ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವ ಹಕ್ಕು ಹೋರಾಟಗಾರರೂ ಸರ್ಕಾರಕ್ಕೆ ಷರತ್ತು ವಿಧಿಸಬೇಕೆ ?

By Staff
|
Google Oneindia Kannada News

*ಇನ್ಫೋ ಇನ್‌ಸೈಟ್‌

Sukumaran and Prof. Kalyaniಬೆಂಗಳೂರು: ನರಹಂತಕ ವೀರಪ್ಪನ್‌ ಸೆರೆಯಲ್ಲಿರುವ ಮಾಜಿ ಸಚಿವ ನಾಗಪ್ಪ ಅವರನ್ನು ಪಾರುಮಾಡಲು ಕೊನೆಗೂ ಸರಕಾರ ಅನ್ಯದಾರಿ ಕಾಣದೆ ಸಂಧಾನ ಮಾರ್ಗದ ಮೊರೆ ಹೋಗಿದೆ.

ಆದರೆ ಸಂಧಾನಕಾರರು ಅಂತ ಈ ಹಿಂದೆ ಗುರುತಿಸಿಕೊಂಡವರೆಲ್ಲ ಜೈಲಿನಲ್ಲಿದ್ದಾರೆ. ಈ ಬಗ್ಗೆ ನಾಗಪ್ಪ ಅವರ ಅಪಹರಣವಾದ ಮೊದಲ ದಿನಗಳಲ್ಲಿ ಸರಕಾರ ಒಳಗೊಳಗೇ ಕೊರಗಿತ್ತು. ಹೇಗಿದ್ದರೂ ವೀರಪ್ಪನ್‌, ಬೋನು ಸೇರಬೇಕಾದ ಜೀವಿಯೇ ಎಂದು ಪರಿಗಣಿಸಿದ ಸರಕಾರ ನಂತರ, ಪೂರ್ತಿಯಾಗಿ ಕಾರ್ಯಾಚರಣೆಯನ್ನೇ ಅವಲಂಬಿಸಿತು. ಇನ್ನೇನು ವೀರಪ್ಪನ್‌ ಸಿಕ್ಕೇ ಬಿಟ್ಟ ಅನ್ನುವಷ್ಟರಲ್ಲಿ ಯಥಾ ಪ್ರಕಾರ ಎಸ್‌ಟಿಎಫ್‌ಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡು ಬಿಟ್ಟ. ಆರಂಭ ಶೂರತನದ ಕಾರ್ಯಾಚರಣೆ ನಿಧಾನವಾಯಿತು.ಸರಕಾರ ಮತ್ತೆ ಸಂಧಾನ ಮಾರ್ಗದತ್ತ ಮುಖ ಮಾಡಿದೆ.

ತಮಿಳುನಾಡಿನ ಮಾನವ ಹಕ್ಕುಗಳ ಹೋರಾಟಗಾರರಾದ ಪ್ರೊ. ಕಲ್ಯಾಣಿ, ಸುಕುಮಾರನ್‌ ಸಂಧಾನಕಾರರಾಗಿ ತೆರಳುವ ಕುರಿತು ಮಂಗಳವಾರ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಆದರೆ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ‘ಅಧಿಕೃತ ಸಂಧಾನಕಾರರು’ ಎಂದು ತಮಗೆ ಮಾನ್ಯತೆ ನೀಡಿದರೆ ಮಾತ್ರ ಕಾಡುಗಳ್ಳ ವೀರಪ್ಪನ್‌ ಹಿಡಿತದಿಂದ ಮಾಡಿ ಸಚಿವ ನಾಗಪ್ಪ ಅವರನ್ನು ಬಿಡುಗಡೆ ಮಾಡಿಸಲು ಕಾಡಿಗೆ ತೆರಳುವುದಾಗಿ ಅವರಿಬ್ಬರೂ ಸರಕಾರದ ಮುಂದೆ ತಮ್ಮ ಷರತ್ತು ವಿಧಿಸಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರರು ಎಂದು ಘೋಷಿಸಿಕೊಂಡಿರುವ ಇವರಿಬ್ಬರೂ ಆಪತ್ಕಾಲದಲ್ಲಿ ಸರಕಾರದ ಮುಂದೆ ಷರತ್ತುಗಳನ್ನು ವಿಧಿಸಿರುವುದು ವಿಪರ್ಯಾಸ.

ಮಾನವ ಹಕ್ಕುಗಳ ದೃಷ್ಟಿಯಿಂದ ನೋಡಿದರೆ, ಕಾಡುಗಳ್ಳನ ಸೆರೆಯಲ್ಲಿ ಅನ್ಯಾಯವಾಗಿ ನರಳುತ್ತಿರುವ ನಾಗಪ್ಪ ಅವರನ್ನು ಬಚಾವ್‌ ಮಾಡುವುದು ಮನುಷ್ಯ ಧರ್ಮ. ರಾಜಕೀಯ, ಜಾತಿ, ದೇಶಗಳ ಭಾಷೆಯೆನ್ನುವುದರ ಹೊರತಾಗಿ ಈ ಧರ್ಮ ಎಲ್ಲರಿಗೂ ಅನ್ವಯಿಸುತ್ತದೆ. ಮಾನವ ಹಕ್ಕುಗಳ ಹೋರಾಟಗಾರರಿಗೆ ಈ ವಿಷಯವನ್ನು ಹೊಸತಾಗಿ ಹೇಳಬೇಕಾಗಿಲ್ಲ.

