆದರ ಇರುವುದರಿಂದ ಆತ ಅವರನ್ನು ಹೆಚ್ಚು ಕಾಯಿಸಿಲ್ಲ.

ಜಯಪ್ರಕಾಶ್‌ ತೆಗೆದುಕೊಂಡು ಹೋದ ಸಾಮಾನು ಸರಂಜಾಮುಗಳನ್ನು ನೋಡಿ ವೀರಪ್ಪನ್‌ ಖುಷಿಯಾದ. ಜಿಂಕೆಯಾಂದನ್ನು ಕೊಂದು ಔತಣಕ್ಕೆ ಅಣಿಮಾಡುವಂತೆ ಸಂಗಡಿಗ ಮಾರನ್‌ಗೆ ಹೇಳಿದ.

ಈ ಮಧ್ಯೆ, ನಕ್ಕೀರನ್‌ ಗೋಪಾಲ್‌ ಚೆನ್ನೈನಲ್ಲೇ ಇದ್ದ. ತಾನು ವೀರಪ್ಪನ್‌ ಕಳಿಸುವ ಸಂಕೇತಕ್ಕಾಗಿ ಕಾಯುತ್ತಿರುವುದಾಗಿ ಆತ ಹೇಳುತ್ತಿದ್ದ. ಸಂಕೇತ ಯಾವುದಕ್ಕಾಗಿ? ಔತಣಕ್ಕಾಗಿಯೋ? ಅಥವಾ ವೀರಪ್ಪನ್‌ಗೆ ಬರಬೇಕಾದ ಬಾಕಿ ಹಣ ಕೊಡುವುದಕ್ಕಾಗಿಯೋ?

ಕಳೆದ ಕೆಲದಿನಗಳಿಂದ ಏನು ನಡೆಯುತ್ತಿದೆ? ಎಂಬ ಬಗ್ಗೆ ಮಾಧ್ಯಮಗಳಿಗೆ ಸ್ವಲ್ಪವೂ ಗೊತ್ತಿಲ್ಲ. ಪತ್ರಿಕೆಗಳಲ್ಲಿ ಅಂದಾಜಿನ ಮೇಲೆ ವರದಿಗಳನ್ನು ನೀಡಲಾಗುತ್ತಿದೆ. ಒಂದು ಪತ್ರಿಕೆಯಂತೂ ವೀರಪ್ಪನ್‌ ಮತ್ತು ಮಾರನ್‌ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವುದರಿಂದ ಗೋಪಾಲ್‌ ಈ ಬಾರಿ ಕಾಡಿಗೆ ಹೋಗಿಲ್ಲ ಎಂದು ಬರೆದಿದೆ. ಈ ಸುದ್ದಿಯ ಮೂಲ ಯಾವವಿರಬಹುದು? ಬಹುಶಃ ಮದ್ಯದ ಬಾಟಲಿ ಇರಬಹುದು ಎಂದು ನನಗನ್ನಿಸುತ್ತದೆ.

ನಂತರ, ವೀರಪ್ಪನ್‌, ನೆಡುಮಾರನ್‌ ಹಾಗೂ ಇತರ ಸಂಧಾನಕಾರರೊಂದಿಗೆ ಹರಟೆ ಹೊಡೆಯುತ್ತಾನೆ. ಅವನಿಗಂತೂ ಹೇಳಲಾರದಷ್ಟು ಸಂತೋಷವಾಗಿದೆ. ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರೊಂದಿಗೆ ಮೊಬೈಲ್‌ನಲ್ಲಿ ಮಾತಾಡಿದ್ದು ಅವನಿಗೆ ಥ್ರಿಲ್‌ ಉಂಟುಮಾಡಿತ್ತು. ರಾಮ್‌ಕುಮಾರ್‌ ತನ್ನ ಮೊಬೈಲಿನಿಂದ ಕೃಷ್ಣರನ್ನು ಸಂಪರ್ಕಿಸಿದರು. ಅವರೊಂದಿಗೆ ಮೊದಲು ಮಾತಾಡಿದ್ದು ನೆಡುಮಾರನ್‌, ನಂತರ ರಾಜ್‌ಕುಮಾರ್‌ ಮಾತಾಡಿದರು, ‘ನಿಮ್ಮೀ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ’ ಎಂದವರು ಉದ್ಗರಿಸಿದರು.

