• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿಗೆ ಸಂದ ಸಿಲಿಕಾನ್‌ ಸಿಟಿ ಸಿಂಹಾಸನಕ್ಕೆ ಧಕ್ಕೆಯಿಲ್ಲ...!

By Staff
|

*ಭಾರತಿ ಚತುರ್ವೇದಿ

IT All The Way.....ಅದು ಜೆ.ಎಚ್‌. ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲ. ಕರ್ನಾಟಕದಲ್ಲಿ ಐಟಿ ಅಂಬೆಗಾಲಿಡುತ್ತಿತ್ತು. ಅದೇ ಸಮಯಕ್ಕೆ ಹೈದರಾಬಾದ್‌ನಲ್ಲಿಯೂ ಐಟಿಯ ಸದ್ದು. ಒಂದಷ್ಟು ವಿದೇಶೀ ಐಟಿ ಕಂಪೆನಿಗಳು ತಮ್ಮ ತಾವು ಹೈದರಾಬಾದೋ.... ಬೆಂಗಳೂರೋ ಅಂತ ಮೀನ ಮೇಷ ಎಣಿಸುತ್ತಿರುವಾಗ ಚಂದ್ರಬಾಬು ನಾಯ್ಡು ತಮ್ಮ ವರ್ಚಸ್ಸಿನಿಂದ ಹಿಡಿಯಷ್ಟು ಐಟಿ ಕಂಪೆನಿಗಳನ್ನು ಹೈದರಾಬಾದ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ದೇಶದ ಸಿಲಿಕಾನ್‌ ಸಿಟಿ ಯಾವುದು ಎಂಬ ಪ್ರಶ್ನೆಗೆ ‘ಬೆಂಗಳೂರು’ ಅಂತ ಧೈರ್ಯವಾಗಿ ಉತ್ತರಿಸುವ ಆತ್ಮವಿಶ್ವಾಸ ಇಲ್ಲದೇ ಇದ್ದ ಕಾಲ ಅದು.

ಆದರೆ ಮುಂದಿನ ದಿನಗಳು ಹಾಗೇ ಉಳಿಯಲಿಲ್ಲ. ಅಂತೂ ಇಂತೂ ಅಪ್‌ಗ್ರೇಡೆಡ್‌ ಬೆಂಗಳೂರು, ‘ಸಿಲಿಕಾನ್‌ ಸಿಟಿ’ ಪಟ್ಟವನ್ನು ಗಿಟ್ಟಿಸಿಕೊಂಡಿತು. ನಂತರ ಹಿಂತಿರುಗಿ ನೋಡಲಿಲ್ಲ. ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣರೂ ಆಕ್ಸ್‌ಫರ್ಡ್‌ ರಿಟರ್ನ್ಡ್‌ ಆದ್ದರಿಂದ, ಹೈಟೆಕ್‌ ಚರ್ಚೆಗಳು, ಕಾರ್ಪೊರೇಟ್‌ ಇಷ್ಯೂಗಳು ಬೆಂಗಳೂರಿನಲ್ಲಿ ಐಟಿಯ ಕಲವರವ ಹಬ್ಬಲು ನೆರವಾದವು.

ಈಗ 52 ಚಿಪ್‌ ಡಿಸೈನಿಂಗ್‌ ಕಂಪೆನಿಗಳು, 174 ಸಿಸ್ಟಂ ಸಾಫ್ಟ್‌ವೇರ್‌ ಆಪರೇಟರ್‌ ಮತ್ತು 126 ಕಮ್ಯೂನಿಕೇಷನ್‌ ಸಾಫ್ಟ್‌ವೇರ್‌ ಕೇಂದ್ರಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಹೊಸ ನಮೂನೆಯ ಐಟಿ ಕಂಪೆನಿಗಳು ಹುಟ್ಟುತ್ತಲೇ ಇವೆ. ಜಗತ್ತಿನ ಉತ್ತಮ ಸಾಫ್ಟ್‌ವೇರ್‌ ಕಂಪೆನಿಗಳಲ್ಲಿ ಅರ್ಧದಷ್ಟು ಕಂಪೆನಿಗಳಿಗೆ ಬೆಂಗಳೂರು ‘ಮದರ್‌ ಬೋರ್ಡ್‌’ (ತವರು) ಇದ್ದ ಹಾಗೆ.

