ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿಗೆ ಬೆಂಕಿ- ಭಾಗ ಎರಡು..

By Staff
|
Google Oneindia Kannada News

Satish Kumar, The Authorನಮ್ಮ ನೆಲ-ಸಂಪನ್ಮೂಲವನ್ನು ತೆತ್ತು, ಬೆಲೆಕಟ್ಟಿ, ಆಣೆಕಟ್ಟುಗಳ ಮುಖಾಂತರ ನೀರು ಹಿಡಿದಿಟ್ಟು ಕೊಂಡರೆ 1924ರ ಒಪ್ಪಂದವನ್ನು ಮುಂದಿಟ್ಟುಕೊಂಡು, ಇಂದು ಕರ್ನಾಟಕಕ್ಕಿಂತಲೂ ಹೆಚ್ಚು ಕೆರೆ-ಕಟ್ಟೆ-ಕಾಲುವೆಗಳನ್ನು ನಿರ್ಮಿಸಿಕೊಂಡು, ನಮಗಿಂತಲೂ ಹೆಚ್ಚು ಹೆಕ್ಟೇರು ಪ್ರದೇಶದಲ್ಲಿ ಹಸಿರನ್ನು ಹೊಂದಿದವರು ನಮ್ಮ ನೆರೆಹೊರೆಯವರು.

ಸರ್‌. ಎಂ. ವಿಶ್ವೇಶ್ವರಯ್ಯನವರ ಕಾಲದಿಂದಲೂ ಕನ್ನಡಿಗರ ಆಶೋತ್ತರಗಳನ್ನು ಸದಾ ಸುಡುವ ಹಗೆತನದಲ್ಲಿ ಕೊಂದವರು. ಇಂಗ್ಲೀಷ್‌ ದೊರೆಗಳೇ ಇವರ ಕೊಂಕನ್ನು ಅಲ್ಲಗಳೆದರೂ ಇಂದಿಗೂ ಕಣ್ತೆರೆಯದವರು. ಇಂಥವರ ಜೊತೆಯಲ್ಲಿ ಅದೆಂತಹ ಹೊಡೆದಾಟ, ಬಡಿದಾಟ?

802 ಕಿ.ಮೀ. ಹರಿಯುವ ಕಾವೇರಿ, ಅಗಸ್ತ್ಯ ಋಷಿ ಬೆರಳು ತೋರಿದನೆಂದೋ, ಕರ್ನಾಟಕ ಭೌಗೋಳಿಕವಾಗಿ ಎತ್ತರ ಪ್ರದೇಶದಲ್ಲಿರುವುದರಿಂದಲೋ ತಮಿಳುನಾಡಿನ ಕಡೆಗೆ ಹರಿಯತೊಡಗಿದಳು. 1911 ರಲ್ಲಿ ಸರ್‌.ಎಂ. ವಿಶ್ವೇಶ್ವರಯ್ಯನವರಿಂದ ಕನ್ನಂಬಾಡಿ ನಿರ್ಮಾಣಕ್ಕೆ ಆರಂಭವಾದ ಸಮಯದಿಂದಲೂ, 1892, 1924 ರ (ನಮ್ಮ ಮೇಲೆ ಹೇರಲಾಗಿದ್ದ) ಒಪ್ಪಂದಗಳ ಹೆಸರಿನಲ್ಲಿ, ಒಂದಲ್ಲ ಒಂದು ರೀತಿಯಲ್ಲಿ ನಮ್ಮನ್ನು ಹಿಂಸಿಸುತ್ತಲೇ, ಸುಲಿಗೆ ಮಾಡುತ್ತಲೇ ಬಂದಿದ್ದಾರೆ. ಆಗಿನಿಂದಲೇ ಇವರ ಉದ್ಧಟತನದ ಪರಮಾವಧಿಯನ್ನು ವಿರೋಧಿಸಿ, ಪ್ರಶ್ನಿಸಿ, ಕರ್ನಾಟಕದ ಜನತೆಯಾಂದಿಗೆ ಇಂಗ್ಲೀಷ್‌ ಅಧಿಕಾರಿಗಳು, ನೀರಾವರಿ ತಜ್ಞರು, ನ್ಯಾಯ ಪಕ್ಷಪಾತಿಗಳು ಆಗಿನ ಸರಕಾರದ ಧೋರಣೆಯನ್ನು ಖಂಡಿಸುತ್ತಲೇ ಬಂದಿದ್ದಾರೆ.

