• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾವೇರಿ ನಮ್ಮದು : ರಾಜ್‌ ನೇತೃತ್ವದಮೆರವಣಿಗೆಗೆ ಹಿಂಸೆಯ ಸ್ಪರ್ಶ

By Staff
|

Rajkumar submitting Memorandum to S.M.Krishna (Photo Curtesy : chitraloka.com)ಬೆಂಗಳೂರು : ರಾಜ್ಯದ ರೈತರ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗದಂತೆ ಕಾವೇರಿ ನದಿ ನೀರು ವಿವಾದವನ್ನು ಬಗೆಹರಿಸುವಂತೆ ವರನಟ ಡಾ.ರಾಜ್‌ಕುಮಾರ್‌ ನೇತೃತ್ವದ ಕನ್ನಡ ಚಿತ್ರೋದ್ಯಮದ ನಿಯೋಗ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಬುಧವಾರ (ಸೆ.25) ಮನವಿ ಪತ್ರ ಸಲ್ಲಿಸಿತು.

ಕಾವೇರಿ ನದಿ ನೀರಿನ ಹಕ್ಕಿಗಾಗಿ ರೈತರು ನಡೆಸುತ್ತಿರುವ ಚಳವಳಿಗೆ ಕನ್ನಡ ಚಿತ್ರೋದ್ಯಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಬುಧವಾರ (ಸೆ.25) ಚಿತ್ರೋದ್ಯಮ ತನ್ನೆಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಮೂಲಕ ಬಂದ್‌ ಆಚರಿಸಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯವನ್ನು ತೀವ್ರ ಬರಗಾಲ ಕಾಡುತ್ತಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೂ ಸಂಚಕಾರ ಉಂಟಾಗುವ ದಯನೀಯ ಪರಿಸ್ಥಿತಿ ತಲೆದೋರಿದೆ. ಇಂಥ ಸಂದರ್ಭದಲ್ಲಿ ಕಾವೇರಿ ವಿವಾದ ಭುಗಿಲೆದ್ದಿದ್ದು , ರಾಜ್ಯದಲ್ಲಿ ಭೀತಿಯ ವಾತಾವರಣ ಉಂಟಾಗಿದೆ. ನಮ್ಮ ನೀರು, ಭಾಷೆ, ಹಾಗೂ ನೆಲದ ಆಜನ್ಮ ಸಿದ್ಧ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಸಲಾಗುತ್ತಿದೆ. ಇಂತಹ ಜಟಿಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿರುವ ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಪಾರ್ವತಮ್ಮ ರಾಜ್‌ಕುಮಾರ್‌, ಸಂಸದ ಅಂಬರೀಷ್‌, ಚಿತ್ರನಟ- ನಟಿಯರಾದ ರಮೇಶ್‌, ಶಿವರಾಜ್‌ಕುಮಾರ್‌, ಜಗ್ಗೇಶ್‌, ಉಮಾಶ್ರೀ, ಜಯಮಾಲಾ, ಮುಖ್ಯಮಂತ್ರಿ ಚಂದ್ರು, ಬಿ.ಸಿ.ಪಾಟೀಲ್‌, ಶ್ರೀರಕ್ಷಾ ಮುಂತಾದವರು ಹಾಗೂ ಕರ್ನಾಟಕ ಚಲನಚಿತ್ರ ಮಂಡಳಿಯ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿಯಾದ ನಿಯೋಗದಲ್ಲಿದ್ದರು.

ಬೃಹತ್‌ ಪ್ರದರ್ಶನ, ವಹಿವಾಟು ಬಂದ್‌, ಹಿಂಸಾಚಾರ

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸುವುದಕ್ಕೂ ಮುನ್ನ ಕನ್ನಡ ಚಿತ್ರೋದ್ಯಮದ ಕಲಾವಿದರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ವರನಟ ರಾಜ್‌ಕುಮಾರ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮೆರವಣಿಗೆಯ ಸಂದರ್ಭದಲ್ಲಿ ಕೆಂಪೇಗೌಡ ರಸ್ತೆ , ಅವೆನ್ಯೂ ರಸ್ತೆ , ಮೆಜೆಸ್ಟಿಕ್‌, ಕಿಲಾರಿ ರಸ್ತೆ, ಚಿಕ್ಕಪೇಟೆ, ಗಾಂಧಿನಗರ, ಶೇಷಾದ್ರಿ ರಸ್ತೆ ಮುಂತಾದೆಡೆಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಕೆಲವೆಡೆ ಕಲ್ಲು ತೂರಾಟದ ಘಟನೆಗಳೂ ನಡೆದವು.