ಕೊನೆಯಲ್ಲಿ ವೀರಪ್ಪನ್‌ ಮಾತಾಡಿ ‘ಅವಂಗಳೆ ವಿಟ್ಟುಟೆಂಗೋ’ (ಅವರನ್ನು ಬಿಟ್ಟುಬಿಟ್ಟಿದ್ದೇನೆ) ಎನ್ನುತ್ತಾನೆ. ಕೃಷ್ಣ ಅವರೆಲ್ಲರಿಗೂ ಧನ್ಯವಾದ ಅರ್ಪಿಸುತ್ತಾರೆ. ಅದರಲ್ಲೂ ವೀರಪ್ಪನ್‌ಗೆ ಆಲದ ಕೃತಜ್ಞತೆ ಸಮರ್ಪಿಸುತ್ತಾರೆ.

ನೆಡುಮಾರನ್‌ ಮತ್ತಿತರ ಸಂಧಾನಕಾರರು ರಾಜ್‌ ಜತೆಗೆ ಬೆಂಗಳೂರಿಗೆ ಬರಲಿಚ್ಛಿಸುತ್ತಾರೆ. ಆದರೆ ಕೃಷ್ಣ ಅವರನ್ನು ವಿನಂತಿಸಿದ ನಂತರ ಅವರ ಯೋಜನೆ ಬದಲಾಗುತ್ತದೆ.

ರಾಜ್‌ ಮತ್ತು ಸಂಧಾನಕಾರರಿಗೆ ವೀರಪ್ಪನ್‌ ಉಡುಗೊರೆಗಳನ್ನು ಕೊಡುತ್ತಾನೆ. ರಾಜ್‌ಗೆ ಒಂದು ಧೋತಿ ಮತ್ತು ಒಂದು ಪಂಚೆ ಮತ್ತೊಂದು ಶಾಲನ್ನೂ ಹೊದಿಸುತ್ತಾನೆ.

ಅವತ್ತು ಸಂಜೆ 5 ಗಂಟೆಗೆ ಶಂಕರ ಬಿದರಿ ನನ್ನ ಛೇಂರಿಗೆ ಬಂದರು. 4 ಗಂಟೆ ಸುಮಾರಿಗೆ ರಾಜ್‌ ಬಿಡುಗಡೆ ಆಯಿತು ಎಂದು ಅವರು ಹೇಳಿದರು. ಅವತ್ತು ಮಂಗಳವಾರವಾದ್ದರಿಂದ 3 ಗಂಟೆಯಿಂದ 4.30 ರಾಹುಕಾಲವಾಗಿತ್ತು. ವೀರಪ್ಪನ್‌ ರಾಜ್‌ರನ್ನು ರಾಹುಕಾಲದಲ್ಲೇ ಬಿಡುಗಡೆ ಮಾಡಿರುವುದಕ್ಕೆ ಕಾರಣವೇನಿರಬಹುದೆಂದು ಯೋಚಿಸಿದೆ. ಅಥವಾ, ಸಮಯದಲ್ಲೇನಾದರೂ ವ್ಯತ್ಯಾಸವಿದ್ದಿರಬಹುದೇ?

Cover page of Veerappans Prize Catch : Rajkumarರಾಜ್‌ ಬಿಡುಗಡೆಯ ನಂತರ ಹೋದದ್ದು ಅಲ್ಲೇ ಹತ್ತಿರದ ಹಳ್ಳಿಯ ಮನೆಯಾಂದಕ್ಕೆ. ಬಿಡುಗಡೆಯ ವಿಷಯ ಬಯಲಾಗುವುದು ಇನ್ನು ನಾಳೆಯೇ. ಯಾಕೆಂದರೆ ವೀರಪ್ಪನ್‌ ಮತ್ತೆ ಕಾಡಿನ ಮಧ್ಯಭಾಗಕ್ಕೆ ಹೋಗಲು ಸಾಕಷ್ಟು ಸಮಯ ನೀಡಬೇಕಲ್ಲ ಎಂದು ಹೇಳಿದರು ಶಂಕರ ಬಿದರಿ.

