ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಪರ್‌ ಫ್ಲಾಪ್‌ ಸಾಂಗ್ಲಿಯಾನ... ಹೋದ ಮಾನ..!

By Staff
|
Google Oneindia Kannada News

*ನಾಡಿಗೇರ್‌ ಚೇತನ್‌

‘ಜನ ನಮ್ಗೆ ಸಾಕಾರ ಕೊದ್ಬೇಕು, ನಮ್ಮ ಕೈಲೇನಾಗ್ತದೆ ನಾವ್‌ ಮಾದ್ತೀವಿ ಅಷ್ಟೆ ! 50% ಕ್ರೆೃಂ ಎರಾದಿಕೇತ್‌ ಮಾದಿದೀವಿ..!’
ಕಷ್ಟವಾದರೂ ಸರಿ, ಖನ್ನದದಲ್ಲೇ ತಮ್ಮ ಅಸಹಾಯಕತೆಯನ್ನು ಪೊಲೀಸ್‌ ಕಮಿಷನರ್‌ ಸಾಂಗ್ಲಿಯಾನ ತೋಡಿಕೊಳ್ಳೋದು ಹೀಗೆ. ಸೆಪ್ಟೆಂಬರ್‌ ಅಂತ್ಯಕ್ಕೆ ಮುಂಬಡ್ತಿ ಹೊಂದಿ ಡಿಜಿಪಿ ಆಗುವ ಸಾಂಗ್ಲಿಯಾನ ಬೆಂಗಳೂರು ಪೊಲೀಸ್‌ ಕಮಿಷನರ್‌ ಸ್ಥಾನದಿಂದ ನಿರ್ಗಮಿಸುತ್ತಿದ್ದಾರೆ. ಇದಕ್ಕೆ ಜನರಲ್ಲಿ ಯಾವುದೇ ಭಾವನಾ ಸ್ಪಂದನೆ ಇಲ್ಲ.

ಹತ್ತು ತಿಂಗಳ ಹಿಂದೆ, ನವೆಂಬರ್‌ 1ನೇ ತಾರೀಖು ಇದೇ ಸಾಂಗ್ಲಿಯಾನ ಹೆಸರಿಗೆ ಜನಮನ ಮಿಡಿಯುತ್ತಿದ್ದ ರೀತಿಯೇ ಬೇರೆಯದು. ಶಂಕರ್‌ನಾಗ್‌ ಅಭಿನಯದ ಎರಡು ಚಿತ್ರಗಳಲ್ಲಿ ಜನ ಕಂಡಿದ್ದ ಸಾಂಗ್ಲಿಯಾನ ಚಿತ್ರಣವೇ ಬೆಂಗಳೂರಿಗರ ಮುಂದಿತ್ತು. ಅದಕ್ಕೆ ಪುಷ್ಟಿ ಕೊಡುವಂತೆ ಮಾಧ್ಯಮಗಳು ಸಾಂಗ್ಲಿಯಾನ ಕಡೆಗೆ ಮುಖ ಮಾಡಿದವು. ಸಾಂಗ್ಲಿಯಾನ ಕೂಡ ಮಾಧ್ಯಮ ಶೂರರಾದರು. ಮೊದಮೊದಲಂತೂ ಕುಂತು ನಿಂತಾಗೆಲ್ಲಾ ಎಂತೆಂಥದೋ ನಿರ್ಧಾರಗಳನ್ನು ತೆಗೆದುಕೊಂಡು, ಅದರ ಬಗ್ಗೆ ಚರ್ಚೆಯನ್ನೇ ಹುಟ್ಟುಹಾಕಿದರು. ಆಗ ಸಾಂಗ್ಲಿಯಾನ ಪೇಪರ್‌ ಮೇಲೆ ‘ಸೂಪರ್‌ ಕಾಪ್‌’!

ಇವರ ಕಟ್‌ ಅಂಡ್‌ ರೈಟ್‌ ನಿರ್ಧಾರಗಳಿಗೆ ಪೊಲೀಸ್‌ ಬಳಗದಲ್ಲೇ ಅಸಮಾಧಾನವಿತ್ತು ಅನ್ನೋದು ಬೇರೆ ಮಾತು. ‘ಜನರ ಸಾಕಾರ’ ಕೋರುತ್ತಾ ಇವರು ನಿಲ್ಲುವಷ್ಟರಲ್ಲಿ ಹಾಡ ಹಗಲು ದರೋಡೆಗಳು ಜಾಸ್ತಿಯಾದವು. ಕತ್ತು ಕೊಯ್ಯುವುದನ್ನು ನಿಲ್ಲಿಸೋಕೆ ಸಾಂಗ್ಲಿಯಾನ ಕೈಲಿ ಆಗಲೇ ಇಲ್ಲ. ಹೋಗಲಿ, ಕೊಯ್ದು ಹೋದವರನ್ನ ಹಿಡಿದು ತರುವುದಕ್ಕೂ ಆಗಲಿಲ್ಲ. ಪ್ರಶ್ನೆಗೆಳೆದರೆ ಮತ್ತದೇ ಶೈಲಿಯಲ್ಲಿ ‘ನಮ್ಮ ಎಫರ್ಟ್‌ ನಡೆದಿದೆ, ಪಬ್ಲಿಕ್‌ ಸಾಕಾರ ಬೇಕು...’ ಅನ್ನುವ ಮಾತು. ಬಲವಾದ ಖದರಿನ ಪೊಲೀಸರನ್ನು ಆಯಕಟ್ಟಿನ ಜಾಗಕ್ಕೆ ಹಾಕಿಕೊಳ್ಳಲು ಸಾಂಗ್ಲಿಯಾನ ಮನಸ್ಸು ಮಾಡಿದರೆ, ಅದಕ್ಕೆ ಮೇಲಿಂದ ಕೂಡದೆಂಬ ಅಣತಿ.