ಮದರಾಸು ಸರ್ಕಾರದವರಿಂದ ಮೈಸೂರಿನವರನ್ನು ರಕ್ಷಿಸಬೇಕೆನ್ನುವುದು ಇಂದು-ನಿನ್ನೆಯ ಮಾತಲ್ಲ. 1892 ರ, 1924 ರ ನ್ಯಾಯ ಸಮ್ಮತವಲ್ಲದ ಒಪ್ಪಂದಗಳು ಇಂದಿಗೂ ಮುಂದುವರೆಯಬೇಕು ಎನ್ನುವ ತಮಿಳರ ಆಗ್ರಹ ಯಾವ ಸೀಮೆಯ ನ್ಯಾಯ ?

ಬುದ್ಧಿವಂತರು, ತಿಳಿದವರು ಬಹಿರಂಗವಾಗಿ ತಮಗನಿಸಿದುದನ್ನು ಹೇಳಲೂ ಹೆದರುವ, ಅವಕಾಶ ಸಿಗದಿರುವ ಪರಿಸ್ಥಿತಿ ಒದಗಿ ಬಂದಿರುವುದು ರಾಜಕೀಯ ಪ್ರೇರಿತ ಪ್ರಜಾಪ್ರಭುತ್ವದ ಮತ್ತೊಂದು ಮಜಲು ಎಂದೇ ಹೇಳಬೇಕು, ವಾಕ್‌ ಸ್ವಾತಂತ್ರ್ಯ ಎಲ್ಲೆಡೆಗೂ ಸಿದ್ಧಿಸದ ಪರಿಸ್ಥಿತಿಯಿದೆ. ಯಾರಾದರೂ ಹಾಗೆ ಮುಂದೆ ಬಂದು ತಿಳಿಹೇಳಿದರೂ, ಅವರ ಜಾತಿ-ಮತ-ಧರ್ಮ-ಧೋರಣೆಗಳನ್ನು ಅದಕ್ಕೆ ಹಿನ್ನೆಲೆಯಾಗಿ ಹಿಡಿದು ಹೇಳಿದವರ ಅಧೋಗತಿ ಮಾಡುವುದರಲ್ಲಿ ನಮ್ಮವರು ಮುಂದೆ.