ರಾಜ್‌ ಉಳಿದುಕೊಂಡಿದ್ದು, ಉಂಜಲಪಾಳ್ಯಂ ಹಳ್ಳಿಯ ಭೂತಪಾಡಿ ಪಂಚಾಯ್ತಿ ಅಧ್ಯಕ್ಷ ರಾಮರಾಜ್‌ ಅವರ ಮನೆಯಲ್ಲಿ. ಈರೋಡಿನಿಂದ 25 ಕಿ.ಮೀ. ದೂರದಲ್ಲಿದೆ ಈ ಹಳ್ಳಿ.

ರಾಜ್‌ ಮತ್ತು ಭಾನು ಒಂದೇ ಕೋಣೆಯಲ್ಲಿ ಉಳಿಯುತ್ತಾರೆ. ಟಾಯ್ಲೆಟ್‌ಗೆ ಹೋದ ರಾಜ್‌, ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡು ಕಂಗಾಲಾಗುತ್ತಾರೆ. ತಮ್ಮ ಅಭಿಮಾನಿಗಳನ್ನು ಈ ಸ್ಥಿತಿಯಲ್ಲಿ ನೋಡುವುದು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. ಆಮೇಲೆ ಒಬ್ಬ ಕ್ಷೌರಿಕನನ್ನು ಕರೆಸಿ, ಅವರಿಗೆ ಶೇವ್‌ ಮತ್ತು ಹೇರ್‌ಕಟ್‌ ಮಾಡಿಸಿ ಕೂದಲಿಗೆ ಬಣ್ಣ ಹಾಕಲಾಗುತ್ತದೆ. ಊದಿರುವ ರಾಜ್‌ ಮುಖಕ್ಕೆ ಭಾನು ಕ್ರೀಂ ಹಚ್ಚುತ್ತಾಳೆ.

ಈಗ ನೀವು ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಅವಳು ಹೇಳುತ್ತಾಳೆ. ಮಂಡಿ ನೋವು ಎಂದ ರಾಜ್‌ಗೆ ಆಕೆ ಅಯೋಡೆಕ್ಸ್‌ ಹಚ್ಚುತ್ತಾಳೆ. ರಾಜ್‌ಗೆ ಮಂಡಿನೋವು ಹಲವು ವರ್ಷಗಳಿಂದ ಇದೆ. ಮಂಡಿಚಿಪ್ಪಿನ ಕೆಳಗೆ ಮೃದ್ವಸ್ಥಿ ಸವೆದುಹೋಗಿರುವುದರಿಂದ ಬಂದಿರುವ ನೋವು ಅದು. ಅದಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಅಯೋಡೆಕ್ಸ್‌ ತಾತ್ಕಾಲಿಕ ಉಪಶಮನ ನೀಡುತ್ತದೆ.

ರಾಜ್‌ ಅಂತೂ ವಿಚಿತ್ರವಾಗಿ ಮಾತನಾಡುತ್ತಿದ್ದಾರೆ. ‘ನೀವು ದೇವತೆಯಾಗಿ ಬಂದು ನನ್ನನ್ನು ಕಾಪಾಡಿದಿರಿ’ ಎಂದು ಭಾನುಗೆ ತಮಿಳಿನಲ್ಲಿ ಹೇಳುತ್ತಾ ಆಕೆಯ ಕೆನ್ನೆಗೆ ಮುತ್ತು ಕೊಡುತ್ತಾರೆ. ಅವರಿಗೆ ತಾನೇನು ಮಾಡುತ್ತಿದ್ದೇನೆಂದು ಅರಿವಿದ್ದ ಹಾಗೆ ಕಾಣಲಿಲ್ಲ. ಬಿಡುಗಡೆಯಿಂದಾಗಿ ಅವರ ಸಂತೋಷ ಮೇರೆ ಮೀರಿತ್ತೇ? ಅಥವಾ ಅವರ ತಲೆ ಸ್ವಲ್ಪ...?

