• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರಿಗೆ ಬೆಂಕಿ ಬಿದ್ದಿದೆ ಬನ್ನಿ !

By Staff
|

* ಸತೀಶ್‌ ಕುಮಾರ್‌ ಎಚ್‌. ಆರ್‌, ಅಲೆಕ್ಸಾಂಡ್ರಿಯಾ, ಯು. ಎಸ್‌. ಎ.

ಭಾರತದಲ್ಲಿ ಅಷ್ಟೇ ಏಕೆ, ವಿಶ್ವದಾದ್ಯಂತ ಶಾಂತಿಪಾಲನೆಗೆ ಹೆಸರುವಾಸಿಯಾದ ಕರ್ನಾಟಕದಲ್ಲಿ ಎಷ್ಟೊಂದು ಸಂಕಷ್ಟಗಳು ತಲೆದೋರುತ್ತಿವೆ. ಮೊದಲೇ ಬರದ ಬೇಗೆಯಿಂದ ಬೆಂದಿದ್ದ ಜನಸ್ತೋಮ ಇತ್ತೀಚೆಗೆ ಮತ್ತೆ ಭುಗಿಲೆದ್ದ ಕಾವೇರಿ ವಿವಾದದಿಂದ ಬಳಲುವಂತಾಯಿತು.

Cauvery Crisis, A Book of Solutionಉದಾರಿಗಳೂ, ಸೌಮ್ಯರೂ ಆದ ನಮ್ಮವರಿಗೆ ಎಲ್ಲರಿಂದಲೂ ತೊಂದರೆಯೇ - ಹಂದಿ ತಿಂದೂ ಹಾಳು, ಅದರ ಬಾಲ ಬಡಿದೂ ಹಾಳು ಎನ್ನುವಂತೆ - ಕಾಡುಗಳ್ಳರಿಗೆ ನಮ್ಮನ್ನು ನಿರಂತರ ಲೂಟಿ ಮಾಡಿದ್ದೂ ಸಾಲದೆ, ಅಪಹರಿಸಿ ಕೋಲಾಹಲ ಉಂಟುಮಾಡಲು ನಮ್ಮವರೇ ಆಗಬೇಕು. ದೇಶದಲ್ಲಿ ನಂಬರ್‌ ಒನ್‌ ಎನಿಸಿದ್ದ ಮುಖ್ಯಮಂತ್ರಿಗೆ ತನ್ನ ಮೂರು ವರ್ಷದ ಆಡಳಿತದಲ್ಲಿ ಪಡೆದ ಜನಾನುರಾಗವನ್ನು ಪರೀಕ್ಷಿಸುವ ಹಲವು ದೃಶ್ಯಾವಳಿಗಳು ಯಾವುದೋ ನಾಟಕದ ದೃಶ್ಯಗಳಂತೆ ನಡೆದು ಹೋಗಿ ಲೆಕ್ಕಾಚಾರಗಳೆಲ್ಲ ತಲೆಕೆಳಗಾದವು.

ಕಾಲೆಳೆಯುವ ಪ್ರಭ್ರುತಿಗಳಿಗೆ ಮತ್ತೊಂದು ಅವಕಾಶ ಸಿಕ್ಕಿತು - ಕಾವೇರಿಯ ಕೂಗು ಬರೀ ನೆಪ ಅಷ್ಟೇ. ನಮ್ಮವರ ಅಧಿಕಾರ ದಾಹ, ಭ್ರಷ್ಟ ರಾಜಕಾರಣಿಗಳ ದೊಂಬರಾಟ, ಮಿತಿಮೀರಿದ ಮೌನದ ಉದಾರೀ ಕನ್ನಡ ಮನಸ್ಥಿತಿ (ಇದೇನಾ ಕನ್ನಡ ಸಂಸ್ಕೃತಿ?), ಇವೆಲ್ಲವೂ ನಮ್ಮ ಸಮಸ್ಯೆಗಳಿಗೆ ಇಂದು ಒಂದು ಹೊಸ ಆಯಾಮವನ್ನು ಒದಗಿಸಿ ಅದು ನಮ್ಮ ಸಂಕಷ್ಟವೂ, ಹಾಗೆಯೇ ಜೀವನದಲ್ಲಿ ಎಂದೆಂದೂ ಮರೆಯಲಾರದ ಪಾಠ ಕಲಿಸುವ ಸದವಕಾಶವೂ ಆಗಿದೆ. ಭಾರತದ ನಕ್ಷೆಯಲ್ಲಿ ತನ್ನ ಸ್ಥಾನಮಾನಗಳನ್ನು ಕಾಪಾಡಿಕೊಂಡು ಬಂದಿರುವ ಕರ್ನಾಟಕಕ್ಕೆ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಸಂಕಷ್ಟಗಳೆಲ್ಲಾ ಒಂದೇ ಸಾರಿ ಬಂದೊದಗಿ ಸದ್ಯಕ್ಕೆ ಪೂರ್ಣ ಕುರುಡು ಆವರಿಸಿದೆ.