ಲೆಕ್ಕಾಚಾರದ ಮಾತಾಡುವುದಾದರೆ...
ಒಟ್ಟು 802 ಕಿ.ಮೀ. ಉದ್ದ ಹರಿಯುವ ನದಿ ಎರಡು ರಾಜ್ಯಗಳಲ್ಲಿ ಸುಮಾರಾಗಿ ಒಂದೇ ದೂರ ಕ್ರಮಿಸಿದರೂ (ಕರ್ನಾಟಕ: 381 ಕಿ.ಮೀ., ತಮಿಳುನಾಡು: 357 ಕಿ.ಮೀ., ಗಡಿ: 64 ಕಿ.ಮೀ.), ಜಲಾನಯನ ಪ್ರದೇಶದ ವಿಸ್ತೀರ್ಣಗಳಲ್ಲಿ (ಕರ್ನಾಟಕ: 34,273 ಚ.ಕಿ.ಮೀ., ತಮಿಳುನಾಡು: 44,016 ಚ.ಕಿ.ಮೀ., ಕೇರಳ: 2866 ಚ.ಕಿ.ಮೀ.), ನೀರಿನ ಬಳಕೆಯಲ್ಲೂ (ಕರ್ನಾಟಕ: 1198 ಕಾಲುವೆಗಳು, 937 ಕೆರೆಗಳು, 444 ಬಾವಿಗಳು, 158 ಇತರೆ, ಒಟ್ಟು 2737; ತಮಿಳುನಾಡು: 5174 ಕಾಲುವೆಗಳು, 1176 ಕೆರೆಗಳು, 2585 ಬಾವಿಗಳು, 108 ಇತರೆ, ಒಟ್ಟು 9040) ತಮಿಳುನಾಡಿನವರು ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ. ಉದಾಹರಣೆಗೆ ತಮಿಳುನಾಡಿನ ತಂಜಾವೂರು ಜಿಲ್ಲೆ ನಮ್ಮ ಮಂಡ್ಯ-ಮೈಸೂರಿಗಿಂತ ಆರು ಪಟ್ಟು ಹೆಚ್ಚು ನೀರು ಪಡೆದು ಸಮೃದ್ಧಿಯಲ್ಲಿ ತೇಲುತ್ತಿದೆ ಎಂದರೆ ನೀವು ನಂಬಲಾರಿರಿ.

ಅದರೆ ನೀರನ್ನು ಶೇಖರಿಸುವ ಪ್ರಮಾಣದಲ್ಲಿ ಕರ್ನಾಟಕದವರು ಮುಂದೆ (ಕರ್ನಾಟಕ: 425 ಟಿ.ಎಂ.ಸಿ. - 53.8%, ತಮಿಳುನಾಡು: 252 ಟಿ.ಎಂ.ಸಿ. - 31.9%, ಕೇರಳ: 113 ಟಿ.ಎಂ.ಸಿ. - 14.3%), ಅಂದರೆ ಈಗಾಗಲೇ ನಿಮಗೆ ಅರ್ಥವಾಗಿರಬೇಕು - ನಮ್ಮ ಮನೆ ಮಠ ಹಾಳು ಮಾಡಿಕೊಂಡು ನಾವು ಪರರಿಗೆ ನೀರು ಸಂಗ್ರಹಿಸಿದಂತಾಗಲಿಲ್ಲವೇ? ಇವತ್ತಿಗೂ ಸಹ ತಮಿಳುನಾಡಿನ ಗದ್ದೆಗಳಲ್ಲಿ ಎರಡು ಇಂಚು ಹೆಚ್ಚು ನೀರು ನಿಂತಿರುವುದನ್ನು ಇದಕ್ಕಿಂತ ಬೇರೆ ಯಾವ ರೀತಿಯಲ್ಲಿ ವರ್ಣಿಸಲು ಸಾಧ್ಯ? ಸರಿಯಾಗಿ ಮಳೆ ಬರಲಿ, ಬರದಿರಲಿ ಕಾವೇರಿ ಮತ್ತು ಅದರ ಉಪನದಿಗಳ ಕೃಪೆಯಿಂದ ವ್ಯವಸಾಯವಾಗುವ ಭೂಮಿಯಲ್ಲಿ ತಮಿಳುನಾಡಿನವರದೇ ಮೇಲುಗೈ (ಕರ್ನಾಟಕ: 11 ಲಕ್ಷ ಎಕರೆಗಳು, ತಮಿಳುನಾಡು: 23 ಲಕ್ಷ ಎಕರೆಗಳು). ಪರಿಸ್ಥಿತಿ ಹೀಗಿರುವಾಗ ಕಾವೇರಿಯ ಕುರಿತು ತಮಿಳರ ಪ್ರೇಮ ಕೊಂಚ ಅತಿಯಾಯಿತು ಎನಿಸುವುದಿಲ್ಲವೇ?