ಪುಟ 296

ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿರುವಾಗ ಕರ್ನಾಟಕ ಎಸ್‌ಟಿಎಫ್‌ ಮುಖ್ಯಸ್ಥರು ಮಲೆ ಮಹದೇಶ್ವರ ಬೆಟ್ಟಕ್ಕೆ ಅನತಿ ದೂರದಲ್ಲಿ ವಾಸ್ತವ್ಯ ಹೂಡಿದ್ದರು. ರಾಜ್‌ಕುಮಾರ್‌ ಬಿಡುಗಡೆಗೆ ವೀರಪ್ಪನ್‌- ನೆಡುಮಾರನ್‌ ನಡುವೆ ಸಂಧಾನ ಮಾತುಕತೆ ನಡೆಯುತ್ತಿದೆ ಎಂಬ ಸಂದೇಶ ರವಾನಿಸಿದರು.

ಈ ಎಲ್ಲಾ ಬೆಳವಣಿಗೆಗಳು ನನಗೆ ಬಹುಶಃ ತಿಳಿದಿರಲಿಕ್ಕಿಲ್ಲ ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಭಾವಿಸಿರಬಹುದು. ಅದಾಗಲೇ ‘ಅನುಗ್ರಹ’ದಲ್ಲಿದ್ದ ಗೃಹ ಕಾರ್ಯದರ್ಶಿ ಎಂ.ಬಿ.ಪ್ರಕಾಶ್‌ ಅವರನ್ನು ಕೃಷ್ಣ ವಿಸ್ವಾಸಕ್ಕೆ ಕೆಗೆದುಕೊಂಡಂತೆ ಕಂಡುಬಂತು. ಮೊಬೈಲ್‌ ಫೋನ್‌ನ್ನೂ ಸಹ ಕದ್ದಾಲಿಸಬಹುದು ಎಂಬುದು ಮುಖ್ಯಮಂತ್ರಿಗೆ ತಿಳಿದಿರಲಿಲ್ಲವೇ?

15 ನವೆಂಬರ್‌ 2000

ಬೆಳಗ್ಗೆ 4.30ಕ್ಕೆ ರಾಜ್‌ಕುಮಾರ್‌ ಬಿಡುಗಡೆಯಾಗಿದೆ ಎಂದು ಸುದ್ದಿಮಾಧ್ಯಮಗಳಿಗೆ ಮಾಹಿತಿ ನೀಡಲಾಯಿತು. ಬೆಳಗ್ಗೆ 10 ಗಂಟೆ ಸುಮಾರಿಗೆ ಬೇಹುಗಾರಿಕಾ ಇಲಾಖಾ ಮುಖ್ಯಸ್ಥ ಪಿ.ಎಸ್‌.ರಾಮಾನುಜಂ ದೂರವಾಣಿ ಮೂಲಕ ನನಗೆ ರಾಜ್‌ಕುಮಾರ್‌ ಬಿಡುಗಡೆ ಸುದ್ದಿ ತಿಳಿಸಿದರು.

ರಾಮಾನುಜಂ ನನ್ನ ಎಲ್ಲ ದೂರವಾಣಿ ಹಾಗೂ ನೊಬೈಲ್‌ ಕರೆಗಳನ್ನು ಕದ್ದಾಲಿಸಿ, ಎಸ್‌.ಎಂ.ಕೃಷ್ಣ , ಮಲ್ಲಿಕಾರ್ಜುನ ಖರ್ಗೆ ಹಾಗೂ ಎಂ.ಬಿ.ಪ್ರಕಾಶ್‌ ಅವರುಗಳಿಗೆ ನನ್ನ ಎಲ್ಲ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅವರ ಹಾಗೆ ಪುಸ್ತಕ ಹಾಗೂ ಲೇಖನ ಬರೆಯುವುದನ್ನು ಬಿಟ್ಟು, ಪೊಲೀಸ್‌ ಇಲಾಖೆಯಲ್ಲಿ ಕಷ್ಟಪಟ್ಟು ಮೇಲೆ ಬಂದವನು ನಾನು ಎಂಬುದನ್ನು ಅವರುಗಳು ತಿಳಿದಿರಲಿಕ್ಕಿಲ್ಲ. ಪೆನ್ನಿನಿಂದ ಪೊಲೀಸ್‌ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಕೆಲಸ ಮಾಡಬೇಕು.