ಸಾಂಗ್ಲಿಯಾನ ನಿರ್ಧಾರಗಳ ಬುಡಗಳೇ ಭದ್ರವಾಗಿರಲಿಲ್ಲ ; ಎಲ್ಲಕ್ಕೂ ಪೊಲಿಟಿಕಲ್‌ ಪ್ರೆಷರ್ರು. ಈ ಯಬರಾ ತಬರಾಟದಲ್ಲಿ ಸಾಂಗ್ಲಿಯಾನ ಆದದ್ದು ತಬ್ಬಿಬ್ಬು. ಇಷ್ಟೆಲ್ಲಾ ಅವಘಡಗಳ ನಡುವೆ ಪೊಲೀಸರೇ ಕಳ್ಳರಾದ ಪ್ರಕರಣವೂ ಬಯಲಾಯಿತು. ಕೇರಳ ವ್ಯಾಪಾರಸ್ಥರನ್ನು ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೊಳ್ಳೆ ಹೊಡೆದ ಎಸಿಪಿ ಬೆಳ್ಳಿಯಪ್ಪ ಮೂರು ತಲೆಮಾರು ಕೂತು ತಿನ್ನುವಷ್ಟು ತಿಂದು ತೇಗಿದ್ದಾನೆ. ಇವನನ್ನು ಬೆನ್ನಟ್ಟಿ ಹಿಡಿಯೋದರಲ್ಲಿ ವಿಫಲರಾಗಿರುವ ಸಾಂಗ್ಲಿಯಾನ ಅಂಡ್‌ ಫ್ರೆಂಡ್ಸ್‌, ಬಂದು ಶರಣಾಗುವಂತೆ ಕುಂತಲ್ಲೇ ಫರ್ಮಾನು ಹೊರಡಿಸಿದ್ದಾರೆ ! ಆ ಗುರುಮ ಘಾತುಕ ತಂತಾನೇ ಬಂದು ಶರಣಾಗುವ ತನಕ ಇವರು ಕಳ್ಳೇಪುರಿ ತಿನ್ನಬೇಕಾ?

ಸಾಂಗ್ಲಿಯಾನ ‘ಸೂಪರ್‌ ಕಾಪ್‌’ ಖದರಲ್ಲಿಟ್ಟ ಹೆಜ್ಜೆಗಳನ್ನು ಒಮ್ಮೆ ನೋಡೋಣ (ಆವರಣದಲ್ಲಿ ಅದರ ಬಗ್ಗೆ ವಾಸವಾಂಶದ ಪುಗ್ಗ ಉಂಟು- ತಪ್ಪದೇ ಓದಿಕೊಳ್ಳಿ)...