ಆದರೆ ಕಾಡು ಮೇಡೆಲ್ಲ ಅಲೆದು ನರಹಂತಕನ ಕಣ್ಣೆದುರು ನಿಲ್ಲುವ ರಿಸ್ಕು ತೆಗೆದುಕೊಳ್ಳಲು ಒಪ್ಪಿರುವ ಸಂಧಾನಕಾರರ ದೃಷ್ಟಿಯಿಂದಈ ಪ್ರಕ್ರಿಯೆಯನ್ನು ಗಮನಿಸಿದರೆ ಸರಕಾರದ ಧೋರಣೆ ಏನೆಂಬುದು ಅರ್ಥವಾಗುವುದಿಲ್ಲ.

ಡಾ. ರಾಜ್‌ಕುಮಾರ್‌ ಬಿಡುಗಡೆಗೆ ಸಂಧಾನಕಾರರನ್ನು ಕಳುಹಿಸುವಾಗ ಅನುಸರಿಸಲಾದ ವಿಧಾನವನ್ನೇ ಅನುಸರಿಸಿದಲ್ಲಿ ಮಾತ್ರ ಕಾಡಿಗೆ ತೆರಳಲು ತಾವು ಸಿದ್ಧರಿದ್ದೇವೆ ಎಂದು ಕಲ್ಯಾಣಿ ಹಾಗೂ ಸುಕುಮಾರನ್‌ ಹೇಳಿದ್ದಾರೆ. ಇದಕ್ಕೂ ಮೊದಲು ಅಧಿಕೃತ ಸಂಧಾನಕಾರರು ಎಂಬ ಮಾನ್ಯತೆ ಇಲ್ಲದೆಯೇ ಕಾಡಿಗೆ ತೆರಳಿ ನಾಗಪ್ಪ ಅವರನ್ನು ಬಿಡಿಸಿಕೊಂಡು ಬರುವಂತೆ ಖರ್ಗೆ ಅವರಿಬ್ಬರಲ್ಲೂ ಕೋರಿಕೊಂಡಿದ್ದರು.

ಅಂದಹಾಗೆ, ರಾಜ್‌ ಬಿಡುಗಡೆ ಸಂದರ್ಭದಲ್ಲಿ ಅನುಸರಿಸಲಾದ ಸಂಧಾನ ಮಾರ್ಗ ಅಂದರೇನು? ಅದು ಯಾವುದು? ಜಯಲಲಿತಾ ಹೇಳಿದಂತೆ 30 ಕೋಟಿ ರುಪಾಯಿ ಕಪ್ಪವಾ?

ಸರಕಾರ ಯಾಕೆ ಹೆದರುತ್ತಿದೆ...

ಅಧಿಕೃತವಾಗಿ ಘೋಷಿಸದೆಯೇ ಇದ್ದರೂ ರಾಜ್ಯದ ಗೃಹ ಸಚಿವರು ಇಬ್ಬರು ವ್ಯಕ್ತಿಗಳನ್ನು ವೀರಪ್ಪನ್‌ ಬಳಿಗೆ ಹೋಗುವಂತೆ ಕೋರಿಕೊಂಡಿರುವುದೇ ಸರಕಾರ ಸಂಧಾನ ಮಾರ್ಗ ಅನುಸರಿಸಲು ನಿರ್ಧರಿಸಿದೆ ಎಂಬುದನ್ನು ಸೂಚಿಸುತ್ತದೆ. ಅಂದ ಮೇಲೆ ಅವರನ್ನು ಅಧಿಕೃತ ಸಂಧಾನಕಾರೆಂದು ಸರಕಾರ ಯಾಕೆ ಮಾನ್ಯ ಮಾಡುತ್ತಿಲ್ಲ ? ರಾಜ್‌ ಬಿಡುಗಡೆ ಸಂದರ್ಭದಲ್ಲಿ ಅನುಸರಿಸಿದ ತಂತ್ರವನ್ನು ಅನುಸರಿಸಲು ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂಬುದು ಗೊತ್ತಾಗುವುದಿಲ್ಲ.

ಈ ನಡುವೆ ಗಮನಿಸಬಹುದಾದ ಇನ್ನೊಂದು ಅಂಶವೆಂದರೆ :
ರಾಜ್‌ ಅಪರಹಣವಾದಾಗ ತಮಿಳುನಾಡಿನಲ್ಲಿ ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದರು. ಕರುಣಾನಿಧಿ ಯಾವತ್ತೂ ವೀರಪ್ಪನ್‌ ಕಾರ್ಯಾಚರಣೆಯ ಬಗ್ಗೆ ದನಿಯೆತ್ತಿ , ಉಗ್ರ ಮಾತುಗಳನ್ನಾಡಿರುವ ಉದಾಹರಣೆ ಸಿಗುವುದಿಲ್ಲ. ಹಾಗೆಯೇ ಈಗಿನ ಮುಖ್ಯಮಂತ್ರಿ ಜಯಲಲಿತಾ ಕೂಡ ಯಾವತ್ತೂ ಸಂಧಾನ ಮಾರ್ಗದ ಪರವಾಗಿ ಮೆತ್ತನೆ ಮಾತಾಡಿದ್ದೂ ಇಲ್ಲ. ವೀರಪ್ಪನ್‌ ವಿಷಯದಲ್ಲಿ ತಮಿಳುನಾಡಿನ ಧೋರಣೆ ಮತ್ತು ಇಂಗಿತಗಳನ್ನು ಅರ್ಥಮಾಡಿಕೊಂಡು, ಅದಕ್ಕೆ ತಕ್ಕ ಹಾಗೆಯೇ ಕೃಷ್ಣ ಸರಕಾರ ಯೋಜನೆ ರೂಪಿಸುತ್ತಿದೆಯೇ ಎಂಬುದು ಇನ್ನೊಂದು ಸಂಶಯ. ನೀವೇನು ಹೇಳುತ್ತೀರಿ ?

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X