ಎಸ್‌.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪ್ರಕಾಶ್‌, ಪಿ.ಎಸ್‌.ರಾಮಾನುಜಂ ಹಾಗೂ ಡಿಐಜಿ ಜಯಪ್ರಕಾಶ್‌ ಬಗ್ಗೆ ಯೋಚಿಸಿದರೆ ನನಗೆ ವಿಚಿತ್ರ ಅನಿಸುತ್ತದೆ. ಅವರು ಬುದ್ಧಿವಂತರಿರಬಹುದು. ಆದರೆ, ಇತರರ ಸಾಮರ್ಥ್ಯವನ್ನು ಅವರು ಕಡೆಗಣಿಸಬಹುದೆ? ಪ್ರತಿಯಾಂದು ಮಾಹಿತಿಗೂ ಬೆಲೆಯಿದೆ ಎಂದು ನಾನು ಹೇಳಬಲ್ಲೆ.

ನಮ್ಮಲ್ಲಿ ಕಾನೂನು ಎಂಬುದೊಂದಿದೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವ ಪ್ರತಿಯಾಂದು ವಸ್ತುವಿಗೂ ಬೆಲೆ ಇರಲೇಬೇಕು. ಮನುಷ್ಯನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದನ್ನು ಚೌಕಾಸಿ ಮಾಡಿ ಪಡೆಯಬೇಕು. ರಾಜ್‌ ಬಿಡುಗಡೆಗೆ ನೀಡಲಾದ ಹಣ :

1) ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಎರಡು ಸಂದರ್ಭಗಳಲ್ಲಿ ತಮ್ಮ ಅಳಿಯ ವಿ.ಜಿ.ಸಿದ್ದಾರ್ಥ ಮೂಲಕ 5 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟರು. 5 ಕೋಟಿ ರೂ.ಗಳನ್ನು ಡಿಐಜಿ ಜಯಪ್ರಕಾಶ್‌ ಮೂಲಕ ನೀಡಿದರು.

ಪುಟ 297

2) ಚೆನ್ನೈನ ಎಂ. ಕರುಣಾನಿಧಿ ಮನೆಗೆ ಪಾರ್ವತಮ್ಮ 1 ಕೋಟಿ ರೂ. ಕಳುಹಿಸಿಕೊಟ್ಟಿದ್ದರು.

3) ಪಾರ್ವತಮ್ಮ ವೈಯಕ್ತಿಕವಾಗಿ 2 ಕೋಟಿ ರೂ.ಗಳನ್ನು ಬೆಂಗಳೂರಿನಲ್ಲಿ ಭಾನುವಿಗೆ ನೀಡಿದ್ದರು.

4) ಚಿತ್ರೋದ್ಯಮದವರು ಎಂ. ಕರುಣಾನಿಧಿ ಮನೆಗೆ 2 ಕೋಟಿ ರೂ. ಕಳುಹಿಸಿಕೊಟ್ಟಿದ್ದರು.

ಈರೋಡ್‌ನಲ್ಲಿ ಡಾ. ಬಿ. ರಾಮನ ರಾವ್‌ ಸಹಿತ ವೈದ್ಯರ ತಂಡ ರಾಜ್‌ಕುಮಾರ್‌ ಅವರ ಆರೋಗ್ಯ ತಪಾಸಣೆ ನಡೆಸಿ, ಅವರು ಆರೋಗ್ಯಪೂರ್ಣರಾಗಿದ್ದಾರೆ, ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಮಾತ್ರ ಈ ಪ್ರಮಾಣ ಪತ್ರ ನೀಡಲಾಗಿತ್ತು. ಏಕೆಂದರೆ ಡಾ. ರಾಜ್‌ ಅವರ ರಕ್ತದೊತ್ತಡವನ್ನು ಇನ್ನೂ ಕಡಿಮೆಗೊಳಿಸಬೇಕಿದೆ. ಮೊಣಕಾಲು ನೋವು ವಾಸಿಯಾಗಿಲ್ಲ. ಕಾಡಿನಲ್ಲಿರುವಾಗ ಅನೇಕ ಕೀಟಗಳು ಅವರನ್ನು ಕಚ್ಚಿದ್ದರಿಂದ ಅವರ ಅನಾರೋಗ್ಯ ಸ್ಥಿತಿ ಹಾಗೆ ಇತ್ತು.