ಕನ್ನಡಿಗರಿಗೆ ಕಾನೂನು ಗೊತ್ತಿಲ್ಲವೇ ?
ಕರ್ನಾಟಕದಲ್ಲಿ ಹಲವಾರು ಮುಖ್ಯಮಂತ್ರಿಗಳ ತಲೆ ಬಿಸಿಮಾಡಿರುವ ಕಾವೇರಿ ವಿವಾದ, ಕೃಷ್ಣ-ಸೋನಿಯಾ-ಕಾಂಗ್ರೆಸ್ಸಿನ ಆಸ್ತಿಯೇನಲ್ಲ , ಅವರ ಇಷ್ಟಬಂದಂತೆ ಬಳಸಿಕೊಳ್ಳಲು. ಹಾಗೆಯೇ ರಾಜಕೀಯ ಅವಕಾಶಕ್ಕಾಗಿ ಕಾದು, ಅಧಿಕಾರ, ಕುರ್ಚಿಗೆ ಆಸೆ ಪಡುವ ವಿರೋಧ ಪಕ್ಷದವರನ್ನೂ ನಾನು ಮೆಚ್ಚುತ್ತಿಲ್ಲ. ಕನ್ನಡಿಗರ ಹಿತಕ್ಕಾಗಿ, ಕಾವೇರಿಯ ಪರವಾಗಿ ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಪಾಠವನ್ನು ನಾವು ಕಲಿಯುವವರೆಗೂ ನಮ್ಮನ್ನು ಸುಲಿಗೆ ಮಾಡುವವರು ಇದ್ದೇ ಇರುತ್ತಾರೆ. ತಮಿಳುನಾಡು ಸುಪ್ರೀಂಕೋರ್ಟಿಗೆ ಹೋದರೆ, ನ್ಯಾಯ ಮಂಡಲಿ ರಚಿಸಿಕೊಂಡರೆ, ಅದು ಕಾನೂನೇ, ಕಾನೂನು ಬಾಹಿರವೇ ಎಂದು ಪ್ರಶ್ನಿಸಿಕೊಳ್ಳುವುದಕ್ಕಿಂತ ಮುಂಚೆಯೇ, ಕನ್ನಡಿಗರು ಸುಪ್ರೀಂಕೋರ್ಟಿನ ಆದೇಶಕ್ಕೆ ಬಗ್ಗಿದ್ದಾದರೂ ಏಕೆ?

ನಮ್ಮ ಕೆರೆ-ಕಟ್ಟೆಗಳಲ್ಲಿ ನೀರೇ ಇಲ್ಲದಿರುವಾಗ ಇಷ್ಟು ನೀರನ್ನು ಹರಿಸಿ ಎಂದು ಆದೇಶ ನೀಡಿದ ಸುಪ್ರೀಂಕೋರ್ಟಿನ ಆದೇಶದ ಸಾಧ್ಯಾಸಾಧ್ಯತೆಯನ್ನು ಯಾರಾದರೂ ಪ್ರಶ್ನಿಸಿದ್ದಾರೆಯೇ ? ನಮ್ಮವರ ಜಾತಿ ಗೊಂದಲದ ನಡುವೆ, ಆಕರ್ಷಕ ಅಧಿಕಾರಗಳನ್ನು ಪಡೆದು ಮಜಾ ಉಡಾಯಿಸುವ ನೀರಾವರಿ ಅಧಿಕಾರಿಗಳಿಗೆ ತಮಿಳುನಾಡಿನ ಕುಹಕಿಗಳು ಕಣ್ಣು ಪಟ್ಟಿ ಕಟ್ಟಿದ್ದಾರೆಯೇ? ಜಯಲಲಿತಾ ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೆ, ತನ್ನಲ್ಲಿನ ತಮಿಳುಗಿತ್ತಿಯನ್ನು ನಿರೂಪಿಸುವ ಪ್ರಯತ್ನದಲ್ಲಿ ಕರ್ನಾಟಕ ಏಕೆ ಬಡವಾಗಬೇಕಿತ್ತು, ದೇಶ-ವಿದೇಶಗಳಲ್ಲಿ ಕುಖ್ಯಾತಿಯನ್ನೇಕೆ ಪಡೆಯಬೇಕಿತ್ತು? ರಾಜಕೀಯ ಪ್ರೇರಿತ ನಾಟಕದಲ್ಲಿ ಇನ್ನಾದರೂ ಸಾರ್ವಜನಿಕರ ಹಿತಾಸಕ್ತಿಗಳಿಗೆ, ಶಾಂತಿಗೆ ಭಂಗ ಬರುವುದು ಇನ್ನಾದರೂ ನಿಲ್ಲುವುದೇ?