ಕನ್ನಡಿಗರ ನಡುನೀರಲ್ಲಿ ಕೈ ಬಿಟ್ಟ ಕೃಷ್ಣ

ಇತ್ತೀಚಿನ ವಿದ್ಯಮಾನಗಳನ್ನು ಸ್ವಲ್ಪ ಗಮನಿಸೋಣ : ಎಲ್ಲೆಡೆ ನಿರಶನ, ಸತ್ಯಾಗ್ರಹ, ಬಂದ್‌, ಜೀವ ಹಾನಿ, ಆಸ್ತಿ ಹಾನಿ ಇಷ್ಟೆಲ್ಲಾ ಆಗುತ್ತಿದ್ದರೂ ಎಲ್ಲಿಯೂ ನಮ್ಮ ನಿಲುವನ್ನು ಒಂದೆಡೆ ನಿಲ್ಲಿಸಿಕೊಳ್ಳದಿರುವ ಪರಿಸ್ಥಿತಿ. ಸುಪ್ರೀಂಕೋರ್ಟು ಆಜ್ಞೆ ಮಾಡಿದ್ದರೂ ನೀರು ಬಿಡಲು ಒಲ್ಲೆ ಎಂದ ಮುಖ್ಯಮಂತ್ರಿ, ರಾಜ್ಯದಲ್ಲಿ ಈವರೆಗೆ ಬೇರೆ ಯಾರೂ ಕೈಗೊಂಡಿರದ ಐತಿಹಾಸಿಕ ಪಾದಯಾತ್ರೆಯನ್ನು ಮಾಡಿ ಜನ-ಮನಗಳನ್ನು ತಲುಪಿದ ಮುಖ್ಯಮಂತ್ರಿ ಎಂದೇ ಹೆಸರಾದ ಎಸ್‌. ಎಂ. ಕೃಷ್ಣರವರು ರಾತ್ರೋ-ರಾತ್ರಿ ಹೈಕಮ್ಯಾಂಡಿನ ಆದೇಶದಂತೆ ನಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟಿರುವುದು ತುಂಬಾ ವಿಷಾದದ ಸಂಗತಿ.

ಇಷ್ಟು ದಿನ ಇದ್ದ ತೊಂದರೆಗಳೇ ಸಾಲವು ಎಂಬಂತೆ ಹೊಸದಾಗಿ ಹುಟ್ಟಿದ ಮುಷ್ಕರಗಳು, ಎಂದೂ ಬಾಯಿ ಬಿಡದೇ ಇದ್ದ ಶಾಸಕ-ಸಂಸದ ಮಹೋದಯರು ಇಂದು ನೀಡಬಹುದಾದ ಸಾಮೂಹಿಕ ರಾಜೀನಾಮೆ, ಆಂತರಿಕ ಭಿನ್ನಾಭಿಪ್ರಾಯಗಳಿಂದ ಒಡೆದು ಹೋಗಬಹುದಾದ ಮನೆ-ಮನಗಳು, ಜೈಲು ತುಂಬಿಕೊಳ್ಳುವ ನವ ತರುಣರು, ಆತ್ಮಾಹುತಿ ಮಾಡಿಕೊಳ್ಳುವ ಅಮಾಯಕರು, ಸಮಸ್ಯೆಯನ್ನು ಇನ್ನೂ ಹೆಚ್ಚಿಸಿ ನಮ್ಮನ್ನೆಲ್ಲ ನಾವೇ ಸುಟ್ಟುಕೊಳ್ಳುವ ದಾವಾನಲವಾಗಬಹುದೇನೋ ಎಂಬ ಹೆದರಿಕೆಯನ್ನು ಹುಟ್ಟುಹಾಕಿಸಿವೆ.