ಪಾರ್ವತಮ್ಮನವರು ತಮ್ಮ ಮಗ ಪುನೀತ್‌, ಅಳಿಯ ರಾಮ್‌ಕುಮಾರ್‌ ಹಾಗೂ ಬಂಗಾರಪ್ಪನವರ ಮಗ ಮಧು ಅವರೊಂದಿಗೆ ಈರೋಡ್‌ಗೆ ತೆರಳಿದ್ದರು. ಆಗ ರಾಜ್‌ಕುಮಾರ್‌ ಅವರನ್ನು ಬಿಡುಗಡೆ ಮಾಡಲಾಯಿತೆಂಬ ಸುದ್ದಿ ಹಬ್ಬಿದಾಗ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಈ ಸುದ್ದಿಯನ್ನು ‘ನಕ್ಕೀರನ್‌’ ನಿಯತಕಾಲಿಕ ಮೊದಲೇ ಪ್ರಕಟಿಸಿತ್ತು. ‘ ಗೋಪಾಲ ಇಂದು ಕಾಡಿಗೆ ಹೋಗುತ್ತಿದ್ದಾರೆ. ರಾಜ್‌ ಬಿಡುಗಡೆ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುತ್ತಾರೆ’ ಎಂದು ಅದು ವರದಿ ಮಾಡಿತ್ತು.

ರಾಜ್‌ ಬಿಡುಗಡೆ ಸುದ್ದಿಯನ್ನು ವಿಧಾನ ಸಭೆಯಲ್ಲಿ ಎಸ್‌. ಎಂ. ಕೃಷ್ಣ ಪ್ರಕಟಿಸಿದಾಗ ಹರ್ಷೋದ್ಗಾರ ಹೊರಹೊಮ್ಮಿತು. ಆ ಸಂದರ್ಭದಲ್ಲಿ ಕೃಷ್ಣ ಮಾತನಾಡಿದ ಸಾರಾಂಶ ಇಲ್ಲಿದೆ:

‘ಅಮಾವಾಸ್ಯೆಯ ಕತ್ತಲು ಕರಗಿದೆ....ಡಾ. ರಾಜ್‌ ಅವರ ಮಕ್ಕಳ ನೋವನ್ನು ನನ್ನಿಂದ ನೋಡಲು ಆಗುತ್ತಿರಲಿಲ್ಲ. ಆದರೂ ಅವರೊಂದಿಗೆ ನನಗೆ ಅಳಲು ಆಗುತ್ತಿಲ್ಲ. ಏಕೆಂದರೆ ಬೇರೆಯವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು.... ಬಿಕ್ಕಟ್ಟನ್ನು ಬಗೆಹರಿಸಲು ಸಹಕರಿಸಿದ ತಮಿಳುನಾಡು ಸರಕಾರ, ಕೇಂದ್ರ ಸರಕಾರ ಹಾಗೂ ರಾಯಭಾರಿ ಪಾತ್ರ ವಹಿಸಿದವರಿಗೆ ಧನ್ಯವಾದಗಳು. ಇದಕ್ಕೆ ಸಹಕರಿಸಿದ ಇನ್ನೂ ಅನೇಕರಿದ್ದಾರೆ. ಅವರೆಲ್ಲರ ಹೆಸರು ನೆನಪಿಗೆ ಬರುತ್ತಿಲ್ಲ. ಅವರೆಲ್ಲರಿಗೂ ಧನ್ಯವಾದಗಳು....ನಾವೆಲ್ಲರೂ ಈ ಘಟನೆಯಿಂದ ಇನ್ನು ಜಾಗೃತರಾಗಬೇಕು. ಪ್ರತಿ ಘಟನೆಯೂ ಒಂದು ಪಾಠವೆ.’

