ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರದ ಭೀಮಪ್ಪ ಕಾವಲಗಿಯ ‘ತಬರನ ಕಥೆ’

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೋ

ನಮ್ಮ ಪ್ರಜಾಪ್ರಭುತ್ವದಲ್ಲಿ ‘ರೆಡ್‌ ಟೇಪಿಸಂ’ನ ಬಿಸಿ ಅನುಭವಿಸಿದವರಿಗೇ ಗೊತ್ತು. ಯಾವುದೋ ಖಟ್ಲೆಗಾಗಿ ಕೋರ್ಟಿನ ಮೆಟ್ಟಿಲು ಹತ್ತಿ ಹತ್ತಿ ಜೀವ ತೇಯುವವರು, ಪಿಂಚಣಿಗಾಗಿ ಸುತ್ತಿ ಸುತ್ತಿ ಚಪ್ಪಲಿ ಸವೆದು ಇನ್ನೊಂದು ಜೊತೆ ಚಪ್ಪಲಿ ಕೊಳ್ಳೋಕೂ ಕಾಸಿಲ್ಲದವರು, ತಮ್ಮ ಸೈಟಿನಲ್ಲಿ ಯಾರೋ ಮನೆ ಕಟ್ಟಿಕೊಂಡುಬಿಟ್ಟರು; ಮಾಡೋದೇನು ಅಂತ ತಿಳಿದುಕೊಳ್ಳೋದಕ್ಕೇ ಸತ್ವ ಬಸಿದವರು, ಕಳೆದುಹೋದ ಗಾಡಿ ಸಿಕ್ಕಿತೆ ಅಂತ ಪೊಲೀಸು ಠಾಣೆ ಮೆಟ್ಟಿಲು ಹತ್ತಿ ಹೈರಾಣಾದವರು... ಹೀಗೆ ಸಣ್ಣದಾಗೇ ಕಾಣುವ ಕೆಲಸಕ್ಕಾಗಿ ಬದುಕಿಯೂ ಸತ್ತವರ ಸಂಖ್ಯೆ ಸಣ್ಣದೇನೂ ಇಲ್ಲ. ಇಂಥವರ ಯಾದಿಗೆ ಸೇರುವ ನಮ್ಮ ನಡುವಿನ ಅಪರೂಪದವ ಬಿಜಾಪುರದ ಭೀಮಪ್ಪ ಕಾವಲಗಿ.

ಫ್ಲ್ಯಾಷ್‌ಬ್ಯಾಕ್‌
ಅದು 1976ನೇ ಇಸವಿಯ ಎಮರ್ಜೆನ್ಸಿ ಟೈಮು. ಎಮರ್ಜೆನ್ಸಿ ಜೊತೆಗೆ ಕುಟುಂಬ ಯೋಜನೆಯ ಕರೆಗಂಟೆಯನ್ನೂ ಇಂದಿರಾ ಗಾಂಧಿ ಜೋರಾಗಿ ಬಾರಿಸುತ್ತಿದ್ದ ಹೊತ್ತು. ಭೀಮಪ್ಪ ಕಾವಲಗಿ ಹೆಂಡತಿ ಶಾಂತಾಬಾಯಿಗೆ ಆಗ 35ರ ಪ್ರಾಯ. ಎರಡು ಹೆಣ್ಣು ಮಕ್ಕಳ ತಾಯಾಗಿದ್ದ ಶಾಂತಾಬಾಯಿಗೂ ಗಂಡುಮಗುವಾಗಲಿ ಅಂತ ಆಸೆಯಿತ್ತು. ಇನ್ನೊಂದು ಕಡೆ ಇಂದಿರಾ ಗಾಂಧಿ ಬಗ್ಗೆ ಅಪಾರ ಗೌರವ. ಈ ಕಾರಣಕ್ಕೇ, ಮೂರು ತಿಂಗಳು ಬೆಳೆದಿದ್ದ ತನ್ನ ಭ್ರೂಣವನ್ನು ತೆಗಿಸಿ, ಕುಟುಂಬ ಕಲ್ಯಾಣಕ್ಕೆ ಜೈ ನ್ನಲು ಶಾಂತಾಬಾಯಿ ತೀರ್ಮಾನಿಸಿದಳು.

ಬಿಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಹೊಟ್ಟೆಯಲ್ಲಿನ ಭ್ರೂಣ ತೆಗಿಸಿ ಹಾಕಲು ಶಾಂತಾಬಾಯಿ ಮುಂದಾದಳು. ಆದರೆ ಆಸ್ಪತ್ರೆಯವರ ಬೇಜವಾಬ್ದಾರಿಯಿಂದ ಶಸ್ತ್ರ ಚಿಕಿತ್ಸೆಗೆ ಮುನ್ನವೇ, ಆಸ್ಪತ್ರೆಯ ವರಾಂಡದಲ್ಲಿ ಶಾಂತಾಬಾಯಿ ಪ್ರಾಣ ಹೋಯಿತು. ಭೀಮಪ್ಪ ಕಾವಲಗಿ ಕೋರ್ಟಿಗೆ ಹೋದರು. ಆಗ ಬಿಜಾಪುರದ ಮುನ್ಸಿಫ್‌ ಜಡ್ಜ್‌ ಆಗಿದ್ದ ಕೆ.ಡಿ.ದೇಶಪಾಂಡೆ ಶಾಂತಾಬಾಯಿ ಸಾವಿಗೆ ನಿರ್ಲಕ್ಷ್ಯ ಕಾರಣ ಎಂದು ತೀರ್ಪಿತ್ತರು. ತೀರ್ಪಿನ ಪ್ರಕಾರ ಜಿಲ್ಲಾಡಳಿತ 5 ಸಾವಿರ ರುಪಾಯಿ ಪರಿಹಾರವನ್ನೂ ಕೊಡಬೇಕಾಯಿತು.

ಆದರೆ ಕೊರ್ಟಿನ ತೀರ್ಪಿಗೆ ಸರ್ಕಾರ ಕಿವಿಗೊಡಲೇ ಇಲ್ಲ. ಮುಖ್ಯಮಂತ್ರಿಗಳು ಬದಲಾಗುತ್ತಾ ಹೋದರೂ, ಪರಿಹಾರಕ್ಕಾಗಿ ಕಾವಲಗಿ ಮನವಿ ಪತ್ರ ಬರೆಯುತ್ತಲೇ ಹೋದರು. ಯಾವುದಕ್ಕೂ ಉತ್ತರ ಮಾತ್ರ ಸಿಗಲಿಲ್ಲ. ಅವರಿವರನ್ನು ಕಂಡೂ ಫಲ ಸಿಗಲಿಲ್ಲ. ಬದಲಿಗೆ ಒಂದಿಷ್ಟು ದುಡ್ಡು ಕರಗಿತು. ಓಡಾಟದ ಭರದಲ್ಲೇ ಆಗ ತಿಂಗಳಿಗೆ 300 ರುಪಾಯಿ ಪಗಾರ ತಂದುಕೊಡುತ್ತಿದ್ದ ಕೆಲಸ ಕೂಡ ಹೋಯಿತು. ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಲು ಕಾವಲಗಿ ಹಣ್ಣುಗಾಯಿ ನೀರುಗಾಯಾಗಿ ಹೋದರು.

ಈ ಅಭಿನವ ತಬರ ತನ್ನ ಹಟ ಮಾತ್ರ ಬಿಟ್ಟಿಲ್ಲ. 25 ವರ್ಷಗಳಾದರೂ ಸರ್ಕಾರ ತನಗೆ ಪರಿಹಾರ ಕೊಟ್ಟಿಲ್ಲ. ಈ ಅವಧಿಯಲ್ಲಿ ನಾನು ಕಳಕೊಂಡಿರುವುದನ್ನು ಕಟ್ಟಿಕೊಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಈಗ ನನ್ನ ಒಬ್ಬಳು ಮಗಳಿಗೆ ಸರ್ಕಾರಿ ಕೆಲಸವನ್ನು ಕೊಡುವುದರ ಜೊತೆಗೆ, ಕೊಡಬೇಕಾದ ಪರಿಹಾರವನ್ನು ಬಡ್ಡಿ ಸಮೇತ ವಗಾಯಿಸಲಿ ಎಂದು ಕಾವಲಗಿ ಪಟ್ಟು ಹಿಡಿದಿದ್ದಾರೆ. ಸದ್ಯಕ್ಕೆ ಅವರು ಬೆಂಗಳೂರಿನ ರಾಜಭವನದ ಮುಂದೆ ಧರಣಿ ಕೂತಿದ್ದಾರೆ. ಅಂದಹಾಗೆ, ಕಾವಲಗಿ ವಯಸ್ಸು ಈಗ 75 !

ಕಾವೇರಿ ನೀರು ಮತ್ತು ನಾಗಪ್ಪ ಬಿಡುಗಡೆಯ ಬಂಡೆಯಂಥಾ ಸಮಸ್ಯೆಗಳನ್ನು ಹೊತ್ತ ಸರ್ಕಾರದ ಕಣ್ಣಿಗೆ ಯಾವಲಗಿಯಂಥಾ ತಬರರು ಕಾಣೋಕೆ ಹೇಗೆ ಸಾಧ್ಯ ಹೇಳಿ?

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X