ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಎಂಸಿ ಮೌಲ್ಯದ ಪ್ರಶ್ನೆಗಳ ಸುಳಿಯಲ್ಲಿ ದಿಕ್ಕೆಟ್ಟ ಕೃಷ್ಣ

By Staff
|
Google Oneindia Kannada News

* ದಟ್ಸ್‌ಕನ್ನಡ ಬ್ಯೂರೊ

ಕೃಷ್ಣ ಅವರಿಗೆ -

  • ಜೈಲು ಶಿಕ್ಷೆಯಾಗುತ್ತಾ ?
  • ಛೀಮಾರಿ ಹಾಕಲಾಗುತ್ತಾ ?
  • ದಂಡ ವಿಧಿಸುತ್ತಾರಾ ?
  • ಅಥವಾ ಯಾವುದೇ ಶಿಕ್ಷೆಯಿಲ್ಲದೆ ಕೃಷ್ಣ ಪಾರಾಗುತ್ತಾರಾ ?
ಕರ್ನಾಟಕ ಮಾತ್ರವಲ್ಲ , ತಮಿಳರಷ್ಟೇ ಅಲ್ಲ , ದೇಶಕ್ಕೆ ದೇಶವೇ ಕೋರ್ಟು ಹಾಗೂ ಕೃಷ್ಣ ಜಪ ಮಾಡುತ್ತಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ತಾನು ನೀಡಿದ ಆದೇಶವನ್ನು ನೀರುಪಾಲು ಮಾಡುವ ಮೂಲಕ ಕೃಷ್ಣ ನ್ಯಾಯಾಂಗ ನಿಂದನೆ ಎಸಗಿದ್ದಾರೆಂದು ಈಗಾಗಲೇ ಸ್ಪಷ್ಟ ಮಾತುಗಳಲ್ಲಿ ಅಭಿಪ್ರಾಯಪಟ್ಟಿರುವ ಸರ್ವೋಚ್ಚ ನ್ಯಾಯಾಲಯ, ಸೋಮವಾರ (ಅ.28) ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ. ಮೊನ್ನಿನ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳ ಆವೇಶ ಗಮನಿಸಿದರೆ ಶಿಕ್ಷೆಯಾಗುವುದು ಖಚಿತ; ಅದು ಏನು ?

ನಿಮ್ಮ ಜೊತೆಗೆ ನಾವಿದ್ದೇವೆ..
ನಾವೂ ಜೈಲಿಗೆ ಬರುತ್ತೇವೆ, ನಿಮ್ಮೊಂದಿಗೆ ಇರುತ್ತೇವೆ ಎಂದು ಕನ್ನಡ ಹೋರಾಟಗಾರರು, ಕಾವೇರಿ ಮಡಿಲಿನ ರೈತರು ಕೃಷ್ಣ ಅವರಿಗೆ ಧೈರ್ಯ ಹೇಳಿದ್ದಾರೆ. ‘ಮುಖ್ಯಮಂತ್ರಿಗಳನ್ನು ಕಾವೇರಿಗೆ ಹಾರ ಕೊಡುವುದಿಲ್ಲ ’ ಎಂದು ಕಾಂಗ್ರೆಸ್‌ನ ಶಾಸಕರು, ಸಂಪುಟ ಸದಸ್ಯರು ಗಟ್ಟಿಯಾಗಿ ಹೇಳುತ್ತಿದ್ದಾರೆ. ಎಲ್ಲಾ ಸರಿ, ಆದರೆ ಕುರ್ಚಿ ಉಳಿಯುತ್ತಾ ? ನೀರು ಕನ್ನಂಬಾಡಿ- ಕಬಿನಿಯಲ್ಲೇ ಉಳಿಯುತ್ತಾ ? ಜನರ ಸಹನೆಯ ಕಟ್ಟೆ ಒಡೆಯದಿರುತ್ತಾ ? ಪ್ರತಿಯಾಂದೂ ಒಂದೊಂದು ಟಿಎಂಸಿ ಮೌಲ್ಯದ ಪ್ರಶ್ನೆಗಳು. ಉತ್ತರ ಮುಂದಿನ ವಾರದಲ್ಲಿ .

ಅ.27ರ ಭಾನುವಾರ ಯಥಾ ಪ್ರಕಾರ ಸಂಪುಟ ಸಭೆ, ನಂತರ ಸರ್ವಪಕ್ಷ ಸಭೆ. ಇಂಥ ಸಭೆಗಳಿಗೀಗ ಅರ್ಥವೇ ಇಲ್ಲ . ಆದರೆ, ಪ್ರತಿಯಾಂದು ಸಭೆ- ಪ್ರತಿಯಾಬ್ಬರ ಬೆಂಬಲ ಮುಖ್ಯಮಂತ್ರಿಗೆ ಮಾನಸಿಕ ಬೆಂಬಲ ತಂದುಕೊಡುತ್ತದೆ. ಇಂಥ ಬೆಂಬಲದ ನೆಚ್ಚಿನಿಂದಲೇ ಕೃಷ್ಣ ಬಡಿದಾಡಬೇಕು!