ಪುಟ 298

ಈ ಮಧ್ಯೆ ಮಲ್ಲಿಕಾರ್ಜುನ ಖರ್ಗೆ ಡಾ. ರಾಜ್‌ಕುಮಾರ್‌ ಬಿಡುಗಡೆಯಾದುದನ್ನು ವಿಧಾನಪರಿಷತ್‌ನಲ್ಲಿ ಪ್ರಕಟಿಸಿದರು. ಇತ್ತ ಚೆನ್ನೈನಲ್ಲಿ ರಾಜ್‌ ಬಿಡುಗಡೆ ಸುದ್ದಿ ಹೊರ ಹಾಕಿದ ಕರುಣಾನಿಧಿ, ‘ಡಾ. ರಾಜ್‌ಕುಮಾರ್‌ ನನ್ನೊಡನೆ ಮಾತನಾಡಿದರು. ಅವರ ಬಂಧಮುಕ್ತಿಗೆ ಶ್ರಮಿಸಿದ್ದಕ್ಕೆ ವಂದನೆ ಸಲ್ಲಿಸಿದರು’ ಎಂದರು. ಮಾತಿನ ಮಧ್ಯೆ, ‘ಎಷ್ಟೊಂದು ದೀರ್ಘ ಅವಧಿ ಕಾಡಿನಲ್ಲಿರಬೇಕಾಯಿತು ನೋಡಿ’ ಎಂದು ರಾಜ್‌ ವಿಷಾದಿಸಿದಾಗ, ಅಂಥ ದೈವಾಂಶ ಸಂಭೂತ ರಾಮಚಂದ್ರನೇ 14 ವರ್ಷ ವನವಾಸ ಮಾಡಿದ್ದನಲ್ಲ ಎಂದು ಕರುಣಾನಿಧಿ ಲಘು ಧಾಟಿಯಲ್ಲಿ ಸಮಾಧಾನ ಮಾಡಿದರು.

ನಂತರ, ಆದಷ್ಟೂ ಶೀಘ್ರ ಬೆಂಗಳೂರಿಗೆ ಹೋಗಬೇಕು. ಈ ರಾತ್ರಿ ಅಥವಾ ಮಾರನೇ ದಿನ ಮುಂಜಾನೆಯೇ ಊರಿಗೆ ಹೋಗುವೆ ಎಂದು ರಾಜ್‌ ಹೇಳಿದ್ದನ್ನು ಕರುಣಾನಿಧಿ ವಿವರಿಸಿದರು.

ರಾಜ್‌ಕುಮಾರ್‌ ಸ್ವಾಗತಕ್ಕೆ ವ್ಯವಸ್ಥೆಗೊಳಿಸುವ ಬಗ್ಗೆ ಬೆಂಗಳೂರು ವಿಧಾನಸೌಧದಲ್ಲಿನ ಮುಖ್ಯಮಂತ್ರಿ ಕಚೇರಿಯಲ್ಲಿ ಚರ್ಚೆ ನಡೆಯಿತು. ‘ನಾನಂತೂ ರಾಜ್‌ಕುಮಾರ್‌ ಕರೆ ತರಲು ತಮಿಳುನಾಡಿಗೆ ಹೋಗಲಾರೆ. ಅವರೇ ಬರಲಿ ಬಿಡಿ. ಇಲ್ಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸೋಣ’ ಎಂದು ಕೃಷ್ಣ ತಣ್ಣನೆ ಧ್ವನಿಯಲ್ಲಿ ಮಾತನಾಡಿದರು.

ಅದೇನೋ ಸರಿ. ರಾಜ್‌ಕುಮಾರ್‌ ಇಲ್ಲಿಗೆ ಬಂದಿಳಿದಾಗ ಭಾರೀ ಸಂಖ್ಯೆಯಲ್ಲಿ ಜನ ನೆರೆಯುತ್ತಾರೆ. ಅವರನ್ನು ನಿಯಂತ್ರಿಸುವುದು ಬಹಳ ಕಷ್ಟದ ಕಾರ್ಯ ಎಂಬುದು ಸಭೆಯಲ್ಲಿದ್ದ ಕೆಲವರ ಆತಂಕವಾಗಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆದ ಬಳಿಕ ‘ ಹೀಗೊಂದು ಉಪಾಯ ಮಾಡುವ. ರಾಜ್‌ ಕುಮಾರ್‌ ಅವರನ್ನು ಕರೆತರುವ ವಿಮಾನ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತದೆ ಎಂದು ಪ್ರಕಟಣೆ ನೀಡುವುದು. ಈ ರೀತಿ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಲಿ. ಆದರೆ, ರಾಜ್‌ಕುಮಾರ್‌ ಆಗಮನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಾಗಲಿ’ ಎಂಬ ಅಭಿಪ್ರಾಯಕ್ಕೆ ಬರಲಾಯಿತು.