ನಾವು ತುರ್ತಾಗಿ ಕೈಗೊಳ್ಳಬೇಕಾದ ಹಲವು ಅಂಶಗಳು

  • ಎಲ್ಲ ಮುಷ್ಕರ, ಬಂದ್‌, ಸತ್ಯಾಗ್ರಹ, ನಿರಶನಗಳನ್ನು ಕೂಡಲೇ ಹಿಂತೆಗೆದುಕೊಳ್ಳಿ.
  • ಕಾವೇರಿ ನದಿ ನೀರು ಹಂಚಿಕೆಯಲ್ಲಿ ಸುಪ್ರೀಂಕೋರ್ಟ್‌ ಪ್ರವೇಶದ ಔಚಿತ್ಯವನ್ನು ಪ್ರಶ್ನಿಸಿ. (Constitution Aritcle 131 tells the role of Supreme court in Water sharing. As per the section 262(2) Supreme Court has no role to play in inter state water dispute)
  • ಸುಪ್ರೀಂಕೋರ್ಟ್‌ ಆದೇಶವನ್ನು ಪಕ್ಕಾ ರಾಜಕೀಯ ಬೂಟಾಟಿಕೆ ಎಂದು ಕಡೆಗಣಿಸಿ.
  • ಕಾವೇರಿ ನದಿ ನೀರು ಕೃಷ್ಣರ ಮನೆಯ ನಲ್ಲಿಯ ನೀರಲ್ಲ ; ವ್ಯಕ್ತಿಗೆ, ಸರಕಾರಕ್ಕೆ, ಅವರವರು ಬಗ್ಗುವ ಹೈಕಮ್ಯಾಂಡುಗಳ ಇನ್‌ವಾಲ್ವ್‌ಮೆಂಟಿಗೆ ಬಹಿಷ್ಕರಿಸಿ.
  • ನೀರಾವರಿ ಮಂಡಳಿ ನಿಜವಾದ ತಜ್ಞರ ಜೊತೆಗೆ ಕೂಡಲೇ ಕಾರ್ಯತತ್ಪರವಾಗುವಂತೆ ನೋಡಿಕೊಳ್ಳಿ.
  • ಎಲ್ಲಾ ರಾಜೀನಾಮೆಗಳನ್ನೂ ಹಿಂತೆಗೆದುಕೊಳ್ಳಿ, ನಿಮ್ಮ ರಾಜೀನಾಮೆ ಏನನ್ನೂ ಸಾಧಿಸದು (ನೀವು ಅಧಿಕಾರದಲ್ಲಿದ್ದಾಗಲೇ ಈ ಬಗ್ಗೆ ಏನನ್ನೂ ಮಾಡದಿರುವಾಗ...).
  • ಕಾವೇರಿ ವಿವಾದದ ಸಂಬಂಧದ ಚರ್ಚೆಯನ್ನು ಸಂಪೂರ್ಣವಾಗಿ ಪುನರಾರಂಭಿಸಿ - ಮೊದಲನೇ ಪುಟದಿಂದ, ಕೇಂದ್ರದಿಂದ ‘ಸಂಪೂರ್ಣ’ ಮುಕ್ತವಾದ, ಯಾವ ಪಕ್ಷದ ಪ್ರಭಾವಗಳಿಗೂ ಒಳಗಾಗಿರದ, ಸೂಕ್ತ ತಜ್ಞರ ನಿಯೋಗವೊಂದರ ಸಮ್ಮುಖದಲ್ಲಿ, ಎರಡೂ ರಾಜ್ಯಗಳಿಗೂ ಅನುಕೂಲವಾಗುವಂತೆ ವಿಷಯವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ.
  • ಸಾರ್ವಜನಿಕ ಆಸ್ತಿ ಹಾನಿ, ರೈಲು-ರಸ್ತೆ ತಡೆ ಸಲ್ಲ.
  • ಜೀವಹಾನಿ ಖಂಡಿತ ಸಲ್ಲ.
  • ತಮಿಳು ನಾಡಿನ ಜಲಾಶಯಗಳಿಂದ ಅವರಿಗೆ ಬೇಕಾದಷ್ಟು ನೀರು ಸಿಗದೇ ಹೋದರೆ, ಹೆಚ್ಚು ಶೇಖರಿಸಿದ ನಮ್ಮ ಜಲಾಶಯಗಳಿಂದ, ನಾವು ಉಂಡುಟ್ಟು ಕೊಡುವಂತಿದ್ದರೆ ನೀರನ್ನು ಮಾರಾಟಕ್ಕೆ ಪಡೆಯುವಂತಾಗಲಿ.
  • ಇದು ವ್ಯಕ್ತಿ ರಾಜಕೀಯ, ರಾಜಕೀಯ ಪಕ್ಷದ ಭವಿಷ್ಯದ ಪ್ರಶ್ನೆಯಾಗಿರದೇ ದೇಶದ ಪ್ರಗತಿಯ ವಿಚಾರವೆನ್ನುವುದು ಎಲ್ಲರ ಮನದಲ್ಲಿರಲಿ.
  • ನಮಗೆ ಸರಿಯಾದ ನಾಯಕನಿಲ್ಲ ಎನ್ನುವ ಅನಾಥ ಪ್ರಜ್ಞೆಯಿಂದ ದೂರವಿರಿ.
  • ಕಾವೇರಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತೀರ್ಮಾನಿಸಿದ ನಂತರ, ಆ ತೀರ್ಪನ್ನು ಒಪ್ಪಿಕೊಂಡು ಸುಮ್ಮನಿರಿ.
ಕೆಳಗಿನವು ಯಾವತ್ತಿಗೂ ಅನ್ವಯಿಸುತ್ತವೆ...