ನೆತ್ತಿಯ ಮೇಲೆ ತೂಗುಗತ್ತಿ ತೂಗುತ್ತಿರುವ ಸಂದರ್ಭದಲ್ಲೂ ತಮಿಳುನಾಡಿಗೆ ನೀರು ಬಿಡದಿರುವ ತನ್ನ ತೀರ್ಮಾನಕ್ಕೆ ಅಂಟಿಕೊಂಡಿರುವ ಕರ್ನಾಟಕ ಸರ್ಕಾರ- ರಾಜ್ಯದ ಜಲಾಶಯಗಳಲ್ಲಿನ ನೀರಿನ ಲಭ್ಯತೆ ಹಾಗೂ ರಾಜ್ಯದಲ್ಲಿನ ಸ್ಥಿತಿಗತಿಯ ಬಗ್ಗೆ ಸೋಮವಾರ ಬೆಳಗ್ಗೆ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಲಿದೆ. ಅಲ್ಲಿಗೆ ರಾಜ್ಯ ಸರ್ಕಾರದ ಕೆಲಸ ಮುಗಿದಂತೆ. ಉಳಿದುದು ತೀರ್ಪಿಗೆ ಎದುರು ನೋಡುವುದು.

ಉಹ್ಞುಂ.. ಎಲ್ಲ ವೂ ಸರಿಯಾಗಿಲ್ಲ !
ಕರ್ನಾಟಕ ಸರ್ಕಾರದ ಮೇಲೆ ಕೋರ್ಟು ಕೆಂಡಾಮಂಡಲ ಕೋಪಗೊಂಡಿರುವ ಈ ಹೊತ್ತು , ಇಲ್ಲಿ - ಕರ್ನಾಟಕದಲ್ಲಿ -ಸರ್ಕಾರದಲ್ಲಿ , ಎಲ್ಲಾ ಸರಿಯಾಗಿದೆಯಾ ? ಧೈರ್ಯವಾಗಿ ಹ್ಞೂಂಗುಟ್ಟುವುದು ಕಷ್ಟ . ಸಂಪುಟ ಸದಸ್ಯರ ಬೆಂಬಲ ಕ್ರೋಢೀಕರಿಸಿಕೊಳ್ಳಲು ಕೃಷ್ಣ ಅವರ ಸೂಚನೆಯಂತೆ ಸಚಿವ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಕರೆದ ಸಭೆಗೆ ಕೆಲವು ಸಚಿವರು ಓಗೊಡಲೇ ಇಲ್ಲ . ಸಚಿವರಾದ ಎಚ್‌.ಸಿ.ಶ್ರೀಕಂಠಯ್ಯ ಹಾಗೂ ಧರ್ಮಸಿಂಗ್‌ ಅವರ ನಿವಾಸಗಳಲ್ಲೂ ಪ್ರತ್ಯೇಕ ಸಭೆಗಳು ನಡೆದವು. ಈ ನಡುವೆ ಸಣ್ಣ ಸಣ್ಣ ಗುಂಪುಗಳು ಸಣ್ಣ ದನಿಗಳನ್ನು ಹೊರಡಿಸುತ್ತಿವೆ. ಆದರೆ, ಕೃಷ್ಣ ಅವರಿಗೆ ದೆಹಲಿ ಮೇಡಂ ಅಭಯ ಸಿಕ್ಕಿದೆ ಎಂದು ಅಂತಃಪುರದ ಮೂಲಗಳು ತಿಳಿಸಿವೆ.

ಇತ್ತ ಮಂಗಳೂರಿನಿಂದ ದನಿ ಹೊರಡಿಸಿರುವ ಭಾರತೀಯ ಜನತಾಪಕ್ಷದ ರಾಜ್ಯ ಘಟಕದ ಮುಖಂಡರು ಕಾವೇರಿ ಸಮಸ್ಯೆಯನ್ನು ನಿಭಾಯಿಸುವಲ್ಲಿ ಕೃಷ್ಣ ಸೋತಿದ್ದಾರೆ ಎಂದು ಟೀಕಿಸಿದ್ದಾರೆ. ಕಾವೇರಿ ಸಮಸ್ಯೆಗೆ ಒತ್ತು ನೀಡಿರುವ ಸರ್ಕಾರ ಇತರ ಸಮಸ್ಯೆಗಳಿಗೆ, ವೀರಪ್ಪನ್‌ ಸೆರೆಯಿಂದ ಮಾಜಿ ಸಚಿವ ನಾಗಪ್ಪ ಅವರನ್ನು ಬಿಡಿಸುವ ಪ್ರಕ್ರಿಯೆಗೆ, ಅಭಿವೃದ್ಧಿ ಚಟುವಟಿಕೆಗಳಿಗೆ ಬೆನ್ನು ತೋರಿದೆ ಎನ್ನುವುದು ಇನ್ನೊಂದು ಆರೋಪ. ತಮಾಷೆಯಾಗಿದೆ ಅನ್ನಿಸುವುದಿಲ್ಲವಾ..!

ಕಡೆಯದಾಗಿ ಮತ್ತದೇ ಪ್ರಶ್ನೆ, ಕೃಷ್ಣ ರಿಗೆ ಶಿಕ್ಷೆಯಾಗುತ್ತಾ ?
ಆಗುತ್ತೋ ಇಲ್ಲವೋ. ಆದರೆ, ಕೃಷ್ಣ ಅವರಿಗೆ ಶಿಕ್ಷೆಯಾದರೆ ಅದು ವೈಯಕ್ತಿಕ ಶಿಕ್ಷೆಯಾಗಿರುವುದಿಲ್ಲ . ಏಕೆಂದರೆ ಮುಖ್ಯಮಂತ್ರಿ- ಇಡೀ ರಾಜ್ಯದ ಹಾಗೂ ಸರ್ಕಾರದ ಪ್ರತಿನಿಧಿ. ಇದು ಎಲ್ಲರಿಗೂ ನೆನಪಿರಬೇಕು.

Post your Views

ಮುಖಪುಟ / ಕಾವೇರಿ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X