ಬೆಂಗಳೂರು ಐಟಿ ಓಟದಲ್ಲಿ 404 ಎರರ್‌ ಇಲ್ಲ

ರಾಜ್ಯದಿಂದ ಒಟ್ಟು 9903 ಕೋಟಿ ರೂಪಾಯಿ ಮೌಲ್ಯದ ಸಾಫ್ಟ್‌ವೇರ್‌ ರಫ್ತಾಗುತ್ತಿದೆ. ಈ ವರ್ಷವೇ 110 ಹೊಸ ಸಾಫ್ಟ್‌ವೇರ್‌ ಕಂಪೆನಿಗಳು ನೋಂದಣಿ ಪಡೆದಿವೆ ಎಂದು ರಾಜ್ಯದ ಐಟಿ ನಿರ್ದೇಶಕ ಇ. ವಿ. ರಮಣ ರೆಡ್ಡಿ ಹೇಳುತ್ತಾರೆ. ಹಾರ್ಡ್‌ವೇರ್‌ ಕ್ಷೇತ್ರದಲ್ಲೂ ರಾಜ್ಯ ಮುನ್ನುಗ್ಗುತ್ತಿದೆ. ಬಿಸಿನೆಸ್‌ ಪ್ರೋಸೆಸ್‌ ಔಟ್‌ಸೋರ್ಸಿಂಗ್‌(ಬಿಪಿಒ) ಕ್ಷೇತ್ರದಲ್ಲಿ ರಾಜ್ಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿದೆ. 2002-03ನೇ ವರ್ಷದಲ್ಲಿ ರಾಜ್ಯದ ಸಾಫ್ಟ್‌ವೇರ್‌ ರಫ್ತು 3.5 ಬಿಲಿಯನ್‌ ಯು ಎಸ್‌ ಡಾಲರ್‌ ದಾಟುವ ನಿರೀಕ್ಷೆ ಇದೆ.

ನ್ಯಾವಿಗೇಷನ್‌ನಲ್ಲೂ...

ಐಟಿಯಿಂದ ಆಗುತ್ತಿರುವ ಲಾಭಗಳನ್ನು ಮನವರಿಕೆ ಮಾಡಿಕೊಂಡಿರುವ ರಾಜ್ಯ ಸರಕಾರ ಮಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡಗಳಿಗೂ ಐಟಿ ಕೇಂದ್ರಗಳನ್ನು ವಿಸ್ತರಿಸುತ್ತಿದೆ. ಈ ನಗರಗಳ ನಡುವೆ ಹೈ ಸ್ಪೀಡ್‌ ಫೈಬರ್‌ ಆಪ್ಟಿಕ್‌ ನೆಟ್‌ವರ್ಕ್‌ ನೀಡುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ.

30 ಸಾವಿರ ಮಂದಿ ಪರಿಣತ ಇಂಜಿನಿಯರ್‌ಗಳು ಹಾಗೂ ಲಕ್ಷಕ್ಕೂ ಹೆಚ್ಚು ಕಂಪ್ಯೂಟರ್‌ ಪದವೀಧರರು ಈ ಕ್ಷೇತ್ರಕ್ಕೆ ಪ್ರತಿವರ್ಷ ಕಾಲಿಡುತ್ತಿದ್ದಾರೆ. ಅಲ್ಲದೆ ಸರಕಾರವು ಭೂಮಿ, ರೈತ ಮಿತ್ರ, ಯುವ.ಕಾಂನಂತಹ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇದೆ.

ಯುವ.ಕಾಂ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಯುವಜನತೆಗೆ ಕಂಪ್ಯೂಟರ್‌ ತರಬೇತಿಯನ್ನು ನೀಡಲಾಗುತ್ತಿದೆ. ಇದಿರಂದ ಬೆಂಗಳೂರಿನ ಕಾರ್ಪೊರೇಟ್‌ ಜಗತ್ತಿಗೆ ಸೀಮಿತವಾದ ಐಟಿ ಹಳ್ಳಿಗಳನ್ನೂ ತಲುಪುವುದು ಸುಲಭವಾಗುತ್ತದೆ. ರೈತ ತಾನು ಬೆಳೆದ ಬೆಳೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ರೈತ ಮಿತ್ರ ಕೇಂದ್ರದಲ್ಲಿಯೇ ಪಡೆಯಬಹುದು.

ರೈತ ಮಿತ್ರ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತಿದೆ. ರೈತರಿಗೆ ಅಗತ್ಯ ಮಾಹಿತಿ ಪೂರೈಕೆ ಕಾರ್ಯದ ಹೊಣೆಯನ್ನು ಐಟಿ ಕ್ಷೇತ್ರಕ್ಕೆ ವಹಿಸಲಾಗಿದೆ. 117 ಹೋಬಳಿಗಳಲ್ಲಿ ಪ್ರಾಯೋಗಿಕವಾಗಿ ರೈತ ಮಾಹಿತಿ ಕೇಂದ್ರಗಳು ನಡೆಯುತ್ತಿವೆ. ಕರ್ನಾಟಕದ ಹೆದ್ದಾರಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಯಾತ್ರೆ ಸಾಗಿದೆ.

(ಪಿಟಿಐ)

ಈ ಐಟಿ ಯಾತ್ರೆ ಬಗ್ಗೆ ನೀವೇನು ಹೇಳುತ್ತೀರಿ ?

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more