  • ಕೈಗೆ ಬಂದ ಮಕ್ಕಳು ಜೈಲು ಸೇರದೆ, ತಮ್ಮ ಕೆಲಸ ನೋಡಿಕೊಂಡು, ವೈಯುಕ್ತಿಕ ಪ್ರಗತಿ, ಕುಟುಂಬದ ಅಭ್ಯುದಯದ ಬಗೆಗೆ ಗಮನ ಕೊಡಲಿ.
  • ತಾವು ಉಂಡು, ಉಳಿದು, ಬೆಳೆದ ನೆಲವನ್ನು ಧಿಕ್ಕರಿಸುವ, ಹೀಯಾಳಿಸುವ ಎಲ್ಲರನ್ನೂ ಗಡೀಪಾರು ಮಾಡಿ. ಇಂತಹ ರಾಜ್ಯದ್ರೋಹಿಗಳಿಂದ ಯಾವತ್ತೂ ಯಾರಿಗೂ ಪ್ರಯೋಜನವಿಲ್ಲ.
  • ಇದೇ ಸದವಕಾಶವೆಂಬಂತೆ ‘ತಮಿಳು ಕಾರ್ಯಾಚರಣೆ’ಯನ್ನು ಕನ್ನಡನಾಡಿನಲ್ಲಿ ಎಂದೆಂದಿಗೂ ಮೇಲೇರದಂತೆ ಹತ್ತಿಕ್ಕಿ.
  • ತಮಿಳು ಉಗ್ರವಾದಿಗಳಿಂದ ಕನ್ನಡ ನೆಲ, ಜಲ, ಸಂಪನ್ಮೂಲಗಳು ಬಳಕೆಯಾಗದಂತೆ ಎಚ್ಚರ ವಹಿಸಿ.
  • ನಿಮ್ಮ-ನಿಮ್ಮ ಉದಾರತೆಯನ್ನು ಮತ್ತೊಮ್ಮೆ ಪ್ರಶ್ನಿಸಿಕೊಳ್ಳಿ, ನಿಮ್ಮತನವನ್ನು ಮರೆಯಬೇಡಿರಿ.
  • ಪ್ರತಿಯಾಂದಕ್ಕೂ ಬರೀ ಹೃದಯವಂತಿಕೆ, ಭಾವನೆಗಳಿಂದ ಸ್ಪಂದಿಸಿದೆ ಸ್ವಲ್ಪ ಪ್ರಾಯೋಗಿಕವಾಗಿ ಯೋಚನೆಮಾಡುವುದನ್ನು ಕಲಿಯಿರಿ. ಇರುಳು ಕಂಡ ಬಾವಿಯಲ್ಲಿ ಹಗಲು ಬೀಳಬೇಡಿ.
  • ಕೊನೆಯಲ್ಲಿ , ‘ಬಾ ವೀರ ಕನ್ನಡಿಗಾ ಹೊಸ ಚರಿತ್ರೆ ಬರೆಯುವಾ, ಭಾರತಾಂಬೆ ಮುಕುಟಮಣಿ ಕನ್ನಡಿಗರೆ ಎನಿಸುವಾ...’ ಎನ್ನುವ ಹಾಡನ್ನು ಸದಾ ಗುನುಗುತ್ತಾ ಆ ಬಗ್ಗೆ ಪ್ರಾಮಾಣಿಕವಾಗಿ ನಿಮ್ಮ ಕೈಲಾದಂತೆ ಶ್ರಮಿಸಿ.
ಸಿರಿಗನ್ನಡಂ ಗೆಲ್ಗೆ