ನಾವು ಈ ಹಾಲಾಹಲ-ಕೋಲಾಹಲದಿಂದ ಏನನ್ನು ಸಾಧಿಸಿದ್ದೇವೆ? ಕರ್ನಾಟಕದಲ್ಲಿ ರೈಲು ತಡೆ, ರಸ್ತೆ ತಡೆ ನಡೆಸಿದರೆ ಅದರಿಂದ ಕನ್ನಡಿಗರಿಗೇ ಹಾನಿಯಲ್ಲದೇ ಬೇರೆ ಯಾರಿಗೂ ಯಾವ ರೀತಿಯಲ್ಲಿ ಅದರ ಪರಿಣಾಮ ತಟ್ಟುತ್ತದೆ ಎಂಬುದು ನನಗಿನ್ನೂ ಅರಿವಾಗಿಲ್ಲ. ಎಲ್ಲ ರಾಜ್ಯಗಳಂತೆ ನಮ್ಮ ರಾಜ್ಯವೂ ಒಂದು ಸಂಸ್ಥೆ, ಒಂದು ದಿನ, ಒಂದು ಒಪ್ಪತ್ತು ಅದು ತನ್ನ ಕಾರ್ಯ ಸ್ಥಗಿತಗೊಳಿಸಿಕೊಂಡರೆ ಅದರ ಬೆಳವಣಿಗೆ, ಅಭಿವೃದ್ಧಿಗೆ ತೊಂದರೆಯೇ ಹೊರತು ಅದರಿಂದ ಯಾವ ಪುರುಷಾರ್ಥದ ಸಾಧನೆಯೂ ಆಗದು.

ಕಾವೇರಿಗೆ ದೆಹಲಿ ರಿಮೋಟ್‌ ?

ಸಾರ್ವಜನಿಕರ ನೆನಪಿನ ಶಕ್ತಿ ತುಂಬಾ ಕಡಿಮೆ ಎಂಬುದು ಜಾಗತಿಕ ಸತ್ಯವಾದರೂ, ಈ ರಾಜಕಾರಣಿಗಳನ್ನು ನಂಬಿ ನಮ್ಮ ತಲೆ ಮೇಲೆ ನಾವೆ ಚಪ್ಪಡಿ ಎಳೆದುಕೊಳ್ಳುವುದು ಮೂರ್ಖತನವಲ್ಲದೇ ಮತ್ತಿನ್ನೇನು? ಬುದ್ಧಿ ಇರುವ ಯಾವ ಮನುಷ್ಯನಾದರೂ ರಾಜಕೀಯ ಪ್ರೇರಿತ ಮುಷ್ಕರಕ್ಕೆ ತೊಡಗಿ ತನ್ನ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟ ತಂದು ಕೊಂಡಾನೇ? ಅವಧಿ ಮುಗಿಯುವ ಮುನ್ನವೇ ಚುನಾವಣೆಗಳನ್ನು ಹೇರಿ, ಹೊಸ ಮಂತ್ರಿಮಂಡಲವನ್ನು ಸೃಷ್ಟಿಸಿಕೊಂಡು, ಬೊಕ್ಕಸ ಬರಿದು ಮಾಡಿಕೊಂಡರೆ ನಮ್ಮನ್ನಂಟಿದ ಪಾಪ ಕಳೆಯುವುದೇ?

ಅತ್ತ ಜಯಲಲಿತಾ ವಿಮಾನ ಯಾತ್ರೆ ಮಾಡಲಿ, ಇತ್ತ ಕೃಷ್ಣ ಪಾದಯಾತ್ರೆ ಬೆಳಸಲಿ; ಅತ್ತ ಜಯಲಲಿತಾ ಸೋನಿಯಾ ಗಾಂಧಿಯನ್ನು, ಎನ್‌.ಡಿ.ಎ. ಸರಕಾರವನ್ನು ತನ್ನ ಎಲುಬಿಲ್ಲದ ನಾಲಗೆಯಲ್ಲಿ ಆಡಿಕೊಳ್ಳಲಿ, ಇತ್ತ ಕೃಷ್ಣ ‘ಅಮ್ಮಾ, ನೀನೇ ಗತಿ’ ಎಂದು ಹೈಕಮ್ಯಾಂಡ್‌ಗೆ ಅಡ್ಡ ಬೀಳುತ್ತಿರಲಿ. ದೆಹಲಿಯಿಂದ ಇಳಿದುಬಂದ ಅಪ್ಪಣೆಯನ್ನು ಯಾವ ಕನ್ನಡಿಗನೂ ಮನಸಾರೆ ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ . ಇದನ್ನು ವಿಸ್ತರಿಸಿ ಹೇಳುವ ಅಗತ್ಯ ಇಲ್ಲ .