ಹಲವಾರು ಕಾರು, ನಗರ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಹಾಗೂ ಆಟೊಗಳು ಕಲ್ಲು ತೂರಾಟದಿಂದ ಜಖಂಗೊಂಡಿವೆ. ಲಾಠಿ ಪ್ರಹಾರ ನಡೆಸುವ ಮೂಲಕ ಕಲ್ಲು ತೂರಾಟದಲ್ಲಿ ನಿರತರಾಗಿದ್ದ ಕಿಡಿಗೇಡಿಗಳನ್ನು ಪೊಲೀಸರು ಚದುರಿಸಿದರು. ಕಲ್ಲು ತೂರಾಟದಿಂದ ಮಹಿಳೆಯಾಬ್ಬರು ಸೇರಿದಂತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕಲಾವಿದರ ಸಂಘ, ತಂತ್ರಜ್ಞರ ಒಕ್ಕೂಟ, ನಿರ್ಮಾಪಕ ಹಾಗೂ ನಿರ್ದೇಶಕರ ಸಂಘಗಳು, ಕಿರುತೆರೆ ಕಲಾವಿದ ತಂತ್ರಜ್ಞರ- ಕಲಾವಿದರ ಸಂಘದಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡವು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು.

ರಾಜ್‌ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಸಾಗಿದ ಸಾವಿರಾರು ಮಂದಿ, ಮೈಸೂರು ಬ್ಯಾಂಕ್‌ ವೃತ್ತದಿಂದ ಮೆರವಣಿಗೆ ಆರಂಭಿಸಿ, ಕಸ್ತೂರ ಬಾ ರಸ್ತೆಯ ಮೂಲಕ ಮಹಾತ್ಮಗಾಂಧಿ ರಸ್ತೆ ತಲುಪಿ ಗಾಂಧಿ ಪ್ರತಿಮೆಯೆದುರು ಧರಣಿ ಕುಳಿತಿತು. ಅನಂತನಾಗ್‌, ರವಿಚಂದ್ರನ್‌, ಶಿವರಾಜ್‌, ಉಪೇಂದ್ರ, ಸುದೀಪ್‌, ಸಾ.ರಾ.ಗೋವಿಂದು, ಜೈ ಜಗದೀಶ್‌, ರಾಜೇಂದ್ರಸಿಂಗ್‌ ಬಾಬು, ರೆಹಮಾನ್‌ ಸೇರಿದಂತೆ ಚಿತ್ರೋದ್ಯಮದ ಹಿರಿಕಿರಿ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಕ್ಕನ ಶ್ರಾದ್ಧದ ಕಾರಣ ಪುಣ್ಯ ಕ್ಷೇತ್ರಗಳಿಗೆ ತೆರಳಿದ್ದ ನಟ ವಿಷ್ಣುವರ್ಧನ್‌ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

ಸಿನಿಮಾ ಪ್ರದರ್ಶನ ರದ್ದು

ಕಾವೇರಿ ಚಳವಳಿಗೆ ಬೆಂಬಲ ವ್ಯಕ್ತಪಡಿಸಿ ಕನ್ನಡ ಚಿತ್ರೋದ್ಯಮ ಬುಧವಾರ ಸಂಪೂರ್ಣ ಬಂದ್‌ ಆಚರಿಸಿತು. ಶೂಟಿಂಗ್‌ ಹಾಗೂ ಸ್ಟುಡಿಯಾ ಚಟುವಟಿಕೆಗಳು ಸ್ಥಗಿತವಾಗಿದ್ದವು. ಬೆಂಗಳೂರಿನ 105 ಚಿತ್ರಮಂದಿರಗಳು ಸ್ವಯಂ ಪ್ರೇರಣೆಯಿಂದ ಪ್ರದರ್ಶನ ರದ್ದುಪಡಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು. (ಇನ್ಫೋ ವಾರ್ತೆ)

ಪೂರಕ ಓದಿಗೆ-

ಮುಖಪುಟ / ಕಾವೇರಿ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more