ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರದ ರೈತರ ಕಿಚ್ಚು ; ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ದೆಹಲಿಗೆ ದೌಡು

By Staff
|
Google Oneindia Kannada News

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದರ ವಿರುದ್ಧ ರೈತರ ಪ್ರತಿಭಟನೆ ತಾರಕಕ್ಕೇರಿರುವ ಸಂದರ್ಭದಲ್ಲಿ - ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸೋಮವಾರ (ಸೆ.16) ದಿಢೀರ್‌ ದೆಹಲಿ ಪ್ರಯಾಣ ಕೈಗೊಂಡರು.

ಕಾವೇರಿ ವಿವಾದ ಕುರಿತಂತೆ ರಾಜ್ಯದ ಮುಂದಿನ ಹೆಜ್ಜೆಗಳ ಕುರಿತು ದೆಹಲಿಯಲ್ಲಿ ರಾಜ್ಯದ ವಕೀಲರೊಂದಿಗೆ ಕೃಷ್ಣ ಚರ್ಚಿಸುವರು. ಹಾಗೂ ರಾಜ್ಯದಲ್ಲಿ ರೈತರ ಪ್ರತಿಭಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಂಯಮದಿಂದಿರಲು ಸಚಿವರ ಕರೆ
ಸುಪ್ರಿಂಕೋರ್ಟ್‌ ಹಾಗೂ ಕಾವೇರಿ ನದಿ ಪ್ರಾಧಿಕಾರದ ತೀರ್ಪನ್ನು ಪಾಲಿಸಲೇ ಬೇಕಾದ ಅನಿವಾರ್ಯತೆಯನ್ನು ಪ್ರತಿಭಟನೆ ನಡೆಸುತ್ತಿರುವ ರೈತರು ಅರ್ಥ ಮಾಡಿಕೊಳ್ಳಬೇಕು ಹಾಗೂ ಶಾಂತಿ ಕಲಕುವಂಥ ಯಾವುದೇ ಕಾರ್ಯಗಳಿಗೆ ಮುಂದಾಗಬಾರದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತು ಜಲ ಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌ ರೈತ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಪರಿಸ್ಥಿತಿ ಉತ್ತಮಗೊಳ್ಳುವ ನಿರೀಕ್ಷೆಯಿದೆ. ಕಬಿನಿ ಜಲಾನಯನ ಪ್ರದೇಶದ ರೈತರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದ ಸಚಿವ ಎಚ್‌.ಕೆ.ಪಾಟೀಲ್‌, ಸಂಯಮ ಕಳೆದುಕೊಳ್ಳದಿರುವಂತೆ ರೈತರಿಗೆ ಮನವಿ ಮಾಡಿದರು.

ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಸಾವಿರಾರು ರೈತರು ಭಾನುವಾರ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಿದ್ದರು. ಈ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರು ವಾಯು ಪ್ರಯೋಗಿಸಿದ್ದು , ಈ ಘಟನೆಯಲ್ಲಿ ಹಲವಾರು ರೈತರು ಗಾಯಗೊಂಡಿದ್ದರು.

ಮುಂದುವರಿದ ಪ್ರತಿಭಟನೆ
ರೈತರ ಪ್ರತಿಭಟನೆ ಸೋಮವಾರವೂ ಮುಂದುವರಿದಿದ್ದು ಬೆಂಗಳೂರು ಹಾಗೂ ಮೈಸೂರು ನಡುವಿನ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ರಸ್ತೆ ತಡೆ ಹಾಗೂ ಜಯಲಲಿತಾ ಪ್ರತಿಕೃತಿ ದಹನ ಮುಂತಾದ ಪ್ರತಿಭಟನಾ ಕಾರ್ಯಕ್ರಮಗಳನ್ನು ರೈತರು ವ್ಯಾಪಕವಾಗಿ ಹಮ್ಮಿಕೊಂಡಿದ್ದು , ಕಬಿನಿ ಜಲಾನಯನ ಪ್ರದೇಶದಲ್ಲಿ ಬಿಗು ಪರಿಸ್ಥಿತಿ ಮುಂದುವರಿದಿದೆ.

ಮಂಡ್ಯದಲ್ಲಿ ರೈತ ನಾಯಕರ ಸಭೆ
ಕಾವೇರಿ ನೀರಿನ ಮೇಲಿನ ಹಕ್ಕನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರತಿಭಟನೆಯ ಮುಂದಿನ ಹೆಜ್ಜೆಗಳನ್ನು ರೂಪಿಸಲು ಮಂಡ್ಯದ ರೈತ ಸಭಾಂಗಣದಲ್ಲಿ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳ ಪ್ರದೇಶದ ಜನ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ಸೋಮವಾರ ನಡೆಯಿತು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಜಿ.ಮಾದೇಗೌಡ, ರೈತಸಂಘದ ಕೆ.ಎಸ್‌.ಪುಟ್ಟಣ್ಣಯ್ಯ ಸೇರಿದಂತೆ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಭೆ ನಿರ್ಧರಿಸಿತು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X