  • ಎಂ.ಜಿ.ರೋಡಲ್ಲಿ ಸೈಕಲ್‌ ತುಳೀಬಾರದು. (ಸೈಕಲ್‌ ಸವಾರರು ಇವತ್ತೂ ಹಿಡಿಶಾಪ ಹಾಕುತ್ತಿದ್ದಾರೆ)
  • ಪ್ರತಿ ತಿಂಗಳ ಮೊದಲ ಭಾನುವಾರ ಊರಿನ ಮಕ್ಕಳೆಲ್ಲಾ ಒಂದೆಡೆ ಸೇರಿ ಆಟ ಆಡಬೇಕು. (ಈ ಪ್ರೋಗ್ರಾಂ ಈಗ ಠುಸ್ಸಾಗಿದೆ.)
  • ಚಲನಚಿತ್ರ ಮಂದಿರಗಳಲ್ಲಿ ಬೀಡಿ- ಸಿಗರೇಟು ಸೇದಿದೋರಿಗೆ ದಂಡ. (ನಿರ್ಧಾರವೇ ದಂಡವಾಗಿ ಅದೇ ಸಿಗರೇಟು ಹೊಗೇಲಿ ತೇಲಿ ಹೋಯಿತು.)
  • ಬಾರ್‌ ಮತ್ತು ಲೈವ್‌ ಬ್ಯಾಂಡ್‌ಗಳನ್ನು 11 ಗಂಟೆ ಆದಮೇಲೆ ಮುಚ್ಚಬೇಕು. (11 ಗಂಟೆ ನಂತರ ಹಿಂದಿನ ಬಾಗಿಲಿಂದ ವ್ಯವಹಾರ ಶುರುವಾಯಿತು.)
  • ಸಾರ್ವಜನಿಕ ಕ್ಷೇತ್ರಗಳಲ್ಲಿ ಗಲೀಜು ಮಾಡುವವರ ವಿಡಿಯೋ ಚಿತ್ರೀಕರಣ ತೆಗೆದು, ಸೂಕ್ತ ದಂಡ ವಿಧಿಸುವುದು. (ವಿಡಿಯೋ ಕೆಮೆರಾ ಕೆಟ್ಟು ಹೋಯಿತೋ ಅಥವಾ ನೋಡಬಾರದ್ದನ್ನು ನೋಡಿ ಪೊಲೀಸರಿಗೆ ಬೇಜಾರಾಯ್ತೋ, ಚಿತ್ರೀಕರಣ ಸ್ಥಗಿತಗೊಂಡಿತು.)
  • 60 ಅಥವಾ ಮೇಲ್ಪಟ್ಟ ವಯಸ್ಸಿನ ಒಂಟಿ ಜೀವಿಗಳಿರುವ ಮನೆಯ ಕಡೆ ತೀವ್ರ ನಿಗಾ ವಹಿಸಬೇಕು. ಪ್ರತಿ ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಅಂತವರ ಮನೆಯಲ್ಲಿ ಪುಸ್ತಕವೊಂದರಲ್ಲಿ ಸಹಿ ಮಾಡತಕ್ಕದ್ದು. (ಇದನ್ನು ಕೇಳಿಸಿಕೊಂಡೇ ರಾತ್ರಿ ತನಕ ಕಾಯದೆ ಹಾಡ ಹಗಲೇ ಕತ್ತು ಕೊಯ್ಯುವಿಕೆ ಜೋರಾದದ್ದು.)
  • ಪಿಸ್ತೂಲ್‌ ತಗೊಂಡು ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ. ಒಡವೆ ಹಾಕಿಕೊಳ್ಳಬೇಡಿ. (ಪೊಲೀಸರೇ ಕದಿಯೋಕೆ ಶುರು ಮಾಡಿರುವುದರಿಂದ ಈ ಸಲಹೆ ಒಪ್ಪತಕ್ಕದ್ದೇ.)
  • ಹೊಟ್ಟೆ ಪೊಲೀಸರು ಮುದ್ದೆ ತಿಂದು, ಡಯಟ್‌ ಮಾಡಿ ಹೊಟ್ಟೆ ಕರಗಿಸಿಕೊಳ್ಳಬೇಕು. (ಮುದ್ದೆ ಮಾರುವ ಮೆಸ್‌ಗಳೋರೆಲ್ಲಾ ಅದಕ್ಕೇ- ಅಕಟಕಟಾ, ಪೊಲೀಸರೆಂಬ ಓಸಿ ಗಿಕಾರಿಗಳು ಬಂದ್ರಲ್ಲಪ್ಪಾ ಅಂತ ಬೊಂಬಡಾ ಬಜಾಯಿಸುತ್ತಿರುವುದು.)
  • ಆ್ಯಸಿಡ್‌ ಮಾರುವುದನ್ನು ನಿಷೇಧಿಸಲಾಗಿದೆ. (ಕಾಲೇಜು ಲ್ಯಾಬ್‌ಗಳಲ್ಲೇ ಆ್ಯಸಿಡ್‌ ಕಳ್ಳತನ ಶುರುವಾಗಿದೆ, ಸ್ವಾಮಿ !)
ಒಂದೊಮ್ಮೆ ಸಾಂಗ್ಲಿಯಾನ ಹೇಳಿದ್ದರು- ಉತ್ತಮ ಕಥಾ ವಸ್ತು ಇರುವ ಚಿತ್ರಗಳನ್ನು ನಾನು ನಿರ್ದೇಶಿಸುತ್ತೇನೆ, ಅಂತ. ಕಳ್ಳರ ಹಿಡಿಯೋದಕ್ಕಿಂತ ಈ ಕೆಲಸಕ್ಕೇ ತಾವು ಲಾಯಕ್ಕು ಅಂತಲೇ ಈ ನಿರ್ಧಾರ ಅನ್ನೋದನ್ನ ಮಾತ್ರ ಹೇಳಲಿಲ್ಲ !

ಅಂದಹಾಗೆ, ಕಮಿಷನರ್‌ ಆಗಿ ಕಿಸಿದ ನಂತರ ಈಗ ಸಿಓಡಿ ಚೀಫ್‌ ಆಗಿ ಸಾಂಗ್ಲಿಯಾನ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇನ್ನು ಸಾಂಗ್ಲಿಯಾನ ಎಲ್ಲಿಗೆ ಹೋದರೇನು? ಯಾಕೆಂದರೆ, ಈಗ ಅವರು ‘ಸೂಪರ್‌ ಕಾಪ್‌’ ಅಲ್ಲ ‘ಸೂಪರ್‌ ಫ್ಲಾಪ್‌’!

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X