ಭಾರತದ ಸಮಸ್ತ ಜನತೆ ಒಂದುಗೂಡಿ ಒಗ್ಗಟ್ಟಾಗಿ ದೇಶದ ಏಳಿಗೆಗೆ ಶ್ರಮಿಸಬೇಕಾದ ಸಮಯ ಬರಲು ಇನ್ನೆಷ್ಟು ಶತಮಾನಗಳು ಕಳೆಯಬೇಕೋ, ಇನ್ನೆಷ್ಟು ರಕ್ತ-ಕಣ್ಣೀರಿನ ಕೋಡಿ ಹರಿಯಬೇಕೋ? ಇಂದು ನಮ್ಮನ್ನು ಅಲುಗಾಡಿಸುವಂತೆ, ನಮ್ಮನ್ನು ಬಾಧಿಸುವಂತೆ ಆಂತರಿಕ ಕಲಹಗಳು ಬೇರೆ ಯಾವ ದೇಶವನ್ನೂ ಬಾಧಿಸುವುದಿಲ್ಲವೆಂದರೆ ಅತಿಶಯೋಕ್ತಿಯಾಗದು. ರಾಜ್ಯದಿಂದ ರಾಜ್ಯಕ್ಕೆ, ಮೂಲೆಯಿಂದ ಮೂಲೆಗೆ ವೈವಿಧ್ಯತೆಯನ್ನು ಹೆಮ್ಮೆಯಿಂದ ಹಂಚಿಕೊಳ್ಳುವ ನಾವು ವಿವಿಧತೆಯಲ್ಲಿ ಏಕತೆಯನ್ನು ಕಾಣ ಬಯಸುವಲ್ಲಿ ಇನ್ನೂ ಸಫಲರಾಗಿಲ್ಲ, ಎಲ್ಲೇ ಹೋದರೂ ನಮ್ಮ ಐಡೆಂಟಿಟಿಯನ್ನು ಕಾಪಾಡಿಕೊಂಡು ಹೋಗುವುದರಲ್ಲಿ ತಪ್ಪಿಲ್ಲ, ಅದೇ ಐಡೆಂಟಿಟಿ ನಮ್ಮೆಲ್ಲರ ಒಟ್ಟು ಉದ್ಧಾರಕ್ಕೇ ಮುಳುವಾಗಬಾರದು.

ತಮಿಳರಿಗೆ ಹೃದಯವಂತಿಕೆ ಇದೆಯೆಂದು ತಿಳಿದಿದ್ದೆ - ಇಷ್ಟು ದಿನ ನೀರುಣಿಸಿದವರನ್ನು ಎಷ್ಟು ಸುಲಭವಾಗಿ ಮರೆತುಬಿಟ್ಟರು! ಕಾವೇರಿ ನೀರಿನ ಬಣ್ಣ ಋತು-ಚಕ್ರಗಳ ಬದಲಾವಣೆಯಂತೆ ಬದಲಾಗುವುದು ಸಹಜ-ಅದು ಪ್ರಕೃತಿಯ ಅಘೋಷಿತ ನಿಯಮ. ಆದರೆ ಆಯಾ ಪ್ರಾಂತ್ಯಗಳ ರಾಜಕಾರಣಿಗಳ ಸೋಗುಲಾಡಿತನದಿಂದಲೋ, ರೊಚ್ಚಿಗೆದ್ದ ಜನರ ರಕ್ತದಿಂದಲೋ ಕಾವೇರಿ ನೀರಿನ ಬಣ್ಣ ಬದಲಾಗುವುದಾದರೆ ಅದು ಪ್ರಕೃತಿಯ ನಿಯಮಕ್ಕೆ ವಿರುದ್ಧ . ಪ್ರಕೃತಿ ವಿರುದ್ಧ ತಿರುಗಿಬಿದ್ದವರಿಗೆ ಎಂಥ ಗತಿ ಬರುತ್ತದೆ ಗೊತ್ತಾಗಬೇಕಾದರೆ ಇತಿಹಾಸ ಗೊತ್ತಿರಬೇಕು !

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more