ಈ ನಿರ್ಣಯಕ್ಕೆ ಬಂದ ನಂತರ ಜಕ್ಕೂರು ಮತ್ತು ಎಚ್‌ಎಎಲ್‌ ನಿಲ್ದಾಣ , ವಿಧಾನ ಸೌಧ ಹಾಗೂ ಇನ್ನೂ ಕೆಲವೆಡೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಯಿತು.

ಇಲ್ಲಿಗೆ ಬಂದಾದ ಮೇಲೆ ಮಾಧ್ಯಮಗಳೆದುರು ರಾಜ್‌ ಮಾತನಾಡಬೇಕಲ್ಲ. ಅದಕ್ಕೆ ಸರಿಯಾದ ಸ್ಥಳ ಯಾವುದು ? ಎಂಬ ಪ್ರಶ್ನೆ ತಲೆದೋರಿದಾಗ ತಕ್ಷಣ ಹೊಳೆದದ್ದು ‘ವಿಧಾನ ಸೌಧದ ಸಮ್ಮೇಳನ ಸಭಾಂಗಣ’. ಹೀಗೊಂದು ನಿರ್ಣಯಕ್ಕೆ ಬರುತ್ತಲೇ ಸಮ್ಮೇಳನ ಸಭಾಂಗಣದ ಆಸನ ವ್ಯವಸ್ಥೆ ಬದಲಾವಣೆ ಕಾರ್ಯ ಆರಂಭಗೊಂಡಿತು. ಅದರಲ್ಲೂ, ಮಾಧ್ಯಮ ಪ್ರತಿನಿಧಿಗಳಿಗೆ ರಾಜ್‌ ಸ್ಪಷ್ಟವಾಗಿ ಗೋಚರವಾಗುವಂತೆ ಆಸನ ವ್ಯವಸ್ಥೆಯಾಯಿತು.

ಆ ದಿನ ಸಂಜೆ, ಎಂ. ಬಿ. ಪ್ರಕಾಶ್‌ ಅವರು ಪಿ. ಎಸ್‌. ರಾಮಾನುಜಂ ಜೊತೆ ಚರ್ಚಿಸಿದರು. ನಂತರ ಪ್ರಕಾಶ್‌, ‘ನೋಡಿ ರಾಮಾನುಜಂ, ಡಾ. ರಾಜ್‌ಕುಮಾರ್‌ ಇಲ್ಲಿಗೆ ಬಂದಾಗ ಅವರ ಹತ್ತಿರದಲ್ಲಿ ದಿನಕರ್‌ ನಿಲ್ಲದಂತೆ ನೋಡಿಕೊಳ್ಳಿ. ರಾಜ್‌ ಮಗ್ಗಲಲ್ಲಿ ಈ ದಿನಕರ್‌ ನಿಂತು ಟಿವಿಗಳಲ್ಲಿ ಕಾಣಿಸಿಕೊಳ್ಳುವುದು ರಾಜ್‌ ಕುಟುಂಬದವರಿಗೆ ಇಷ್ಟವಿಲ್ಲ. ಜಾಗ್ರತೆಯಿಂದಿರಿ’ ಎಂದು ಎಚ್ಚರಿಸಿದರು.

‘ಆ ಬಗ್ಗೆ ಭಯ ಬೇಡ. ನಾನೆಲ್ಲ ನೋಡಿಕೊಳ್ಳುವೆ’ ಎಂದು ರಾಮಾನುಜಂ ಭರವಸೆ ನೀಡಿದರು. ಈ ಮಾತುಗಳನ್ನು ಅವರಾಡಿದ್ದು ಕನ್ನಡದಲ್ಲಿ ಎಂಬುದು ಗಮನಾರ್ಹ.

(ವಿಜಯ ಕರ್ನಾಟಕ)

ದಿನಕರ್‌ ವಿಶೇಷ

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X