ಅಕ್ಟೋಬರ್‌ 30, 2002

ಈ ಲೇಖನ ಪ್ರಕಟವಾಗುವ ಸಮಯಕ್ಕೆ ಸರಿಯಾಗಿ , ನಾಡಿಪುರಂ ಎಸ್‌.ಚಾರ್‌ ಅವರ ಪ್ರತಿಕ್ರಿಯೆ ತಲುಪಿದೆ. ಕಾವೇರಿ ವಿವಾದಕ್ಕೆ ಕಾರಣಗಳನ್ನು ಹಾಗೂ ಅದಕ್ಕೆ ಪರಿಹಾರವನ್ನು ಸೂಚಿಸುವ ಪ್ರಸ್ತಾಪ ಅದರಲ್ಲಿದೆ. ನಮಗೆ ಗೊತ್ತಿದ್ದಂತೆ ಈ ದೃಷ್ಟಿಕೋನದಿಂದ ಕಾವೇರಿ ಸಮಸ್ಯೆಯನ್ನು ಯಾರೂ ನೋಡಿದಂತೆ ಕಾಣುವುದಿಲ್ಲ .
- ಸಂಪಾದಕ

From: nadipuram schar
Subject: cavery problem
Date: Wed, 30 Oct 2002 22:41:34 0800 (PST)
To: [email protected]
Cc: [email protected]

dear sir,
as long as politicains( of tamilnadu and karnataka)try to solve the problem of cauvery , it can never be done.it will be a long drawn affair with no solution. allow engineers of both states to find out a solution within a resonable time as record of flows in the
cauvery basin, ayacut details in the cauvery basin are available for the past 75 years.
the condition is that the politicians of both states should not be allowed to interefere or influence these engineers.
in case of of doubt an enginner from any other country may be asked to decide based upon the figures available.
Y/S
nschar

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X