ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಭಾರತ್‌ ಬಂದ್‌ ಶಾಂತ, ಬೆಂಗಳೂರಲ್ಲಿ 20 ಬಸ್‌ಗಳು ಜಖಂ

By Staff
|
Google Oneindia Kannada News

ಬೆಂಗಳೂರು : ಗುಜರಾತ್‌ನ ಸ್ವಾಮಿ ನಾರಾಯಣ ದೇಗುಲದಲ್ಲಿ ಉಗ್ರರು ನಡೆಸಿದ ನರಮೇಧ ಪ್ರತಿಭಟಿಸಿ ವಿಶ್ವ ಹಿಂದೂ ಪರಿಷತ್‌ ಮತ್ತಿತರ ಸಂಘಟನೆಗಳು ಕರೆ ಕೊಟ್ಟಿದ್ದ ಭಾರತ್‌ ಬಂದ್‌ ಬಿಸಿ ನಗರಕ್ಕೂ ತಟ್ಟಿತು.

ಆರ್‌ಪಿಸಿ ಲೇಔಟ್‌, ವಿಜಯನಗರ, ಮೈಸೂರು ರಸ್ತೆ, ಕಲಾಸಿ ಪಾಳ್ಯ ಹಾಗೂ ಮಲ್ಲೇಶ್ವರಂನಲ್ಲಿ ಬಸ್‌ಗಳಿಗೆ ಕಲ್ಲು ತೂರಿ, ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಜಯನಗರದ ಶಾಪಿಂಗ್‌ ಕಾಂಪ್ಲೆಕ್ಸ್‌ನಲ್ಲಿ ಎಂದಿನಂತೆ ಅಂಗಡಿಗಳನ್ನು ತೆರೆದಿದ್ದರೂ, ಸುಮಾರು ಐವತ್ತು ಜನರ ಗುಂಪು ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿತು.

ಪ್ರತಿಕೃತಿ ದಹನ : ಶಾಸಕ ಸುರೇಶ್‌ ಕುಮಾರ್‌ ಮತ್ತು ಆರ್‌.ಅಶೋಕ್‌ ನೇತೃತ್ವದಲ್ಲಿ ಸುಮಾರು ಇನ್ನೂರು ಪ್ರತಿಭಟನಾಕಾರರು ಮಲ್ಲೇಶ್ವರಂ ವೃತ್ತದಲ್ಲಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಮತ್ತು ಭಯೋತ್ಪಾದಕರ ಪ್ರತಿಕೃತಿಗಳ ದಹನ ಮಾಡಿದರು. ಈ ಸಮಯದಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ಮಲ್ಲೇಶ್ವರಂನಲ್ಲಿರುವ ಸಿಟಿ ಬ್ಯಾಂಕ್‌ನ ಎಟಿಎಂ ಕೌಂಟರಿನ ಗಾಜಿನ ಬಾಗಿಲನ್ನು ದುಷ್ಕರ್ಮಿಗಳು ಒಡೆದು ಹಾಕಿದರು.

ಅಲಸೂರು ಗೇಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡಿ, ಅಂಗಡಿಗಳನ್ನು ಬಲವಂತವಾಗಿ ಮುಚ್ಚಲು ಪ್ರಯತ್ನಿಸಿದ ಶಾಸಕ ಮೋಹನ್‌ ಸೇರಿದಂತೆ ಅನೇಕರನ್ನು ಪೊಲೀಸರು ಬಂಧಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಮೈಸೂರು ವೃತ್ತದ ಬಳಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಯಾವುದೇ ಪ್ರತಿಭಟನಾ ಪ್ರದರ್ಶನ ನಡೆಸಲು ಸಾಧ್ಯವಾಗಲಿಲ್ಲ. ಕಲ್ಲು ತೂರಾಟದ ಘಟನೆಗಳಿಗೆ ಸಂಬಂಧಿಸಿದಂತೆ ಸುಮಾರು 100 ಜನರನ್ನು ಪೊಲೀಸರು ಬಂಧಿಸಿದರು. 20ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳು ಕಲ್ಲು ತೂರಾಟದಿಂದ ಜಖಂ ಆಗಿವೆ.

ರಾಜ್ಯದಲ್ಲಿ ಬಂದ್‌ ಶಾಂತ : ಮೈಸೂರು, ಮಂಗಳೂರು, ಮಡಿಕೇರಿ, ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ಭಾರತ್‌ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಬಹುತೇಕ ಶಾಲಾ- ಕಾಲೇಜು ಮತ್ತು ಅಂಗಡಿ- ಮುಂಗಟ್ಟುಗಳು ಮುಚ್ಚಿದ್ದವು.

ಹುಬ್ಬಳ್ಳಿ, ಧಾರವಾಡ, ಹಾಸನ, ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ದೈನಂದಿನ ಜನಜೀವನಕ್ಕೆ ಅಷ್ಟೇನೂ ಅಡ್ಡಿಯಾಗಿಲ್ಲ.

ಮೈಸೂರು, ಮಂಡ್ಯ, ತುಮಕೂರು, ದೊಡ್ಡ ಬಳ್ಳಾಪುರ ಮತ್ತು ಚಿಕ್ಕ ಬಳ್ಳಾಪುರಕ್ಕೆ ಬೆಂಗಳೂರಿನಿಂದ ಹೊರಡುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಖ್ಯೆ ಬಂದ್‌ ಹಿನ್ನೆಲೆಯಲ್ಲಿ ತೀರಾ ಕಡಿಮೆಯಿದ್ದು, ಪ್ರಯಾಣಿಕರು ಪರದಾಡುವಂತಾಯಿತು.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X